ಭಯ- ಅಭಯ
ಪ್ರಾಣಿಪ್ರಿಯರಿಗೆ ಸಂತಸದ ಸಂಗತಿ,
ಹೆಚ್ಚಳವಾಗಿದೆಯಂತೆ ರಾಜ್ಯದ
ಕಾಡುಗಳಲ್ಲಿ ಹುಲಿ ಸಂತತಿ,
ವಾಸ್ತವದಲ್ಲಿ
ಭಯ ಹುಟ್ಟಿಸುತ್ತಿರುವುದು
ನಾಡಿನಲ್ಲಿ ಗೋಮುಖ
ವ್ಯಾಘ್ರರ ಸಂತತಿ!
ಮ.ಗು.ಬಸವಣ್ಣ ನಂಜನಗೂಡು
ಡೆಮು ರೈಲು: ವೇಳಾಪಟ್ಟಿ ಪಾಲನೆಯಾಗಲಿ
ದಾವಣಗೆರೆಯಿಂದ ಬಳ್ಳಾರಿಗೆ ಇದೇ 24ರಂದು ಡೆಮು ರೈಲಿನಲ್ಲಿ ಪ್ರಯಾಣ ಮಾಡಿದೆವು. ಮಧ್ಯಾಹ್ನ 2.45ಕ್ಕೆ ಬಿಟ್ಟು ರಾತ್ರಿ 9.15ಕ್ಕೆ ತಲುಪಿತು. ವೇಳಾಪಟ್ಟಿಯ ಪ್ರಕಾರ ಅದು, ದಾವಣಗೆರೆಯನ್ನು ಮಧ್ಯಾಹ್ನ 2.40ಕ್ಕೆ ಬಿಟ್ಟು ರಾತ್ರಿ 8.10ಕ್ಕೆ ಬಳ್ಳಾರಿಯನ್ನು ತಲುಪಬೇಕು. ಆದರೆ ನಾವು ಪ್ರಯಾಣಿಸಿದ ಯಾವತ್ತೂ ಸರಿಯಾದ ಸಮಯಕ್ಕೆ ಅದು ತಲುಪಿಲ್ಲ. ಆದ್ದರಿಂದ ವೇಗವನ್ನು ಹೆಚ್ಚಿಸಿ ಪ್ರಯಾಣದ ಅವಧಿಯು ಕಡಿಮೆ ಆಗುವಂತಾದರೆ, ಹೆಚ್ಚು ಜನರು ಪ್ರಯಾಣ ಮಾಡುತ್ತಾರೆ. ರೈಲ್ವೆ ಇಲಾಖೆ ಈ ಬಗ್ಗೆ ಗಮನಹರಿಸಬೇಕು.
-ತಿಮ್ಮರಾಜು ಎಸ್.ಆರ್., ದಾವಣಗೆರೆ
ಸುಳ್ಳುಸುದ್ದಿ ಹರಿಯಬಿಡುವವರಿಗಿಲ್ಲ ಪಕ್ಷಭೇದ
ರಾಜಸ್ಥಾನದ ದೇವಸ್ಥಾನವೊಂದರಲ್ಲಿ ಮುಸ್ಲಿಮರು ಪೊಲೀಸ್ ಭದ್ರತೆಯಲ್ಲಿ ನಮಾಜು ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ನನ್ನ ನಿವೃತ್ತ ಉದ್ಯೋಗಿ ಮಿತ್ರರೊಬ್ಬರು ಇತ್ತೀಚೆಗೆ ನನ್ನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ಆದರೆ ಈ ಸುದ್ದಿಯು ಪತ್ರಿಕೆಗಳಲ್ಲಿ ಎಲ್ಲೂ ಪ್ರಕಟವಾಗಿರಲಿಲ್ಲ, ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿರಲಿಲ್ಲ. ಆದ್ದರಿಂದ ಇದು ನಿಜವೋ ಸುಳ್ಳೋ ಎಂಬ ಗೊಂದಲದಲ್ಲಿದ್ದೆ. ಆದರೆ ‘ಪ್ರಜಾವಾಣಿ’ಯ ಫ್ಯಾಕ್ಟ್ ಚೆಕ್ ಅಂಕಣದಲ್ಲಿ ಅಂದೇ ಈ ಸಂದೇಶದ ಬಗ್ಗೆ ವರದಿಯಾಗಿತ್ತು. ಇದು ಸುಳ್ಳು ಸುದ್ದಿ ಎಂತಲೂ, ಸದರಿ ದೇವಸ್ಥಾನದಲ್ಲಿ ಇದು 50 ವರ್ಷಗಳಿಂದಲೂ ನಡೆದುಬಂದಿರುವ ಪದ್ಧತಿ ಎಂತಲೂ ವರದಿ ಇತ್ತು. ನಾನು ನನ್ನ ಮಿತ್ರರಿಗೆ ಪತ್ರಿಕೆಯ ಫ್ಯಾಕ್ಟ್ ಚೆಕ್ ವರದಿಯನ್ನು ಕಳುಹಿಸಿದೆ. ಅವರು ಮಾಹಿತಿ ತಿಳಿಸಿದ್ದಕ್ಕೆ ನನಗೆ ಧನ್ಯವಾದ ಸಲ್ಲಿಸಿ, ತಾವು ಮೊದಲು ಕಳುಹಿಸಿದ್ದ ಸಂದೇಶವನ್ನು ಡಿಲೀಟ್ ಮಾಡಿದರು.
ಎರಡು ದಿನ ಬಿಟ್ಟು ಮತ್ತೊಂದು ಸಂದೇಶವನ್ನು ಕಳುಹಿಸಿದ್ದರು. ಅದರಲ್ಲಿ ಸೋನಿಯಾ ಗಾಂಧಿಯವರ ಭಾವಚಿತ್ರದ ಜೊತೆಗೆ ‘ಈ ಚಿತ್ರವನ್ನು ಜೂಮ್ ಮಾಡಿ ನೋಡಿದರೆ, ಅವರ ಹಿಂದೆ ಕಾಣುವ ಪುಸ್ತಕವೊಂದರಲ್ಲಿ ‘ಹೌ ಟು ಕನ್‌ವರ್ಟ್ ಇಂಡಿಯಾ ಇಂಟು ಕ್ರಿಶ್ಚಿಯನ್ ನೇಷನ್ ಎಂದಿದೆ’ ಎಂದು ಬರೆಯಲಾಗಿತ್ತು. ಈ ಸುದ್ದಿಯ ಅಸಲಿಯತ್ತಿನ ಬಗ್ಗೆ ಕೂಡ ಅನುಮಾನಗೊಂಡ ನಾನು ಕೂಡಲೇ ಇದನ್ನು ಪತ್ರಿಕೆಯ ಫ್ಯಾಕ್ಟ್ ಚೆಕ್ ಅಂಕಣದ ನಂಬರ್‌ಗೆ ವಾಟ್ಸ್‌ಆ್ಯಪ್ ಮಾಡಿದೆ. ಇದು ಸುಳ್ಳು ಸುದ್ದಿ ಎಂತಲೂ ತಿರುಚಿ, ಎಡಿಟ್ ಮಾಡಿರುವ ವಿಡಿಯೊ ಎಂತಲೂ ಶುಕ್ರವಾರದ (ಜುಲೈ 28) ಸಂಚಿಕೆಯಿಂದ ತಿಳಿದುಬಂತು.
ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಯ, ತಿರುಚಿ ಸೃಷ್ಟಿಸಿದ ಹಲವಾರು ಸುದ್ದಿ, ವಿಡಿಯೊಗಳು ಹರಿದಾಡುತ್ತವೆ. ಇದಕ್ಕೆ ಪಕ್ಷಭೇದ ಇಲ್ಲ. ಅವರ ವಿರುದ್ಧ ಇವರು ಇವರ ವಿರುದ್ಧ ಅವರು ಸುಳ್ಳು ಸುದ್ದಿಗಳನ್ನು ಹರಿಯಬಿಡುತ್ತಾರೆ. ಇವುಗಳನ್ನು ಸೃಷ್ಟಿಸುವವರು ಮತ್ತು ಅವುಗಳನ್ನು ಪರಿಶೀಲಿಸದೇ ಒಬ್ಬರಿಂದ ಮತ್ತೊಬ್ಬರಿಗೆ ಫಾರ್ವರ್ಡ್ ಮಾಡುವವರಲ್ಲಿ ವಿದ್ಯಾವಂತರು, ಉದ್ಯೋಗಿಗಳು, ನಿವೃತ್ತರು, ಹಿರಿಯರು ಸೇರಿರುತ್ತಾರೆ ಎನ್ನುವುದು ಗಮನಾರ್ಹ. ಹಾಗೆಯೇ ಟೀಕಿಸುವ ಭರದಲ್ಲಿ ಮುಖ್ಯಮಂತ್ರಿ, ಪ್ರಧಾನಿಯವರನ್ನು ಕೆಟ್ಟ ಪದಗಳಿಂದ ನಿಂದಿಸುವುದೂ ನಡೆಯುತ್ತದೆ. ಇದು ದುರದೃಷ್ಟಕರ. ಆ ಹುದ್ದೆಗಳ ಮಹತ್ವವನ್ನಾದರೂ ಅವರು ಅರಿಯಬೇಕು.
-ಮುಳ್ಳೂರು ಪ್ರಕಾಶ್, ಮೈಸೂರು
ಜ್ಯೋತಿಷಿಗಳಿಗೆ ಸಿಗಲಿ ಪರವಾನಗಿ
ವಿಶೇಷ ಪೂಜೆ ನೆಪದಲ್ಲಿ ಬೆಂಗಳೂರಿನ ಮನೆಯೊಂದಕ್ಕೆ ಬಂದಿದ್ದ ನಕಲಿ ಜ್ಯೋತಿಷಿಯೊಬ್ಬ, ₹ 5 ಲಕ್ಷ ಬೆಲೆಬಾಳುವ ಚಿನ್ನಾಭರಣ ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ (ಪ್ರ.ವಾ., ಜುಲೈ 28). ದೂರುದಾರ ಮಹಿಳೆ ನೀಡಿರುವ ಮಾಹಿತಿ ಪ್ರಕಾರ, ಮಗಳು ಮತ್ತು ಅಳಿಯನ ನಡುವೆ ಇದ್ದ ಜಗಳಕ್ಕೆ ಎರಡೂ ಕಡೆಯ ಪೋಷಕರು ಕುಳಿತು, ಸಾಧ್ಯವಾದರೆ ಹಿರಿಯ ಸಮಾಲೋಚಕರನ್ನು ಕರೆಸಿ, ಅಳಿಯ, ಮಗಳ ನಡುವೆ ಬೆಳೆದಿದ್ದ ಹಮ್ಮು ಬಿಮ್ಮಿನ ಕೋಟೆಯನ್ನು ಕೆಡವಿ, ಇಬ್ಬರಿಗೂ ತಿಳಿ ಹೇಳಿ ಸರಿಪಡಿಸಬೇಕಾಗಿತ್ತು. ಬೇಕಿದ್ದರೆ ಸೂಕ್ತ ಕಾನೂನು ಸಲಹೆಯನ್ನೂ ಪಡೆಯಬಹುದಿತ್ತು. ಆದರೆ ಇಲ್ಲಿ ಆಗಿರುವುದೇ ಬೇರೆ. ಜ್ಯೋತಿಷಿಯ ಮೊರೆ ಹೋಗಿ ಪೂಜೆಗೆ ಕಟ್ಟುಬಿದ್ದಿದ್ದಾರೆ.
ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪೂಜೆ, ಜ್ಯೋತಿಷ ತಪ್ಪು ಎನ್ನುವ ಧೈರ್ಯ ಯಾರಿಗೂ ಇಲ್ಲ. ಹೀಗಿರುವಾಗ, ಜ್ಯೋತಿಷಿ ಅಥವಾ ಪೂಜಾ ಅರ್ಚಕರು ನಕಲಿ ಇಲ್ಲವೇ ಅಸಲಿ ಎಂದು ಸಮಾಜಕ್ಕೆ ತಿಳಿಯುವುದಾದರೂ ಹೇಗೆ? ಮನೆಗಳಿಗೆ ಹೋಗಿ ಪೂಜೆ ಅಥವಾ ಜ್ಯೋತಿಷ್ಯ ಹೇಳುವವರಿಗೆ ಮುಜರಾಯಿ ಇಲಾಖೆಯಿಂದ ಪರವಾನಗಿ ನೀಡಿದರೆ ಸರಿಯಾಗಬಹುದು. ಪರವಾನಗಿ ಹೊಂದಿರುವ ಅಧಿಕೃತ ವ್ಯಕ್ತಿಗಳೇ ಅಗತ್ಯ ಇರುವ ಮನೆಗಳಲ್ಲಿ ಸೇವಾ ಕಾರ್ಯ ನಡೆಸಿದರೆ, ನಕಲಿಗಳ ಹಾವಳಿ ತಪ್ಪಬಹುದು. ಅಲ್ಲದೆ ಪ್ರತಿ ವರ್ಷವೂ ಪರವಾನಗಿ ಪಡೆದವರಿಂದ ಎಷ್ಟು ಮನೆಗಳಲ್ಲಿ ಎಷ್ಟು ಗೌರವಧನ ಪಡೆದು ಜ್ಯೋತಿಷ ಇಲ್ಲವೇ ಪೂಜಾ ಕಾರ್ಯ ನೆರವೇರಿಸಿದರು, ಅದರಿಂದ ಹೊರಬಂದ ಪೂಜಾ ಪ್ರತಿಫಲ ಏನು ಎಂಬ ಬಗ್ಗೆ ವರದಿ ತರಿಸಬಹುದು. ಅಧ್ಯಯನ ಮಾಡುವವರಿಗೂ ಇದೊಂದು ಹೊಸ ಬಗೆಯ ವಸ್ತು ಆಗುತ್ತದೆ.
ತಾ.ಸಿ.ತಿಮ್ಮಯ್ಯ, ಬೆಂಗಳೂರು
ರಿಕ್ಷಾ ಚಾಲಕರ ಮುಷ್ಕರ ನ್ಯಾಯಯುತವಲ್ಲ
ಸರ್ಕಾರದ ‘ಶಕ್ತಿ’ ಯೋಜನೆಯಿಂದಾಗಿ ರಿಕ್ಷಾದವರಿಗೆ ನಷ್ಟವಾಗುತ್ತಿದೆ ಎಂಬ ಕಾರಣಕ್ಕಾಗಿ ಮುಷ್ಕರ ಆಯೋಜಿಸಲಾಗುತ್ತಿದೆ. ಇಷ್ಟುದಿನ, ಅನಿವಾರ್ಯವಾಗಿ, ಬಹುತೇಕ ರಿಕ್ಷಾದವರು ಕೇಳಿದ ‘ಮೂರು ಪಟ್ಟು’ ದುಬಾರಿ ಬಾಡಿಗೆಗೆ ಒಳಗೊಳಗೇ ಮರುಗುತ್ತ, ತೆತ್ತು ಓಡಾಡಿದ್ದಾಯಿತು. ಧಾರವಾಡದಲ್ಲಿ ಈಗಲೂ ಬರೀ ಅರ್ಧ ಕಿಲೊಮೀಟರ್‌ಗೂ ₹ 70-80 ಬಾಡಿಗೆ ಪಡೆಯಲಾಗುತ್ತಿದೆ. ಮೀಟರ್ ಅಳವಡಿಕೆಯಾಗಿದ್ದರೂ ಮೀಟರ್ ಹಾಕುವುದೇ ಇಲ್ಲ. ಮೀಟರ್ ಹಾಕಿದರೆ ಯೋಗ್ಯ ದರದ ಬಾಡಿಗೆ ಕೊಡಲು ಎಲ್ಲರಿಗೂ ಖುಷಿಯೇ. ಜರೂರತ್ತಿನ ದುರುಪಯೋಗ ಪಡೆದು ಯದ್ವಾತದ್ವಾ ಬಾಡಿಗೆ ಕೀಳುವ ರಿಕ್ಷಾ ಚಾಲಕರಿಗೆ ಮುಷ್ಕರ ನಡೆಸಲು ನೈತಿಕ ಹಕ್ಕಿಲ್ಲ.
ಕಡ್ಡಾಯವಾಗಿ ಮೀಟರ್ ಹಾಕಲು ಅಧಿಕಾರಿಗಳು ವ್ಯವಸ್ಥೆ ಮಾಡಲಿ. ಓಡುತ್ತಿರುವ ರಿಕ್ಷಾಗಳನ್ನು ಮಾರ್ಗ ಮಧ್ಯದಲ್ಲಿ ತಡೆದು, ಮೀಟರ್ ಪ್ರಕಾರ ಬಾಡಿಗೆ ನಿಗದಿಯಾದ ಬಗ್ಗೆ, ಒಳಗೆ ಕುಳಿತ ಪ್ರಯಾಣಿಕರ ವಿಚಾರಣೆ ನಡೆಸಲು ಪೊಲೀಸರಿಗೆ ಅವಕಾಶ ನೀಡಲಿ. ಆಗಮಾತ್ರವೇ, ಮೀಟರ್ ಚಾಲನೆ ಶುರುವಾದೀತು. ಜೊತೆಗೆ, ಶೇರ್ ಆಟೊ ವ್ಯವಸ್ಥೆಗೆ ಜನ ಹಾಗೂ ಚಾಲಕರು ಒಗ್ಗಿಕೊಳ್ಳಬೇಕು. ಆಗ ಜನ ರಿಕ್ಷಾ ಕಡೆಗೆ ನೋಡಿಯಾರು.
-ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ
ಬೆಳೆ ವಿಮೆ: ರೈತರಿಗೇ ನೇರ ಅವಕಾಶ ಸಿಗಲಿ
ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದ್ದು, ಸಿಎಸ್‌ಸಿಯವರು (ಕಾಮನ್ ಸರ್ವಿಸ್ ಸೆಂಟರ್) ಒಂದು ಸರ್ವೆ ನಂಬರ್‌ನ ಒಂದು ಬೆಳೆಗೆ ವಿಮೆ ಮಾಡಲು ರೈತರಿಂದ ಸೇವಾ ಶುಲ್ಕವೆಂದು ಯಾವ ರಸೀದಿಯನ್ನೂ ನೀಡದೆ ಕನಿಷ್ಠ ₹ 200 ವಸೂಲಿ ಮಾಡುತ್ತಿದ್ದಾರೆ. ಅತಿ ಸಣ್ಣ ರೈತರಿಗೆ ಕೆಲವು ಸಾರಿ ಈ ಹಣವು ವಿಮೆಯ ಹಣಕ್ಕಿಂತಲೂ ಹೆಚ್ಚಾಗುತ್ತದೆ.
ವಿಮೆ ಮಾಡುವ ಸೆಂಟರ್‌ನವರಿಗೆ ಸೇವಾ ಶುಲ್ಕವೆಂದು ಹಣವು ಅವರ ಖಾತೆಗೆ ಸರ್ಕಾರದಿಂದ ಜಮಾ ಆಗೇ ಆಗುತ್ತದೆ. ಬೆಳೆ ವಿಮೆ ಮಾಡಲು ಸಂರಕ್ಷಣೆ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ರೈತರಿಗೇ ನೇರವಾಗಿ ಅವಕಾಶವನ್ನು ಯಾಕೆ ಕಲ್ಪಿಸಬಾರದು? ಕರ್ನಾಟಕ ಮತ್ತು ಗುಜರಾತ್ ಬಿಟ್ಟು ಉಳಿದ ರಾಜ್ಯಗಳಲ್ಲಿ ಇಂಥ ಅವಕಾಶವಿದೆ. ಸರ್ಕಾರ ಎಷ್ಟೋ ಯೋಜನೆಗಳ ಪರವಾಗಿ ರೈತರ ಜೇಬಿಗೆ ತುಂಬಿದ ಹಣ ಹೀಗೆ ಮಧ್ಯವರ್ತಿಗಳಿಂದ ಖಾಲಿ ಆಗುತ್ತಿರುವುದು ನಿಜಕ್ಕೂ ಮರುಕ ಹುಟ್ಟಿಸುತ್ತದೆ.
-ರಾಜಶೇಖರ ಕುಕ್ಕುಂದಾ, ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.