ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 7 ಜನವರಿ 2024, 19:24 IST
Last Updated 7 ಜನವರಿ 2024, 19:24 IST
ಅಕ್ಷರ ಗಾತ್ರ

ಅರ್ಥ ಸಚಿವರು ವಿವರಣೆ ನೀಡುವರೇ?

ಕೇಂದ್ರದ ತೆರಿಗೆಯಲ್ಲಿ ಕರ್ನಾಟಕಕ್ಕೆ ಕಡಿಮೆ ಪಾಲು ಸಿಕ್ಕ ಬಗೆಗಿನ ಲೇಖನ (ಪ್ರ.ವಾ., ಜ. 4) ವಿಚಾರಾರ್ಹ. ಕೇರಳವು ‘ಜನಸಂಖ್ಯೆ ನಿಯಂತ್ರಿಸಿದ್ದಕ್ಕೆ ಉತ್ತೇಜನ ಕೊಡಬೇಕೇ ಹೊರತು ಪಾಲಿನಲ್ಲಿ ಕಡಿತ ಮಾಡಬಾರದು’ ಎಂದು ಒಂದು ಸಂದರ್ಭದಲ್ಲಿ ಹೇಳಿತ್ತು. ‘ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಹೇಳಿದ್ದರು. ಈ ಲೇಖನದಲ್ಲಿ ಕೊಟ್ಟ ಅಂಕಿಅಂಶಗಳ ಪ್ರಕಾರ, ಕೇರಳಕ್ಕೆ ಕಡಿತ, ತಮಿಳುನಾಡಿಗೆ ಏರಿಕೆ ಆಗಿದೆ. ಗುಜರಾತಿಗೆ ಹಂಚಿಕೆ ಹೆಚ್ಚಾಗಿರುವುದಕ್ಕೆ ಕೇಂದ್ರ ಸರ್ಕಾರ ವಿವರಣೆ ನೀಡುವುದು ಅಗತ್ಯ. ಉತ್ತಮ ಆಡಳಿತ ಅಲ್ಲಿ ಇದೆ ಎನ್ನಲು ಈಚೆಗಿನ ಎರಡು ಪ್ರಸಂಗಗಳು ಅಡ್ಡಿಯಾಗುತ್ತವೆ: ಒಂದು- ಛೋಟಾ ಉದೇಪುರ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಟ್ರಕ್‌ನಿಂದ ಆರು ಬಾಲಕಿಯರು ಹಾರಿ ಮಾನಹಾನಿಯಾಗುವುದರಿಂದ ಪಾರಾಗಿದ್ದಾರೆ; ಎರಡು- ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್  ಕಾನೂನು– 2013 ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಹಾಗೂ ಆ ಕೆಲಸದಲ್ಲಿ ತೊಡಗಿದ್ದಾಗ ಮರಣ ಹೊಂದಿದ (ಅವಧಿ 1993- 2014) ಹದಿನಾರು ಜನರ ಕುಟುಂಬಗಳಿಗೆ ಪರಿಹಾರ ಏಕೆ ಕೊಟ್ಟಿಲ್ಲ ಎಂದು ಅಲ್ಲಿನ ಹೈಕೋರ್ಟ್, ರಾಜ್ಯ ಸರ್ಕಾರವನ್ನು ಕೇಳಿದೆ.

ಇನ್ನು ತೆರಿಗೆ ಹಾಕುವ ಬಗೆಗೆ- ಕಾರ್ಪೊರೇಟ್ ಟ್ಯಾಕ್ಸ್ ದರ ಇಳಿಕೆಯಿಂದ ಆದ ‘ಲಾಭ’ದ  ಬಗೆಗೆ (ಪ್ರ.ವಾ., ಜ. 5) ಅರ್ಥ ಸಚಿವರು ವಿವರಣೆ ನೀಡುವರೇ? ವೆಲ್ತ್‌ ಕ್ರಿಯೇಟರ್ಸ್‌ ಎಂದು ಉದ್ಯಮಿಗಳನ್ನು ಸಂಬೋಧಿಸುವಾಗ ಅವರು ಎಷ್ಟು ಹಣ ಹೂಡಿದ್ದಾರೆ ಹಾಗೂ ಅದರಿಂದ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂಬ ಅಂಶಗಳೂ ಮುಖ್ಯ. ಸಂಪತ್ತಿನಲ್ಲಿ ಇವರು ಅವರನ್ನು ಹಿಂದಿಕ್ಕಿದರು, ಯಾವ ಯಾವ ಕಂಪನಿಗಳನ್ನು ಯಾರು ಯಾರು ಕೊಂಡುಕೊಂಡರು- ಈ ಮಾಹಿತಿಯಿಂದ ಜನಸಾಮಾನ್ಯರಿಗೇನು ಉಪಯೋಗ

⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಚಾತುರ್ವರ್ಣ ವ್ಯವಸ್ಥೆಯ ಶ್ರೇಣೀಕರಣ ನೀತಿ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೇರುಮರಡಿಯ ಗೊಲ್ಲರಹಟ್ಟಿಯಲ್ಲಿ ದಂಡದ ಭೀತಿಯಿಂದ ಮಕ್ಕಳು ಶೂ ಧರಿಸದೇ ಶಾಲೆಗೆ ಹೋಗುತ್ತಿರುವ ಸುದ್ದಿ (ಪ್ರ.ವಾ., ಜ. 6) ಓದಿ, ಎಂಥ ವಿಚಿತ್ರ ಎನಿಸಿತು. ಸರ್ಕಾರ ಶೂ ಭಾಗ್ಯ ಒದಗಿಸಿದ್ದರೂ ಮಕ್ಕಳು ಅದನ್ನು ಧರಿಸಲಾಗುತ್ತಿಲ್ಲವಂತೆ! ಏಕೆಂದರೆ, ಶಾಲೆಯಲ್ಲಿ ನಡೆದಾಡುವಾಗ ಒಬ್ಬರ ಶೂ ಮತ್ತೊಬ್ಬರಿಗೆ ತಗುಲಿದರೆ ಮೈಲಿಗೆಯಾಗುತ್ತದೆ ಎಂಬ ನಂಬಿಕೆ ಈ ಸಮುದಾಯದಲ್ಲಿ ಇದೆ. ಹೀಗಾದಾಗ, ಮೈಲಿಗೆ ತೊಳೆಯುವ ಪೂಜೆಗೆ ಖರ್ಚಾಗುವ ನಾಲ್ಕೈದು ಸಾವಿರವನ್ನು ಕಾಲು ತುಳಿದ ಮಕ್ಕಳ ಪೋಷಕರೇ ಭರಿಸಬೇಕಾಗಿರುವುದರಿಂದ ಮಕ್ಕಳಿಗೆ ಚಪ್ಪಲಿ ಅಥವಾ ಶೂ ಹಾಕಿ ಶಾಲೆಗೆ ಕಳಿಸುವುದನ್ನೇ ಬಿಟ್ಟಿದ್ದಾರೆ.

ಇದು ನಮ್ಮ ಪರಂಪರೆಯಲ್ಲಿ ಬೆಳೆದುಬಂದಿರುವ ಚಾತುರ್ವರ್ಣ ವ್ಯವಸ್ಥೆಯ ಶ್ರೇಣೀಕರಣ ನೀತಿಯ ಉಪ ಉತ್ಪನ್ನ ವಲ್ಲದೇ ಮತ್ತೇನು? ನಮ್ಮ ಶರೀರದಲ್ಲಿ ಕೈಯಷ್ಟು ಕಾಲು ಸಮಾನವಲ್ಲ ಎಂದು ಪುರುಷಸೂಕ್ತ ಹೇಳುತ್ತದಲ್ಲವೆ! ಅದಕ್ಕೇ ಕಾಲಿನಿಂದ ಒದ್ದರೆ, ಕೈಯಿಂದ ಹೊಡೆದದ್ದಕ್ಕಿಂತ ಹೆಚ್ಚು ಅವಮಾನವಾಗುತ್ತದೆ. ಅಂತಹ ಕಾಲಿಗೆ ಧರಿಸುವ ಚಪ್ಪಲಿ ಅಥವಾ ಶೂ ಇನ್ನೂ ನೀಚವಲ್ಲವೆ? ಆದ್ದರಿಂದ ಶೂ ಸ್ಪರ್ಶವಾದ ವ್ಯಕ್ತಿಯನ್ನು ಶುಚಿಗೊಳಿಸಬೇಕು. ಅದಕ್ಕೆ ನಾಲ್ಕೈದು ಸಾವಿರ ಖರ್ಚು ಮಾಡಿ ಮಂತ್ರಪಠಣ ಮಾಡಿಬಿಟ್ಟರೆ ಪವಿತ್ರನಾಗಿ ಬಿಡುತ್ತಾನೆ! ಇದು, ಚಂದ್ರಯಾನದ ಗರಿ ಧರಿಸಿ ಮೆರೆದ ನಮ್ಮ ದೇಶದಲ್ಲಿ ಜಾರಿಯಲ್ಲಿದೆ! ನಾವು ಚಿಕ್ಕಂದಿನಲ್ಲಿ ನಮ್ಮ ಕಾಲು ಯಾರಿಗಾದರೂ ತಗುಲಿದರೆ, ಅವರನ್ನು ಕೈಯಿಂದ ಮುಟ್ಟಿ ನಮ್ಮ ಕೈಯನ್ನು ನಮ್ಮ ಕಣ್ಣಿಗೆ ನಮಸ್ಕರಿಸುವ ರೀತಿಯಲ್ಲಿ ಒತ್ತಿಕೊಳ್ಳುತ್ತಿದ್ದೆವು. ‘ಅಯ್ಯೋ ನೋಡಲಿಲ್ಲ’ ಎಂದು ಹೇಳುತ್ತಿದ್ದೆವು ಅಷ್ಟೆ. ಆಗ ತಗುಲಿಸಿಕೊಂಡವನಿಗೂ ಸಮಾಧಾನ, ನಮಗೂ ಸಮಾಧಾನ. ಅಲ್ಲಿಗೆ ಎಲ್ಲ ಮುಗಿಯುತ್ತಿತ್ತು. ಆದರೆ ಹಲವೆಡೆ ನಡೆಯುತ್ತಲೇ ಬಂದಿರುವ ತಾರತಮ್ಯದ ಆರ್ಭಟಗಳನ್ನು ಗಮನಿಸಿದರೆ, ಜಿ.ಎಸ್.ಶಿವರುದ್ರಪ್ಪ ಅವರ, ‘ಯಾವುದೀ ಪ್ರವಾಹವು? ಮನೆಮನಗಳ ಕೊಚ್ಚಿ ಕೊರೆದು ಬುಸುಗುಡುತ್ತ ಧಾವಿಸುತಿದೆ...’ ಎಂಬ ಕವನದ ಸಾಲುಗಳು ನೆನಪಾಗುತ್ತವೆ!

⇒ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಪ್ರೇರಣೆಯ ಮಾತು ಅಮಾನವೀಯವೇ?

ಪದವಿಪೂರ್ವ ಶಿಕ್ಷಣ ಇಲಾಖೆಯ ಕೆಲವು ಜಿಲ್ಲೆಗಳ ಉಪನಿರ್ದೇಶಕರು ಸರ್ಕಾರಿ ಪದವಿಪೂರ್ವ ಮತ್ತು ಅನುದಾನಿತ ಕಾಲೇಜುಗಳಲ್ಲಿ ಶೇ 100ರಷ್ಟು ಫಲಿತಾಂಶಕ್ಕೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ. ಹಾಗಿದ್ದರೆ ಇದು ಅಮಾನವೀಯವೇ? ಅದಾಗಲೇ ಖಾಸಗಿ ಕಾಲೇಜುಗಳಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಾಗುತ್ತಿದ್ದು, ಮದ್ಯಮ ವರ್ಗದ, ಹಿಂದುಳಿದ ವರ್ಗದ ಬಹುತೇಕ ಮಕ್ಕಳು ಖಾಸಗಿ ಕಾಲೇಜುಗಳ ಕಡೆ ಮುಖ ಮಾಡಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಮೆರಿಟ್‌ನಲ್ಲಿ ಆಯ್ಕೆಯಾಗಿ ಬರುವ ಉಪನ್ಯಾಸಕರು ವರ್ಷವಿಡೀ ಬೋಧಿಸಿದ್ದರೂ ಫೇಲಾಗುವ ಈ ಮಕ್ಕಳು, ಕನಿಷ್ಠ ಅಂಕಗಳನ್ನಾದರೂ ಪಡೆದು ಉತ್ತೀರ್ಣರಾಗಿ ವಿದ್ಯಾಭ್ಯಾಸ ಮುಂದುವರಿಸಲಿ ಎಂಬುದು ಆ ಉಪನಿರ್ದೇಶಕರ ಕಾಳಜಿ ಯಾಕಾಗಿರಬಾರದು?

ಪಿಯುಸಿಯಲ್ಲಿ ಕನಿಷ್ಠ ಅಂಕಗಳನ್ನೂ ಪಡೆಯಲಾಗದ ಮಕ್ಕಳನ್ನು ನೋಡಿದರೆ, 15 ವರ್ಷಗಳ ಅವರ ಶಾಲಾ ಶಿಕ್ಷಣ ಅಷ್ಟೊಂದು ಕಳಪೆಯಾಗಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ಮನೆಪಾಠದ ನೆರವಿಲ್ಲದೆಯೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬಹುತೇಕ ಸರ್ಕಾರಿ ಕಾಲೇಜುಗಳ ಮಕ್ಕಳು ಶೇ 100ರಷ್ಟು ಫಲಿತಾಂಶ ಪಡೆಯುತ್ತಿರುವುದನ್ನು ಗಮನಿಸಬೇಕು. ಇದು ಅಂಕಗಳ ಪ್ರಶ್ನೆಯಲ್ಲ, ಅಧ್ಯಾಪಕರ ಪರಿಶ್ರಮದ ಪ್ರಶ್ನೆ. ಸರ್ಕಾರಿ ಕಾಲೇಜಿನ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸಬೇಕಾದ ಹೊಣೆಯನ್ನು, ಸರ್ಕಾರಿ ಉಪನ್ಯಾಸಕರು ಅರ್ಥಮಾಡಿಕೊಳ್ಳಲಿ ಎಂಬ ಪ್ರೇರಣೆಯ ಮಾತು ಅಮಾನವೀಯ ಎನಿಸುವುದಿಲ್ಲ.

⇒ಎ.ಆರ್‌.ಗೋವಿಂದಸ್ವಾಮಿ, ಬೆಂಗಳೂರು

ಕವನ

ಒಲುಮೆಯ ನಮನ

ತಾಯಿನುಡಿ ಮಲಯಾಳಂ ಆದರೂ
ಕನ್ನಡ, ತುಳುವಿನಲಿ ಹಗಲಿರುಳೂ
ದಣಿವರಿಯದೆ ದುಡಿದ ಸಂತ
ದುಡಿಮೆಯೇ ದೇವರೆಂದಿರಿ
ನಿಮ್ಮದೇ ಛಾಪು ಒತ್ತಿದಿರಿ
ಮೌಲಿಕ ಕೊಡುಗೆ ನೀಡಿದಿರಿ
ಸೃಜನ, ಸೃಜನೇತರ ಕ್ಷೇತ್ರಗಳಲಿ
ಮಗುಮನದ ಹೂನಗೆಯ ಅಮೃತ
ನೀವು ಸದಾ ಚಿರಂತನ ಸಾಹಿತ್ಯದಲಿ
ನಿಮಗಿದೋ ಒಲುಮೆಯ ನುಡಿನಮನ

(ಶನಿವಾರ ನಿಧನರಾದ ಪ್ರೊ. ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ)

ಸಿ.ಪಿ.ಸಿದ್ಧಾಶ್ರಮ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT