ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 24 ಮೇ 2024, 0:30 IST
Last Updated 24 ಮೇ 2024, 0:30 IST
ಅಕ್ಷರ ಗಾತ್ರ

ಅಪರಿಚಿತ ತಾಣ ಹುಡುಕುವ ಉಮೇದೇಕೆ?

ಮೈಸೂರಿನ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಮೈಸೂರಿನ ಸುತ್ತಮುತ್ತ ಇರುವ ಅಪರಿಚಿತ ಪ್ರವಾಸಿ ತಾಣಗಳ ಫೋಟೊ ಮತ್ತು ವಿಡಿಯೊ ಸ್ಪರ್ಧೆಯನ್ನು ಆಸಕ್ತರಿಗಾಗಿ ಏರ್ಪಡಿಸಿವೆ. ಈವರೆಗೆ ಪ್ರವಾಸಿಗರ ಕಾಕದೃಷ್ಟಿಗೆ ಬೀಳದೆ ಎಲ್ಲೋ ಪ್ರಶಾಂತವಾಗಿ ಹರಿಯುತ್ತಿರುವ ನೀರಿನ ಹಳ್ಳ, ಒಂಟಿಯಾಗಿ ನಿಂತಿರುವ ಗುಡ್ಡ, ಸಣ್ಣ ಹಳ್ಳಿಯಲ್ಲಿ ಇರಬಹುದಾದ ಒಂದು ಸುಂದರ ದೇವಸ್ಥಾನ ಇವೆಲ್ಲವೂ ಈ ಸ್ಪರ್ಧೆಯಿಂದಾಗಿ ನಮ್ಮ ಉತ್ಸಾಹಿ ಛಾಯಾಗ್ರಾಹಕರ ಬಲೆಗೆ ಬೀಳುತ್ತವೆ. ಅವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗುತ್ತವೆ. ಕಾಲಿಗೆ ಚಕ್ರ ಕಟ್ಟಿಕೊಂಡಿರುವ ತಿರುಗು ಚಪಲಿಗರು ಆ ಸ್ಥಳಗಳಿಗೆ ನುಗ್ಗಲು ಪ್ರಾರಂಭಿಸುತ್ತಾರೆ. ವಾಹನ ಸಂಚಾರ, ಗೂಡಂಗಡಿಗಳು ಆರಂಭವಾಗಿ, ತಲೆತಲಾಂತರಗಳಿಂದ ನೆಮ್ಮದಿಯಿಂದ ಕೂಡಿದ್ದ ಆ ಸ್ಥಳವನ್ನು ಹಾಳು ಮಾಡುತ್ತಾ ಮತ್ತಷ್ಟು ಪರಿಸರ ನಾಶಕ್ಕೆ ಕಾರಣರಾಗುತ್ತಾರೆ. ಈಗಾಗಲೇ ತಮ್ಮ ಸುಪರ್ದಿಯಲ್ಲಿರುವ ತಾಣಗಳನ್ನೇ ಸರಿಯಾಗಿ ನಿರ್ವಹಿಸಲಾರದ ಪ್ರವಾಸೋದ್ಯಮ ಇಲಾಖೆಗೆ ಮಾಲಿನ್ಯಕ್ಕೆ ಕಾರಣವಾಗುವ ಇಂತಹ ಯೋಚನೆಗಳು ಮಾತ್ರ ಸಲೀಸಾಗಿ ಹೊಳೆಯುತ್ತವೆ. ಆಳದಲ್ಲಿ ಹಣದ ಲಾಭ ಮತ್ತು ಪರಿಸರ ನಾಶಕ್ಕೆ ಕಾರಣವಾಗುವ ಈ ಸ್ಪರ್ಧೆಯನ್ನು ಇಲಾಖೆ ಕೈಬಿಡಬೇಕು.

-ಸಂತೋಷ ಕೌಲಗಿ, ಮೇಲುಕೋಟೆ

ರಾಜಕೀಯ ಕುಟುಂಬವೇನೂ ನ್ಯಾಯದಿಂದ ಹೊರತಲ್ಲ

ಪೆನ್‌ಡ್ರೈವ್ ಪ್ರಕರಣ ಬಹಿರಂಗವಾಗುತ್ತಲೇ ಎಚ್.ಡಿ.ಕುಮಾರಸ್ವಾಮಿ ಅವರು, ‘ನಮ್ಮ ಕುಟುಂಬವೇ ಬೇರೆ, ಎಚ್.ಡಿ.ರೇವಣ್ಣ ಅವರ ಕುಟುಂಬವೇ ಬೇರೆ’ ಅಂದರು. ತನಿಖೆ ಪ್ರಾರಂಭವಾದಾಗಿನಿಂದ ಹಲವಾರು ವಿಷಯಗಳು ಬೆಳಕಿಗೆ ಬರುತ್ತಲೇ ‘ಇದು ಕಾಂಗ್ರೆಸ್ಸಿನವರು ನಮ್ಮ ಕುಟುಂಬವನ್ನು, ಜೆಡಿಎಸ್ ಪಕ್ಷವನ್ನು ಮುಗಿಸಲು ಮಾಡಿರುವ ತಂತ್ರ’ ಎನ್ನುತ್ತಿದ್ದಾರೆ. ಈಗ ಪದೇಪದೇ ‘ಪೆನ್‌ಡ್ರೈವ್ ಹಂಚಿದವರು ಯಾರು? ಅವರಿಗೂ ಶಿಕ್ಷೆ ಆಗಬೇಕಲ್ಲವೇ?’ ಎಂದು ಹೇಳುತ್ತಿದ್ದಾರೆ. ಹಾಗೆಂದಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥರು ಎಂದು ಅವರು ಒಪ್ಪಿಕೊಂಡಂತೆ ಆಗುವುದಿಲ್ಲವೇ? ಎಚ್‌.ಡಿ.ರೇವಣ್ಣ ಅವರು ‘ಇದು ಕೆಲವು ವರ್ಷಗಳ ಹಿಂದಿನದು’ ಎಂದು ಹೇಳುವ ಮೂಲಕ, ಪ್ರಕರಣ ನಡೆದಿರುವುದನ್ನು ಖುದ್ದಾಗಿ ಒಪ್ಪಿಕೊಂಡಂತಾಗಿದೆ. ವಿಷಯ ಹೀಗಿರುವಾಗ, ಪೆನ್‌ಡ್ರೈವ್ ಹಂಚಿದವರ ಬಗ್ಗೆ ಮಾತ್ರ ಮಾತನಾಡುವುದು ಎಷ್ಟು ಸರಿ? ಅಕೃತ್ಯ ಸಾಬೀತಾಗಿ ಅಪರಾಧಿಗೆ ಶಿಕ್ಷೆಯಾದರೆ ನೊಂದ ಮಹಿಳೆಯರಿಗೆ ಒಂದಿಷ್ಟು ಸಮಾಧಾನವಾದರೂ ಸಿಗುತ್ತದಲ್ಲವೇ? ಸಾಮಾನ್ಯರಿಗೆ ಒಂದು ನ್ಯಾಯ, ರಾಜಕೀಯ ಕುಟುಂಬಕ್ಕೆ ಒಂದು ನ್ಯಾಯವೇ?

-ಹನಮಂತಪ್ಪ ಬಿ.ಎಸ್., ನರಗುಂದ

ವಾಜಪೇಯಿ, ಯಡಿಯೂರಪ್ಪ ಮಾದರಿಯಾಗಲಿ 

‘ಪ್ರಧಾನಿ ಮಾತು ಹಾಗೂ ರಾಜಧರ್ಮ’ ಎಂಬ ಲೇಖನದಲ್ಲಿ (ಪ್ರ.ವಾ., ಮೇ 29) ಎಸ್.ಆರ್.ವಿಜಯಶಂಕರ ಅವರು ಧರ್ಮದ್ವೇಷದ ಮಾತುಗಳ ಬಗ್ಗೆ ವಸ್ತುನಿಷ್ಠವಾಗಿ ವಿಶ್ಲೇಷಿಸಿದ್ದಾರೆ. ನಮ್ಮೂರಿನ ಪಕ್ಕದ ಗ್ರಾಮವಾದ ತಿಂಥಿಣಿಯ ಮೌನೇಶ್ವರ ಎಂಬ 15ನೇ ಶತಮಾನದ ಸಂತರು ಹಿಂದೂ, ಮುಸಲ್ಮಾನರ ನಡುವೆ ಭಾವೈಕ್ಯ ಮೂಡಿಸಿದರು. ಇವರ ಸಮಕಾಲೀನರಾದ ಕೊಡೇಕಲ್ಲ ಬಸವಣ್ಣನವರೂ ಇದೇ ತತ್ವವನ್ನು ಸಾರಿದರು. ಇಂಥ ಪರಿಸರದಲ್ಲಿ ಬೆಳೆದ ನನ್ನಂಥವರಿಗೆ ಕೋಮುವಾದದ ಮಾತುಗಳನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದೇಶದಾದ್ಯಂತ ಇಂಥ ಮಾನವತಾವಾದಿಗಳು ಆಗಿಹೋಗಿದ್ದರೂ ‘ದೀಪದ ಬುಡದಲ್ಲೇ ಕತ್ತಲೆ’ ಎಂಬಂತೆ, ನಮ್ಮನ್ನು ಆಳುವವರು ಇಂದಿನ ‘ಪ್ರಜಾಪ್ರಭುತ್ವ’ದಲ್ಲೂ ಧರ್ಮದ್ವೇಷವನ್ನು ಹರಡುತ್ತಿರುವುದು ದುರಂತದ ಸಂಗತಿ.

ಅಟಲ್ ಬಿಹಾರಿ ವಾಜಪೇಯಿ ಅವರು ಉದಾರವಾದಿ ನಾಯಕರಾಗಿದ್ದರು. ಬಿ.ಎಸ್‌.ಯಡಿಯೂರಪ್ಪ ಅವರು ಸಂಘಪರಿವಾರದಿಂದಲೇ ಬಂದವರಾಗಿದ್ದರೂ ರಾಜಕೀಯ ಜೀವನದಲ್ಲಿ ಒಮ್ಮೆಯೂ ಕೋಮುವಾದದ ಮಾತನಾಡಲಿಲ್ಲ. ಇವರು ಹಿನ್ನೆಲೆಗೆ ಸರಿದು ಮುಂದಿನ ಮುಖ್ಯಮಂತ್ರಿಯ ಆಡಳಿತದಲ್ಲಿ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಮಾತು ಮುನ್ನೆಲೆಗೆ ಬಂದಿತು. ಹಲಾಲ್ ಕಟ್, ಜಟ್ಕಾ ಕಟ್, ಉರಿಗೌಡ, ನಂಜೇಗೌಡ ಎಂದೆಲ್ಲ ಅಸಹಿಷ್ಣು ಮನೋಭಾವ ಬೆಳೆದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಯನ್ನು ತಿರಸ್ಕರಿಸಲು ಕಾರಣವಾಯಿತು. ಬಿಜೆಪಿ ನಾಯಕರಿಗೆ ವಾಜಪೇಯಿ ಹಾಗೂ ಯಡಿಯೂರಪ್ಪ ಅವರು ಮಾದರಿ ಆಗಲಿ.

-ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಶಿಕ್ಷಕರ ಮನೋಸ್ಥೈರ್ಯ ಕುಗ್ಗಿಸದಿರಿ

ಈ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಕುಸಿತಕ್ಕೆ ಶಿಕ್ಷಕರನ್ನು ಹೊಣೆ ಮಾಡಲಾಗುತ್ತಿದೆ. ಒಂದೆರಡು ದಶಕಗಳ ಹಿಂದೆ ಎಸ್ಎಸ್ಎಲ್‌ಸಿ ಫಲಿತಾಂಶ ಶೇ 40-50ರ ಆಸುಪಾಸಿನಲ್ಲಿ ಇರುತ್ತಿತ್ತು. ಆನಂತರದ ದಿನಗಳಲ್ಲಿ ಫಲಿತಾಂಶ ಏರುಗತಿಯಲ್ಲಿ ಸಾಗಿತು. ಇಂಥ ಒಂದು ಜಾದೂ ಹೇಗೆ ಸಾಧ್ಯವಾಯಿತು ಎಂಬುದು, ಈ ಎರಡು ದಶಕಗಳಲ್ಲಿ ಎಸ್ಎಸ್ಎಲ್‌ಸಿ ದಾಟಿ ಬಂದವರಿಗೆಲ್ಲ ತಿಳಿದ ಸತ್ಯವೇ ಆಗಿದೆ. ಈ ಮೊದಲು ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರು ಅಧಿಕಾರಿಗಳ ನಿಂದನೆಯಿಂದ ರೋಸಿಹೋಗಿ, ಉತ್ತಮ ಫಲಿತಾಂಶಕ್ಕಾಗಿ ನಕಲು ಮಾಡಿಸುವ ಸರಳ ಹಾದಿ ಹಿಡಿದರು. ಜಿಲ್ಲಾವಾರು ಸ್ಥಾನಗಳಿಗೆ ಪೈಪೋಟಿ ಶುರುವಾದ ನಂತರ ಈ ಪ್ರವೃತ್ತಿ ಇನ್ನೂ ಹೆಚ್ಚಾಯಿತು. ಶೇ 70- 80ರಷ್ಟು ಫಲಿತಾಂಶ ಪಡೆದ ಶಾಲೆಗಳನ್ನು ‘ಶೇ 100 ಏಕೆ ಬಂದಿಲ್ಲ’ ಎಂದು ಕೇಳುವುದು, ಶೇ 100ರಷ್ಟು ಫಲಿತಾಂಶ ಬಂದಿದ್ದರೆ ‘ಡಿಸ್ಟಿಂಕ್ಷನ್ ಎಷ್ಟು?’ ಎಂದು ಕೇಳುವುದು ಶುರುವಾದ ನಂತರ ನಕಲು ಇನ್ನೂ ಉತ್ತುಂಗಕ್ಕೆ ಏರಿತು. ಕೆಲವು ವರ್ಷಗಳ ಫಲಿತಾಂಶಗಳಲ್ಲಿ ಸರಿಯಾಗಿ ಓದಲು, ಬರೆಯಲು ಬಾರದ ವಿದ್ಯಾರ್ಥಿಗಳು ಸಹ 600ಕ್ಕೂ ಹೆಚ್ಚು ಅಂಕ ಗಳಿಸಿ ಅಚ್ಚರಿ ಮೂಡಿಸಿದರು. ಇಂತಹ ನಿದರ್ಶನಗಳ ಪರಿಣಾಮವಾಗಿ, ಶಿಕ್ಷಕರಿಗೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ನಿಯಂತ್ರಿಸುವುದು ಕಷ್ಟವಾಗತೊಡಗಿತ್ತು.

ಪ್ರಸಕ್ತ ವರ್ಷ ವೆಬ್‌ಕಾಸ್ಟಿಂಗ್ ಅಳವಡಿಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ ಎಂದು ಮಂಡಳಿ ಪ್ರಕಟಿಸಿದಾಗ ಹೆಚ್ಚು ಸಂತಸಗೊಂಡವರು ಶಿಕ್ಷಕರೇ. ಒಂದು ವರ್ಷ ಪ್ರಾಮಾಣಿಕವಾಗಿ ಪರೀಕ್ಷೆ ನಡೆಯಲಿ, ಆಗ ವಿದ್ಯಾರ್ಥಿಗಳಿಗೂ ತಮ್ಮ ಜವಾಬ್ದಾರಿಯ ಅರಿವಾಗುತ್ತದೆ, ಆನಂತರದ ವರ್ಷಗಳಲ್ಲಿ ಫಲಿತಾಂಶ ತಾನೇ ತಾನಾಗಿ ಸುಧಾರಣೆಯಾಗುತ್ತದೆ ಎಂದು ಹೆಚ್ಚಿನ ಶಿಕ್ಷಕರು ಮಾತನಾಡಿಕೊಂಡರು. ಈಗ ಅಂದುಕೊಂಡಂತೆ ಆಗಿದೆ. ಕಡಿಮೆ ಫಲಿತಾಂಶಕ್ಕೆ ಕಾರಣವೇನು ಎಂಬ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಅಧ್ಯಯನ ಕೈಗೊಳ್ಳಬೇಕಾಗಿದೆ. ಅದನ್ನು ಬಿಟ್ಟು ಮತ್ತೆ ಶಿಕ್ಷಕರ ಮೇಲೆ ಮುಗಿಬಿದ್ದು ಅವರ ಮನೋಸ್ಥೈರ್ಯವನ್ನು ಕುಗ್ಗಿಸಹೊರಟರೆ ಪುನ ಅವರು ನಕಲಿಗೆ ಪರ್ಯಾಯ ಮಾರ್ಗ ಹುಡುಕುವುದು ಸ್ವಾಭಾವಿಕ.

-ಪುಟ್ಟದಾಸು, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT