ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ವಿದ್ಯಾವಂತರ ಮೌಢ್ಯ: ಬೇಸರದ ವಿದ್ಯಮಾನ

Published 28 ಜುಲೈ 2023, 23:40 IST
Last Updated 28 ಜುಲೈ 2023, 23:40 IST
ಅಕ್ಷರ ಗಾತ್ರ

ಅರ್ಧ ಹೆಲ್ಮೆಟ್‌: ಶಾಶ್ವತ ಪರಿಹಾರವೇನು?

ಅರ್ಧ ಹೆಲ್ಮೆಟ್‌ಗಳು ಇರುವುದು ವಾಹನ ಸವಾರರಿಗಲ್ಲ, ಬದಲಾಗಿ ಗಣಿ ಕಾರ್ಮಿಕರು, ರಸ್ತೆ ಕಾಮಗಾರಿ ನಡೆಸುವವರಿಗೆ ಎಂದು ರವಿಕಿರಣ್ ಶೇಖರ್ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜುಲೈ 28). ಆದರೆ ಹಲವು ವಾಹನ ಸವಾರರು ಅರ್ಧ ಹೆಲ್ಮೆಟ್‌ಗಳನ್ನು ಬಳಸುತ್ತಿದ್ದಾರೆ. ಅವರಿಗೆ ಬುದ್ಧಿ ಹೇಳಿದರೆ ಅಥವಾ ಒಂದೆರಡು ಬಾರಿ ಕ್ಷಿಪ್ರ ಕಾರ್ಯಾಚರಣೆಯ ನೆಪದಲ್ಲಿ ಅವರಿಂದ ಆ ಹೆಲ್ಮೆಟ್‌ಗಳನ್ನು ಕಸಿದುಕೊಂಡರೆ ಸಮಸ್ಯೆ ಬಗೆಹರಿಯುತ್ತದೆಯೇ? ಪೊಲೀಸರು ಈ ರೀತಿ ಅರ್ಧ ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲಲ್ಲ. ಆದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ.

ಪೊಲೀಸರ ಮುಂದೆಯೇ ಎಗ್ಗಿಲ್ಲದೆ ಸವಾರರು ಅರ್ಧ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಾರೆ. ಪೊಲೀಸರೂ ಕಂಡೂ ಕಾಣದಂತೆ ಇದ್ದು, ‘ಮೇಲಿನಿಂದ’ ಆದೇಶ ಬಂದಾಗ ಮಾತ್ರ ಕಾರ್ಯಾಚರಣೆಗೆ ಇಳಿಯುತ್ತಾರೆ. ಆಗ ಹೆಲ್ಮೆಟ್ ಕಳೆದುಕೊಂಡವರು, ಮುಂದಿನ ಬೀದಿಯಲ್ಲೇ ಮಾರಾಟಕ್ಕಿಟ್ಟಿರುವ ಮತ್ತೊಂದು ಅರ್ಧ ಹೆಲ್ಮೆಟ್ ಕೊಂಡು ತಲೆಗೇರಿಸಿಕೊಳ್ಳುತ್ತಾರೆ. ಅಲ್ಲಿಗೆ ಸಮಸ್ಯೆ ಹಾಗೇ ಉಳಿಯುತ್ತದೆ.

ಇಲ್ಲಿ ಎರಡು ಕ್ರಮಗಳ ಅಗತ್ಯವಿದೆ. ಮೊದಲನೆಯದು, ಅರ್ಧ ಹೆಲ್ಮೆಟ್ ಕಂಡ ತಕ್ಷಣ ಪೊಲೀಸರು ಅದನ್ನು ವಶಪಡಿಸಿಕೊಂಡು ದಂಡ ವಿಧಿಸುವುದು. ಎರಡನೆಯದು, ಅಂಗಡಿಗಳು ಸೇರಿದಂತೆ, ಹಾದಿ ಬೀದಿಯಲ್ಲಿ ಲಂಗುಲಗಾಮಿಲ್ಲದೆ ಮಾರಾಟವಾಗುತ್ತಿರುವ ಅರ್ಧ ಹೆಲ್ಮೆಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿ, ಕೈಗಾರಿಕಾ ಉದ್ದೇಶಗಳಿಗೆ ಮಾತ್ರ ಮಾರಾಟವಾಗುವಂತೆ ನೋಡಿಕೊಳ್ಳುವುದು. ಮೊದಲನೆಯದು ಪೊಲೀಸ್ ಇಲಾಖೆಯಿಂದ ಆಗಬೇಕಾಗಿದೆ. ಎರಡನೆಯದಕ್ಕೆ ಪೊಲೀಸ್, ಸಾರಿಗೆ, ವಾಣಿಜ್ಯ ತೆರಿಗೆ, ಕೈಗಾರಿಕಾ ಇಲಾಖೆಗಳ ನಡುವೆ ಸಮನ್ವಯ ಬೇಕಾಗಿದೆ. ಆಗ ಮಾತ್ರ ಅರ್ಧ ಹೆಲ್ಮೆಟ್ ಸಮಸ್ಯೆ ನಿವಾರಣೆಯಾಗಲು ಸಾಧ್ಯ.

-ಸುಘೋಷ ಸ. ನಿಗಳೆ, ಬೆಂಗಳೂರು

***

ವಿದ್ಯಾವಂತರ ಮೌಢ್ಯ: ಬೇಸರದ ವಿದ್ಯಮಾನ

ವಿಶೇಷ ಪೂಜೆ ನೆಪದಲ್ಲಿ ಬೆಂಗಳೂರಿನ ಮನೆಯೊಂದಕ್ಕೆ ಬಂದಿದ್ದ ನಕಲಿ ಜ್ಯೋತಿಷಿ, ಚಿನ್ನಾಭರಣ ಕದ್ದೊಯ್ದ ಸುದ್ದಿ (ಪ್ರ.ವಾ., ಜುಲೈ 28) ಓದಿ ಕಸಿವಿಸಿಯಾಯಿತು. ಗಂಡ– ಹೆಂಡತಿ ಜಗಳ, ಮದುವೆಯಾಗಿ ಹಲವಾರು ವರ್ಷಗಳು ಕಳೆದರೂ ಮಕ್ಕಳಾಗಿಲ್ಲ ಎಂಬಂಥ ವಿಷಯಗಳ ಬಗ್ಗೆ ಜ್ಯೋತಿಷಿಗಳು ಪರಿಹಾರ ನೀಡುತ್ತಾರೆ ಎಂದುಕೊಂಡು ಅವರ ಬಳಿ ಹೋಗಿ, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವವರ ಬಗ್ಗೆ ಆಗಿಂದಾಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇರುತ್ತದೆ. ಆದರೂ ಜನರು ಮೌಢ್ಯದಿಂದ, ಬೇಜವಾಬ್ದಾರಿಯಿಂದ ಇಂತಹ ವಂಚನೆಗೆ ಒಳಗಾಗುತ್ತಲೇ ಇರುವುದು ಬೇಸರ ತರಿಸುತ್ತದೆ.

ಯಾರೋ ಅನಾಮಧೇಯರು ಕೆಲವರ ಮೊಬೈಲ್‌ಗಳಿಗೆ ಫೋನ್ ಮಾಡಿ ಅಥವಾ ಸಂದೇಶ ಕಳುಹಿಸಿ ‘ನಿಮಗೆ ಹಣ ಬಂದಿದೆ, ಈ ಲಿಂಕ್ ಸಂಪರ್ಕಿಸಿ ಅಥವಾ ಒಟಿಪಿ ಕಳುಹಿಸಿ’ ಎಂದಾಗಲೂ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹವುಗಳ ಬಗ್ಗೆ ಜಾಗರೂಕರಾಗಿ ಇರಬೇಕು ಎಂದು ಹಲವು ಸೂಚನೆ, ಸಲಹೆಗಳು ಬರುತ್ತಿದ್ದರೂ ಜನ ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇವರಲ್ಲಿ ಅನೇಕರು ವಿದ್ಯಾವಂತರೇ ಆಗಿರುವುದು ತೀರಾ ದುರದೃಷ್ಟಕರ.

-ಎಚ್.ವಿ.ಶ್ರೀಧರ್, ಬೆಂಗಳೂರು

***

ಸಿರಿಧಾನ್ಯ ಬಿತ್ತನೆ ಬೀಜ: ಕೃಷಿ ವಿ.ವಿ. ಮುಂದಾಗಲಿ

ರಾಜ್ಯದಲ್ಲಿ ಸಿರಿಧಾನ್ಯಗಳ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ನಾಲ್ಕು ಪ್ರಾಂತ್ಯಗಳಲ್ಲಿವೆ. ಇವಲ್ಲದೆ ಕೆಲವು ವಲಯವಾರು ಸಂಶೋಧನಾಲಯಗಳೂ ಇದ್ದು, ಇವು ಸಣ್ಣ ಪ್ರಮಾಣದಲ್ಲಿ ಮಾತ್ರ ಸಿರಿಧಾನ್ಯ ಬೀಜಗಳನ್ನು ಪೂರೈಸುತ್ತವೆ. ರಾಜ್ಯದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ಉತ್ಪಾದಿಸಲು ವಿಪುಲ ಅವಕಾಶಗಳಿದ್ದರೂ ಈ ದಿಸೆಯಲ್ಲಿ ಸಮರ್ಪಕವಾದ ಪ್ರಯತ್ನ ನಡೆಯುತ್ತಿಲ್ಲ. ಭತ್ತದ ಅಕ್ಕಿಯಿಂದ ತಯಾರಿಸಿದ ಅನ್ನಕ್ಕೆ ಬದಲಾಗಿ ಸಿರಿಧಾನ್ಯಗಳಿಂದ ತಯಾರಿಸಿದ ಅನ್ನವು ಮಧುಮೇಹ ಉಳ್ಳವರಿಗಷ್ಟೇ ಅಲ್ಲ ಆರೋಗ್ಯವಂತರಿಗೂ ಉತ್ತಮ ಆಹಾರ ಎಂಬುದು ವೈದ್ಯರ ಶಿಫಾರಸು.

ನಮ್ಮ ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗೆ ಸೂಕ್ತ ವಾತಾವರಣ ಇರುವುದರಿಂದ ಸುಧಾರಿತ ಹಾಗೂ ಶಕ್ತಿಮಾನ್ ತಳಿಗಳನ್ನು ಮಳೆ ಆಶ್ರಿತ ಅಥವಾ ನೀರಾವರಿ ಬೆಳೆಯಾಗಿಯೂ ಬೆಳೆಯಬಹುದು. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಪೂರಕ ವಾತಾವರಣ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆಯಾಗುತ್ತಿಲ್ಲ. ಆದ್ದರಿಂದ, ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳ ಮುಖಾಂತರ ಬೀಜೋತ್ಪಾದನೆ ಹಾಗೂ ಬೆಳೆ ತಂತ್ರಜ್ಞಾನವನ್ನು ಒದಗಿಸುವತ್ತ ಕೃಷಿ ಸಚಿವರು ಗಮನಹರಿಸಿ ನಿರ್ದೇಶನ ನೀಡುವಂತಾದರೆ, ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ರೈತರನ್ನು ಪ್ರೇರೇಪಿಸಿದಂತೆ ಆಗುತ್ತದೆ.

-ಡಿ.ರಾಜಗೋಪಾಲ್, ಬೆಂಗಳೂರು

***

ಪೈರಸಿ ತಡೆ: ಶೀಘ್ರ ಜಾರಿಗೆ ಬರಲಿ ಕಾಯ್ದೆ

ಸಿನಿಮಾಟೊಗ್ರಾಫ್ ಕಾಯ್ದೆಯ ತಿದ್ದುಪಡಿ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿರುವುದು ಸ್ವಾಗತಾರ್ಹ. ಪೈರಸಿಯಿಂದ ನಷ್ಟ ಅನುಭವಿಸುತ್ತಿರುವ ನಿರ್ಮಾಪಕರಿಗೆ ಹಾಗೂ ಚಿತ್ರರಂಗಕ್ಕೆ ಇದರಿಂದ ಖಂಡಿತ ಸಹಾಯವಾಗಲಿದೆ. ಈ ಮಸೂದೆ ಸಾಧ್ಯವಾದಷ್ಟು ಬೇಗ ಜಾರಿಗೆ ಬರಲಿ.

ಪೈರಸಿ ತಡೆ ಕಾಯ್ದೆಯ ವಿವರಗಳನ್ನು ಒಳಗೊಂಡ ಸೂಚನಾ ಫಲಕಗಳನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಅಳವಡಿಸಲು ಹಾಗೂ ಪ್ರತಿ ಪ್ರದರ್ಶನದ ಆರಂಭಕ್ಕೂ ಮೊದಲು ಚಿತ್ರಮಂದಿರಗಳು ಆಯಾ ರಾಜ್ಯದ ದ್ವಿಭಾಷೆಯಲ್ಲಿ (ಕರ್ನಾಟಕದಲ್ಲಿ ಕನ್ನಡ ಹಾಗೂ ಇಂಗ್ಲಿಷ್‌) ಚಿತ್ರ ಹಾಗೂ ಧ್ವನಿಯ ಮೂಲಕ (ವಾಯ್ಸ್ ಓವರ್‌) ಸೂಚನೆ ನೀಡುವುದನ್ನು ಆಯಾ ರಾಜ್ಯ ಸರ್ಕಾರಗಳು ಕಡ್ಡಾಯಗೊಳಿಸಲಿ. ಯಾರಾದರೂ ಮೊಬೈಲ್ ಅಥವಾ ಕ್ಯಾಮೆರಾಗಳಲ್ಲಿ ಕಾನೂನುಬಾಹಿರವಾಗಿ ಚಿತ್ರೀಕರಿಸುತ್ತಿದ್ದರೆ ಅಂತಹವರ ವಿರುದ್ಧ ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಯ ವಿವರಗಳನ್ನು ಸೂಚನಾ ಫಲಕದಲ್ಲಿ ನಮೂದಿಸುವಂತೆ ಸರ್ಕಾರವು ಕಾನೂನನ್ನು ಜಾರಿ ಮಾಡಲಿ.

-ಮಂಸೋರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT