ಮಂಗಳವಾರ, ಜುಲೈ 27, 2021
24 °C

ಮನಸ್ಸು ಮುದುಡಿಸುವ ದೃಶ್ಯಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವು ಎಂಬ ‘ಒಳ್ಳೆ ಸುದ್ದಿ!’ ಬರಹ (ಸಂಗತ, ಜೂನ್‌ 11) ಅತ್ಯಂತ ಪ್ರಸ್ತುತವಾಗಿದೆ. ಲೇಖಕಿ ಗೀತಾವಸಂತ್ ಇಜಿಮಾನ್ ತಿಳಿಸಿರುವಂತೆ, ದೃಶ್ಯ ಮಾಧ್ಯಮದಲ್ಲಿ ಬಿತ್ತರವಾಗುವ ಇಂತಹ ಸಾವಿನ ಸುದ್ದಿಗಳು, ಅಂತ್ಯಸಂಸ್ಕಾರದ ನೇರಾನೇರ ದೃಶ್ಯಾವಳಿಗಳು ಪ್ರೇಕ್ಷಕರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನುಂಟು ಮಾಡುತ್ತವೆ. ಇದರಿಂದ ದೊಡ್ಡವರದಷ್ಟೇ ಅಲ್ಲ ಮಕ್ಕಳ ಮನಸ್ಸೂ ಹದಗೆಡುತ್ತದೆ. ಇದಕ್ಕೆ ನನ್ನ ಸ್ನೇಹಿತರ ಮಗಳೇ ಉದಾಹರಣೆ!

ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಿರುವ ಹುಡುಗಿ ಈ ಸಾವಿನ ದೃಶ್ಯಾವಳಿ, ಅದರಲ್ಲೂ ಗರ್ಭಿಣಿ ತನ್ನ ಗಂಡನ ಶವದ ಮೇಲೆ ಮಲಗಿ ಬಿಕ್ಕುವ ದೃಶ್ಯದಿಂದ ತೀವ್ರ ಗಲಿಬಿಲಿಗೊಂಡು ರಾತ್ರಿ ಪೂರಾ ನಿದ್ದೆಗೆಟ್ಟಿದ್ದಾಳೆ. ಮಾಧ್ಯಮದಲ್ಲಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಇದೇ ದೃಶ್ಯಾವಳಿಗಳನ್ನು ನೋಡಿ ಕಂಗೆಟ್ಟು, ತನ್ನದೇ ಸಂಕಟವೆಂಬಂತೆ ಅತ್ತೂ ಅತ್ತೂ ಸೊರಗಿದ್ದಾಳೆ.

ಎಳೆಯ ಮನಸ್ಸುಗಳೂ ಮುದುಡುವಂತೆ ಸಾವಿನ ದೃಶ್ಯಾವಳಿಗಳನ್ನೂ ಮೃತರ ಕುಟುಂಬಸ್ಥರ ರೋದನವನ್ನೂ ಹಿನ್ನೆಲೆ ಸಂಗೀತ, ಹಾಡುಗಳೊಂದಿಗೆ ಬಿತ್ತರಿಸುವ ಮಾಧ್ಯಮದ ಈ ಪರಿಗೆ ಕಾನೂನಾತ್ಮಕ ನಿಯಂತ್ರಣದ ಅವಶ್ಯಕತೆ ಖಂಡಿತ ಇದೆ.
-ಸ್ನೇಹಾ ಕೃಷ್ಣನ್, ಕೊರಟಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.