ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕಟ್ಟಡ ನಿರ್ಮಾಣ: ಗುಣಮಟ್ಟವೇ ಮಾನದಂಡ

Published 21 ಜನವರಿ 2024, 21:29 IST
Last Updated 21 ಜನವರಿ 2024, 21:29 IST
ಅಕ್ಷರ ಗಾತ್ರ

ತತ್ವ ಮನೆ ಮನ ತಲುಪಲಿ, ಪಾಲನೆ ಆಗಲಿ

ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿರುವುದು ಸಂತಸದ ವಿಚಾರ. ಆದರೆ, ಈ ದಿಸೆಯಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಬಸವ ತತ್ವಗಳನ್ನು ಮನೆ ಮನೆಗೆ ಮತ್ತು ಮನ ಮನಗಳಿಗೆ ತಲುಪಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ವಚನಗಳು ಜನಪದರ ಜೀವನಾಡಿ ಆಗಬೇಕಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವು ನಾಡಿನ ಜನರ ಬದುಕಿನ ಅವಿಭಾಜ್ಯ ಅಂಗವಾಗಬೇಕಿದೆ. ಜಾತಿ, ಮತ, ಲಿಂಗಾಧಾರಿತ ಭೇದ–ಭಾವಗಳು ಬೇರುಸಹಿತ ನಾಶವಾಗಬೇಕಿದೆ. ಸಮಾನತೆ, ಸಹಿಷ್ಣುತೆ, ಸಾಮರಸ್ಯದಂತಹವು ಜನಜೀವನದಲ್ಲಿ ಹಾಸುಹೊಕ್ಕಾಗಿ ಅಳವಡಿಕೆ ಆಗಬೇಕಿದೆ.

ಜಾತಿ, ಮತದ ಆಧಾರದ ಮೇಲೆ ಮತ್ತು ಚುನಾವಣಾ ಸಂದರ್ಭದಲ್ಲಿ ವಿವಿಧ ರೀತಿಯ ಪ್ರಲೋಭನೆಗಳನ್ನು ಒಡ್ಡುವ ಮೂಲಕ ವೋಟು ಕೇಳುವಂತಹ ಪರಿಸ್ಥಿತಿ ಕೊನೆಯಾಗಬೇಕಿದೆ. ಆಡಳಿತ ಕೇಂದ್ರಗಳು ಅನುಭವ ಮಂಟಪ ಗಳಾಗಬೇಕಿದೆ. ನಡೆ–ನುಡಿ ಏಕವಾಗಿ, ಮಾನವಪ್ರೇಮ, ಸಹನೆ ಹಾಗೂ ಸಹಾನುಭೂತಿ ನೆಲೆಯಾಗಬೇಕಿದೆ. ಇವೆಲ್ಲ ಕ್ಕಿಂತ ಮುಖ್ಯವಾಗಿ, ಯಾವುದೇ ಕ್ಷೇತ್ರದಲ್ಲಿನ ಮಹಾತ್ಮರು, ಸಾಧಕರು ಅಥವಾ ಮುಖಂಡರನ್ನು ನಿರ್ದಿಷ್ಟ ಜಾತಿಗಳಿಗೆ ಸೀಮಿತಗೊಳಿಸುವ ಸಾಮಾಜಿಕ ಕ್ರೌರ್ಯ ನಿಲ್ಲಬೇಕಿದೆ. ಹಾಗಾದಾಗ ಮಾತ್ರ ಬಸವಣ್ಣನವರನ್ನು ಸಾಂಸ್ಕೃತಿಕ ರಾಯ ಭಾರಿ ಎಂದು ಘೋಷಿಸಿದ್ದಕ್ಕೆ ಅರ್ಥ ಬರುತ್ತದೆ ಮತ್ತು ನಮ್ಮ ಸಂವಿಧಾನದ ಆಶಯ ಈಡೇರುತ್ತದೆ.

–ಶಿವರಾಜು ಎ.ಆರ್., ಕೊರಟಗೆರೆ

***

ನಾಡಿನ ಒಡಲುಗಳ್ಳರಿಂದ ನಡೆಯಲಿ ಆತ್ಮವಿಮರ್ಶೆ

‘ಮತ್ತಷ್ಟು ಆಳದತ್ತ ಅಂತರ್ಜಲ’ ಎಂಬ ವಿಶೇಷ ವರದಿಯು (ಪ್ರ.ವಾ., ಜ. 21) ಅಂತರ್ಜಲದ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ಸ್ಥಿತಿಯು ಕೆರೆಗೆ ಹಾರವಾದ ಭಾಗೀರಥಿಯನ್ನು ಸೃಷ್ಟಿಸಿದ ಮತ್ತು ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು...’ ಎಂದು ಮಗನಿಗೆ ಹಿತೋಪದೇಶ ನೀಡಿದ ತಾಯಿ ಉದಯಿಸಿದ ನಮ್ಮ ಕನ್ನಡ ನಾಡಿಗೆ ಎಚ್ಚರಿಕೆಯ ಗಂಟೆಯಾಗಿ, ಜನಮನದಲ್ಲಿ ಜಲಸಾಕ್ಷರತೆಯ ಜಾಗೃತಿ ಮೂಡಿಸುವಂತೆ ಆಗಬೇಕಾಗಿದೆ.

ರಕ್ಷಕರೇ ಭಕ್ಷಕರಾಗುತ್ತಿರುವ ಇಂದಿನ ವಿಷಮ ಕಾಲಘಟ್ಟದಲ್ಲಿ ಈ ಕಥನಗೀತೆಯ ಭಾಗೀರಥಿಯ ವ್ಯಕ್ತಿತ್ವ ಎಲ್ಲರಿಗೂ ಆದರ್ಶವಾಗಲಿ. ಈ ಮೂಲಕ, ಜಾಗತೀಕರಣದ ಕಬಂಧಬಾಹುಗಳಲ್ಲಿ ಸಿಲುಕಿ ಹೊಲಮನೆಗಾಗಿ ಜೀವ
ಜಲಗಳನ್ನೇ ಬರಿದು ಮಾಡುತ್ತಿರುವ ನಾಡಿನ ಒಡಲುಗಳ್ಳರು ಆತ್ಮವಿಮರ್ಶೆಗೆ ಒಳಪಡಲಿ.

–ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ

***

ಕಟ್ಟಡ ನಿರ್ಮಾಣ: ಗುಣಮಟ್ಟವೇ ಮಾನದಂಡ

ಕಟ್ಟಡ ಕುಸಿತ, ಸೆಂಟ್ರಿಂಗ್ ಕುಸಿತವೆಲ್ಲ ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ಗುತ್ತಿಗೆದಾರರ ಕರಾಮತ್ತು ಬಹುತೇಕ ಮುಖ್ಯ ಕಾರಣವಾಗಿರುತ್ತದೆ. ಅದಲ್ಲದೆ ಕಟ್ಟಡಗಳನ್ನು ಕಟ್ಟಲು ಅನುಮತಿಗಾಗಿ ಹಲವು ಅಧಿಕಾರಿಗಳಿಗೆ ಕೈ ಬಿಸಿ ಮಾಡಬೇಕಾಗುತ್ತದೆ. ಅಂತಹ ಸ್ಥಿತಿಯಲ್ಲಿ ಸಹಜವಾಗಿಯೇ ಗುಣಮಟ್ಟ ಗೌಣವಾಗಿರುತ್ತದೆ. ಇದೀಗ, ಆನೇಕಲ್‌ ತಾಲ್ಲೂಕಿನ ಬಾಡರಹಳ್ಳಿಯಲ್ಲಿ ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದಿರುವುದು (ಪ್ರ.ವಾ., ಜ. 20) ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿ ರುವುದು ದುಃಖದ ಸಂಗತಿ. ಆದರೆ ಈ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡು ಶಾಲೆ ಆರಂಭವಾದಾಗ ಸೆಂಟ್ರಿಂಗ್ ಕುಸಿದಿದ್ದರೆ ನೂರಾರು ಮಕ್ಕಳು ಅಪಾಯಕ್ಕೆ ಸಿಲುಕುತ್ತಿದ್ದರು. ಆಗ ಅಷ್ಟೆಲ್ಲಾ ಮಕ್ಕಳ ಪೋಷಕರ ದುಃಖಕ್ಕೆ ಕೊನೆಯಿರುತ್ತಿತ್ತೇ? ಸಾರ್ವಜನಿಕ ಕಟ್ಟಡಗಳ ನಿರ್ಮಾಣದ ಹೊಣೆ ಹೊತ್ತವರನ್ನು ಸರ್ಕಾರ ಹದ್ದುಬಸ್ತಿನಲ್ಲಿ ಇಡದಿದ್ದರೆ ಇಂತಹ ದುರ್ಘಟನೆಗಳು ಸರ್ವೇಸಾಮಾನ್ಯ ಎಂಬಂತೆ ಆಗುತ್ತವೆ.

–ಬಾಲಕೃಷ್ಣ ಎಂ.ಆರ್., ಬೆಂಗಳೂರು

***

ಶರಣಾಗತಿಗೆ ಕುಂಟು ನೆಪ...

ಬಿಲ್ಕಿಸ್ ಬಾನು ಪ್ರಕರಣದ 11 ಮಂದಿ ಅಪರಾಧಿಗಳು ಶರಣಾಗಲು ತಮಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದು ಹಾಗೂ ಅದಕ್ಕಾಗಿ ಅಪರಾಧಿಗಳು ನೀಡಿದ್ದ ಕಾರಣಗಳಲ್ಲಿ ಹುರುಳಿಲ್ಲ ಎಂದು ಹೇಳಿರುವುದು (ಪ್ರ.ವಾ., ಜ. 20) ಸರಿಯಾಗಿಯೇ ಇದೆ. ಅಪರಾಧಿಗಳು ಕೊಟ್ಟಿರುವ ಕಾರಣಗಳು ಪ್ರಾಥಮಿಕ ಶಾಲಾ ಮಕ್ಕಳು ರಜೆಗಾಗಿ ಬೇಡಿಕೆ ಇಡುವಾಗ ನೀಡುವ ಕುಂಟು ನೆಪಗಳಂತೆ ಇವೆ. ಈ ಅಪರಾಧಿಗಳು ಪ್ರಭಾವಿಗಳಾಗಿದ್ದು, ಮೇಲ್ಮಟ್ಟದ ರಾಜಕೀಯ ಪ್ರಭಾವಿಗಳ ಆಶೀರ್ವಾದದಿಂದ ಗುಜರಾತ್ ಸರ್ಕಾರದ ಮೂಲಕ ಕ್ಷಮಾದಾನ ಪಡೆದು ಸೆರೆಮನೆಯಿಂದ ಹೊರಬಂದವರು. ಇದನ್ನು ಪರಿಗಣಿಸಿರುವ ನ್ಯಾಯಾಲಯ, ಶರಣಾಗಲು ಹೆಚ್ಚುವರಿ ಕಾಲಾವಕಾಶ ನೀಡದೇ ಇರುವುದು ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ.

–ನಗರ ಗುರುದೇವ್ ಭಂಡಾರ್ಕರ್, ಹೊಸನಗರ

***

ಇವರೇ ಇರಬಹುದು ಪ್ರಬಲರು!

ಮುಂಬರುವ ಲೋಕಸಭಾ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ, ಅರ್ಜಿ ಸಲ್ಲಿಸಿರುವ ಕೆಲವು ಅಭ್ಯರ್ಥಿಗಳ ಪೈಕಿ ಪ್ರಬಲರ ಹೆಸರು ಇಲ್ಲದಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿರುವ ಸುದ್ದಿ (ಪ್ರ.ವಾ., ಜ. 20) ಓದಿ, ಯಾರು ಪ್ರಬಲರು ಎನ್ನುವ ಪ್ರಶ್ನೆ ಮೂಡಿತು.

ಹಾಗಿದ್ದರೆ, ನೂರಾರು ಕೋಟಿಗಳ ಒಡೆಯರು, ತಲೆತಲಾಂತರದಿಂದ ಸ್ಪರ್ಧಿಸುತ್ತಾ ಬಂದಿರುವ ಒಂದೇ ಕುಟುಂಬದ ವ್ಯಕ್ತಿಗಳು, ನಿರಂತರವಾಗಿ ಅದೇ ಸಮುದಾಯದ ಅಭ್ಯರ್ಥಿ, ಪ್ರಬಲ ಜಾತಿಯ ಸ್ವ-ಘೋಷಿತ ಮುಖಂಡ, ಪ್ರಸ್ತುತ ಶಾಸಕ ಅಥವಾ ಬೇರೆ ಯಾವುದೋ ಸ್ಥಾನದಲ್ಲಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಆ ಸ್ಥಾನಕ್ಕೆ ರಾಜೀನಾಮೆ ನೀಡುವ ಖುಷಿಯಲ್ಲಿ ಇರುವವರು, ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಮ್ಮನಿರುವ ಬದಲು ಲೋಕಸಭೆಗೆ ಪ್ರಯತ್ನ ನಡೆಸುವಂತಹವರು, ತಮ್ಮ ವಿರುದ್ಧ ಗುರುತರ ಕ್ರಿಮಿನಲ್ ಪ್ರಕರಣಗಳಿದ್ದರೂ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿರುವವರು, ತಮ್ಮ ಆಸ್ತಿಪಾಸ್ತಿ ರಕ್ಷಣೆ ಮತ್ತು ಹೆಚ್ಚಳಕ್ಕಾಗಿ ಜನಸೇವೆಯ ಮುಖವಾಡ ಧರಿಸಿ ರುವಂತಹವರು, ಸದನದಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರ ಅಥವಾ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡದಿರುವಂತ ಹವರು... ಇಂತಹ ಲಕ್ಷಣಗಳನ್ನು ಹೊಂದಿದವರು ಅವರ ದೃಷ್ಟಿಯಲ್ಲಿ ಪ್ರಬಲರಾಗಿರಬಹುದು ಅನ್ನಿಸಿತು. ಈ ಲಕ್ಷಣ
ಗಳನ್ನು ಹೊರತುಪಡಿಸಿದ ಜನಸಾಮಾನ್ಯರ ಆಯ್ಕೆ ದೂರದ ಮಾತೇನೋ ಎನಿಸಿತು.

–ತಿಮ್ಮೇಶ ಮುಸ್ಟೂರು, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT