ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಹೆದ್ದಾರಿಗೆ ಬೇಕು ಸಾಲುಮರ

ದೇಶದಾದ್ಯಂತ ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಮೂಲಕ ಅಭಿವೃದ್ಧಿ ಪಥದಲ್ಲಿ
ಮುನ್ನಡೆಯುತ್ತಿರುವುದು ಸಂತಸದ ವಿಚಾರ. ಆದರೆ ಈ ಕಾಮಗಾರಿಗಳಿಂದಾಗಿ ಮರಗಳ ಮಾರಣಹೋಮ ನಡೆಯುತ್ತಿದೆ. ಇದನ್ನುತಪ್ಪಿಸಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಹೆದ್ದಾರಿಯ ಸರ್ವೆ ಕಾರ್ಯ ಮಾಡುವಾಗಲೇ ಸಾಲುಮರಗಳನ್ನು ನೆಡಲು ಬೇಕಾದ ಜಾಗವನ್ನು ಸಹ ಸೇರಿಸಿ
ಕೊಳ್ಳಬೇಕು. ಸಾಲುಮರಗಳಾಗಿ ಬೆಳೆಯಬಲ್ಲ ಸಸ್ಯಗಳನ್ನು ಮೊದಲಿಗೇ ಅಲ್ಲಿ ನೆಟ್ಟು ಪೋಷಿಸಬೇಕು. ಅಂದರೆ, ಹಲಸು, ಮಾವು, ದೂಪದಂತಹ ನಿತ್ಯಹರಿದ್ವರ್ಣದ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗ ಆ ಸಸ್ಯಗಳ ಸಂರಕ್ಷಣೆಯನ್ನು ಹೆದ್ದಾರಿ ಕೆಲಸ ನಿರ್ವಹಿಸುವ ಕಂಪನಿಯೇ ಮಾಡಬೇಕು. ಹೀಗೆ ಹೆದ್ದಾರಿ ಯೋಜನೆಗಳಲ್ಲಿ ಸೂಕ್ತ ಬದಲಾವಣೆ ತಂದು ಸಸ್ಯ ಸಂಪತ್ತನ್ನು ಹೆಚ್ಚಿಸಬೇಕು.

ಇಂತಹ ಯೋಜನೆಯು ನಮ್ಮ ಮುಂದಿನ ಪೀಳಿಗೆಯೂ ಸೇರಿದಂತೆ ಹಲವಾರು ಪಶುಪಕ್ಷಿಗಳಿಗೆ ಆಶ್ರಯ ತಾಣವಾಗಿ ಹೆದ್ದಾರಿಗಳ ಸೊಬಗನ್ನು ಸದಾ ನೂರ್ಮಡಿಗೊಳಿಸುತ್ತದೆ.

–ಡಿ.ಜಿ.ಮಂಜುನಾಥ್, ತೀರ್ಥಹಳ್ಳಿ 

**

ನೀವು ಯಾರಿಗೆ ವೋಟ್ ಹಾಕ್ತೀರಿ?!

ಭಾರತದಲ್ಲಿ ಗುಪ್ತ ಮತದಾನದ ಪದ್ಧತಿ ಇದೆ. ಯಾವ ಮತದಾರ ಯಾರಿಗೆ ಮತ ನೀಡಿದ್ದಾನೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ಆದರೆ ನಮ್ಮ ಬಹುತೇಕ ಸುದ್ದಿವಾಹಿನಿಗಳಿಗೆ ಈ ವಿಚಾರ ತಿಳಿದಂತಿಲ್ಲ. ‘ನೀವು ಯಾರಿಗೆ ವೋಟ್ ಹಾಕ್ತೀರಿ?’ ‘ನಿಮ್ಮ ವೋಟ್ ಯಾವ ಪಕ್ಷಕ್ಕೆ?’ ಎಂಬಂಥ ಪ್ರಶ್ನೆಗಳನ್ನು ಕೇಳುತ್ತಾ ಸುದ್ದಿವಾಹಿನಿಗಳು ಮತದಾರರ ಬಾಯಿಗೆ ಮೈಕ್ ಹಿಡಿಯುತ್ತವೆ. ಆತ ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದಾನೆ ಎಂಬ ಮಾಹಿತಿ ಜಗಜ್ಜಾಹೀರಾದಾಗ, ಊರಿನಲ್ಲಿ ಇತರ ಪಕ್ಷದವರು ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಕತ್ತಿ ಮಸೆದರೆ ಆತನನ್ನು ಕಾಪಾಡುವವರಾರು? ಇಂತಹ ವಿಡಿಯೊ ತುಣುಕುಗಳು ಹೊಡೆದಾಟ, ಬಡಿದಾಟಕ್ಕೂ ಕಾರಣವಾಗಬಹುದು.

–ಪಿ.ಜೆ.ರಾಘವೇಂದ್ರ, ಮೈಸೂರು

**

ಶಬ್ದಮಾಲಿನ್ಯ: ಗಂಭೀರವಾಗಿ ಪರಿಗಣಿಸಿ

ದೇವಸ್ಥಾನದ ಧ್ವನಿವರ್ಧಕದ ಸದ್ದು ಕಡಿಮೆ ಮಾಡುವಂತೆ ಹೇಳಿದ್ದಕ್ಕೆ ದಲಿತಪರ ಹೋರಾಟಗಾರ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ಹಲ್ಲೆ ಮಾಡಿದ ವರದಿ (ಪ್ರ.ವಾ., ಏ. 12) ಓದಿ ಮನಸ್ಸಿಗೆ ತುಂಬಾ ನೋವಾಯಿತು. ರೈತರು ಇತ್ತೀಚೆಗೆ ಟ್ರ್ಯಾಕ್ಟರ್‌ಗಳಲ್ಲಿ ಧ್ವನಿವರ್ಧಕ ಅಳವಡಿಸಿ ಊರಿನ ಬೀದಿಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ ಸಂಚರಿಸುವುದು ಹೆಚ್ಚಾಗುತ್ತಿದೆ. ಇದು ಸಹ ಶಬ್ದಮಾಲಿನ್ಯವೇ ಅಲ್ಲವೆ? ಅಷ್ಟೇ ಅಲ್ಲದೆ, ಹಲವಾರು ವ್ಯಾಪಾರಿಗಳು ಸಹ ಧ್ವನಿವರ್ಧಕ ಅಳವಡಿಸಿದ ವಾಹನಗಳ ಮೂಲಕ ರಸ್ತೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ, ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವುದೇ ಕಷ್ಟವಾಗುತ್ತಿದೆ. ಆದರೆ ಈ ಕಿರಿಕಿರಿಯನ್ನು ನಿಯಂತ್ರಣ ಮಾಡುವ ಕಾಯ್ದೆ ಕಾನೂನುಗಳೇ ನಮ್ಮಲ್ಲಿ ಇಲ್ಲದಂತಾಗಿದೆ.

ಶಬ್ದಮಾಲಿನ್ಯದಿಂದ ವಿದ್ಯಾರ್ಥಿಗಳ ಓದಿಗೆ, ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆ ಆಗುತ್ತದೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಾಹನಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸುವಂಥ ಕಾನೂನು ರೂಪಿಸಿ ರಸ್ತೆಯ ಸುರಕ್ಷತೆಯನ್ನು ಕಾಪಾಡಬೇಕು.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

**

ಸ್ವಾಮೀಜಿಗಳೇಕೆ ಹೀಗೆ ಮಾಡಬಾರದು...?

ಸಾಮೂಹಿಕ ವಿವಾಹ ಸಮಾರಂಭವೊಂದರಲ್ಲಿ ಆಶೀರ್ವಚನ ನೀಡಿರುವ ‌ವಿಜಯಪುರ ತಾಲ್ಲೂಕಿನ ಶಿರಶ್ಯಾಡದ ಅಭಿನವ ಮುರುಗೇಂದ್ರ ಶಿವಾಚಾರ್ಯ ಸ್ವಾಮೀಜಿ, ದೇಶಕ್ಕೊಬ್ಬ, ಪರಿವಾರಕ್ಕೊಬ್ಬ, ಧರ್ಮಕ್ಕೊಬ್ಬ ಮತ್ತು ಸಮಾಜಕ್ಕೊಬ್ಬ ಹೀಗೆ ಪ್ರತಿ ಮಾತೆಯೂ ನಾಲ್ವರು ಮಕ್ಕಳಿಗೆ ಜನ್ಮ ನೀಡಬೇಕೆಂದು ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಏ. 12). ಹಸಿವು, ಬಡತನ, ಅಪೌಷ್ಟಿಕತೆ, ನಿರುದ್ಯೋಗ ತುಂಬಿರುವ ಈ ಸಮಾಜಕ್ಕೆ ಸ್ವಾಮೀಜಿ ಈ ರೀತಿಯಲ್ಲಿ ಆಶೀರ್ವಾದ ಮಾಡುವುದು ಎಷ್ಟು ಸರಿ? ಇದಕ್ಕೆ ಬದಲಾಗಿ, ಇಂತಹ ಅಭಿಪ್ರಾಯವನ್ನು ಹೊಂದಿರುವ ದೇಶದ ಎಲ್ಲ ಸ್ವಾಮಿಗಳೂ ಒಟ್ಟುಗೂಡಿ, ಒಂದು ಕಠಿಣ ತೀರ್ಮಾನಕ್ಕೆ ಬಂದು, ಮಠ ಬಿಟ್ಟು ಸಂಸಾರಸ್ಥರಾಗುವ ಮೂಲಕ ದೇಶಕ್ಕಾಗಿ ಮಕ್ಕಳನ್ನು ಹಡೆಯುವ ಕಾರ್ಯದಲ್ಲಿ ಏಕೆ ತೊಡಗಬಾರದು? 

–ತಾ.ಸಿ.ತಿಮ್ಮಯ್ಯ, ಬೆಂಗಳೂರು

**

ಮತ ಚಲಾವಣೆಯಲ್ಲಿ ವಿವೇಚನೆ ಇರಲಿ

ಈ ಬಾರಿಯ ಲೋಕಸಭಾ ಚುನಾವಣೆಯು ಎಲ್ಲ ಚುನಾವಣೆಗಳಂತಲ್ಲ. ಇದು ಅತ್ಯಂತ ಬಿಕ್ಕಟ್ಟಿನ ಕಾಲದಲ್ಲಿ ನಡೆಯುತ್ತಿರುವ ಚುನಾವಣೆ. ಹಾಗೆಯೇ ಕೆಲವು ಮುಖ್ಯ ಸಂಗತಿಗಳನ್ನು ನಿರ್ಧರಿಸುವ ಚುನಾವಣೆಯೂ ಹೌದು. ಆದ್ದರಿಂದ ವಿವೇಚನೆಯಿಂದ ನಮ್ಮ ವೋಟನ್ನು ಚಲಾಯಿಸಬೇಕಾಗಿದೆ. ಸ್ವಾತಂತ್ರ್ಯ ಮತ್ತು ಸರ್ವಾಧಿಕಾರದ ನಡುವೆ ನಡೆಯುತ್ತಿರುವ, ಹಾಗೆಯೇ ಜಾತಿ, ಮತ, ಧರ್ಮನಿರಪೇಕ್ಷ ಮತ್ತು ಕೋಮುವಾದದ ನಡುವೆ ನಡೆಯುತ್ತಿರುವ ಚುನಾವಣೆಯೂ ಹೌದು. ನಮ್ಮ–ನಿಮ್ಮೆಲ್ಲರ ವೋಟು ಈ ದೇಶದ ಗತಿಯನ್ನು ಬದಲಿಸಬಲ್ಲದು. ನಮ್ಮ ಕಣ್ಮುಂದೆ ಇರುವ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸದೇ ಹೋದರೆ, ಕೋಮುಶಕ್ತಿಗಳು ವಿಜೃಂಭಿಸಿ ದೇಶ ದಿಕ್ಕು ತಪ್ಪುವ, ಬಿ.ಆರ್‌.ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನವು ಗಾಳಿಗೆ ತೂರಿಹೋಗುವ ಅಪಾಯ ಇದ್ದೇ ಇದೆ. ಆದ್ದರಿಂದ ನಾವೆಲ್ಲ ಗಂಭೀರವಾಗಿ ಚಿಂತಿಸಿ ಮತದಾನ ಮಾಡಬೇಕಾದದ್ದು ಅತ್ಯಗತ್ಯ. ವೋಟು ನಮ್ಮ ನಿಮ್ಮೆಲ್ಲರ ಪ್ರಬಲ ಆಯುಧ.

–ನಿವೃತ್ತ ಮೇಜರ್‌ ಜನರಲ್‌ ಸುಧೀರ್‌ ಒಂಬತ್ಕೆರೆ, ನ.ರತ್ನ, ಪ್ರೊ. ಬಿ.ಎನ್‌.ಶ್ರೀರಾಮ, ದೇವನೂರ ಮಹಾದೇವ, ಹಿ.ಶಿ.ರಾಮಚಂದ್ರೇಗೌಡ, ಚ.ಸರ್ವಮಂಗಳ, ಜಿ.ಪಿ.ಬಸವರಾಜು, ಓ.ಎಲ್‌.ನಾಗಭೂಷಣಸ್ವಾಮಿ, ಅರವಿಂದ ಮಾಲಗತ್ತಿ, ಸಬಿಹಾ ಭೂಮಿಗೌಡ, ಸುಶೀ ಬಸವಲಿಂಗಯ್ಯ, ಪಂಡಿತಾರಾಧ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT