ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮೇ 31 ಶುಕ್ರವಾರ 2024

Published 3 ಜೂನ್ 2024, 14:23 IST
Last Updated 3 ಜೂನ್ 2024, 14:23 IST
ಅಕ್ಷರ ಗಾತ್ರ

ಏರ್ ಇಂಡಿಯಾಗೆ ಬೇಕು ಮಾರ್ಗದರ್ಶನ

ಮೊದಲು ಟಾಟಾ ಸಂಸ್ಥೆಯ ಅಧೀನದಲ್ಲಿದ್ದ ಏರ್ ಇಂಡಿಯಾವನ್ನು ಸರ್ಕಾರ ವಶಕ್ಕೆ ಪಡೆದು, ನಷ್ಟದ ಹೊರೆ ಹೊರಲಾರದೇ ಹರಾಜಿಗಿಟ್ಟಿತು. ಪುನಃ ಟಾಟಾ ಸನ್ಸ್ ತೆಕ್ಕೆಗೆ ಮರಳಿದ ಏರ್ ಇಂಡಿಯಾ ಏಕೋ ಸರಿಯಾಗಿ ‘ಟೇಕ್ ಆಫ್’ ಆಗುತ್ತಲೇ ಇಲ್ಲ. ಏರ್ ಇಂಡಿಯಾವು ಟಾಟಾ ಸಂಸ್ಥೆಗೆ ಹಸ್ತಾಂತರವಾದಾಗ ಭಾರತದ ಜನ ಸಂಭ್ರಮಿಸಿದ್ದರು. ಏರ್ ಇಂಡಿಯಾದ ವಿಮಾನಗಳಲ್ಲಿ ಪಕ್ಕದ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸುವಂತಹ ಪ್ರಕರಣಗಳು ಮರುಕಳಿಸಿದವು. ದಿಢೀರನೆ ವಿಮಾನ ಸಂಚಾರ ರದ್ದುಗೊಳ್ಳುವುದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಅಸಡ್ಡೆ ತೋರುವುದು, ಸಂಸ್ಥೆಯ ಪೈಲಟ್‍ಗಳು, ಸಹ ಸಿಬ್ಬಂದಿ ಮುಷ್ಕರಕ್ಕೆ ಇಳಿಯುವುದು... ಹೀಗೆ ದಿನಂಪ್ರತಿ ಒಂದಿಲ್ಲೊಂದು ಪ್ರಕರಣದಿಂದ ಏರ್ ಇಂಡಿಯಾ ಸುದ್ದಿಯಾಗುತ್ತಲೇ ಇದೆ. ಇದಕ್ಕೆಲ್ಲ ಕಾರಣ ಆಡಳಿತ ಮಂಡಳಿಯ ವೈಫಲ್ಯವೋ ಮಾನವ ಸಂಪನ್ಮೂಲದ ಕೊರತೆಯೋ ಪರಿಶೀಲಿಸಿ ಸರಿಪಡಿಸಬೇಕಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೆಚ್ಚು ಕಡಿಮೆ ತಿಂಗಳಿಗೆ ಎರಡು ಬಾರಿ ಯಾದರೂ ವಿವಿಧ ಕಾರಣಗಳಿಗಾಗಿ ಅಥವಾ ತಪ್ಪುಗಳಿಗಾಗಿ ಅಗಾಧ ಮೊತ್ತದ ದಂಡವನ್ನು ಏರ್ ಇಂಡಿಯಾಕ್ಕೆ ವಿಧಿಸುತ್ತಲೇ ಇರುತ್ತದೆ. ಈಗಾಗಲೇ ಭಾರತದಲ್ಲಿ ವಿವಿಧ ಕಾರಣಗಳಿಗಾಗಿ ಕಿಂಗ್‌ಫಿಷರ್, ಜೆಟ್ ಏರ್‌ವೇಸ್ ಮೂಲೆಗುಂಪಾಗಿವೆ. ಬಹಳ ಹೆಸರುವಾಸಿಯಾಗಿದ್ದ, ಭಾರತದ ಅಸ್ಮಿತೆಗೆ ಅನ್ವರ್ಥವಾಗಿದ್ದ ಏರ್ ಇಂಡಿಯಾ ಸ್ವಯಂ ಬಲದಿಂದ ಪುಟಿದೇಳಲಿ. ಡಿಜಿಸಿಎ ಬರೀ ದಂಡ ವಿಧಿಸಿ ಸುಮ್ಮನಾಗುವ ಬದಲು ಮಾರ್ಗದರ್ಶನ ನೀಡಿ ಸಹಕರಿಸಲಿ.

‌‌–ಚನ್ನು ಅ. ಹಿರೇಮಠ, ರಾಣೆಬೆನ್ನೂರು

ಬಿತ್ತನೆ ಬೀಜದ ದರ ನ್ಯಾಯಯುತವಾಗಿರಲಿ

ಮುಂಗಾರು ಮಳೆ ಹೊಸಿಲಿಗೆ ಬಂದಿದೆ. ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿವೆ. ಆದರೆ ಬಿತ್ತನೆ ಬೀಜಗಳ ದರ ಹಿಂದಿನ ವರ್ಷಕ್ಕಿಂತ ಬಹಳಷ್ಟು ಹೆಚ್ಚಾಗಿರುವುದು ರೈತರ ಮೇಲಿನ ಹೊರೆ ಹೆಚ್ಚಿಸಿದಂತಾಗಿದೆ. ಬರದ ಬೇಗೆಯಿಂದ ಬಳಲಿರುವ ರೈತರ ಸ್ಥಿತಿಯು ಇದರಿಂದಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ರಸಗೊಬ್ಬರ, ಬಿತ್ತನೆ ಬೀಜಗಳು ರೈತರಿಗೆ ಕೈಗೆಟಕುವ ದರದಲ್ಲಿ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಈ ಮೂಲಕ ರೈತರ ಹೊರೆಯನ್ನು ಕಡಿಮೆ ಮಾಡಬೇಕು.

–ರಾಸುಮ ಭಟ್, ಚಿಕ್ಕಮಗಳೂರು

ಗಾಂಧೀಜಿಯನ್ನು ಮತ್ತೆ ಮತ್ತೆ ಕೊಲ್ಲುವುದಕ್ಕಿಂತ...

‘ಗಾಂಧಿ’ ಚಲನಚಿತ್ರ ಬರುವವರೆಗೆ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಅರಿವು ಇರಲಿಲ್ಲ ಅನ್ನುವ ಪ್ರಧಾನಿಯವರ ಹೇಳಿಕೆ ಬಗ್ಗೆ ಅಚ್ಚರಿಪಡಬೇಕಾಗಿಲ್ಲ. ಆ ಚಿತ್ರ ಬರುವುದರೊಳಗಾಗಿ ಗಾಂಧೀಜಿ ನಮ್ಮ ದೇಶದ ಸ್ಮೃತಿಪಟಲದಲ್ಲಿಯೇ ಮಸುಕಾಗಿದ್ದರು. ಗಾಂಧೀಜಿಯನ್ನು ನಾವೇ ಮರೆತು ಮುನ್ನಡೆಯುತ್ತಿರುವಾಗ, ಜಗತ್ತಿಗೆ ಗಾಂಧೀಜಿಯನ್ನು ಪರಿಚಯಿಸುವ ಹಂಬಲವಾದರೂ ಯಾಕೆ? ಸ್ವಾತಂತ್ರ್ಯಾನಂತರ ನಾವು ವ್ಯವಸ್ಥಿತವಾಗಿ ಗಾಂಧಿ ಮಾರ್ಗದಿಂದ ದೂರ ಸರಿಯುತ್ತಾ ಬಂದೆವು. ಅವರ ಸರಳ, ಸಹಜ ಜೀವನಕ್ರಮದಿಂದ ಈಗಂತೂ ಬಹಳ ದೂರ ಸರಿದಿರುವೆವು. ಅದರಲ್ಲೂ ಹಿಂದಿನ ಒಂದು ದಶಕದಲ್ಲಿ ವಿವಿಧ ಮಾಧ್ಯಮಗಳ ಮೂಲಕ ಗಾಂಧೀಜಿ, ನೆಹರೂ ಕುರಿತು ಏನೆಲ್ಲ ಅಪಪ್ರಚಾರ, ಸುಳ್ಳು ಸಂಗತಿಗಳನ್ನು ಬಿತ್ತರಿಸಲು ಸಾಧ್ಯವೋ ಅವನ್ನೆಲ್ಲ ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗಿದೆ.

ಗಾಂಧೀಜಿಯ ತತ್ವ, ಸಿದ್ಧಾಂತ, ರಾಜಕೀಯ, ಸಾರ್ವಜನಿಕ ಜೀವನದ ನಡೆ-ನುಡಿಗಳಿಂದ ದೂರ ಸರಿದಿರುವ ನಮಗೇ ಮೊದಲು ಗಾಂಧೀಜಿ ಕುರಿತು ಒಂದಿಷ್ಟು ಅರಿವು ಮೂಡಬೇಕಾಗಿದೆ. ಆಮೇಲೆ ಅವರನ್ನು ಜಗತ್ತಿಗೆ ಪರಿಚಯಿಸಬಹುದು. ಈಗ ಪ್ರತಿಯೊಂದು ರಂಗದಲ್ಲೂ, ಗಾಂಧಿಯವರ ಸರಳ ಜೀವನವಿಧಾನಕ್ಕೆ ತದ್ವಿರುದ್ಧವಾದ ನಡೆ ನಮ್ಮದಾಗಿದೆ. ‘ನನ್ನ ಜೀವನವೇ ನನ್ನ ಸಂದೇಶ’ ಅಂದ ಅವರ ಮಾತುಗಳು ನಮಗೆ ಒಂದಿಷ್ಟಾದರೂ ನಾಟಿರುವವೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಮತೀಯ ಸಾಮರಸ್ಯ ಕ್ಕಾಗಿ ತಮ್ಮ ಜೀವನವನ್ನೇ ಪಣಕ್ಕೊಡ್ಡಿದ್ದ, ಸತ್ಯವೇ ದೇವರು ಅಂದ ಗಾಂಧಿ ನಾಡಿನಲ್ಲಿ ಇಂದು ಮತೀಯ ಅಸಹನೆ, ಸುಳ್ಳು ದಿನಾಲೂ ವಿಜೃಂಭಿಸುತ್ತಿವೆ. ಗಾಂಧೀಜಿಯನ್ನು ಸಹಿಸಿಕೊಳ್ಳಲಾರದೆ ಅವರನ್ನು ಕೊಂದು ಹಾಕಿ, ಈಗ ಅವರನ್ನು ಜಗತ್ತಿಗೆ ಪರಿಚಯಿಸಲು ಪರಿತಪಿಸುವುದಾದರೂ ಏತಕ್ಕೆ? ‘ಗಾಂಧೀಜಿಯನ್ನು ಏಕೆ ಕೊಂದು ಹಾಕಿದಿರಿ?’ ಎಂದು ಜಗತ್ತು ಕೇಳಿದರೆ ನಮ್ಮ ಬಳಿ ಯಾವ ಉತ್ತರ ಇದೆ? ಆತ್ಮವಂಚನೆಯ ಮಾತು, ಕೃತಿಗಳ ಮೂಲಕ ಗಾಂಧೀಜಿಯನ್ನು ಮತ್ತೆ ಮತ್ತೆ ಕೊಲ್ಲುವುದಕ್ಕಿಂತ ಸುಮ್ಮನಿರುವುದೇ ಮೇಲು.

–ವೆಂಕಟೇಶ ಮಾಚಕನೂರ, ಧಾರವಾಡ

ಪೊಳ್ಳು ಮೌಲ್ಯದ ‘ಈಡಿಪಸ್‌ ಯುವರಾಜರು’!

ಮಕ್ಕಳು ಹುಟ್ಟಿನಿಂದ ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಮುಗ್ಧತೆಯಲ್ಲೇ ಬೆಳೆಯುತ್ತವೆ. ಆದರೆ ಗಂಡುಮಕ್ಕಳಿಗೆ ತಾಯಿಯೇ (ಕೊಡಲಿ ಕಾವು ಕುಲಕ್ಕೆ ಮೂಲ) ಮೊದಲು, ನಂತರ ತಂದೆ ಹಾಗೂ ಸಮಾಜದ ವತಿಯಿಂದ ಸಾವಿರಾರು ವರ್ಷದ ‘ಗಂಡಸು’ ಎಂಬ ಮೇಲರಿಮೆಯ ಕೊಂಬಿನ ಅಹಂ ಅನ್ನು ಬಿತ್ತಿ ನೀರು, ಗೊಬ್ಬರ ಹಾಕಿ ಪೋಷಿಸಲಾಗು ತ್ತಿದೆ. ಅದರ ದುಷ್ಫಲವೇ ಈಗಿನ ‘ಈಡಿಪಸ್ ಯುವರಾಜರು’. ತನ್ನನ್ನು ಹೆತ್ತವಳು ಒಬ್ಬಳು ಹೆಣ್ಣು ಎಂಬುದನ್ನು ಮರೆತು, ಹೆಣ್ಣು ಎಂಬುದು ತನ್ನ ಗಂಡಸುತನದ ಅಧಿಕಾರ, ದರ್ಪ ತೋರಿಸಲು ಇರುವ ಸಾಧನ ಎಂಬಂತೆ ಆಕೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ದುರ್ಗುಣದ ಪರಮಾವಧಿ. ಮಗುವಾಗಿ ಇದ್ದಾಗಿನ ಪ್ರೀತಿ, ಕರುಣೆ, ಮುಗ್ಧತೆ, ಮೈತ್ರಿ, ಸಮಾನತೆ, ಏಕತೆಯ ಸಹಪಯಣದ ನೈತಿಕತೆಯನ್ನು ಮನೆಗಳಲ್ಲಿ, ಶಾಲೆಗಳಲ್ಲಿ ಮತ್ತೆ ಮತ್ತೆ ವ್ಯವಸ್ಥಿತವಾಗಿ, ಸಹಜವಾಗಿ ನಿತ್ಯ ನಿರಂತರ ಕಲಿಸಬೇಕಾಗಿದೆ. ಇದನ್ನೆಲ್ಲ ವಿವಿಧ ಆಯಾಮಗಳಿಂದ ವಿಶ್ಲೇಷಿಸಿರುವ (ಪ್ರ.ವಾ., ಮೇ 29) ಡಾ. ಎಚ್‌.ಎಸ್‌.ಅನುಪಮಾ ಅವರಿಗೆ ಕೃತಜ್ಞತೆಗಳು.

–ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ಇದೆಂತಹ ಮಮಕಾರ?!

ಈ ತಿಂಗಳ 31ರಿಂದ 6 ದಿನಗಳ ಕಾಲ ಮದ್ಯ ಸಿಗುವುದಿಲ್ಲ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವೋ ಪ್ರಚಾರ! ‘ಗೆಳೆಯರೇ, ಈಗಲೇ ತೆಗೆದಿಟ್ಟುಕೊಳ್ಳಿ’ ಎಂಬ ಕಿವಿಮಾತಿನ ಉಪಚಾರ, ಮದ್ಯಪ್ರಿಯರಲ್ಲಿ ಪರಸ್ಪರ ಅಂದೆಂತಹ ಮಮಕಾರ?!

–ಜೆ.ಬಿ.ಮಂಜುನಾಥ, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT