ಬುಧವಾರ, ಮೇ 25, 2022
31 °C

ರಾಮಾ ಜೋಯಿಸ್‌: ಶಿಕ್ಷಕರ ಕಣ್ಮಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳವಾರ ನಿಧನರಾದ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್‌ ಅವರು ಶಿಕ್ಷಕ ವಲಯದಲ್ಲಿ ಸ್ಮರಣೀಯರು. ಅವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ರಾಜ್ಯದ ಸಾವಿರಾರು ಶಿಕ್ಷಕರಿಗೆ ನೆರವಾಗಿದ್ದರು. ಅಂದಿನ ಸರ್ಕಾರವು ಶಿಕ್ಷಕರ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸಿತ್ತು. ಕೆಲವು ಶಿಕ್ಷಕರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದರು. ಯಾರೆಲ್ಲ ತಡೆಯಾಜ್ಞೆ ತಂದರೋ ಅವರನ್ನು ಮಾತ್ರ ಸರ್ಕಾರ 58ರವರೆಗೆ ಸೇವೆಯಲ್ಲಿ ಮುಂದುವರಿಸಿತು. ಇದರಿಂದಾಗಿ 55 ವರ್ಷದ ಅಂಚಿಗೆ ಬಂದ ಶಿಕ್ಷಕರೆಲ್ಲರೂ ಕೋರ್ಟ್‌ ಮೆಟ್ಟಿಲೇರುತ್ತಿದ್ದರು. ದೂರದ ಊರಿನ ಶಿಕ್ಷಕರು ರಾಮಾ ಜೋಯಿಸ್‌ ಅವರಿಗೆ ₹ 120 ಮನಿಯಾರ್ಡರ್‌ ಮಾಡಿದರೆ ಸಾಕು, ಕೋರ್ಟಿನ ತಡೆಯಾಜ್ಞೆ ಅವರ ಕೈ ಸೇರುತ್ತಿತ್ತು. ಮೂರು ವರ್ಷಗಳ ಸೇವಾ ಅವಧಿ ದೊರೆಯುತ್ತಿತ್ತು.

ರಾಮಾ ಜೋಯಿಸರು 1977ರಲ್ಲಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಸುದ್ದಿ ತಿಳಿದು ಶಿಕ್ಷಕರೆಲ್ಲರೂ ಒಟ್ಟಾಗಿ ಸೇರಿ ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಅವರನ್ನು ಸನ್ಮಾನಿಸಿದರು. ಅವರ ರಾಜಾಜಿನಗರದ ನಿವಾಸದಿಂದ ಸನ್ಮಾನ ಸ್ಥಳಕ್ಕೆ ಕರೆದುಕೊಂಡು ಹೋಗುವ ಭಾಗ್ಯ, ಸಹಾಯಕ ಶಿಕ್ಷಣಾಧಿಕಾರಿಯಾಗಿದ್ದ ನನಗೆ ದೊರೆತಿತ್ತು. ನ್ಯಾಯಮೂರ್ತಿಯಾಗಿ ನೇಮಕಗೊಂಡಾಗ ಅವರಿಗೆ ಕೊಟ್ಟ ಪ್ರಥಮ ಸನ್ಮಾನ ಸಮಾರಂಭ ತಮ್ಮದೆಂದು ಶಿಕ್ಷಕರು ಸಂತಸಪಟ್ಟರು.

-ಎಸ್‌.ವಿಶ್ವನಾಥ, ಬೆಂಗಳೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.