ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕೇಸರೀಕರಣ, ಹಸಿರೀಕರಣ ಎರಡೂ ಬೇಡ

Published 30 ಮೇ 2023, 22:26 IST
Last Updated 30 ಮೇ 2023, 22:26 IST
ಅಕ್ಷರ ಗಾತ್ರ

ಕೇಸರೀಕರಣ, ಹಸಿರೀಕರಣ ಎರಡೂ ಬೇಡ

ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಸರ್ಕಾರ ಮುನ್ನಡೆಸುವ ಪಕ್ಷ ಬದಲಾದಾಗಲೆಲ್ಲಾ ತಮ್ಮ ಮೂಗಿನ ನೇರಕ್ಕೆ ಪಠ್ಯ ಪರಿಷ್ಕರಿಸಿ ಮಕ್ಕಳಿಗೆ ಗೊಂದಲದ ಇತಿಹಾಸ ನೀಡದಿರಿ. ಮಕ್ಕಳಿಗೆ ಮತೀಯ ರಾಜರ ಯುದ್ಧದ ಇತಿಹಾಸಕ್ಕಿಂತ ಸದ್ಯದ ಪರಿಸ್ಥಿತಿಯಲ್ಲಿ ಮಳೆನೀರು ಸಂಗ್ರಹ, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನದಿಂದ ಆಗುತ್ತಿರುವ ಹಾನಿ ಮತ್ತು ತಡೆ, ವೃತ್ತಿಪರ ಕೌಶಲ ಹಾಗೂ ಮಾನವೀಯ ಮೌಲ್ಯಗಳ ಕುರಿತು ಹೆಚ್ಚಿನ ಜ್ಞಾನದ ಅಗತ್ಯವಿದೆ. ಈ ದಿಸೆಯಲ್ಲಿ ಸರ್ಕಾರ ಮತ್ತು ಪಠ್ಯ ತಜ್ಞರು ಚಿಂತಿಸಲಿ. ಕೇಸರೀಕರಣ ಮತ್ತು ಹಸಿರೀಕರಣವನ್ನು ಬಿಟ್ಟು ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳು ಇತಿಹಾಸ ಸೃಷ್ಟಿಸುವಂತಿರಲಿ. ಮುಂದಿನ ಪೀಳಿಗೆಯ ಭವಿಷ್ಯ ಪ್ರಜ್ವಲಿಸುವಂತಿರಲಿ. 

–ಎಸ್.ನಾಗರಾಜ ನಾಗೂರ, ಬಾಗಲಕೋಟೆ

ಮುದ್ರಿತ ಪಠ್ಯಪುಸ್ತಕ ಮುಂದುವರಿಯಲಿ

ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಆ ಪಕ್ಷದ ಸಿದ್ಧಾಂತಕ್ಕೆ ತಕ್ಕಂತೆ ಪಠ್ಯಪುಸ್ತಕಗಳು ರೂಪುಗೊಳ್ಳುವ ಪರಿಪಾಟ ಶುರುವಾಗಿದೆ. ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಶಾಲಾ ಪಠ್ಯಪುಸ್ತಕ ಪರಿಷ್ಕರಿಸಿ ಹೆಚ್ಚು ವಿವಾದಕ್ಕೀಡಾಗಿತ್ತು. ಅನೇಕ ಲೇಖಕರು, ಸಾಹಿತಿಗಳು, ಚಿಂತಕರು ತಮ್ಮ ಕವಿತೆ, ಲೇಖನಗಳನ್ನು ವಾಪಸ್ ಪಡೆದಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಈಗ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಪಠ್ಯಪುಸ್ತಕ ಪರಿಷ್ಕರಣೆಗೆ ಚಿಂತಿಸುತ್ತಿರುವ ವರದಿಗಳು ಬರುತ್ತಿವೆ. ಇದನ್ನೆಲ್ಲ ನೋಡಿದರೆ, ಪಠ್ಯಪುಸ್ತಕಗಳು ರಾಜಕೀಯ ಪಕ್ಷಗಳ ಪುಸ್ತಕಗಳಂತೆ ಆಗುತ್ತಿವೆಯೇ ಎಂಬ ಸಂದೇಹ ಮೂಡುತ್ತದೆ.

ಪ್ರಸ್ತುತ ಶೈಕ್ಷಣಿಕ ವರ್ಷದ ಶೇಕಡ 90ರಷ್ಟು ಪಠ್ಯಪುಸ್ತಕಗಳು ಮುದ್ರಣಗೊಂಡು ಶಾಲೆಗಳಿಗೆ ತಲುಪಿವೆ. ಈ ಹಂತದಲ್ಲಿ ಅವುಗಳನ್ನು ವಾಪಸ್‌ ಪಡೆದು ಪಠ್ಯವಿಷಯ ಪರಿಷ್ಕರಿಸಿ ಮರು ಮುದ್ರಣ ಮಾಡುವುದು ಸಮಂಜಸವಲ್ಲ ಹಾಗೂ ಆರ್ಥಿಕವಾಗಿ ಸರ್ಕಾರಕ್ಕೆ ಹೆಚ್ಚು ಹೊರೆ. ಆದ್ದರಿಂದ ಮುದ್ರಣಗೊಂಡ ಪಠ್ಯಪುಸ್ತಕಗಳನ್ನು ಮುಂದುವರಿಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದು ಶಾಶ್ವತ ಪಠ್ಯಪುಸ್ತಕ ಆಯೋಗವನ್ನು ರಚಿಸಲಿ. ಅದಕ್ಕೆ ಕಾನೂನಿನ ಮಾನ್ಯತೆ ನೀಡಲಿ. ಆ ಮೂಲಕ ಯಾವುದೇ ಪಕ್ಷ ತನ್ನ ಸಿದ್ಧಾಂತಕ್ಕೆ ತಕ್ಕಂತೆ ಪಠ್ಯಪುಸ್ತಕ ಬದಲಾವಣೆ ಮಾಡುವುದಕ್ಕೆ ಸಂಪೂರ್ಣ ಕಡಿವಾಣ ಹಾಕಬಹುದು.

–ಆಂಜನೇಯ ಎನ್., ಕಸಿನಾಯಕನಹಳ್ಳಿ, ಮಧುಗಿರಿ

ಕೈಕೊಟ್ಟ ರೈಲು, ಉಡಾಫೆಯ ನಡೆ

ವಿಜಯಪುರದಿಂದ ಸಂಜೆ 6.15ಕ್ಕೆ ಹೊರಡುವ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ಇದ್ದಕ್ಕಿದ್ದಂತೆ ಸಮಯವನ್ನು 5.45ಕ್ಕೆ ಬದಲಿಸಿದೆ. ಟಿಕೆಟ್ ಬುಕಿಂಗ್‌ನಲ್ಲಾಗಲೀ ಮೆಸೇಜಿನಲ್ಲಾಗಲೀ ಸಮಯ ಬದಲಾವಣೆಯನ್ನು ಗ್ರಾಹಕರಿಗೆ ತಿಳಿಸಿಲ್ಲ. ಕೇಳಿದರೆ ‘ಪೇಪರಲ್ಲಿ ಹಾಕ್ಸಿದೀವಿ’, ‘ಸ್ಟೇಷನ್‌ನಲ್ಲಿ ತಿಳಿಸಿದ್ದೀವಿ’ ಎಂಬಂತಹ ಉಡಾಫೆಯ ಉತ್ತರ ಕೊಡುತ್ತಾರೆ.

ನಾನು ಹಾಗೂ ತಮಿಳುನಾಡಿನ ಕವಿ ಸುಕೀರ್ತಾ ರಾಣಿ ಅರ್ಧಗಂಟೆ ಮೊದಲೇ ನಿಲ್ದಾಣಕ್ಕೆ ಹೋದಾಗ ರೈಲು ಹೋಗಿತ್ತು. ತೊಂದರೆಗೊಳಗಾದ ನೂರಾರು ಜನ ಗಲಾಟೆ ಮಾಡಿದಾಗ, ಮಂಗಳೂರು ರೈಲು ಹತ್ತಿಸಿ, ಗದಗ್‌ನಲ್ಲಿ ಲಿಂಕ್ ಕೊಡ್ತೀವಿ ಅಂತ ಸಾಗಹಾಕಿ, ಅಲ್ಲೂ ಕೊಡದೆ, ನಡುರಾತ್ರಿ ಹುಬ್ಬಳ್ಳಿಯಲ್ಲಿ ದೂರದ ಪ್ಲ್ಯಾಟ್‌ಫಾರ್ಮಲ್ಲಿ ನಿಲ್ಲಿಸಿ, ಆತಂಕದಿಂದ ಹೋಗಿ ರೈಲು ತಲುಪಿದರೆ, ಕಾದಿರಿಸಿದ್ದ ನಮ್ಮ ಸೀಟನ್ನು ಬೇರೆಯವರಿಗೆ ನೀಡಿದ್ದರು. ಕೊನೆಗೆ ಗೋಗರೆದು ಬೇರೆ ಸೀಟು ಪಡೆದು ಪ್ರಯಾಣಿಸಬೇಕಾಯಿತು.

ಹೀಗೆ ಹುಬ್ಬಳ್ಳಿಯಲ್ಲಿ ಗಂಟೆಗಟ್ಟಲೆ ನಿಲ್ಲಿಸಿ ಎಲ್ಲರಿಗೂ ತೊಂದರೆ ಕೊಟ್ಟು, ಅತ್ತ ಮಕ್ಕಳು, ಮುದುಕರು, ಹೆಂಗಸರು, ಗಂಡಸರೆನ್ನದೆ ಎಲ್ಲರಿಗೂ ತೊಂದರೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು.

–ಡಾ. ಸಬಿತಾ ಬನ್ನಾಡಿ, ಬಿ.ಆರ್.ಪ್ರಾಜೆಕ್ಟ್

ಮಣಿಪುರ: ಮೂಡಲಿ ಸಾಮರಸ್ಯ

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಉಲ್ಬಣಿಸಿರುವುದು ವಿಷಾದದ ಸಂಗತಿ. ಪ್ರಜಾಸತ್ತಾತ್ಮಕವಾದ ಯಾವುದೇ ಸರ್ಕಾರ ಯಾವುದೋ ಒಂದು ಪ್ರಬಲ ಸಮುದಾಯದ ಪರವಾಗಿ ವರ್ತಿಸುವುದು ಅಕ್ಷಮ್ಯ. ಜನಾಂಗೀಯ ಸಂಘರ್ಷದಿಂದ ಸಮುದಾಯಗಳು ನಲುಗುತ್ತಿರುವುದು ಬಲಿಷ್ಠ ಶಕ್ತಿಯನ್ನು ಪರದೇಶದವರು ವಕ್ರದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ತಕ್ಷಣ ಮಣಿಪುರದಲ್ಲಿ ಸಮುದಾಯಗಳ ನಡುವೆ ಸಾಮರಸ್ಯ ಮೂಡುವಂತೆ ಮಾಡಬೇಕಾಗಿದೆ.

ಸಮುದಾಯಗಳು ನೈತಿಕತೆ ಕಳೆದುಕೊಳ್ಳುವ ಮೊದಲು ಭಾರತದ ಸಾಂಘಿಕ ಜೀವನದ ಸಂಸ್ಕೃತಿಯನ್ನು ಬಲಿಷ್ಠಗೊಳಿಸಬೇಕಿದೆ.

–ಎಂ.ಮಂಚಶೆಟ್ಟಿ ಕಡಿಲುವಾಗಿಲು, ಮದ್ದೂರು

ಹೊಸಬರಿಗೆ ಸಿಗಲಿ ಅವಕಾಶ

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಹುಜನರ ಆಶಯದಂತೆ ಸರ್ಕಾರ ಹೊಸ ಆಲೋಚನೆಗಳೊಂದಿಗೆ ಮುನ್ನಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಅಕಾಡೆಮಿಗಳು, ನಿಗಮ ಮಂಡಳಿಗಳು, ರಂಗಾಯಣಗಳು, ವಿವಿಧ ಪ್ರಾಧಿಕಾರಗಳಲ್ಲಿ ಸ್ಥಾನ ಪಡೆಯಲು ಹಲವರು ಪ್ರಯತ್ನ ನಡೆಸುತ್ತಿದ್ದಾರೆ. ಸರ್ಕಾರ ಈ ಕ್ಷೇತ್ರಗಳಿಗೆ ನೇಮಕ ಮಾಡುವಾಗ, ಈಗಾಗಲೇ ಅಧಿಕಾರ ಅನುಭವಿಸಿ, ಸೇವೆ ಸಲ್ಲಿಸಿರುವವರ ಸ್ಥಾನದಲ್ಲಿ ಹೊಸ ಆಲೋಚನೆ, ಚಿಂತನೆಯುಳ್ಳ ಕ್ರಿಯಾಶೀಲರಿಗೆ ಅವಕಾಶ ನೀಡುವುದು ಅಪೇಕ್ಷಣೀಯ.

ಅಧಿಕಾರ ಪಡೆದವರಿಗೇ ಮತ್ತೆ ಮತ್ತೆ ಮಣೆ ಹಾಕುವ ಬದಲು ಕಾಲದ ಅಗತ್ಯಕ್ಕೆ ಅನುಗುಣವಾಗಿ ಸಾಂಸ್ಕೃತಿಕ ರಾಜಕಾರಣದ ಅನಿವಾರ್ಯ ಇರುವುದರಿಂದ, ಸರ್ಕಾರ ಈ ಬಗ್ಗೆ ಪರ್ಯಾಲೋಚಿಸಿ ಹೊಸ ಆಲೋಚನೆಗೆ ಅವಕಾಶ ಕಲ್ಪಿಸಿ, ಸೈದ್ಧಾಂತಿಕ ಕ್ರೋಡೀಕರಣದತ್ತ ಸಾಗಲಿ.

–ಪ್ರೊ. ರಾಜಪ್ಪ ದಳವಾಯಿ, ಸಿ.ಬಸವಲಿಂಗಯ್ಯ, ಡಾ. ತಲಕಾಡು ಚಿಕ್ಕರಂಗೇಗೌಡ, ಡಾ. ವಡ್ಡಗೆರೆ ನಾಗರಾಜಯ್ಯ, ಶಿವರಾಮೇಗೌಡ (ಕ.ರ.ವೇ), ಡಾ. ಆರ್.ಎನ್.ರಾಜಾನಾಯಕ್, ಈ.ಬಸವರಾಜು,ಡಾ. ನಾಗೇಶ್ ಕೆ.ಎನ್., ಜಗದೀಶ್ ಜಾಣಜಾಣೆಯರು, ಪ್ರಭಾ ಬೆಳವಂಗಲ, ಡಾ. ಹುಲಿಕುಂಟೆಮೂರ್ತಿ, ವಿ.ಆರ್.ಕಾರ್ಪೆಂಟರ್, ಡಾ. ರವಿಕುಮಾರ್ ನೀ.ಹ., ಆಲ್ಬೂರು ಶಿವರಾಜ ನಾಯಕ, ಉದಯಕುಮಾರ್ ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT