ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 25 ಆಗಸ್ಟ್ 2024, 23:30 IST
Last Updated : 25 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕೆಸರೆರಚಾಟಕ್ಕೆ ಅಂತ್ಯವಿದೆಯೇ?

ಪ್ರಜೆಗಳಾದ ನಮಗೆ ಯಾರು ಹಿತವರು ಈ ಮೂವರೊಳಗೆ- ಬಿಜೆಪಿಯೋ ಕಾಂಗ್ರೆಸ್ ಪಕ್ಷವೋ ಅಥವಾ ಜೆಡಿಎಸ್ ಪಕ್ಷವೋ ಎಂದು ಯಾರಾದರೂ ಕೇಳಿದ್ದೇ ಆದರೆ, ಯಾರೂ ಅಲ್ಲ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇತ್ತೀಚೆಗೆ ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಪ್ರಕಟವಾಗುತ್ತಿರುವ ಹಗರಣಗಳನ್ನು ಗಮನಿಸಿದರೆ, ಯಾವ ಒಂದು ಪಕ್ಷವೂ ಸಮಾಜಕ್ಕೋಸ್ಕರ, ಜನಸಾಮಾನ್ಯರಿಗೋಸ್ಕರ ಕೆಲಸ ಮಾಡುತ್ತಿರುವಂತೆ ಕಾಣಿಸುತ್ತಿಲ್ಲ. ಇತ್ತ ಸಾಮಾನ್ಯ ಜನರಿಗೂ ನಾವು ಯಾರನ್ನು ಆರಿಸಿ ವಿಧಾನಸಭೆಗೆ ಕಳುಹಿಸಬೇಕೆಂದು ತಿಳಿಯದಂತಾಗುತ್ತಿದೆ.

ಈ ಮೂರೂ ಪಕ್ಷಗಳ ಪ್ರತಿನಿಧಿಗಳು ಸ್ಪರ್ಧೆಗೆ ಬಿದ್ದವರಂತೆ ಹಗರಣಗಳಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಮತ್ತು ಒಬ್ಬರನ್ನೊಬ್ಬರು ಹೀಯಾಳಿಸುವ ಭರದಲ್ಲಿ ಉಪಯೋಗಿಸುತ್ತಿರುವ ಭಾಷೆಯು ಅಸಹ್ಯದ ಹಂತ ಮುಟ್ಟಿದೆ. ಇವರ ಈ ಕೆಸರೆರಚಾಟಕ್ಕೆ ಅಂತ್ಯ ಎಂಬುದಿದೆಯೇ ಎನ್ನುವುದೇ ಯಕ್ಷಪ್ರಶ್ನೆಯಂತಾಗಿದೆ. ಜನಪ್ರತಿನಿಧಿಗಳು ತಮ್ಮ ಅವಧಿಯ ಐದೂ ವರ್ಷ ತಮ್ಮ ಪಕ್ಷ ಹಾಗೂ ಕುರ್ಚಿಯ ಬಗ್ಗೆಯೇ ಯೋಚಿಸುವುದಾದರೆ ಸಾಮಾನ್ಯ ಪ್ರಜೆಗಳ ಪಾಡೇನು?

-ಶಿವರಾಮಕೃಷ್ಣ, ಮೈಸೂರು

ನಮ್ಮ ಆನೆಯು ಜೇನಿಗೆ ಹೆದರದು!

‘ಆನೆ ಓಡಿಸಲು ಜೇನು ಸಾಕು’ ಎಂಬ ನಾಗೇಶ ಹೆಗಡೆ ಅವರ ಸಲಹೆ (ವಾ.ವಾ., ಆ. 15) ಓದಿದೆ. ಆದರೆ ಆ ತಂತ್ರವನ್ನು ನಮ್ಮೂರಿನಲ್ಲಿ ಅಳವಡಿಸಿದರೆ, ನಮಗೆ ತೋಟದ ಬೆಳೆಯೂ ಇಲ್ಲ, ಜೇನುಪೆಟ್ಟಿಗೆಯೂ ಇಲ್ಲ ಎಂಬಂತೆ ಆಗುತ್ತದೆ. ಏಕೆಂದರೆ ನಮ್ಮೂರಿನ ಆನೆಯು ಜೇನಿಗೆ ಹೆದರುವುದಿಲ್ಲ. ನನ್ನ ತೋಟದಲ್ಲಿ 20ಕ್ಕಿಂತಲೂ ಅಧಿಕ ಜೇನುಪೆಟ್ಟಿಗೆಗಳಿವೆ. ಆನೆ ಬರುವ ದಾರಿಯಲ್ಲೂ ಪೆಟ್ಟಿಗೆ ಇಟ್ಟಿದ್ದೇವೆ. ಆನೆಯು ಆ ಪೆಟ್ಟಿಗೆಯನ್ನು ಬೀಳಿಸಿ ತೋಟಕ್ಕೆ ನುಗ್ಗುತ್ತದೆ. ತೋಟದ ಒಳಗೆ ಇರುವ ಪೆಟ್ಟಿಗೆಯನ್ನೂ ಬೀಳಿಸಿ ಹೋಗುತ್ತದೆ. ಇದರಿಂದ ನಾವು ಜೇನನ್ನು ಕಳೆದುಕೊಂಡಿದ್ದೇವೆಯೇ ವಿನಾ ಆನೆಗೆ ಏನೂ ಆಗಿಲ್ಲ.

ಅಷ್ಟಕ್ಕೂ ಆನೆ ಬರುವುದು ಹಗಲು ಹೊತ್ತಿನಲ್ಲಿ ಅಲ್ಲ. ಹಗಲಿನಲ್ಲಿ ಚಟುವಟಿಕೆಯಿಂದಿರುವ ಜೇನುಹುಳುಗಳು ರಾತ್ರಿ ವೇಳೆ ಪೆಟ್ಟಿಗೆಯಲ್ಲಿ ಸುಮ್ಮನೆ ಕೂತಿರುತ್ತವೆ. ಆನೆಯು ಪೆಟ್ಟಿಗೆಯನ್ನು ಬೀಳಿಸುವಾಗ ಅವು ಪೆಟ್ಟಿಗೆಯಲ್ಲಿ ಹಾಗೆಯೇ ಕೂತಿರುತ್ತವೆ. ರಾತ್ರಿ ಅವಕ್ಕೆ ಸಿಡಿದು ಏಳಲು ಆಗುವುದಿಲ್ಲ. ಆನೆ ದಾಳಿಗೆ ಒಳಗಾದ ಈ ಹುಳುಗಳು ಬೆಳಿಗ್ಗೆ ಪೆಟ್ಟಿಗೆ ಬಿಟ್ಟು ಓಡುತ್ತವೆ. ಇದು ನನ್ನ ಅನುಭವದ ಮಾತು. ಆನೆಗೆ ಸೋಲಾರ್ ತಂತಿಬೇಲಿ ಅಲ್ಲದೆ ಬೇರೆ ಉಪಾಯವನ್ನು ಸದ್ಯದ ಪರಿಸ್ಥಿತಿಯಲ್ಲಿ ನಾನು ಕಾಣೆ. ನಾನಂತೂ ಜೇನುಪೆಟ್ಟಿಗೆ ಇಟ್ಟಿದ್ದರೂ ಈ ವರ್ಷ 90 ತೆಂಗಿನ ಗಿಡಗಳನ್ನು ಆನೆಯಿಂದಾಗಿ ಕಳೆದುಕೊಂಡಿದ್ದೇನೆ.

-ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ

ಜಮೀನು ನೀಡಿಕೆ: ಹೇಳಿಕೆ ಅಗತ್ಯ

ಜಿಂದಾಲ್ ಕಂಪನಿಗೆ ಜಮೀನು ನೀಡಿಕೆಯ ಬಗೆಗೆ ರಾಜಕೀಯ ನಾಯಕರು, ಪಕ್ಷಗಳು ವಿವಿಧ ಘಟ್ಟಗಳಲ್ಲಿ ಹೇಗೆ ನಡೆದುಕೊಂಡರು ಮತ್ತು ನಡೆದುಕೊಂಡಿವೆ ಎಂಬುದನ್ನು ಪತ್ರಿಕೆಯು ವಿವರವಾಗಿ ಬಿಚ್ಚಿಟ್ಟಿದ್ದು (ಪ್ರ.ವಾ., ಆ. 23 ) ಉತ್ತಮ ಕೆಲಸ. ಎಂ.ವೈ.ಘೋರ್ಪಡೆ ಈಗಿನ ರಾಜಕಾರಣಿಗಳಿಗಿಂತ ಭಿನ್ನ. ಅದೇ ಪ್ರದೇಶದವರಾದರೂ ತಮ್ಮ 1983ರ ಲೇಖನವೊಂದರಲ್ಲಿ ‘ವಿಜಯನಗರ ಉಕ್ಕು ಕಾರ್ಖಾನೆ ಹೆಸರಿನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷ ಪ್ರಯೋಜನ ಪಡೆಯಲು ಹವಣಿಸಬಾರದು. ಅದು ತುಂಬ ಅಲ್ಪದೃಷ್ಟಿ, ಆತ್ಮಪರಾಭವದ ಕ್ರಮವಾಗುತ್ತದೆ. ಒಂದು ಉಕ್ಕು ಕಾರ್ಖಾನೆ ಎಂದರೆ ಗಂಭೀರ ಸಮಾಚಾರ. ಅದನ್ನು ರಾಜಕೀಯ ಆಟದ ಗೊಂಬೆಯನ್ನಾಗಿ ಮಾಡಬಾರದು’ ಎಂದಿದ್ದರು.

ಈಗ ಪ್ರಸ್ತಾವದ ಬಗೆಗೆ ಕ್ಯಾಬಿನೆಟ್‌ನಲ್ಲಿ ಆಕ್ಷೇಪ ಅಥವಾ ವಿರೋಧ ವ್ಯಕ್ತಪಡಿಸಿದವರು ಹೊರಗೆ ನಿರ್ಣಯವನ್ನು ಸಮರ್ಥಿಸಿಕೊಂಡರೆ ಅವರ ಬಗೆಗೆ ಅನುಮಾನಗಳೇಳುವುದು ಸಹಜ. ಜಮೀನು ನೀಡುವುದು ಅತ್ಯಗತ್ಯ, ಅನಿವಾರ್ಯ ಆಗಿತ್ತೇ ಎಂಬ ಅಂಶ ಒಂದಾದರೆ, ಸೂಚಿತ ದರಗಳು ಹಳೆಯವಲ್ಲವೆ ಎಂಬುದೂ ಚರ್ಚಾಸ್ಪದ ವಿಷಯವಾಗಿದೆ. ವಿವಿಧ ಪಕ್ಷಗಳ ನಾಯಕರು ಈ ಕುರಿತು ಹೇಳಿಕೆ ನೀಡುತ್ತಿರುವುದರಿಂದ, ಏಕೆ ಈ ತೀರ್ಮಾನ ಕೈಗೊಳ್ಳಲಾಯಿತು, ಯಾರದಾದರೂ ಒತ್ತಡ ಇತ್ತೇ ಎಂಬ ಬಗ್ಗೆ ಮುಖ್ಯಮಂತ್ರಿಯವರು ಸಂಪುಟದ ನಾಯಕರಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ವಿವರಣೆ ನೀಡಬೇಕು.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪುಸ್ತಕ ಪ್ರಕಾಶನ: ಎಲ್ಲ ಮಗ್ಗುಲೂ ಚರ್ಚೆಯಾಗಲಿ

ಕನ್ನಡ ಪುಸ್ತಕ ಪ್ರಕಾಶನದ ಬಗ್ಗೆ, ಪ್ರಕಾಶಕರಲ್ಲಿ ಒಬ್ಬರಾದ ವೀರಕಪುತ್ರ ಶ್ರೀನಿವಾಸ ಅವರು ಬರೆದಿರುವ ಲೇಖನಕ್ಕೆ (ಚರ್ಚೆ, ಆ. 21) ಪ್ರತಿಕ್ರಿಯೆ. ಪುಸ್ತಕ ಪ್ರಕಾಶನ ಒಂದು ಉದ್ಯಮ. ಅದಕ್ಕೆ ಬಂಡವಾಳ, ಶ್ರಮ, ಕೌಶಲ ಎಲ್ಲವೂ ಅಗತ್ಯ. ಲೇಖಕ ಬರೆದ ಪುಸ್ತಕವನ್ನು ಓದುಗನಿಗೆ ತಲುಪಿಸುವುದು ಪ್ರಕಾಶಕರ ಕೆಲಸ. ನಡುವೆ ಮುದ್ರಕ, ಮಾರಾಟಗಾರ, ವಿನ್ಯಾಸಗಾರ ಬರುತ್ತಾರೆ. ಪುಸ್ತಕದ ವ್ಯವಹಾರದಲ್ಲಿ ಲೇಖಕ, ಪ್ರಕಾಶಕ, ಮುದ್ರಕ ಮತ್ತು ಓದುಗ ನಾಲ್ಕು ಸ್ತಂಭಗಳು. ಪ್ರಕಾಶಕ ಏನು ಮಹಾ ಮಾಡಬಹುದು ಎಂದು ಶ್ರೀನಿವಾಸ ಅವರು ಹೇಳಿರುವ ಮಾತಿಗೆ ಅರ್ಥವೇ ಇಲ್ಲ.

ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟ– ನಟಿಯರು ಭಾಗವಹಿಸುವಂತೆ ಲೇಖಕ ಮಾರಾಟದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದ್ದಾರೆ. ತಾನು ಬರೆದ ಪುಸ್ತಕ ಸಾವಿರಾರು ಜನರ ಕೈಸೇರಿ ಜನರ ಮೆಚ್ಚುಗೆ ಗಳಿಸಬೇಕು ಮತ್ತು ಚರ್ಚೆಗೆ ಒಳಗಾಗಬೇಕು ಎಂದು ಯಾವ ಲೇಖಕನಿಗೆ ತಾನೇ ಇಚ್ಛೆ ಇರುವುದಿಲ್ಲ? ಅದಕ್ಕೊಂದು ವೇದಿಕೆಯನ್ನು ಪ್ರಕಾಶಕ, ಮಾರಾಟಗಾರ ನಿರ್ಮಿಸಿಕೊಟ್ಟರೆ ಲೇಖಕನೂ ಆ ಜವಾಬ್ದಾರಿ ನಿರ್ವಹಿಸಿಯಾನು. ಲೇಖಕ ರಸ್ಕಿನ್ ಬಾಂಡ್, ಮಸೂರಿಯ ಪುಸ್ತಕದ ಅಂಗಡಿಯಲ್ಲಿ ವಾರದಲ್ಲಿ ಒಂದು ದಿನ ಕುಳಿತು, ಗ್ರಾಹಕರು ಕೊಂಡ ಅವರ ಪುಸ್ತಕಗಳಿಗೆ ಆಟೊಗ್ರಾಫ್ ಹಾಕಿಕೊಡುತ್ತಿದ್ದರು.

ಕನ್ನಡದಲ್ಲಿ ಪುಸ್ತಕ ಪ್ರಕಾಶನ ಸಂಕೀರ್ಣವಾಗಿದೆ. ಪ್ರಮುಖ ಲೇಖಕರ ಪುಸ್ತಕಗಳು ಸಾವಿರದ ಸಂಖ್ಯೆಯಲ್ಲಿ ಖರ್ಚಾಗುತ್ತವೆ. ಕರಾಟೆ, ಜೂಡೊ, ಆಟ, ಓಟದಂತಹ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಇಪ್ಪತ್ತು ಆವೃತ್ತಿಗಳನ್ನು ಕಂಡಿರುವುದಿದೆ. ಎಷ್ಟೋ ಲೇಖಕರ ಪುಸ್ತಕಗಳಿಗೆ ಪ್ರಕಟಣೆಯ ಭಾಗ್ಯವೇ ಇರುವುದಿಲ್ಲ. ಅನೇಕ ಲೇಖಕರ ಪ್ರಕಟಿತ ಪುಸ್ತಕಗಳು ಕಪಾಟಿನಲ್ಲಿ ಇವೆ. ಸಂಶೋಧನಾ ಕೃತಿಯನ್ನು, ಪ್ರವಾಸ ಕಥನವನ್ನು ಕಾದಂಬರಿ ಎಂದು ಮುದ್ರಿಸಿದ ನಿದರ್ಶನ ಇದೆ. ರಕ್ಷಾಪುಟ ಬದಲಾಯಿಸಿ ಪ್ರಕಟಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ, ಪ್ರಕಾಶನದ ಎಲ್ಲ ಮಗ್ಗುಲುಗಳ ಬಗ್ಗೆಯೂ ಚರ್ಚೆ ಆಗಬೇಕು.

-ಕೆ.ವೆಂಕಟರಾಜು, ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT