ವಿಪಕ್ಷ ಶಾಸಕರ ಅಸಾಂವಿಧಾನಿಕ ವರ್ತನೆ

ಸದನದಲ್ಲಿ ವಿರೋಧ ಪಕ್ಷದ ಕೆಲವು ಶಾಸಕರು ತೋರುತ್ತಿರುವ ವರ್ತನೆ ಖಂಡನಾರ್ಹ. ಆಡಳಿತ ಪಕ್ಷದ ತಪ್ಪುಗಳನ್ನು ಸಂವಿಧಾನಬದ್ಧವಾಗಿ ಎತ್ತಿ ತೋರಿಸಿ ಸರ್ಕಾರಕ್ಕೆ ಅಂಕುಶ ಹಾಕುವುದು ವಿಪಕ್ಷದ ಜವಾಬ್ದಾರಿ. ಆ ಜವಾಬ್ದಾರಿ ಮರೆತು, ಯಾವುದೇ ಫಲಪ್ರದ ಅಥವಾ ರಚನಾತ್ಮಕ ಟೀಕೆ ಇಲ್ಲದೆ ಕೇವಲ ವ್ಯಂಗ್ಯ, ಹಾಸ್ಯ, ಅಣಕಕ್ಕೆ ಇಳಿಯುತ್ತಿರುವುದು ದುರದೃಷ್ಟಕರ. ಇಂತಹ ವರ್ತನೆ ಸದನದ ಗೌರವವನ್ನು ಕುಗ್ಗಿಸುವುದಲ್ಲದೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಧಕ್ಕೆ ತರುತ್ತದೆ. ಜೊಳ್ಳು ವಾದಗಳು, ಪೊಳ್ಳು ಮಾತುಗಳು ಮತ್ತು ಅಪ್ರೌಢ ನಡವಳಿಕೆಯಿಂದ ಸಾರ್ವಜನಿಕ ಹಿತಕ್ಕೆ ಯಾವ ಪ್ರಯೋಜನವೂ ಇಲ್ಲ.

– ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು

ಕೃಷಿ ಪ್ರವಾಸ: ಹೊಸ ಆದಾಯದ ದಾರಿ

‘ಪ್ರವಾಸಿಗರೇ, ಕೃಷಿಕರ ಹೊಲಗಳಿಗೆ ಬನ್ನಿ!’ ಲೇಖನವು (ಲೇ: ಆನಂದತೀರ್ಥ ಪ್ಯಾಟಿ, ಪ್ರ.ವಾ., ಫೆ. 4) ಸಮಯೋಚಿತವಾಗಿದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ರೈತ ಮತ್ತು ಸಾರ್ವಜನಿಕರ ನಡುವಿನ ನಂಟು ನಾಶವಾಗಿದೆ. ಕೃಷಿಕನ ದುಡಿಮೆ, ಬೆಳೆ ರಕ್ಷಣೆಗಾಗಿನ ಹೋರಾಟ, ಶುದ್ಧ ಆಹಾರದ ಪರಿಚಯ ಕುರಿತ ಮಾಹಿತಿಗಾಗಿ ಮತ್ತು ಸ್ನೇಹ ಸಂಪರ್ಕಕ್ಕಾಗಿ ಉಪಭೋಕ್ತ ಸಂಪರ್ಕಿಸಲೇಬೇಕಾಗಿದೆ. ಅನಾಥಪ್ರಜ್ಞೆಯಿಂದ ಸೊರಗುತ್ತಿರುವ ರೈತನಿಗೂ ಮಾನಸಿಕವಾಗಿ, ವ್ಯವಹಾರದ ದೃಷ್ಟಿಯಿಂದ ಈ ಸಾಂಗತ್ಯದ ಅಗತ್ಯವಿದೆ. ಸರ್ಕಾರದ ವ್ಯವಸ್ಥೆಗಾಗಿ ಕಾಯುವುದಕ್ಕಿಂತ ಸ್ವತಃ ಕೃಷಿ ಪ್ರವಾಸ ಆಯೋಜಿಸುವುದು ಜಾಣತನದ ಮಾತಾದೀತು. ಈ ಪ್ರವಾಸವು ಸಾರ್ವಜನಿಕರಿಗೆ, ಕೃಷಿಕನಿಗೆ ಮತ್ತು ಸಮಾಜಕ್ಕೆ ಅತ್ಯಂತ ಹಿತಕಾರಿ.

– ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಶಾಲೆಗಳಿಗೆ ಆಪ್ತಸಮಾಲೋಚಕರು ಬೇಕು

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್ಇ) ತನ್ನ ಶಾಲೆಯಲ್ಲಿರುವ ಪ್ರತಿ 500 ವಿದ್ಯಾರ್ಥಿಗಳಿಗೆ ಒಬ್ಬರು ಕೌನ್ಸೆಲಿಂಗ್ ಹಾಗೂ ವೆಲ್ನೆಸ್ ಟೀಚರ್ ನೇಮಕ ಮಾಡಬೇಕೆಂದು ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳು ಕಲಿಕಾ ಒತ್ತಡದ ವಾತಾವರಣದಿಂದಾಗಿ ಮಾನಸಿಕ ಸ್ಥಿರತೆ ಕಳೆದುಕೊಂಡು ಖಿನ್ನರಾಗುತ್ತಿರುವುದು ಹೆಚ್ಚಾಗುತ್ತಿದೆ. ಮಗುವಿನ ಸಾಮಾಜಿಕ-ಭಾವನಾತ್ಮಕ ಕಲಿಕೆಯ ಜೊತೆಗೆ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡುವ ಕಾರಣ ಈ ವ್ಯವಸ್ಥೆಯ ಅಗತ್ಯವಿದೆ. ರಾಜ್ಯ ಶಿಕ್ಷಣ ಇಲಾಖೆಯು ಸಹ ಪ್ರತಿ ಕ್ಲಸ್ಟರ್, ತಾಲ್ಲೂಕುಮಟ್ಟದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಪ್ತಸಮಾಲೋಚಕ ಶಿಕ್ಷಕರ ನೇಮಕಕ್ಕೆ ಕ್ರಮಗೊಳ್ಳಬೇಕಿದೆ.

– ಸುರೇಂದ್ರ ಪೈ, ಭಟ್ಕಳ

ಫಲಿತಾಂಶ ಹೆಚ್ಚಳಕ್ಕೆ ವಿನೂತನ ಪ್ರಯೋಗ

ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗೆ ಕೆಲವೇ ದಿನಗಳು ಬಾಕಿಯಿವೆ. ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಊರುಗಳಲ್ಲಿ ರಾತ್ರಿ 7ರಿಂದ 9ಗಂಟೆವರೆಗೆ ಟಿ.ವಿ ಹಾಗೂ ಮೊಬೈಲ್ ಸ್ವಿಚ್ಆಫ್ ಮಾಡುವಂತೆ ಪೋಷಕರಿಗೆ ಜಾಗೃತಿ ಮೂಡಿಸುವುದು ಈ ಕ್ರಮಗಳಲ್ಲಿ ಒಂದಾಗಿದೆ. ಹಾವೇರಿ ತಾಲ್ಲೂಕಿನ 33 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಬಗ್ಗೆ ಡಂಗೂರ ಸಾರುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅವರು, ಪಿಡಿಒಗಳಿಗೆ ಸೂಚಿಸಿದ್ದಾರೆ. ಶಿಕ್ಷಣಾಧಿಕಾರಿಯ ಕೋರಿಕೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳ ಶ್ರಮಕ್ಕೆ ಕುಟುಂಬದ ಸದಸ್ಯರ ಸಹಕಾರ ಬೇಕಿದೆ.

– ಶ್ರೀಧರ್ ಕೆ. ಅಂಗಡಿ, ರಾಣೆಬೆನ್ನೂರು

ಇಂದ್ರಿಯ ಕಳೆದುಕೊಂಡು ಕುರುಡಾಗದಿರಿ

‘ಗಾಂಧಿ: ಕಾಂಗ್ರೆಸ್ನ ರಾಜಕೀಯ ಗುರಾಣಿ’ ಲೇಖನವು (ಲೇ: ಅರವಿಂದ ಬೆಲ್ಲದ, ಪ್ರ.ವಾ., ಫೆ. 3) ‘ನಾ ಸರಿ ನೀನು ತಪ್ಪು’ ಎಂಬ ಧೋರಣೆ ಹೊಂದಿದೆ. ಗಾಂಧೀಜಿ ಹೇಳಿದಂತೆ, ಕಾಂಗ್ರೆಸ್ ‘ಲೋಕ ಸೇವಕ ಸಂಘ’ ಆಗಬೇಕಿತ್ತು ಎನ್ನುವ ಇತಿಹಾಸದ ತಂಗಳು ಮಾತನ್ನೇ ಆಡಿರುವುದು ಕುಚೋದ್ಯ. ಗಾಂಧಿ ಬಗ್ಗೆ ವಿಪರೀತ ಅಸಹನೆ ಹೊಂದಿರುವವರು, ‘ಗಾಂಧೀಜಿಯ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಮರೆಮಾಡಿತು’ ಎಂದು ಕಾಂಗ್ರೆಸನ್ನು ಟೀಕಿಸುವುದು ತಮಾಷೆ ಎನಿಸುತ್ತದೆ. ಗಾಂಧೀಜಿಯ ಹೆಸರನ್ನು ಕಿತ್ತು ವಿಬಿ–ಜಿ ರಾಮ್ ಜಿ ಆಗಿ ಪರಿವರ್ತಿಸಿದವರು ರಾಷ್ಟ್ರಪಿತನ ಬಗ್ಗೆ ಮಾತಾಡುವುದು ಆತ್ಮವಂಚನೆಯ ಪರಾಕಾಷ್ಠೆಯಲ್ಲದೆ ಮತ್ತೇನು? ಕಾಂಗ್ರೆಸ್ ಗಾಂಧಿ ಸಂಕಥನದಲ್ಲಿ ಭಾವುಕ ರಾಜಕಾರಣ ಮಾಡುತ್ತಿದೆ ಎಂದು ಹಳಿಯುವವರು, ರಾಷ್ಟ್ರೀಯತೆಯೊಂದಿಗೆ ಧರ್ಮ, ರಾಮನನ್ನು ಬೆಸೆದು ಮಾಡುತ್ತಿರುವ ಸಂಕಥನದ ರಾಜಕಾರಣ ಭಾವುಕದ್ದಲ್ಲದೆ ಇನ್ನೇನು? ಪಕ್ಷದ ಕಾಲಾಳು ಆಗುವುದು ಎಂದರೆ ಇಂದ್ರಿಯ ಕಳೆದುಕೊಂಡು ಕುರುಡಾಗುವುದೇ?

– ದೊಡ್ಡಿಶೇಖರ್, ಆನೇಕಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.