ಕವಿಗಳನ್ನು ಗುರುತಿಸುವ ಕೆಲಸವಾಗಲಿ
ದಸರಾ ಮಹೋತ್ಸವದ ಕವಿಗೋಷ್ಠಿಯ ಉಪಸಮಿತಿಯಿಂದ ಪ್ರಾದೇಶಿಕ ಹಾಗೂ ವಿಖ್ಯಾತ ಕವಿಗೋಷ್ಠಿಗೆ ಕವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು, ಬರಹಗಾರರನ್ನು ಮುಜುಗರಕ್ಕೆ ಈಡು ಮಾಡುವ ಸಂಗತಿ. ದಸರಾ ಕವಿಗೋಷ್ಠಿಗೆ ತನ್ನದೇ ಆದ ಹಿನ್ನೆಲೆ ಮತ್ತು ಸಾಂಸ್ಕೃತಿಕ ಅನನ್ಯತೆ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರತಿ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನೆರವಿನೊಂದಿಗೆ ಕವಿಗೋಷ್ಠಿಗೆ ಹೆಸರುಗಳನ್ನು ಅಂತಿಮಗೊಳಿಸಬೇಕು. ಕವಿಗಳು ತಾವೇ ಅರ್ಜಿ ಹಾಕಿಕೊಂಡು ಕವಿಗೋಷ್ಠಿಯಲ್ಲಿ ಭಾಗವಹಿಸಬೇಕು ಎನ್ನುವುದು ಒಳ್ಳೆಯ ಸಂಪ್ರದಾಯವಲ್ಲ.
ಸಮಿತಿಯು ಯಾವುದೇ ಶಿಫಾರಸುಗಳಿಗೆ ಸುಲಭವಾಗಿ ಒಳಗಾಗಬಾರದು. ಹಾಗೇನಾದರೂ ಆದರೆ ಕವಿಗೋಷ್ಠಿಯ ಗುಣಮಟ್ಟ ಕಡಿಮೆಯಾಗಿ, ಅಲ್ಲಿ ಸೇರುವ ಕಾವ್ಯಾಸಕ್ತರಿಗೆ ನಿರಾಸೆಯಾಗುತ್ತದೆ. ನಮ್ಮೆಲ್ಲರ ಪ್ರಜ್ಞೆಯನ್ನು ಅರಳಿಸುವ, ವಿಚಾರಕ್ಕೆ ಹಚ್ಚುವ, ಕಾವ್ಯ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಕವಿಗಳನ್ನು ಗುರುತಿಸಿ ಅವಕಾಶಕಲ್ಪಿಸಿಕೊಟ್ಟರೆ ಕವಿಗೋಷ್ಠಿಗೆ ಅರ್ಥ ಬರಲು ಸಾಧ್ಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಕವಿಗಳು ಇತ್ತೀಚೆಗೆ ಗಜಲ್‌ಗಳನ್ನು ಬರೆಯುತ್ತಿದ್ದಾರೆ. ಈ ಮಹೋತ್ಸವದಲ್ಲಿ ಗಜಲ್‌ಗೆ ಸಂಬಂಧಿಸಿದ ಪ್ರತ್ಯೇಕ ಗೋಷ್ಠಿಯನ್ನು ಏರ್ಪಡಿಸುವುದು ಕೂಡ ಸೂಕ್ತ.
-ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ
‘ಎಲ್ಲ ಶಾಸಕರೂ ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ತಲಾ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ಸಬಲೀಕರಣಗೊಳಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನವಿ ಮಾಡಿಕೊಂಡಿದ್ದಾರೆ (ಪ್ರ.ವಾ., ಆ. 30). ಇದೊಂದು ಸಾಮಾಜಿಕ ಚಿಂತನೆ ಮತ್ತು ಕನ್ನಡ ಕಟ್ಟುವ ಕೆಲಸಕ್ಕೆ ಇರಬೇಕಾದ ಕಳಕಳಿ. ಪ್ರಸ್ತುತ ಅಧಿಕಾರಸ್ಥ ರಾಜಕಾರಣಿಗಳು ಕೆಲವು ವಿಶೇಷ ಹಬ್ಬ ಹರಿದಿನಗಳಲ್ಲಿ ಭಜನೆ, ಪೂಜೆ, ಆರ್ಕೆಸ್ಟ್ರಾ, ಉಪಾಹಾರದ ವ್ಯವಸ್ಥೆ ಹಾಗೂ ಆಯ್ದ ಕೆಲವರಿಗೆ ಸನ್ಮಾನ ಮಾಡುವ ಪರಿಪಾಟ ಬೆಳೆಸಿಕೊಂಡಿದ್ದಾರೆ. ಇಂತಹ ಜನಪ್ರಿಯ ಗಿಮಿಕ್‌ಗಳನ್ನು ಮಾಡಿ ಮತ ಕೇಳುವ ಬದಲಿಗೆ, ತಮ್ಮ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದು ಶಾಶ್ವತ ಕೆಲಸವಾಗಿ ಉಳಿಯುತ್ತದೆ.
ಶಾಸಕರ ಜೊತೆಗೆ ಆಯಾ ತಾಲ್ಲೂಕಿನಲ್ಲಿ ಇರುವ ಸ್ಥಿತಿವಂತರು, ಮುಂದೆ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಬೇಕೆಂದು ಕನಸು ಕಾಣುತ್ತಿರುವವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆ ಮತ್ತು ಗ್ರಂಥಾಲಯ ಕಟ್ಟಡಗಳನ್ನು ದುರಸ್ತಿ ಮಾಡಿಸಲಿ.
-ತಾ.ಸಿ.ತಿಮ್ಮಯ್ಯ, ಬೆಂಗಳೂರು
ಆಕ್ಷೇಪ ಸಲ್ಲಿಕೆ: ಶುಲ್ಕ ಕಡಿಮೆಯಾಗಲಿ
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳನ್ನು ಗೂಗಲ್ ಅಥವಾ ಎ.ಐ. ಮೂಲಕ ಕನ್ನಡಕ್ಕೆ ಅನುವಾದ ಮಾಡಲಾಗಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿರುವ ಕೆಪಿಎಸ್‌ಸಿ, ಅನುವಾದ ಮಾಡಿದ್ದು ಭಾಷಾಂತರಕಾರರು ಎಂದು ಹೇಳಿರುವುದನ್ನು ಓದಿ (ಪ್ರ.ವಾ.,
ಆ. 30) ಆಶ್ಚರ್ಯವಾಯಿತು. ಪೂರ್ವಭಾವಿ ಪರೀಕ್ಷೆಯ ಕೀ ಉತ್ತರ
ಗಳನ್ನು ಬಿಡುಗಡೆ ಮಾಡಲಾಗಿದ್ದು, ಆಕ್ಷೇಪ ಸಲ್ಲಿಸಲು ಪ್ರತಿ ಪ್ರಶ್ನೆಗೆ ₹ 50 ಶುಲ್ಕ ನಿಗದಿ ಮಾಡಿರುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಅನೇಕ ಬಡ ವಿದ್ಯಾರ್ಥಿಗಳು ತಮ್ಮ ಕನಸಿನ ಹುದ್ದೆಯನ್ನು ಪಡೆಯುವುದಕ್ಕಾಗಿ ದೂರದ ಊರಿಗೆ ಹೋಗಿ ಕೋಚಿಂಗ್ ಸೆಂಟರ್‌ಗಳಿಗೆ ಸೇರಿ ಬಾಡಿಗೆ ಕೋಣೆಗಳಲ್ಲಿ ಇದ್ದು ಅಧ್ಯಯನ ನಡೆಸಿರುತ್ತಾರೆ. ಪರೀಕ್ಷೆ ಬರೆಯುವುದಕ್ಕೆ ಬೇರೆ ಊರುಗಳಿಗೆ ಹೋಗುವುದಕ್ಕೂ ಹಣ ಖರ್ಚು ಮಾಡಿರುತ್ತಾರೆ. ಅದರ ಜೊತೆಗೆ ಮೊನ್ನೆ ಪರೀಕ್ಷೆಯಲ್ಲಿ ಬಂದಂತಹ ಪ್ರಶ್ನೆಗಳಿಂದ ಆಘಾತಕ್ಕೆ ಒಳಗಾಗಿದ್ದಾರೆ.
ಹೀಗಿರುವಾಗ, ಆಕ್ಷೇಪ ಸಲ್ಲಿಸಲು ಪ್ರತಿ ಪ್ರಶ್ನೆಗೆ ₹ 50 ಶುಲ್ಕ ನಿಗದಿ ಮಾಡಿರುವುದು ಸರಿಯಲ್ಲ. ಬಡ
ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ, ಆಯೋಗವು ಶುಲ್ಕದ ದರವನ್ನು ಕಡಿಮೆ ಮಾಡುವುದು ಸೂಕ್ತ.
-ಅಂಬಿಕಾ ಬಿ.ಟಿ., ಹಾಸನ
ಗ್ರಂಥಾಲಯವೇನು ನ್ಯಾಯಬೆಲೆ ಅಂಗಡಿಯೇ?
ಜ್ಞಾನವನ್ನು ಬಿತ್ತರಿಸುವ ಕೇಂದ್ರವಾಗಿರುವ ಗ್ರಂಥಾಲಯಗಳು ಇಂದು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಇದ್ದರೂ ಇಲ್ಲದಂತಾಗಿವೆ. ಮೊಬೈಲ್ ಫೋನ್ ಬಂದ ಮೇಲೆ ಗ್ರಂಥಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾದರೂ ಇಂದಿಗೂ ಸಾರ್ವಜನಿಕ ಗ್ರಂಥಾಲಯವನ್ನು ಬಳಸುವ ಸಾವಿರಾರು ಜನರನ್ನು ಕಾಣುತ್ತೇವೆ. ಆದರೆ ಗ್ರಂಥಾಲಯದಲ್ಲಿ ಕನ್ನಡ, ಇಂಗ್ಲಿಷ್ ಪತ್ರಿಕೆಗಳು, ಒಂದೆರಡು ಮಾಸಿಕಗಳನ್ನು ಬಿಟ್ಟರೆ, ಹತ್ತು -ಹದಿನೈದು ವರ್ಷಗಳ ಹಿಂದೆ ಪ್ರಕಟಗೊಂಡ ಹಳೆಯ ಪುಸ್ತಕಗಳೇ ಹೆಚ್ಚಿಗೆ ಕಾಣಸಿಗುತ್ತವೆ. ಇತ್ತೀಚೆಗೆ ಬಿಡುಗಡೆಯಾದ ಹಲವಾರು ಉತ್ಕೃಷ್ಟ ಪುಸ್ತಕಗಳಾಗಲಿ, ಮಕ್ಕಳ ಪುಸ್ತಕಗಳಾಗಲಿ ನೋಡಲು ಸಿಗುವುದಿಲ್ಲ. ಮೇಲ್ವಿಚಾರಕರನ್ನು ಕೇಳಿದರೆ ಅವರು ಮೇಲಿನ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಹೇಳಿ ಸುಮ್ಮನಾಗುತ್ತಾರೆ.
ಕೆಲವೆಡೆ ಸಾರ್ವಜನಿಕ ಗ್ರಂಥಾಲಯದ ಫಲಕವಷ್ಟೇ ಇದ್ದು, ನ್ಯಾಯಬೆಲೆ ಅಂಗಡಿಯ ಹಾಗೆ ವಾರದಲ್ಲಿ ಎರಡು-ಮೂರು ದಿನ ಮಾತ್ರ ಬಾಗಿಲು ತೆಗೆಯುತ್ತಿದ್ದಾರೆ. ಇಂತಹ ನಿರ್ಲಕ್ಷ್ಯದಿಂದಲೇ ಓದುಗರ ಸಂಖ್ಯೆ ಇಳಿಮುಖವಾಗಿದೆ. ಇದರ ಕುರಿತು ಸರ್ಕಾರ ಮುತುವರ್ಜಿ ವಹಿಸಬೇಕು.
-ಸುರೇಂದ್ರ ಪೈ, ಭಟ್ಕಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.