ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಅನ್ಯರ ಹೆಸರಲ್ಲಿ ಮತ ಕೇಳುವುದೇಕೆ?

ಲೋಕಸಭಾ ಚುನಾವಣೆಗಾಗಿ ಪ್ರಮುಖ ‍ಪಕ್ಷಗಳ ಅಭ್ಯರ್ಥಿಗಳು ನಡೆಸುತ್ತಿರುವ ಪ್ರಚಾರದ ವೈಖರಿಯು ನಾವು ಮತ ಚಲಾಯಿಸುತ್ತಿರುವುದು ಅಧ್ಯಕ್ಷೀಯ ಪದ್ಧತಿಯಡಿಯೋ ಅಥವಾ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳನ್ನು ಆರಿಸುವ ಸಲುವಾಗಿಯೋ ಎಂಬ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ಎಲ್ಲರಿಗೂ ತಿಳಿದಿರುವಂತೆ, ನಮ್ಮ ಸಂಸದೀಯ ಪದ್ಧತಿಯಲ್ಲಿ, ಬಹುಮತ ಪಡೆದ ಪಕ್ಷದ ಜನಪ್ರತಿನಿಧಿಗಳು ತಮ್ಮ ಮುಖಂಡನನ್ನು ಆರಿಸುತ್ತಾರೆ. ಅವರು ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಾರೆ. ಆ ಮುಖಂಡ ಆಡಳಿತ ನಡೆಸಲು, ಚುನಾಯಿತ ಸದಸ್ಯರಲ್ಲಿ ಕೆಲವರನ್ನು ಆರಿಸಿ ಮಂತ್ರಿಮಂಡಲವನ್ನು ರಚಿಸಿ, ಆಡಳಿತವನ್ನು ನಡೆಸುತ್ತಾರೆ. ಅಧ್ಯಕ್ಷೀಯ ಪದ್ಧತಿಯಂತೆ ಪ್ರಧಾನ
ಮಂತ್ರಿಗೆ ಯಾವುದೇ ವಿಶೇಷ ಅಧಿಕಾರ ಇರುವುದಿಲ್ಲ. ಆತ ತನ್ನ ಮಂತ್ರಿಮಂಡಲದ ನಿರ್ಣಯಕ್ಕೆ ಬಾಧ್ಯನಾಗಿರುತ್ತಾನೆ. ಆದ್ದರಿಂದ ಅಭ್ಯರ್ಥಿಗಳು ಯಾರದೋ ಹೆಸರಿನಲ್ಲಿ ಮತ ಕೇಳುವ ಬದಲು, ತನಗೆ ಮತ ನೀಡಿ ಆರಿಸಿದರೆ, ತಾನು ತನ್ನ ಕ್ಷೇತ್ರಕ್ಕೆ ಯಾವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸುವುದು ಸಮಂಜಸ.

-ಮಂಜುನಾಥ ಭಟ್‌, ಶಿರಸಿ

**

ರೈಲು ಪ್ರಯಾಣ: ಸಾಮಾನ್ಯರಿಗೂ ಸಿಗಲಿ ಸೌಲಭ್ಯ

‘ಆಳುವವರಿಗೆ ಬೇಡವೇ ಬಡವರ ಬೋಗಿ?’ ಎಂಬ ಲೇಖನದಲ್ಲಿ (ಪ್ರ.ವಾ., ಏ. 11) ತಿಳಿಸಿರುವಂತೆ, ಜನಸಾಮಾನ್ಯರು ಅತಿ ಹೆಚ್ಚಾಗಿ ಪ್ರಯಾಣಿಸುವಂತಹ ರೈಲುಗಳಲ್ಲೇ ಕಾಲಕ್ರಮೇಣ ಬೋಗಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ದುರದೃಷ್ಟಕರ. ಜೊತೆಗೆ ಈ ರೈಲುಗಳಲ್ಲಿ ಪ್ರಯಾಣಿಕರಿಗೆ ಸೂಕ್ತ ಮೂಲ ಸೌಲಭ್ಯಗಳು ಸಹ ಇಲ್ಲದೇ ಇರುವುದು ಎದ್ದು ಕಾಣುತ್ತದೆ. ಇತ್ತೀಚೆಗೆ ಸರ್ಕಾರ ಪರಿಚಯಿಸಿದ ವಂದೇಭಾರತ್ ಎಕ್ಸ್‌ಪ್ರೆಸ್‌ ರೈಲುಗಳಲ್ಲಿಯೂ ಜನಸಾಮಾನ್ಯರಿಗೆ ಸಾಮಾನ್ಯ ಬೋಗಿಗಳಿಲ್ಲ.

ದೂರದ ಊರುಗಳಿಂದ ಪಟ್ಟಣದೆಡೆಗೆ ಪ್ರಯಾಣಿಸುವಂತಹ ಜನರಿಗೆ ಸೂಕ್ತವಾದ ಸಾರಿಗೆ ವ್ಯವಸ್ಥೆ ಎಂದರೆ ರೈಲು. ಆದರೆ ರೈಲುಗಳಲ್ಲಿ ಇರುವ ಅವ್ಯವಸ್ಥೆ, ಮಹಿಳೆಯರಿಗೆ ಇಲ್ಲದ ಸುರಕ್ಷತೆಯನ್ನು ನೋಡಿದರೆ ನಿಜಕ್ಕೂ ಬೇಸರ ಆಗುತ್ತದೆ. ರೈಲ್ವೆ ಸಚಿವರು ಹಾಗೂ ಅಧಿಕಾರಿಗಳು ಒಮ್ಮೆ ಸಾಮಾನ್ಯ ಜನ ಪ್ರಯಾಣಿಸುವ ಬೋಗಿಯಲ್ಲಿ ಪ್ರಯಾಣಿಸಿದರೆ ಅವರಿಗೆ ವಸ್ತುಸ್ಥಿತಿಯ ಅರಿವಾಗುತ್ತದೆ.

-ಅಂಬಿಕಾ ಬಿ.ಟಿ., ಹಾಸನ

**

ಚುನಾವಣಾ ಸಿಬ್ಬಂದಿಯ ನಿರ್ಲಕ್ಷ್ಯ ಸಲ್ಲ

ಈ 30 ವರ್ಷಗಳಲ್ಲಿ ನಾನು ಬಹಳಷ್ಟು ಚುನಾವಣೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದ್ದೇನೆ. ಅದರ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಚುನಾವಣೆಯ ಹಿಂದಿನ ದಿನ ಎಲ್ಲ ಸಿಬ್ಬಂದಿಗೂ ಸಂಬಂಧಿಸಿದ ಚುನಾವಣಾ ಸಾಮಗ್ರಿಗಳನ್ನು ಸಕಾಲಕ್ಕೆ ವಿತರಿಸಿ, ನಿಯೋಜಿಸಿದ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಿಸಲಾಗುತ್ತದೆ.ಆದರೆ ಚುನಾವಣೆಗೆ ನಿಗದಿಯಾಗಿರುವ ಮತಗಟ್ಟೆಗಳ ಸ್ವಚ್ಛತೆ ಬಗ್ಗೆ ಈಗಲೂ ನಿರ್ಲಕ್ಷ್ಯ ಕಂಡುಬರುತ್ತದೆ. ರಾತ್ರಿ ವೇಳೆ ಚುನಾವಣಾ ಸಿಬ್ಬಂದಿ ಅಲ್ಲೇ ಮಲಗಬೇಕಾಗುತ್ತದೆ. ಅನೇಕ ಕಡೆ ಇಲಿ, ಹೆಗ್ಗಣ, ಹಾವು, ಸೊಳ್ಳೆಗಳ ಕಾಟದ ಭಯದಲ್ಲೇ ರಾತ್ರಿಯನ್ನು ದೂಡಬೇಕಾಗುತ್ತದೆ. ಮರುದಿನ ಬೆಳಿಗ್ಗೆ 5ಕ್ಕೆ ಚುನಾವಣಾ ಕರ್ತವ್ಯಕ್ಕೆ ಅಣಿಯಾದರೆ, ಚುನಾವಣಾ ಸಾಮಗ್ರಿಗಳನ್ನು ಹಿಂದಿರುಗಿಸುವ ವೇಳೆಗೆ ಕನಿಷ್ಠವೆಂದರೂ ರಾತ್ರಿ 8 ಆಗುತ್ತದೆ. ಒಮ್ಮೊಮ್ಮೆ ರಾತ್ರಿ 11 ಕಳೆದರೂ ಈ ಕಾರ್ಯ ಮುಗಿದಿರುವುದಿಲ್ಲ. ಇಷ್ಟೆಲ್ಲಾ ಪರಿಶ್ರಮವಹಿಸಿ ಕರ್ತವ್ಯ ನಿರ್ವಹಿಸಿದ್ದರೂ ಚುನಾವಣಾ
ಸಾಮಗ್ರಿಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಗೊಂದಲ ಉಂಟು ಮಾಡುವುದು ಸಾಮಾನ್ಯವಾಗಿದೆ.

ನಿಗದಿತ ನಮೂನೆಯಂತೆ ಕ್ರಮಬದ್ಧವಾಗಿ ಎಲ್ಲ ಲಕೋಟೆಗಳನ್ನು ಸಿದ್ಧಪಡಿಸಿಕೊಂಡು ಹೋದರೂ ನಮೂನೆಯಲ್ಲಿ ಇಲ್ಲದೇ ಇರುವ ಇನ್ಯಾವುದೋ ಲಕೋಟೆ ಬೇಕೆಂದು ಹೇಳಿ, ದಣಿದ ಸಿಬ್ಬಂದಿಯನ್ನು ಗೋಳುಹೊಯ್ದುಕೊಳ್ಳಲಾಗುತ್ತದೆ. ಅಧಿಕಾರಿಗಳು ಈ ಬಾರಿಯಾದರೂ ನಿರ್ದಿಷ್ಟ ನಮೂನೆಯನ್ನು ಚುನಾವಣಾ ಪೂರ್ವದಲ್ಲಿಯೇ ಅಂತಿಮಗೊಳಿಸಿ, ಅದರಂತೆಯೇ ಚುನಾವಣಾ ಸಾಮಗ್ರಿಗಳನ್ನು ಸ್ವೀಕರಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು. ಮತಗಟ್ಟೆ ಗಳನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಬೇಕು. ಸುಮಾರು 15 ಗಂಟೆಗಳಿಗೂ ಹೆಚ್ಚು ಕಾಲ ದಣಿದು ಬಂದ ಸಿಬ್ಬಂದಿಯೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಚುನಾವಣಾ ಸಾಮಗ್ರಿಗಳನ್ನು ಸ್ವೀಕರಿಸುವವರಿಗೆ ತಿಳಿಹೇಳಬೇಕು. ಸಾಧ್ಯವಾದರೆ ಶುದ್ಧ ಕುಡಿಯುವ ನೀರು ಒದಗಿಸಲಿ. ನೂರಾರು ಕಿಲೊಮೀಟರ್‌ ದೂರದಿಂದ ಬರುವವರು ಊಟ ಸರಿ ಇಲ್ಲವೆಂದು ದೂರುತ್ತಾ ಜಗಳಕ್ಕೆ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗದಿರಲಿ.

-ಪುಟ್ಟದಾಸು, ಮಂಡ್ಯ

**

ಸ್ವಯಂಚಾಲಿತ ಧ್ವನಿ ನಿಯಂತ್ರಕ ಇರಲಿ

ಕೋಲಾರ ತಾಲ್ಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ಗ್ರಾಮದ ದೇವಾಲಯದಲ್ಲಿ ಹಾಕಿದ್ದ ಧ್ವನಿ
ವರ್ಧಕದ ಶಬ್ದವನ್ನು, ಓದಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತಗ್ಗಿಸುವಂತೆ ಮನವಿ ಮಾಡಿದ್ದಕ್ಕಾಗಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಅವರ ಪುತ್ರನ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿರುವುದು ದುರದೃಷ್ಟಕರ. ಬೇರೆ ರಾಷ್ಟ್ರಗಳಲ್ಲಿ ಇರುವಂತೆ ನಮ್ಮ ದೇಶದಲ್ಲಿ ಈ ರೀತಿ ಶಬ್ದಮಾಲಿನ್ಯ ಉಂಟು ಮಾಡಿ ಇತರರ ಖಾಸಗಿತನಕ್ಕೆ ಧಕ್ಕೆ ತರುವುದನ್ನು ನಿಯಂತ್ರಿಸುವ ಕಠಿಣ ಕಾನೂನು ಇಲ್ಲದಿರುವುದು ನಾನಾ ಬಗೆಯ ತೊಡಕುಗಳಿಗೆ ಕಾರಣವಾಗಿದೆ. ಡಿ.ಜೆ ಹಾಗೂ ಪಟಾಕಿಗಳ ಅಬ್ಬರವು ಪ್ರಾಣಿ– ಪಕ್ಷಿಗಳು, ವೃದ್ಧರು ಹಾಗೂ ಅಧ್ಯಯನನಿರತರ ಮೇಲೆ ಗಂಭೀರ ಪರಿಣಾಮ ಬೀರುವುದು ಸ್ಪಷ್ಟ. ಸರ್ಕಾರ ಈ ಬಗೆಗೆ ಕಠಿಣ ಕ್ರಮ ಕೈಗೊಳ್ಳಬೇಕು.

ಸರ್ಕಾರಿ ಬಸ್ಸುಗಳಲ್ಲಿ ವೇಗನಿಯಂತ್ರಕ ಅಳವಡಿಸಿರುವ ಹಾಗೆ ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಬಳಸುವ ಧ್ವನಿ ವರ್ಧಕಗಳಲ್ಲೂ ಜನಜೀವನಕ್ಕೆ ತೊಂದರೆಯಾಗದಷ್ಟು ಶಬ್ದ ಮಾತ್ರ ಪ್ರಸಾರವಾಗುವ ಸ್ವಯಂಚಾಲಿತ ಧ್ವನಿನಿಯಂತ್ರಕ ಹೊಂದಿರುವ ಧ್ವನಿವರ್ಧಕಗಳನ್ನು ಬಳಸುವಂತೆ ಕಾನೂನು ರೂಪಿಸಬೇಕು. ನ್ಯಾಯಾಲಯ ಈ ದಿಸೆಯಲ್ಲಿ ಸೂಕ್ತ ನಿರ್ದೇಶನ ನೀಡಲಿ.

-ಭೀಮಾನಂದ ಮೌರ್ಯ, ಮೈಸೂರು

**

ಸುಂದರ ಚಂದಿರ

ಯುಗಾದಿಗೂ ರಂಜಾನ್‌ಗೂ
ಸುಂದರ ಚಂದಿರ
ಬೇಕು...
ಭಾವೈಕ್ಯಕ್ಕೂ
ಬಂಧುತ್ವಕ್ಕೂ
ಸುಮಧುರ ಭಾವನೆಗಳು
ಬೇಕು...

-ಪಾಲಾಕ್ಷಪ್ಪ ಎಸ್.ಎನ್., ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT