ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಂದಿರಾಗದ್ದಕ್ಕೆ ನಾನಾ ಕಾರಣ

ಅಕ್ಷರ ಗಾತ್ರ

‘ಆಧುನಿಕ ಮಹಿಳೆಯರು ಮಕ್ಕಳಿಗೆ ಜನ್ಮ ನೀಡಲು ಇಚ್ಛಿಸುತ್ತಿಲ್ಲ’ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಅ. 11). ಒಬ್ಬ ವೈದ್ಯರೂ ಆಗಿರುವ ಅವರು ಈ ಬೀಸುಹೇಳಿಕೆಯನ್ನು ನೀಡಿರುವುದು ಆಶ್ಚರ್ಯಕರ ಮತ್ತು ಆಘಾತಕಾರಿ. ಹಿಂದಿನ ಕಾಲದಲ್ಲಿ ಕುಟುಂಬದ ಬಲವಂತದಿಂದ ಮಹಿಳೆಯರು ಹತ್ತಾರು ಮಕ್ಕಳಿಗೆ ಜನ್ಮ ನೀಡಬೇಕಾದ ಒತ್ತಡಕ್ಕೆ ಒಳಗಾಗುತ್ತಿದ್ದರು. ಆದರೆ ಆಧುನಿಕಮಹಿಳೆಯರು ತಮಗೆ ಯಾವಾಗ ಮಗು ಬೇಕು, ಎಷ್ಟು ಮಕ್ಕಳು ಬೇಕು, ಅವುಗಳ ನಡುವೆ ಅಂತರ ಎಷ್ಟು ಇರಬೇಕು ಎಂಬುದನ್ನು ಸ್ವತಃ ನಿರ್ಧರಿಸಲಾರಂಭಿಸಿದ್ದಾರೆ. ಇದು ಗಂಡಾಳಿಕೆಯ ಪೂರ್ವಗ್ರಹ ಹೊಂದಿರುವವರಿಗೆ
ಅಪಥ್ಯವೆನಿಸುತ್ತದೆ.

ಒಬ್ಬ ವೈದ್ಯಳಾಗಿದ್ದು, ದಶಕಗಳ ಕಾಲ ಸಾಮಾಜಿಕ ಕಾರ್ಯಕರ್ತೆಯೂ ಆಗಿ ಕೆಲಸ ಮಾಡುತ್ತಿರುವ ನನಗೆ ಇದಕ್ಕಿಂತ ಭಿನ್ನವಾದ ಅಭಿಪ್ರಾಯ ಇದೆ. ಅನಾರೋಗ್ಯದ ಕಾರಣಕ್ಕೆ ಮಕ್ಕಳಾಗದ ವಿವಾಹಿತ ಮಹಿಳೆಯರು ತಮಗೆ ಮಕ್ಕಳು ಬೇಕೆಂದು ಎಷ್ಟು ತೀವ್ರವಾದ ಆಕಾಂಕ್ಷೆಯನ್ನು ಹೊಂದಿರುತ್ತಾರೆ, ಅದಕ್ಕಾಗಿ ಎಂತಹ ಒತ್ತಡವನ್ನುಅನುಭವಿಸುತ್ತಾರೆ ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಹೇಗಾದರೂ ಒಂದು ಮಗುವನ್ನು ಪಡೆಯಬೇಕು ಎಂದು ಅವರು ಹಲವಾರು ರೀತಿಯ ದುಬಾರಿ ಸಂತಾನೋತ್ಪತ್ತಿ ಚಿಕಿತ್ಸೆಗೆ ಮೊರೆ ಹೋಗುತ್ತಾರೆ. ಕೃತಕ ಗರ್ಭಧಾರಣಾ ಕೇಂದ್ರಗಳು ನೂರಾರು ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಇದೇ ಸಮಾಜದಲ್ಲಿ ಇರುವ ಸಾಮಾನ್ಯ ಪ್ರವೃತ್ತಿ. ಮಕ್ಕಳು ಬೇಡ ಎನ್ನುವವರು ವಿರಳಾತಿವಿರಳ. ಅಷ್ಟಕ್ಕೂ ಅದು ಅವರವರ ಆಯ್ಕೆ. ಅದರ ಹಿಂದಿನ ಕಾರಣಗಳು ಸಂಕೀರ್ಣ. ಅದರ ಒಟ್ಟಾರೆ ಪರಿಶೀಲನೆ ಮತ್ತು ವಿಶ್ಲೇಷಣೆಯನ್ನು ಕೈಗೆತ್ತಿಕೊಳ್ಳದೆ ಆಧುನಿಕ ಮಹಿಳೆಯರ ಬಗ್ಗೆ, ಅವರ ಆಯ್ಕೆಯ ಹಕ್ಕಿನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾತನಾಡುವುದು ಸರಿಯಲ್ಲ.

ಇಷ್ಟಾಗಿ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆ 2 ಮತ್ತು 3 ಅನ್ನು ಹೋಲಿಸಿ ನೋಡಿದರೆ, ಸಂತಾನಹೀನತೆಯ ಪ್ರಮಾಣವು ಶೇ 3ರಿಂದ 2.5ಕ್ಕೆ ಇಳಿದಿರುವುದು ಕಂಡುಬರುತ್ತದೆ. ಮಕ್ಕಳಾಗದಿರುವುದಕ್ಕೆ ಪ್ರಮುಖ ಕಾರಣ ದೈಹಿಕ ಆರೋಗ್ಯದ ಸಮಸ್ಯೆಗಳು. ಉನ್ನತ ವ್ಯಾಸಂಗ ಮತ್ತು ಉದ್ಯೋಗದ ಬೇಟೆಯ ಕಾರಣದಿಂದ ತಡವಾಗಿ ಸಂತಾನದ ಪ್ರಯತ್ನ ಮತ್ತು ಅದು ವಿಫಲವಾಗುವ ಸಾಧ್ಯತೆ. ಕೆಲವೊಮ್ಮೆ ಆಧುನಿಕ ದಂಪತಿ ಕೂಡಿ ಮಕ್ಕಳು ಬೇಡ ಎಂದು ಅಥವಾ ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡುವುದು ಮತ್ತೊಂದು ಕಾರಣ. ಪರಿಸ್ಥಿತಿ ಹೀಗಿರುವಾಗ, ‘ನಾನು ದುಬಾರಿ ಬಾಡಿಗೆ ತಾಯ್ತನದ ಮೂಲಕ ತಾಯಿ ಆಗುತ್ತೇನೆ’ ಎನ್ನುವವರು ಎಷ್ಟು ಜನ? ಜೊತೆಗೆ ಬಾಡಿಗೆ ತಾಯ್ತನ ಹೇಗೆ ಬಡರಾಷ್ಟ್ರಗಳ, ಬಡತಾಯಂದಿರ ಶೋಷಣೆಗೆ ಕಾರಣವಾಗಿದೆ ಎಂಬ ಕಡೆಗೆ ಸಚಿವರು ಗಮನಕೊಡುವುದು ಒಳ್ಳೆಯದು. ಕೆಲವರು ಸ್ವಯಂ ಇಚ್ಛೆಯ ಕಾರಣದಿಂದಲೇ ಅಂತಹ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅದನ್ನು ಅಲ್ಲಗಳೆಯುವುದು ಏಕೆ?

- ಡಾ. ಎಚ್.ಜಿ.ಜಯಲಕ್ಷ್ಮಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT