ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ತಾತ್ವಿಕ ಕಾರಣವಿಲ್ಲದ ನಡೆ

Last Updated 19 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಸಾವಿರಾರು ವರ್ಷಗಳಿಂದ ಪ್ರಬಲರ ಸ್ವಾರ್ಥ, ದಬ್ಬಾಳಿಕೆಗೆ ಒಳಗಾಗಿ ಎಲ್ಲಾ ರೀತಿಯ ಸೌಲಭ್ಯ, ಅವಕಾಶಗಳಿಂದ ವಂಚಿತವಾದ ಅನೇಕ ಸಮುದಾಯಗಳು ಜಾತಿ ಕಾರಣಕ್ಕೇ ಶೋಷಣೆಗೆ ಗುರಿಯಾಗಿ ದುರ್ಬಲರು, ಹಿಂದುಳಿದವರಾಗಿರುವುದು ವಾಸ್ತವ ಸಂಗತಿ. ಈ ಶೋಷಣೆಯಿಂದಾಗಿಯೇ ಅನೇಕ ಜಾತಿ, ಸಮುದಾಯಗಳು ಇಂದೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಾದುದರಿಂದಲೇ ಇವರನ್ನು ಮೇಲೆತ್ತಿ ಮುಖ್ಯವಾಹಿನಿಗೆ ತರಲು, ಅಧ್ಯಯನದಿಂದ ಕೂಡಿದ ತಾತ್ವಿಕ ಹಾಗೂ ವೈಜ್ಞಾನಿಕ ಕಾರಣಗಳ ಆಧಾರದಲ್ಲಿ ಕೆಲವು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಈ ನಿಗಮಗಳ ಸ್ಥಾಪನೆಗೆ ಬಡತನವೊಂದೇ ಮಾನದಂಡವಲ್ಲ. ಎಲ್ಲಾ ಬಡಜನರ ಕಲ್ಯಾಣವಾಗಬೇಕಾದುದು ಅವಶ್ಯಕ. ಆದರೆ ಇದನ್ನು ಸಾಧಿಸಲು ಸರ್ಕಾರದ ಬಳಿ ಬೇರೆಯೇ ಆದ ಅನೇಕ ಕಾರ್ಯಕ್ರಮಗಳಿವೆ. ಇವುಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವುದರ ಬಗ್ಗೆ ಕಾಳಜಿ ತೋರಲಿ.

ನಿಗಮಗಳ ಸ್ಥಾಪನೆ, ಮೀಸಲಾತಿ ಉದ್ದೇಶಗಳ ಸಿದ್ಧಾಂತಗಳು ಜಾತಿ ಆಧಾರಿತವಾದವೇ ವಿನಾ ಆದಾಯ ಅಥವಾ ಬಡತನ ಆಧಾರಿತವಲ್ಲ. ಒಬ್ಬ ಪರಿಶಿಷ್ಟ ಜಾತಿಯ ಬಡವನಿಗೂ ಪ್ರಭಾವಿ ಜಾತಿಯ ಬಡವನಿಗೂ ಅಜಗಜಾಂತರವಿದೆ. ಪ್ರಭಾವಿ ಸಮುದಾಯದ ಬಡವನಿಗೆ ಆರ್ಥಿಕವಾಗಿ ಮೇಲೇಳಲು ಈ ಸಾಮಾಜಿಕ ವ್ಯವಸ್ಥೆಯಲ್ಲಿ ಬೇಕಾದಷ್ಟು ಅವಕಾಶಗಳಿವೆ. ಆದರೆ, ಅದೇ ಪರಿಶಿಷ್ಟ ಜಾತಿಯ ಬಡವರಿಗೆ ಅಂತಹ ಅವಕಾಶಗಳು ಇರುವುದಿಲ್ಲ. ಇಂಥವರಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಒದಗಿಸುವ ಘನ ಉದ್ದೇಶವೇ ಮೀಸಲಾತಿ ಮತ್ತು ನಿಗಮಗಳ ಸ್ಥಾಪನೆ. ಜಾತೀಯ ಏಣಿ ಶ್ರೇಣಿಯ ವಿಲಕ್ಷಣ ವ್ಯವಸ್ಥೆ ಜೀವಂತವಾಗಿ ಇರುವವರೆಗೆ ನಮ್ಮ ಸಮಾಜದಲ್ಲಿ ದುರ್ಬಲರಿಗೆ, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಜಾತಿ ಆಧಾರಿತ ಮೀಸಲಾತಿ ಅನಿವಾರ್ಯವಾಗುತ್ತದೆ. ಆದರೆ ಈಗ ರಾಜಕೀಯ ಲಾಭಕ್ಕಾಗಿ ಪ್ರಬಲ ಜಾತಿಗಳಿಗೂ ಸರ್ಕಾರವು ನಿಗಮ ಸ್ಥಾಪಿಸಲು ಹೊರಟಿರುವುದಕ್ಕೆ ಯಾವ ತಾತ್ವಿಕ, ವೈಜ್ಞಾನಿಕ ಕಾರಣವೂ ಇಲ್ಲ.

-ಎನ್‌.ವಿ.ಅಂಬಾಮಣಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT