ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸಂಘರ್ಷಕ್ಕೆ ಇತಿಶ್ರೀ ಹಾಡಲಿ

ಅಕ್ಷರ ಗಾತ್ರ

ಸಂವಿಧಾನಾತ್ಮಕ ಹುದ್ದೆಯಲ್ಲಿ ಇರುವ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಸಂದರ್ಭ ಯಾವುದೇ ಇರಲಿ, ಇವತ್ತಲ್ಲ ನಾಳೆ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಾಡಲಿದೆ ಎಂದದ್ದು ಸರ್ವಥಾ ಸಮರ್ಥನೀಯವಲ್ಲ. ಕೆಂಪುಕೋಟೆಯ ಧ್ವಜಸ್ತಂಭ ಕೇವಲ ಒಂದು ಕಂಬವಲ್ಲ. ಸಮಸ್ತ ಭಾರತೀಯರ ದೇಶಾಭಿಮಾನದ ಸಂಕೇತ, ಸಾರ್ವಭೌಮತ್ವದ ಪ್ರತೀಕ. ಅಲ್ಲಿ ರಾಷ್ಟ್ರಧ್ವಜವಷ್ಟೇ ಹಾರಾಡಬೇಕು. ಅನ್ಯ ಧ್ವಜವನ್ನು ಹಾರಿಸುತ್ತೇವೆ ಎಂದರೆ ಅದಕ್ಕೆ ಎರಡರ್ಥವಿಲ್ಲ. ಒಂದೇ ಅರ್ಥ. ರಾಷ್ಟ್ರಧ್ವಜವನ್ನು ಇಳಿಸುತ್ತೇವೆ ಎಂದು!

ಈಶ್ವರಪ್ಪನವರ ಮನಸ್ಸಿನಲ್ಲಿ ಅಂಥ ಭಾವನೆ ಇತ್ತೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಆ ಗಳಿಗೆಯಲ್ಲಿ ಅವರ ಮಾತು ಧ್ವನಿಸಿದ್ದು ಅದನ್ನೇ. ಹಾಗಾಗಿ, ಈಶ್ವರಪ್ಪನವರ ‘ನಾನು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಲ್ಲ’ವೆಂಬ ಹೇಳಿಕೆ ಸಮರ್ಥನೀಯವಲ್ಲ. ಹಾಗೆಂದು ಅದೇನೂ ಪರಿಹಾರವಿಲ್ಲದ ಪ್ರಮಾದವಲ್ಲ. ವಿಷಯ ಸದನದಲ್ಲಿ ಪ್ರಸ್ತಾಪವಾದೊಡನೆ ಬೇಷರತ್ತಾಗಿ ಕ್ಷಮೆ ಕೋರಿದ್ದರೆ ಅವರ ಗೌರವವೂ ಹೆಚ್ಚುತ್ತಿತ್ತು, ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದಂತೆಯೂ ಆಗುತ್ತಿತ್ತು. ಹಾಗೆ ಮಾಡದೆ ವಿಷಯವನ್ನು ಪಕ್ಷದ ನೆಲೆಗಟ್ಟಿಗೆ ಎಳೆತಂದು ಸಮರ್ಥಿಸಿಕೊಂಡದ್ದು, ಅಲ್ಲದೆ ಅವರ ಪಕ್ಷದ ಇತರ ನಾಯಕರು ಸಮರ್ಥನೆಗೆ ನಿಂತದ್ದು ಸಮಂಜಸವಲ್ಲ.

ಪ್ರತಿಷ್ಠೆಯನ್ನು ಬದಿಗಿಟ್ಟು ಎರಡೂ ಪಕ್ಷದವರು ಸಂಘರ್ಷಕ್ಕೆ ಕೂಡಲೇ ಇತಿಶ್ರೀ ಹಾಡುವುದು ಒಳ್ಳೆಯದು. ಈಗಾಗಲೇ ರಾಜ್ಯದಲ್ಲಿ ಧರ್ಮಸೂಕ್ಷ್ಮತೆ ಪ್ರಕ್ಷುಬ್ಧ ಸ್ಥಿತಿಯನ್ನು ನಿರ್ಮಿಸಿದೆ. ಶಾಲಾ ಕಾಲೇಜುಗಳಲ್ಲಿ ಬಿಗುವಿನ ವಾತಾವರಣವಿದೆ‌. ಇಂಥ ಹೊತ್ತಿನಲ್ಲಿ ಸದನವನ್ನು ಕಾರ್ಯಕಲಾಪಗಳು ನಡೆಯದಂಥ ಸ್ಥಿತಿಗೆ ದೂಡುವುದು ತರವಲ್ಲ.

-ರೇಚಂಬಳ್ಳಿ ದುಂಡಮಾದಯ್ಯ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT