ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ : ಮೇ 28 ಮಂಗಳವಾರ 2024

Published 3 ಜೂನ್ 2024, 14:14 IST
Last Updated 3 ಜೂನ್ 2024, 14:14 IST
ಅಕ್ಷರ ಗಾತ್ರ

ಸಂತ್ರಸ್ತೆಯರ ಮನವ ಅರಿತವರಿಲ್ಲ...

ಹಾಸನ ಪ್ರಕರಣದ ಸಂತ್ರಸ್ತೆಯರ ವಿಚಾರಕ್ಕೆ, ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಬರುವ ಈ ಪ್ರಸಂಗ ಸೂಕ್ತವಾಗಿ ಒಪ್ಪುತ್ತದೆ. ಅದೆಷ್ಟೋ ಹೆಣ್ಣುಗಳನ್ನು ಒಲಿಸಿಕೊಂಡಿದ್ದ ರಾವಣನಿಗೆ, ‘ಹೆಣ್ಣುಗಳು ನನಗಾಗಿ ಒಲಿದಿದ್ದಾರೆ, ಅದರಲ್ಲೂ ಧಾನ್ಯಮಾಲಿನಿಯಂಥ ಮಹಿಳೆಯನ್ನು ಒಲಿಸಿಕೊಂಡಿದ್ದೇನೆ’ ಎನ್ನುವ ಅಹಂಕಾರ ಇರುತ್ತದೆ. ಧಾನ್ಯಮಾಲಿನಿ ತನ್ನ ಪತಿಯನ್ನು ತೊರೆದು ಈಗ ರಾವಣನೊಂದಿಗೆ ಜೀವಿಸುತ್ತಿದ್ದಾಳೆ. ಅವಳೊಂದಿಗೆ ಅವನ ಮಗ ಅತಿಕಾಯನೂ ಇದ್ದಾನೆ. ಮುಂದೆ, ಸೀತಾಪಹರಣದ ಕಾರಣವಾಗಿ ಯುದ್ಧ ನಡೆಯುತ್ತದೆ. ಸಹಜವೆಂಬಂತೆ ಅತಿಕಾಯನೂ ರಾವಣನ ಪರವಾಗಿ ಯುದ್ಧಕ್ಕೆ ಹೊರಡುತ್ತಾನೆ. ಯುದ್ಧದಲ್ಲಿ ಮರಣವನ್ನಪ್ಪುತ್ತಾನೆ. ಮಗನನ್ನು ಕಳೆದುಕೊಂಡ ಧಾನ್ಯಮಾಲಿನಿಯ ದುಃಖ ಹೇಳತೀರದು. ಅವಳನ್ನು ಸಮಾಧಾನ ಮಾಡುವುದಕ್ಕಾಗಿ ರಾವಣ ಬರುತ್ತಾನೆ. ಧಾನ್ಯಮಾಲಿನಿ ಅರೆ ಪ್ರಜ್ಞಾವಸ್ಥೆಯಲ್ಲಿ ಏನೇನೋ ಕನವರಿಸುತ್ತಿದ್ದಾಳೆ. ತನ್ನ ಮಗನಿಗಾಗಿ ಬದುಕಿದ್ದ ಅವಳ ಬಾಯಲ್ಲಿ ಇಂದು ಸತ್ಯ ಹೊರಹೊಮ್ಮುತ್ತಿದೆ. ಬಿಟ್ಟು ಬಂದ ತನ್ನ ಗಂಡನನ್ನು ನೆನೆದು ಕನವರಿಸುತ್ತಿದ್ದಾಳೆ: ‘ಮೈಯ್ಯನಲ್ಲದೆ ಮನವನಿತ್ತೆನೇ ನಾನು ರಕ್ಕಸಗೆ!’

ಅದೆಷ್ಟೋ ವರ್ಷಗಳಿಂದ ಸಮಾಜವು ಧಾನ್ಯಮಾಲಿನಿಯನ್ನು ನೋಡಿದ ರೀತಿಯೇ ಬೇರೆ. ಆದರೆ ನಿಜವಾದ ಕಹಿಸತ್ಯ ಅವಳಿಗಷ್ಟೇ ಗೊತ್ತಿತ್ತು. ರಾವಣನ ಭಯಕ್ಕೆ ಅವಳು ತನ್ನ ಮೈಯ್ಯನ್ನು ಅವನಿಗೆ ತೆತ್ತುಕೊಂಡಿದ್ದಳೇ ವಿನಾ ಅವಳ ಮನಸ್ಸನ್ನಲ್ಲ. ಅವಳ ಮನಸ್ಸು ಅವಳ ಪತಿಯನ್ನೇ ಪ್ರತಿಕ್ಷಣವೂ ನೆನೆಯುತ್ತಿತ್ತು ಎಂಬುದು ಈ ಸಂದರ್ಭದಲ್ಲಿ ಖಚಿತವಾಗುತ್ತದೆ. ಹಾಗೇ ನಾವು ಕಾಣುವುದೆಲ್ಲ ಸತ್ಯವಾಗಿರುವುದಿಲ್ಲ. ಹಾಸನದ ಸಂತ್ರಸ್ತೆಯರ ಕುಟುಂಬಗಳು ಸಂತ್ರಸ್ತೆಯರ ಕಹಿ ಅನುಭವವನ್ನು, ನೋವನ್ನು ಅರ್ಥ ಮಾಡಿಕೊಳ್ಳಲಿ. ಆ ಎಲ್ಲ ಕುಟುಂಬಗಳು ಮತ್ತೆ ಎಂದಿನಂತೆ ನೆಮ್ಮದಿಯಾಗಿರಲಿ ಎಂಬುದು ನಮ್ಮೆಲ್ಲರ ಕಳಕಳಿ. 

–ಶ್ಯಾಮಲಾ ಪ್ರಕಾಶ್, ಮುಂಬೈ 

‘ಏಕಲವ್ಯ’ರಿಗೆ ಸಿಗಲಿ ತರಬೇತಿ

‘ಕುರಿಗಾಹಿಗಳ ಜಗತ್ತಿನಲ್ಲಿ’ ಲೇಖನ (ಪ್ರ.ವಾ., ಮೇ 26) ಕುರಿಗಾಹಿಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಿತು. ತಮ್ಮ ಅನಾರೋಗ್ಯಕ್ಕೆ ಅಗತ್ಯವಾದ ಔಷಧಿ ಮಾತ್ರವಲ್ಲದೆ ತಾವು ಸಾಕುವ ಕುರಿಗಳಿಗೆ ಬೇಕಾದ ಔಷಧಿಗಳನ್ನೂ ಅವರು ಜೊತೆಯಲ್ಲಿ ಇಟ್ಟುಕೊಳ್ಳುವುದು ಗಮನಾರ್ಹ. ಅವರೇನು ‘ಪ್ರ್ಯಾಕ್ಟೀಸು’ ಮಾಡುವ ‘ಗಾವಂಟಿ’ ಪಶುವೈದ್ಯರಲ್ಲ. ಅಲೆಮಾರಿಯಾಗಿ ಊರಿನಿಂದ ದೂರ ವಾಸ್ತವ್ಯ ಹೂಡಿದಾಗ ತಮ್ಮ ಕುರಿ, ಆಡುಗಳಿಗೆ ಬರುವ ಸಣ್ಣಪುಟ್ಟ ರೋಗ ರುಜಿನಾದಿಗಳಿಗೆ ತಾವೇ ಚಿಕಿತ್ಸೆ ಕೊಟ್ಟುಕೊಳ್ಳುತ್ತಾರೆ. ಇದು ಅವರಿಗೆ ಅನಿವಾರ್ಯವಾಗಿದೆ. ಸಕಾಲಕ್ಕೆ ಪಶುವೈದ್ಯಕೀಯ ಸೇವೆಯ ಲಭ್ಯತೆ ಇಲ್ಲದಿರುವುದು, ಆಸ್ಪತ್ರೆಗಳಿಗೆ ಹೋಗಲಾಗದ ಅಸಹಾಯಕತೆಯಂತಹ ಕಾರಣಗಳು ಅವರನ್ನು ‘ಏಕಲವ್ಯ’ರನ್ನಾಗಿಸಿ, ತಮ್ಮ ಕುರಿಗಳಿಗೆ ತಾವೇ ವೈದ್ಯರಾಗುವಂತೆ ಮಾಡಿವೆ.

ಸೂಕ್ತ ಚಿಕಿತ್ಸಾ ಕ್ರಮ ಮತ್ತು ಔಷಧಿ ಬಳಕೆ ಸರಿಯಾಗಿ ಗೊತ್ತಿಲ್ಲದಿರುವಾಗ ವೃಥಾ ತೊಂದರೆಗೀಡಾಗುವ ಸಾಧ್ಯತೆ ಇರುತ್ತದೆ. ಪಶುಸಂಗೋಪನಾ ಇಲಾಖೆಯಿಂದ ಅನೇಕ ಸೌಲಭ್ಯಗಳಿವೆ ನಿಜ. ಆದರೆ ಅನಾರೋಗ್ಯಕ್ಕೆ ಈಡಾಗುವ ಕುರಿಗಳಿಗೆ ಅಸಮಂಜಸ ರೀತಿಯಲ್ಲಿ ‘ಅನಪೇಕ್ಷಿತ’ ಔಷಧಿ ಕೊಡುವ ಪ್ರವೃತ್ತಿ ಕುರಿಗಾರರಲ್ಲಿ ಬೆಳೆದಿದೆ. ತುರ್ತುಸ್ಥಿತಿಯಲ್ಲಿ ಪ್ರಾಣಿಗಳ ಜೀವ ರಕ್ಷಿಸಬಹುದಾದ ಔಷಧಿ ಪ್ರಯೋಗ ಕುರಿತು ಯಾವುದೇ ವೈಜ್ಞಾನಿಕ ಅರಿವು ಅವರಿಗೆ ಇರುವುದಿಲ್ಲ. ಕುರಿಗಳ ಪ್ರಾಣರಕ್ಷಣೆಗಾಗಿ ಕುರಿಗಾಹಿಗಳು ಬಳಸಬಹುದಾದ ‘ಔಷಧಿ ಜ್ಞಾನ’ದ ಕುರಿತು ಇಲಾಖೆಯವರು ಕೊಂಚ ಪ್ರಶಿಕ್ಷಣ ನೀಡುವುದು ಉತ್ತಮ.

–ಅನಿಲಕುಮಾರ ಮುಗಳಿ, ಧಾರವಾಡ

ಖಾಲಿ ಹುದ್ದೆ: ನೇಮಕಾತಿಗೆ ತೊಡಕೇನು?

ಸರ್ಕಾರದ ವಿವಿಧ ಇಲಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪರಿಪಾಟವಾಗಿದೆ. ‘ಲಕ್ಷಾಂತರ ಜನರಿಗೆ ಕೆಲಸ ಕೊಡುತ್ತೇವೆ’ ಎಂದು ಚುನಾವಣಾ ಸಂದರ್ಭದಲ್ಲಿ ಹೇಳುವ ಯಾವುದೇ ಪಕ್ಷಕ್ಕೆ, ಗೆದ್ದ ನಂತರ ಜಾಣಮರೆವಿನ ಕಾಯಿಲೆ ಬರುತ್ತದೆ. ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಕೊಡುವಾಗ ಮತ್ತು ವೇತನ ಪರಿಷ್ಕರಣೆ ಮಾಡುವಾಗ, ಇಷ್ಟು ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಬೇಕಾಗು ತ್ತದೆ ಎಂಬ ಅಂಕಿಅಂಶ ನೀಡುತ್ತಾರೆ. ಆಯವ್ಯಯ ಮಂಡನೆ ಮಾಡುವಾಗ ಉದ್ಯೋಗಿಗಳ ವೇತನದ ಅನ್ವಯ (ಖಾಲಿ ಇರುವ ಹುದ್ದೆಗಳನ್ನೂ ಸೇರಿಸಿ) ಲೆಕ್ಕ ತೋರಿಸುತ್ತಾರೆ. ಆಯವ್ಯಯಕ್ಕೆ ಅನುಮತಿಯನ್ನೂ ಪಡೆಯುತ್ತಾರೆ. ಇಷ್ಟೆಲ್ಲಾ ಆದರೂ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ತೊಡಕೇನು?

–ವಿ.ಪಾಂಡುರಂಗಪ್ಪ, ಬೆಂಗಳೂರು

ಮೌಢ್ಯ ಬಿತ್ತುವವರೇ ರಾಹು– ಕೇತು!

ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ರಾಹು– ಕೇತುವಿನ ಗುಡಿ ಕಟ್ಟಲು ದಾನಕ್ಕೆ ವಿನಂತಿ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ ಇಂತಹ ದೇವರ ಗುಡಿಗಳು ಹೆಚ್ಚಾಗಿ ಇಲ್ಲದಿರುವುದಕ್ಕೆ ಕಾರಣ, ನಮ್ಮಲ್ಲಿ ಇನ್ನೂ ಮೌಢ್ಯದಿಂದ ದೂರವಿರುವ, ದೇಹವೇ ದೇವಾಲಯ ಎಂದು ನಂಬಿರುವ ಶರಣ ಕನ್ನಡಿಗರ ಪ್ರಭಾವ ಇರಬೇಕು.

ರಾಹು– ಕೇತುಗಳು ಬೆದರಿಕೆಯ ಭ್ರಮಾತ್ಮಕ ಅವೈಜ್ಞಾನಿಕ ಕಲ್ಪನೆ ಅಷ್ಟೆ. ಧರ್ಮ ಹಾಗೂ ದೇವರ ಮೂಲವು ದಯೆಯಾಗದೆ ಭಯವು ಮೂಲವಾಗಿರುವುದು ಇದಕ್ಕೆ ಕಾರಣ. ನಮ್ಮನ್ನು ದುಷ್ಟ, ದುರ್ಗುಣ, ದುಷ್ಕೃತ್ಯಗಳಿಗೆ ಪ್ರೇರೇಪಿಸುವ ನಮ್ಮ ಮನವೇ ರಾಹು– ಕೇತು. ಕನ್ನಡಿಗರಲ್ಲಿ ವಿಚಾರಶಕ್ತಿ ಇದೆ. ಅದನ್ನು ಬಳಸಿ, ಮಳೆನೀರನ್ನು ಇಂಗಿಸುವ, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವ, ಗಿಡ ಮರ ಬೆಳೆಸುವಂತಹ ಸತ್ಕಾರ್ಯಗಳಿಗೆ ಮಾತ್ರ ದಾನಿಗಳು ದಾನ ನೀಡುವಂತಾಗಲಿ.

–ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT