ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಬಗೆಯ ಹುದ್ದೆಗಳನ್ನು ಭರ್ತಿ ಮಾಡಲು ಡಿಸೆಂಬರ್ನಿಂದ ರೈಲ್ವೆ ನೇಮಕಾತಿ ಮಂಡಳಿಯು ಪರೀಕ್ಷೆಗಳನ್ನು ಆರಂಭಿಸಿದ್ದು, ಅವು ಮಾರ್ಚ್ ಮೊದಲ ವಾರದವರೆಗೆ ನಡೆಯಲಿವೆ. ಮಂಡಳಿ ಹಾಗೂ ಪರೀಕ್ಷಾ ಮೇಲ್ವಿಚಾರಕರು ಅನುಸರಿಸುತ್ತಿರುವ ಕೆಲವು ನಿಯಮಗಳು ತರ್ಕಕ್ಕೆ ನಿಲುಕದೆ ಅಸಂಬದ್ಧವಾಗಿವೆ.
ಮಹಿಳೆಯರ ಮೂಗುತಿ, ಉಂಗುರ, ಸರ, ತಲೆಕೂದಲಿನ ಕ್ಲಿಪ್ಗಳನ್ನು ತೆಗೆದಿರಿಸುವುದು ಅಥವಾ ಅವುಗಳ ಮೇಲೆ ಪ್ಲಾಸ್ಟಿಕ್ ಲೇಪವನ್ನು ಹಚ್ಚಿ ಒಳಗೆ ಬಿಡುವುದು ಹಾಗೂ ಪುರುಷರ ಬೆಲ್ಟ್ ಅನ್ನು ತೆಗೆದಿರಿಸಿ ಒಳ ಹೋಗಲು ಅನುಮತಿ ನೀಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಹಾಗೂ ಶೋಚನೀಯ.
ಅನೇಕ ಆಕಾಂಕ್ಷಿಗಳು ಇದರಿಂದ ಇರಿಸುಮುರಿಸು ಅನುಭವಿಸುತ್ತಿದ್ದಾರೆ. ಇನ್ನಾದರೂ ಮಂಡಳಿಯು ಇಂತಹ ಕ್ಲಿಷ್ಟಕರ, ಅಪ್ರಯೋಜಕ ಹಾಗೂ ಅವೈಜ್ಞಾನಿಕ ನಿಯಮಗಳನ್ನು ರದ್ದುಪಡಿಸಲಿ. -ಮಹೇಶ್ ಸಿ.ಎಚ್., ಶಿವಮೊಗ್ಗ