ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಗರ್ಭಪಾತಕ್ಕೆ ತಡೆ: ಮಾನವೀಯತೆಗೆ ಗೆಲುವು

ಗಂಡ ತೀರಿಕೊಂಡಿರುವ 32 ವಾರಗಳ ಗರ್ಭಿಣಿಗೆ ವೈದ್ಯಕೀಯ ಗರ್ಭಪಾತದ ಮೂಲಕ ಭ್ರೂಣವನ್ನು ತೆಗೆಸಲು ಸುಪ್ರೀಂ ಕೋರ್ಟ್‌ ಅವಕಾಶ ನಿರಾಕರಿಸಿರುವುದು (ಪ್ರ.ವಾ., ಫೆ. 1) ಸಂತಸದ ವಿಷಯ. ಮಕ್ಕಳಾಗಿಲ್ಲವೆಂದು ಅದೆಷ್ಟೋ ಗಂಡ– ಹೆಂಡತಿ ಗುಡಿ ಗುಂಡಾರ, ಆಸ್ಪತ್ರೆಗಳನ್ನು ಸುತ್ತುತ್ತಾರೆ, ಹರಕೆಗಳನ್ನು ಹೊತ್ತುಕೊಂಡಿರುತ್ತಾರೆ. ಮಗುವು ಗಂಡ, ಹೆಂಡತಿಯ ಪ್ರೀತಿಯ ಸಂಕೇತ. ಅದು ನಮ್ಮ ಅನೇಕ ದುಃಖಗಳನ್ನು ದೂರ ಮಾಡುವ ಒಂದು ಜೀವೋತ್ಪತ್ತಿ.

ತನ್ನ ಗಂಡನ ಪ್ರೀತಿಯ ಕಾಣಿಕೆ ಎಂದು ಬಹಳಷ್ಟು ವಿಧವೆಯರು ಮಕ್ಕಳನ್ನು ಸಾಕಿ ಸಲಹಿ ವಿದ್ಯಾವಂತರನ್ನಾಗಿ ಮಾಡುತ್ತಾರೆ. ಈ ಪ್ರಕರಣದಲ್ಲಿ, ಭ್ರೂಣಕ್ಕೂ ಬದುಕುವ ಹಕ್ಕಿದೆ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ ಮಾನವೀಯತೆ ಮೆರೆದಿದೆ. ಭ್ರೂಣಕ್ಕೆ 29 ವಾರಗಳಾಗಿದ್ದಾಗ ಗರ್ಭಪಾತಕ್ಕೆ ಅನುಮತಿ ನೀಡಿದ್ದ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರದ ನಡೆ ಕೂಡ ಮೆಚ್ಚುವಂತಹದ್ದು.

-ರಾಜೇಂದ್ರಕುಮಾರ್ ಕೆ. ಮುದ್ನಾಳ್, ಯಾದಗಿರಿ 

**

ಸಮ್ಮೇಳನಕ್ಕೆ ಅಡ್ಡಿಯಾಗದಿರಲಿ ಮುಂಗಾರು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. ಆದರೆ ಜೂನ್ ತಿಂಗಳಲ್ಲಿ ಅದನ್ನು ಆಯೋಜಿಸಿರುವುದು ಸೂಕ್ತವೇ? ಯಾಕೆಂದರೆ, ಜೂನ್‌ನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅಷ್ಟೊಂದು ದೊಡ್ಡ ಸಮ್ಮೇಳನ ನಡೆದರೆ, ಮಳೆಯಿಂದ ಕಾರ್ಯಕ್ರಮಕ್ಕೆ ತೊಡಕಾಗಬಹುದು. ಆಗ ಸಾಹಿತ್ಯಾಸಕ್ತರಿಗೆ ಸಹಜವಾಗಿಯೇ ನಿರಾಸೆ ಆಗುತ್ತದೆ. ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.

-ಪಿ.ನಮ್ರತಾ, ಗೆಜ್ಜಗಳ್ಳಿ, ಮೈಸೂರು

**

ಸಿದ್ಧಾಂತಕ್ಕೆ ತಿಲಾಂಜಲಿ, ಅವಕಾಶವಾದಿತನ

ಪ್ರಮುಖ ರಾಜಕೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಹೆದರಿಸಿ ಅಥವಾ ಆಮಿಷವೊಡ್ಡಿ  ಜೊತೆಗೆ ಸೇರಿಸಿಕೊಳ್ಳುತ್ತಿರುವ ಸಂಗತಿಯು ಈ ಪ್ರಮುಖ ಪಕ್ಷಗಳಲ್ಲಿ ಕೊಂಚವಾದರೂ ಉಳಿದುಕೊಂಡಿದ್ದ ಸಿದ್ಧಾಂತಗಳ ಸಾವು ಎನ್ನಬಹುದು. ಶೋಷಿತರ ಹೆಸರಿನಲ್ಲಿ ಕಟ್ಟಿದ ಪಕ್ಷವಾಗಲೀ ಪ್ರಬಲ ಜಾತಿ, ಸಮಾಜವಾದಿ ಸಿದ್ಧಾಂತಗಳ ಹಿನ್ನೆಲೆಯ ಪಕ್ಷಗಳಾಗಲೀ ಎಲ್ಲವೂ ತಮ್ಮ ಮೂಲ ಸಿದ್ಧಾಂತ ಮರೆತು, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ. ಬಿಜೆಪಿಯು ಈಗಾಗಲೇ 400 ಲೋಕಸಭಾ ಸ್ಥಾನಗಳನ್ನು ಗೆದ್ದೇಬಿಟ್ಟಿದೆ ಎಂಬಂತೆ ವಿಶ್ಲೇಷಿಸಲಾಗುತ್ತಿದೆ. ಹಾಗಿದ್ದರೆ, ಚುನಾವಣೆಯ ಅಗತ್ಯವಾದರೂ ಏನು? ಮತದಾರರ ಹಕ್ಕಿಗೆ ಬೆಲೆಯೇನು? ಮತದಾರರ ತೀರ್ಮಾನ ಈಗಾಗಲೇ ಅಂತಿಮವಾಗಿದ್ದರೆ, ಅವರು ಬರೀ ಪಗಡೆಯಾಟದ ದಾಳಗಳೇ? ಚುನಾವಣೆ ಎಂಬುದು ಪೂರ್ವನಿರ್ಧರಿತ ವಿಡಿಯೊ ಗೇಮ್ ಆಗಿಬಿಟ್ಟಿದೆಯೇ?

ಒಂದೆಡೆ, ರಾಹುಲ್ ಗಾಂಧಿ ‍ಯಾತ್ರೆಯಲ್ಲಿ ನಿರತರಾಗಿದ್ದರೆ, ಇನ್ನೊಂದೆಡೆ, ವಿರೋಧಪಕ್ಷಗಳ ಅಸ್ತಿತ್ವವನ್ನೇ
ನಿರ್ನಾಮ ಮಾಡಿಬಿಡಬೇಕೆನ್ನುವ ತವಕ ಬಿಜೆಪಿಗೆ ಇದ್ದಂತಿದೆ. ಊಹಿಸಲು ಅಸಾಧ್ಯವಾದ ಶಿವಸೇನಾ ನಡೆ, ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಒಂದು ಕಾಲದಲ್ಲಿ ಬಿಂಬಿತವಾಗಿದ್ದ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರ ಅವಕಾಶವಾದಿತನ ಇಂತಹ ಬೆಳವಣಿಗೆಗೆ ಕೆಲವು ನಿದರ್ಶನಗಳಷ್ಟೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬ ಸತ್ಯವನ್ನು, ನೆಮ್ಮದಿಯ ನಾಳೆಗಳನ್ನು ನೋಡಬೇಕೆನ್ನುವ ಪ್ರತಿ ವ್ಯಕ್ತಿಯೂ ಮನಗಾಣಬೇಕಿದೆ. ರಾಜಕೀಯದಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ. ಪ್ರಜೆಗಳೇ ಮುಖ್ಯ. ಅಮುಖ್ಯರನ್ನು
ನಿರ್ಧರಿಸುವವರೂ ಅವರೇ.

-ಶಾಂತರಾಜು ಎಸ್., ಬೆಂಗಳೂರು

**

ಪ್ರತ್ಯೇಕತೆಯ ಕೂಗು: ಮೊಳಕೆಯಲ್ಲೇ ಚಿವುಟಿ

ಇತ್ತೀಚಿನವರೆಗೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್‌ ಮತ್ತು ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿದ್ದ ಪ್ರತ್ಯೇಕತೆಯ ಕೂಗು  ಕರ್ನಾಟಕದಲ್ಲೂ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ ಮತ್ತು ಇದು ತೀರಾ ಆತಂಕಕಾರಿ ಬೆಳವಣಿಗೆ ಎನ್ನಬಹುದು. ಇದರಲ್ಲಿನ ವಿಶೇಷವೆಂದರೆ, ಇಂತಹ ಕೂಗು ಹಿಂದಿಯೇತರ ಮತ್ತು ಡಬಲ್‌ ಎಂಜಿನ್‌ ಸರ್ಕಾರಗಳು ಇಲ್ಲದ ರಾಜ್ಯಗಳಿಂದ ಕೇಳಿಸುತ್ತಿದೆ. ಈ ಬಗೆಯ ಕೂಗು ಕೇಳಿಬರದಂತೆ ಕೇಂದ್ರ ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು.

ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎಂಬುದು ಒಕ್ಕೂಟ ವ್ಯವಸ್ಥೆಯಲ್ಲಿ ಕಾಯಾ ವಾಚಾ ಮನಸಾ
ಅನುಷ್ಠಾನಗೊಂಡರೆ ಇಂತಹ ಬೇಡಿಕೆಗಳಿಗೆ ಅವಕಾಶ ಇರುವುದಿಲ್ಲ ಎನ್ನುವ  ಪ್ರಜ್ಞಾವಂತರ ಅಭಿಪ್ರಾಯದಲ್ಲಿ ಅರ್ಥವಿದೆ. ಕೇಂದ್ರ ಸರ್ಕಾರವು ಕರ್ನಾಟಕದ ವಿಷಯದಲ್ಲಿ ಪಕ್ಷಪಾತಿಯಾಗಿದೆ ಎನ್ನುವ ಆರೋಪ ಮತ್ತು ಟೀಕೆ ಕೆಲವು ತಿಂಗಳುಗಳಿಂದ ಕೇಳಿಬರುತ್ತಿದೆ. ಸರ್ಕಾರ ಆದ್ಯತೆಯ ಮೇರೆಗೆ ಇತ್ತ ಗಮನಹರಿಸಬೇಕು ಮತ್ತು ಇಂತಹ ಅಪಸ್ವರಗಳಿಗೆ ಅವಕಾಶ ಇಲ್ಲದಂತೆ ಮಾಡಬೇಕು.

-ರಮಾನಂದ ಶರ್ಮಾ, ಬೆಂಗಳೂರು 

**

ಪರೀಕ್ಷಾ ಕೇಂದ್ರ: ಆಯ್ಕೆ ಅವಕಾಶ ಬೇಡ

ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ, ಅಭ್ಯರ್ಥಿಗಳಿಗೆ ಅನುಕೂಲಕರವಾದ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೇ ನೀಡಿರಲಿಲ್ಲ ಎಂದು ಎಚ್‌.ಕೆ.ಶರತ್‌ ಬೇಸರ ವ್ಯಕ್ತಪಡಿಸಿದ್ದಾರೆ (ಸಂಗತ, ಫೆ. 2). ಆದರೆ ಭ್ರಷ್ಟಾಚಾರದ ಮೂಲ ಇರುವುದೇ ಪರೀಕ್ಷಾ ಕೇಂದ್ರದ ಆಯ್ಕೆಯಲ್ಲಿ. ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಸ್ಥಳೀಯರೇ ಅಭ್ಯರ್ಥಿಗಳಾಗಿದ್ದರಿಂದ ಇಡೀ ಕೇಂದ್ರವೇ ಅಭ್ಯರ್ಥಿಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸಿದ ಉದಾಹರಣೆಗಳು ಬಹಳಷ್ಟಿವೆ. ಆದ್ದರಿಂದ, ಅಭ್ಯರ್ಥಿಗಳಿಗೆ ಸ್ಥಳೀಯವಾಗಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ‌ ನೀಡದಿರುವುದು ಸೂಕ್ತವೇ ಅಗಿದೆ. ಇನ್ನು ಪರೀಕ್ಷಾರ್ಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕಾದುದು ಸರ್ಕಾರದ ಕರ್ತವ್ಯ.

-ಗೋವಿಂದ ಎಸ್. ಭಟ್ಟ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT