ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಹುಂಡಿ ಹಣದ ಹಿಂದಿದೆ ಭಕ್ತರ ಮುಗ್ಧತೆ

ಹಿಂದೂ ದೇವಾಲಯಗಳ ಹಣ ಹಿಂದೂಗಳಿಗಾಗಿ ಎಂದು ವಾದಿಸುವವರಿಗೆ ಪ್ರತಿಯಾಗಿ, ಒಂದೊಂದು ಜಾತಿಯವರಿಗೆ ಒಂದೊಂದು ಪ್ರತ್ಯೇಕ ಹುಂಡಿ ಇಟ್ಟು, ಸಂಗ್ರಹವಾದ ಹಣವನ್ನು ಆಯಾ ಜಾತಿಯ ಅಭಿವೃದ್ಧಿ ನಿಗಮಗಳಿಗೆ ಕೊಡಬಹುದು ಎಂದು ಟಿ.ಗೋವಿಂದರಾಜು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಫೆ. 24). ಎಲ್ಲ ಜಾತಿಯಲ್ಲಿಯೂ ಆಸ್ತಿಕರು ಮತ್ತು ನಾಸ್ತಿಕರು ಇರುವಾಗ ಇದರಿಂದ ಆಸ್ತಿಕರ ಹಣ ನಾಸ್ತಿಕರಿಗೂ ಸೇರಿದಂತಾಗುವ ವಾದ ಹುಟ್ಟುತ್ತದಲ್ಲವೇ? ಭಕ್ತರು ಹುಂಡಿಗೆ ಯಾವ ಉದ್ದೇಶ ಮತ್ತು ನಂಬಿಕೆಯಿಂದ ಹಣ ಹಾಕಿರುತ್ತಾರೋ ಆ ಉದ್ದೇಶಕ್ಕೆ ಬಳಕೆ ಆದಲ್ಲಿ ಮಾತ್ರ ಭಕ್ತರ ಹಣವನ್ನು ಸದುಪಯೋಗ ಪಡಿಸಿಕೊಂಡಂತೆ ಆಗುತ್ತದೆ. ಈ ಹಣವನ್ನು ಆಯಾ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮೂಲ ಸೌಕರ್ಯಕ್ಕೆ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಹೆಚ್ಚುವರಿಯಾಗಿ ಉಳಿಯಬಹುದಾದ ಹಣವನ್ನು ಆದಾಯವಿಲ್ಲದ ಪ್ರಾಚೀನ ದೇವಾಲಯಗಳ ಸಂರಕ್ಷಣೆ ಮತ್ತು ಅಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸುವುದಕ್ಕೆ ಅಗತ್ಯವಾದ ಮೂಲ ಸೌಕರ್ಯ
ಕಲ್ಪಿಸುವುದಕ್ಕೆ ಬಳಸುವುದು ಒಳ್ಳೆಯದು. ಆಗ, ಆಸ್ತಿಕ ಭಕ್ತರು ಮುಗ್ಧತೆಯಿಂದ ಯಾವ ಉದ್ದೇಶಕ್ಕಾಗಿ ಹುಂಡಿಗೆ ಹಣ ಹಾಕಿರುತ್ತಾರೋ ಆ ಉದ್ದೇಶದ ಸದ್ಬಳಕೆ ಆಗಬಹುದು. ಅನ್ಯ ಉದ್ದೇಶಕ್ಕೆ ಬಳಸುವುದಾದಲ್ಲಿ ಈ ಕೂಗಿಗೆ ಶಕ್ತಿ ಬಂದು, ಕ್ರಮೇಣ ಭಕ್ತರು ಹುಂಡಿಗೆ ಹಣ ಹಾಕುವುದನ್ನೇ ನಿಲ್ಲಿಸುವ ಸಂಭವ ಬರಬಹುದು.

ಇತರ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರವು ಆ ಸಲುವಾಗಿಯೇ ಜನರಿಂದ ಸಂಗ್ರಹಿಸುವ ತೆರಿಗೆ ಹಣವನ್ನು ಬಳಸಬೇಕು. ಇಲ್ಲವಾದಲ್ಲಿ ಅದಕ್ಕೆ ಇತರ ಆದಾಯ ಮೂಲಗಳನ್ನು ಹುಡುಕಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು.

ಕೆ.ಎಂ.ನಾಗರಾಜು, ಮೈಸೂರು

**

ಬಿಬಿಎಂಪಿ: ಬೆಕ್ಕಿಗೆ ಗಂಟೆ ಕಟ್ಟುವವ

ರಾರು?

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ವಾರ್ಡ್‌ಗಳು ಹಾಗೂ ಉಪವಿಭಾಗಗಳ ಕಚೇರಿಗಳನ್ನು ತೆರೆಯಲು ಮುಖ್ಯ ಆಯುಕ್ತರು ಆದೇಶ ನೀಡಿ ಒಂದೂವರೆ ತಿಂಗಳಾದರೂ ವಲಯ ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳದೇ ಇರುವುದು (ಪ್ರ.ವಾ., ಫೆ. 23) ಬೆಂಗಳೂರಿಗರಿಗೆ ಅಚ್ಚರಿಯ ಸಂಗತಿಯೇನೂ ಅಲ್ಲ. ಜನಪ್ರತಿ
ನಿಧಿಗಳಿಲ್ಲದ ಬಿಬಿಎಂಪಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗಳು ಈಗಾಗಲೇ ಕುಖ್ಯಾತಿ ಪಡೆದುಕೊಂಡಿವೆ. ತೀವ್ರ ಸ್ವರೂಪದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಬಿಬಿಎಂಪಿ ಎಂಬ ವಿಶಾಲ ಆಲದ ಮರದ ಕೆಳಗೆ ಆಶ್ರಯ ಪಡೆದಿರುವವರು ಇದನ್ನೆಲ್ಲ ಗಂಭೀರವಾಗಿ ಪರಿಗಣಿಸುವುದಿಲ್ಲ.

ಹಲವು ವಿಭಾಗಗಳಿದ್ದರೂ ಆಡಳಿತ ಕುಲಗೆಟ್ಟಿದೆ. ನಿಪುಣ ನಿಯಂತ್ರಕರಿಲ್ಲದ ಬಿಬಿಎಂಪಿ ಎಲ್ಲ ಲೆಕ್ಕಕ್ಕೂ ಸಲ್ಲುತ್ತದೆ, ಆಟ ಮಾತ್ರ ಕಳಪೆಯಲ್ಲಿ ಕಳಪೆ. ವಾಸಿಯಾಗದ ಈ ಕಾಯಿಲೆಗೆ ಪಕ್ವವಾದ ಚಿಕಿತ್ಸೆಯ ಅಗತ್ಯವಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ರಿಪ್ಪನ್‌ಪೇಟೆ ನಟರಾಜ್, ಬೆಂಗಳೂರು

**

ಚಿಲ್ಲರೆ ಸಮಸ್ಯೆಗೆ ಇದೆ ಪರಿಹಾರ

₹ 10ರ ನಾಣ್ಯಗಳ ಚಲಾವಣೆಗೆ ರಾಜ್ಯದಲ್ಲಿ ಇರುವ ಸಮಸ್ಯೆ ಬೇರೆ ರಾಜ್ಯಗಳಲ್ಲಿ ಇರುವಂತೆ ಕಾಣುವುದಿಲ್ಲ. ನಾನು ನವಿಮುಂಬೈಯಲ್ಲಿ ಕೆಲವು ದಿನ ಇದ್ದಾಗ, ₹ 10ರ ನಾಣ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಲ್ಲಿ ಇದ್ದುದನ್ನು ಗಮನಿಸಿದೆ. ಅಲ್ಲಿಂದ ದಾವಣಗೆರೆಗೆ ಮರಳಿದಾಗ, ನನ್ನ ಬಳಿ ಉಳಿದಿದ್ದ ₹ 10ರ ನಾಣ್ಯಗಳು ಚಲಾವಣೆಯಾಗದೆ ದೇವರ ಹುಂಡಿಗೆ ಹಾಕಬೇಕಾಯಿತು. ಇತ್ತೀಚೆಗೆ, ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿನ ಅಂಗಡಿಯೊಂದರ ಮುಂದೆ ₹ 10 ಮತ್ತು ₹ 20ರ ನಾಣ್ಯಗಳನ್ನು ಸ್ವೀಕರಿಸಲಾಗುತ್ತದೆ ಎಂಬ ಮಾಹಿತಿ ಇದ್ದ ಬ್ಯಾನರ್ ಗಮನಿಸಿದೆ. ಹಾಗೆಯೇ ದಾವಣಗೆರೆಯ ಹೋಟೆಲೊಂದರಲ್ಲೂ ಅಂತಹ ಬೋರ್ಡ್ ಹಾಕಲಾಗಿದೆ.

ಈಗಂತೂ, ₹ 10ರ ನೋಟುಗಳ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿಲ್ಲರೆ ಅಭಾವದಿಂದ ಬೇಡದ ವಸ್ತುಗಳನ್ನು ಅನಗತ್ಯವಾಗಿ ಖರೀದಿಸಬೇಕಾಗಿದೆ. ಹಾಗೆಯೇ, ಈಗೀಗ ₹ 50 ಹಾಗೂ ₹ 100ರ ನೋಟುಗಳು ಸಹ ದುರ್ಲಭವಾಗುತ್ತಿವೆ. ಎಟಿಎಂಗಳಲ್ಲಿ ಸಾಮಾನ್ಯವಾಗಿ ₹ 500ರ ನೋಟುಗಳೇ ಹೆಚ್ಚಾಗಿ ಬರುತ್ತವೆ. ಕಡಿಮೆ ಮುಖಬೆಲೆಯ ಬಿಡಿನೋಟು ಪಡೆಯಲು ದ್ವಿಚಕ್ರ ವಾಹನಕ್ಕೆ ₹ 50 ಪೆಟ್ರೋಲ್ ಹಾಕಿಸಬೇಕಾದ ಪರಿಸ್ಥಿತಿ ನಮ್ಮದು. ಬಿಡಿನೋಟು ಪಡೆಯಲು ಬ್ಯಾಂಕಿಗೆ ಹೋದರೆ ಸರದಿಯಲ್ಲಿ ನಿಲ್ಲಬೇಕಾಗುತ್ತದೆ, ಕೆಲವೊಮ್ಮೆ ಕಡಿಮೆ ಮುಖಬೆಲೆಯ ಬಿಡಿನೋಟುಗಳನ್ನು ನೀಡಲು ಬ್ಯಾಂಕ್‌ನವರು ಹಿಂದೇಟು ಹಾಕುವುದೂ ಉಂಟು. ಹೀಗಾದರೆ ವ್ಯವಹರಿಸು
ವುದಾದರೂ ಹೇಗೆ? ಈ ದಿಸೆಯಲ್ಲಿ, ಬ್ಯಾಂಕಿನಲ್ಲಿ ಶೇಖರಣೆಯಾಗುವ ಕಡಿಮೆ ಮುಖಬೆಲೆಯ ಬಿಡಿನೋಟುಗಳನ್ನು
ಕೆಎಸ್‌ಆರ್‌ಟಿಸಿಯಂತಹ ಸಂಸ್ಥೆಗಳು, ಹಾಲಿನ ಕೇಂದ್ರಗಳ ಮೂಲಕ ಗ್ರಾಹಕರು ಪಡೆಯುವಂತೆ ಮಾಡಬೇಕು.

ರಘುನಾಥ ರಾವ್ ತಾಪ್ಸೆ, ದಾವಣಗೆರೆ

**

ಉತ್ತರ ಪತ್ರಿಕೆ: ಇಲಾಖೆಯೇ ಒದಗಿಸಲಿ

ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗೆ ಉತ್ತರ ಪತ್ರಿಕೆ ಒದಗಿಸುವ ಹೊಣೆ ಶಾಲೆಗಳದ್ದೇ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲಾ ಮುಖ್ಯಸ್ಥರಿಗೆ ವಾಟ್ಸ್‌ಆ್ಯಪ್ ಸಂದೇಶ ರವಾನಿಸಿದ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾದರೆ, ಉತ್ತರ ಪತ್ರಿಕೆ ತರುವ ಜವಾಬ್ದಾರಿಯನ್ನು ಶಾಲೆಗಳು ಮಕ್ಕಳ ಮೇಲೆ ಹೊರಿಸಿಬಿಡುವ ಸಾಧ್ಯತೆಯೇ ಹೆಚ್ಚು. ಆಗ ಮಕ್ಕಳು ಬ್ಯಾಗ್‌ನಲ್ಲಿ ಉತ್ತರ ಪತ್ರಿಕೆಯನ್ನು ಇಟ್ಟುಕೊಂಡು ಬಂದರೆ, ಅದು ಮಡಚಿ ಹೋಗಬಹುದು, ಸುಕ್ಕಾಗಬಹುದು. ಈ ರೀತಿಯಾದ ಪತ್ರಿಕೆಯಲ್ಲಿ ಉತ್ತರಗಳನ್ನು ಬರೆದರೆ ಅಕ್ಷರ ಸ್ಪಷ್ಟವಾಗಿ ಕಾಣದು, ಅಲ್ಲದೆ ಅಕ್ಷರ ಚಿತ್ತಾಗಬಹುದು. ಪರೀಕ್ಷೆಯ ದಿನ, ಶಾಲೆಯ ಬಳಿ ಇರುವ ಅಂಗಡಿಯಲ್ಲಿ ಉತ್ತರ ಪತ್ರಿಕೆ ಖರೀದಿಸಲು ಮಕ್ಕಳು ಮುಗಿಬಿದ್ದರೆ, ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ತೊಂದರೆ ಆಗಬಹುದು. ಹೀಗಾಗಿ, ಉತ್ತರ ಪತ್ರಿಕೆ ಒದಗಿಸುವ ಜವಾಬ್ದಾರಿಯನ್ನು ಇಲಾಖೆಯೇ ಹೊತ್ತುಕೊಳ್ಳುವುದು ಒಳಿತು.

ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT