ಗುರುವಾರ , ಡಿಸೆಂಬರ್ 3, 2020
19 °C

ವಾಚಕರ ವಾಣಿ: ಕಠಿಣ ಕ್ರಮಕ್ಕೆ ಎಲ್ಲಿದೆ ಆಸ್ಪದ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ 7 ಸಚಿವರು ಸೇರಿದಂತೆ 118 ಶಾಸಕರು ತಮ್ಮ ಆಸ್ತಿ ವಿವರದ ಪ್ರಮಾಣಪತ್ರಗಳನ್ನು ಗಡುವಿನ ಅವಧಿ ಮುಗಿದು ಮೂರೂವರೆ ತಿಂಗಳು ಕಳೆದಿದ್ದರೂ ಲೋಕಾಯುಕ್ತರಿಗೆ ಸಲ್ಲಿಸಿಲ್ಲ (ಪ್ರ.ವಾ., ಅ. 21). ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿಯನ್ನು ಲೋಕಾಯುಕ್ತದಿಂದ ಪಡೆದುಕೊಂಡಿರುವ ಸಾಮಾಜಿಕ ಹೋರಾಟಗಾರರೊಬ್ಬರು, ಇವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಈ ‘ಕಠಿಣ ಕ್ರಮ’ಕ್ಕೆ ಕಾಯ್ದೆಯಲ್ಲಿ ಎಲ್ಲಿದೆ ಆಸ್ಪದ?

ಅಬ್ಬಬ್ಬಾ ಎಂದರೆ ಈ ಕರ್ತವ್ಯಚ್ಯುತರ ಹೆಸರನ್ನು ಪತ್ರಿಕೆಗಳಲ್ಲಿ ಲೋಕಾಯುಕ್ತರು ಪ್ರಕಟಿಸಬಹುದು. ಸಚಿವರು ಮತ್ತು ಶಾಸಕರು ಇದಕ್ಕೆಲ್ಲ ಅಧೀರರಾಗುವಷ್ಟು ಮೃದು ಚರ್ಮದವರೇ? ಕಾಯ್ದೆ, ನಿಯಮಗಳನ್ನು ನಮ್ಮ ಜನ ಏಕೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇಂಥ ಪ್ರಸಂಗಗಳಲ್ಲಿ ಉತ್ತರ ಕಂಡುಕೊಳ್ಳುವುದು ಸಾಧ್ಯ. ದುರಂತವೆಂದರೆ, ಶಾಸನಕರ್ತರೇ ಶಾಸನ ಪಾಲಿಸದಿರುವುದು. ಹಾಗಾಗಿ, ಶಾಸನ ಅಥವಾ ಕಾಯ್ದೆಗಳಿಗೆ ಬೆಲೆ ಇಲ್ಲದಂತಾಗಿ, ಕಡ್ಡಾಯವಾಗಿ ಸಲ್ಲಿಸಬೇಕಾದ ವಿವರಗಳನ್ನು ಸಲ್ಲಿಸದಿರುವವರ ಬಗ್ಗೆ ನಾವು ಪತ್ರಿಕೆಗಳಲ್ಲಿ ಪ್ರತಿವರ್ಷವೂ ಓದುವಂತಾಗಿದೆ. ಈ ವರ್ಷ ಇವರು, ಬರುವ ವರ್ಷ ಇನ್ನಾರೋ? ಹೀಗೇ ಸಾಗುತ್ತದೆ ಇಂಥ ಕರ್ತವ್ಯಚ್ಯುತರ ವೀರಗಾಥೆ!

-ಸಾಮಗ ದತ್ತಾತ್ರಿ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.