ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸಮಸ್ಯೆ: ಈಗಲಾದರೂ ಬಗೆಹರಿಯಲಿ

Last Updated 7 ಅಕ್ಟೋಬರ್ 2021, 15:47 IST
ಅಕ್ಷರ ಗಾತ್ರ

‘ಕಲಾಪ್ರದರ್ಶನಕ್ಕಿಲ್ಲ ಸುಸಜ್ಜಿತ ರಂಗಮಂದಿರ’ ಎಂಬ ಸಾಂಸ್ಕೃತಿಕ ವರದಿಯಲ್ಲಿನ (ಪ್ರ.ವಾ., ಅ. 4) ಕಳಕಳಿ ಸ್ವಾಗತಾರ್ಹ. ಆದರೆ ಈ ರಂಗಬೇಡಿಕೆಗಳು ಲಾಗಾಯ್ತಿನಿಂದಲೂ ಪುನರಾವರ್ತನೆಯ ಪ್ರಸ್ತಾವವೇ ಆಗಿವೆ ಎಂಬುದಕ್ಕೆ ನಿರ್ದಿಷ್ಟ ರಂಗದಾಖಲೆಗಳು ಇವೆ. ಈ ಕುರಿತು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಬಿ.ವಿ.ವೈಕುಂಠರಾಜು ಅವರು 1985ರ ಏ. 14ರಂದು ಬರೆದಿರುವ ಲೇಖನದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹೀಗಿವೆ: ‘1984ರ ಮಾರ್ಚ್ 28ರಂದು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ದೇ.ಜ.ಗೌ, ಚನ್ನವೀರ ಕಣವಿ ಮುಂತಾದವರಿಗೆ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ನಾಟಕ ಅಕಾಡೆಮಿ ಸೇರಿದಂತೆ 6 ಅಕಾಡೆಮಿಗಳಿಗೆ ಸಮುಚ್ಚಯ ನಿರ್ಮಿಸಲು ಚಿಂತಿಸಿದ್ದು ಅಧಿಕಾರಿಗಳಿಗೆ ಸೂಚಿಸಲಾಗಿದೆ, ನಾಟಕ ಅಕಾಡೆಮಿಯ ಮಹತ್ವದ ಯೋಜನೆ ಜಿಲ್ಲಾ ರಂಗಮಂದಿರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಆದರೆ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದರೂ ಯಾವುದೇ ಕೆಲಸ ಮಾಡಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲವು ನೌಕರರನ್ನು ನೇಮಿಸಿಕೊಂಡಿರುವ ಸರ್ಕಾರ ಇನ್ನೂ ಅವರನ್ನು ಕಾಯಂಗೊಳಿಸಿಲ್ಲ. ಹಿಂದಿನ ಮುಖ್ಯಮಂತ್ರಿ ಗುಂಡೂರಾಯರು ಕಲಾವಿದರ ಕುರಿತು ನೈಜ ಕಾಳಜಿ ಹೊಂದಿದ್ದರು. ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಹಣ ಮಂಜೂರು ಮಾಡಿದ್ದರು. ಕೆಲಸ ಆಗದ ಕಾರಣ ಆ ಹಣ ಖಜಾನೆಯಲ್ಲಿಯೇ ಉಳಿದಿರುವುದು ಹೆಗಡೆ ಅವರಿಗೆ ತಿಳಿದಿಲ್ಲವೇ? ಸಾಂಸ್ಕೃತಿಕವಾಗಿ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲದಿದ್ದರೆ ಹೇಗೆ? ನೂರು ಬಾರಿ ಹೇಳಿದರೂ ಕೇಳದ ಕೆಪ್ಪೆ? ಕಾಣದ ಕುರುಡೆ? ಕೇವಲ ಎರಡು ವರ್ಷಗಳಲ್ಲಿ ಹೆಗಡೆಯವರು ತುಂಬಾ ಬೆಳೆದಿದ್ದಾರೆ. ಕರ್ನಾಟಕವನ್ನು ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಅವರು ಪ್ರಯತ್ನಿಸಬೇಕು’.

ಈ ವಯೋವೃದ್ಧ ಸಮಸ್ಯೆಗಳು ಈಗಲಾದರೂ ಬಗೆಹರಿಯಲಿ. ಜೊತೆಗೆ ಹೊಸ ರಂಗಸಮಸ್ಯೆಗಳು, ಸವಾಲುಗಳು ಮತ್ತು ಯುವರಂಗದ ಬೇಡಿಕೆಗಳತ್ತ ಕೂಡ ಸರ್ಕಾರ ಗಮನಹರಿಸಲಿ.

ಆರ್.ವೆಂಕಟರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT