ಗುರುವಾರ , ಸೆಪ್ಟೆಂಬರ್ 24, 2020
24 °C

ವಾಚಕರ ವಾಣಿ |ಮತ್ತೆ ಮುನ್ನೆಲೆಗೆ ಬಂದಿದೆ ‘ಶಾಲಿಗುಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಶಾಲೆಗಳನ್ನು ಇಂದಿಗೂ ‘ಶಾಲಿಗುಡಿ’ ಎಂದೇ ಕರೆಯುತ್ತಾರೆ. ಇದಕ್ಕೆ ಕಾರಣ, ನಮ್ಮ ಹಿರಿಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆಯಾ ಗ್ರಾಮದ ಗುಡಿಗಳಲ್ಲಿ ಪಡೆದಿದ್ದರಿಂದಲೂ ಆಗ ಶಿಕ್ಷಣ ನೀಡಲು‌ ನಿರ್ದಿಷ್ಟ ಕಲಿಕಾ ಕೇಂದ್ರಗಳು ಇರದಿದ್ದುದರಿಂದಲೂ ವಿದ್ಯೆ ಎಂಬುದು ದೈವದ ಅಸ್ತಿತ್ವಕ್ಕೆ ಸಮ ಎಂಬ ನಂಬಿಕೆ ಇದ್ದುದರಿಂದಲೂ ಗುಡಿಗಳು ಆ ಕಾಲಕ್ಕೆ ಶೈಕ್ಷಣಿಕ ಕೇಂದ್ರಗಳಾಗಿದ್ದವು. ನಂತರ ಕಾಲಚಕ್ರ ಉರುಳಿ, ಶಾಲೆಗಳು ಗುಡಿಗಳಿಂದ ಪ್ರತ್ಯೇಕಗೊಂಡು ಸ್ವಂತ ಕಟ್ಟಡಗಳಲ್ಲಿ ಮುಂದುವರಿದಿದ್ದರಿಂದ ‘ಶಾಲಿಗುಡಿ’ ಎಂಬ ಪದವು ಜನಮಾನಸದಿಂದ‌ ನಶಿಸುತ್ತಾ ಸಾಗಿತ್ತು. ಆದರೆ ಕೊರೊನಾ ವೈರಸ್ ಮತ್ತೆ ಆ ಪದವನ್ನು ತಾತ್ಕಾಲಿಕವಾಗಿಯಾದರೂ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದಂತಿದೆ.

ಪ್ರಸ್ತುತ ಶಾಲೆಗಳಿಂದ ಮಕ್ಕಳು ಹೊರಗುಳಿದಿರುವುದನ್ನು ಕಂಡು ಮರುಕಗೊಂಡ ನಮ್ಮ ಭಾಗದ ಶಿಕ್ಷಕರೊಬ್ಬರು ‘ವಠಾರ ಶಾಲೆ’ಯನ್ನು ಆರಂಭಿಸಿದ್ದಾರೆ. ಒಂದು ವಠಾರದಲ್ಲಿ ವಾಸಿಸುವ ಮಕ್ಕಳನ್ನು ಆ ವಠಾರದಲ್ಲಿನ ದೇವರಗುಡಿಗೆ ಕರೆದೊಯ್ದು ಅಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಗುಡಿಯ ಗಂಟೆಯು ಸ್ಕೂಲ್ ಬೆಲ್ ಆಗಿ, ಅರ್ಚನಾ ಫಲಕವು ಬರೆಯುವ ಬೋರ್ಡ್ ಆಗಿ, ಪ್ರಾಂಗಣವು ಕೋಣೆಯಾಗಿ, ಅಂಗಳವು ಆಟದ ಮೈದಾನವಾಗಿ ಬಡ್ತಿ ಹೊಂದಿವೆ. ಮಕ್ಕಳೆಂಬ ದೇವರಿಗೆ ಶಿಕ್ಷಕನೆಂಬ ಅರ್ಚಕ, ಪಾಠ ಎಂಬ ಪೂಜೆಯನ್ನು ಮಾಡುತ್ತಿರುವುದನ್ನು ಕಂಡಾಗ ‘ಶಾಲಿಗುಡಿ’ ಎಂಬ ಪದ ಎಷ್ಟು ಅರ್ಥಗರ್ಭಿತವಾಗಿ ಅಕ್ಷರಶಃ ಮತ್ತೆ ಮುನ್ನೆಲೆಗೆ ಬಂದಿದೆ ಅನಿಸುತ್ತದೆ.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹೂವಿನಹಡಗಲಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು