ಗ್ರಾಮಲೆಕ್ಕಿಗರಿಗೂ ಬರಲಿ ಬಯೊಮೆಟ್ರಿಕ್ ವ್ಯವಸ್ಥೆ
‘ಗ್ರಾಮಲೆಕ್ಕಿಗರು ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವಂತಾಗಬೇಕು. ಇದಕ್ಕಾಗಿ ಗ್ರಾಮ ಪಂಚಾಯಿತಿಯಲ್ಲೇ ಒಂದು ಕೊಠಡಿ ಇರುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು (ಪ್ರ.ವಾ., ಸೆ. 13) ಸ್ವಾಗತಾರ್ಹ. ಅವರು ಹೇಳಿದಂತೆ, ನಿಗದಿತ ಕಚೇರಿ ಇಲ್ಲದೇ ಇರುವುದು ಗ್ರಾಮಲೆಕ್ಕಿಗರಿಗೆ ವರವಾಗಿದೆ. ಇದರಿಂದ ಅವರು ಜನರಿಗೆ ಸಕಾಲದಲ್ಲಿ ಲಭ್ಯ ಆಗುವುದಿಲ್ಲ. ಕೆಲವು ಸಲ ಅವರನ್ನು ಹುಡುಕುವುದಕ್ಕೆ ಜನ ಊರೂರು ಅಲೆಯಬೇಕಿದೆ. ಮೊಬೈಲ್ ಕರೆಗೂ ಅವರು ಕಿವಿಗೊಡರು. ಕೇಳಿದರೆ, ತಹಶೀಲ್ದಾರ್ ಕಚೇರಿಯಲ್ಲಿ ಸಭೆಯಿದೆ, ನಾಡಕಚೇರಿಯಲ್ಲಿ
ಮೀಟಿಂಗ್, ಸ್ಥಳ ಪರೀಕ್ಷೆ, ಜನಸ್ಪಂದನ ಸಭೆ, ಚುನಾವಣೆ ವರದಿ ಹೀಗೆ ಹತ್ತಾರು ಸಬೂಬು ಹೇಳಿಕೊಂಡು ಒಟ್ಟಾರೆ ಜನರಿಂದ ದೂರವೇ ಉಳಿಯುತ್ತಾರೆ. ಮತ್ತೆ ಕೆಲವು ಗ್ರಾಮಲೆಕ್ಕಿಗರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿದರಂತೂ ಅಂತಹವರು ಎರಡೂ ಕಡೆಯು ಜನರಿಗೆ ಸಿಗುವುದೇ ಇಲ್ಲ.
ನಾನು ಕಂಡ ಹಾಗೆ ಕೆಲವು ಗ್ರಾಮಲೆಕ್ಕಿಗರು ತಾಲ್ಲೂಕು ಕೇಂದ್ರಗಳಲ್ಲಿ ಒಟ್ಟಿಗೆ ಸೇರಿ ಒಂದು ಬಾಡಿಗೆ ಕೊಠಡಿಯನ್ನು ತಮ್ಮ ಕಚೇರಿಯಂತೆ ಮಾಡಿಕೊಂಡಿದ್ದಾರೆ. ಹಾಗಾಗಿ, ಹತ್ತಾರು ಕಿ.ಮೀ. ದೂರದಲ್ಲಿರುವ ಜನ ಅಂತಹ ಖಾಸಗಿ ಕಚೇರಿಗೆ ತಡಕಾಡಿಕೊಂಡು ಬಂದು ಅವರನ್ನು ಭೇಟಿ ಮಾಡಬೇಕಾದ ಅನಿವಾರ್ಯ ಇದೆ. ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಈ ದಿಸೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಲೆಕ್ಕಿಗರಿಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಒಂದು ಕೊಠಡಿ ನಿಗದಿಗೊಳಿಸುವುದರ ಜೊತೆಗೆ ಬಯೊಮೆಟ್ರಿಕ್ ವ್ಯವಸ್ಥೆಯನ್ನೂ ಮಾಡಬೇಕು. ಆ ಮೂಲಕ ಜನರ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
-ಎಂ.ಜಿ.ರಂಗಸ್ವಾಮಿ, ಹಿರಿಯೂರು
**
ಕುಲಕ್ಕಾಗಿ ಹೊಡೆದಾಡುವ ಚಾಳಿ ಸ್ವಾಮಿಗಳಿಗೇಕೆ?
‘ಸಿದ್ದರಾಮಯ್ಯ ವಿರುದ್ಧ ಮಾತನಾಡುವುದನ್ನು ಸಹಿಸಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 13). ಈ ಮಠಾಧಿಪತಿಗಳು ಏಕೆ ರಾಜಕೀಯ ಮಾಡುತ್ತಾರೋ ಆ ಪರಮಾತ್ಮನೇ ಬಲ್ಲ. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂದು ಕನಕದಾಸರು ಹಾಡಿದರು. ಆದರೆ ಕುಲಕ್ಕಾಗಿ ಹೊಡೆದಾಟ ಮಾಡುವುದೇ ಕೆಲವು ಸ್ವಾಮಿಗಳ ಚಾಳಿಯಾಗಿರುವುದು ನಮ್ಮ ದುರ್ದೈವ.
ಪ್ರತಿ ವರ್ಷ ಕನಕ ಜಯಂತಿಯನ್ನು ಸರ್ಕಾರದ ಸಹಯೋಗದೊಂದಿಗೆ ಆಚರಿಸಲಾಗುತ್ತದೆ. ಆ ಸಂದರ್ಭದಲ್ಲಿ, ಅದರಲ್ಲಿ ಪಾಲ್ಗೊಂಡವರು ಮೀಸಲಾತಿಗಾಗಿ ಹೋರಾಡುವ ಮಾತನ್ನು ಆಡುವುದು ಬಿಟ್ಟು ಬೇರೇನೂ ಹೇಳುವುದಿಲ್ಲ. ಅಲ್ಲಿ ಸೇರಿದ ಬಹುತೇಕರಿಗೆ ಕನಕದಾಸರ ಸ್ಪಷ್ಟ ಪರಿಚಯ ಕೂಡ ಇರುವುದು ಅನುಮಾನ. ಕನಕದಾಸರ ದೈವಭಕ್ತಿ, ಅವರು ರಚಿಸಿರುವ ಭಗವಂತನ ಕುರಿತ ಸ್ತೋತ್ರಗಳ ಪರಿಚಯವನ್ನು ಮೊದಲು ಅವರಿಗೆ ಮಾಡಿಸುವುದು ಸೂಕ್ತ. ಈಶ್ವರಾನಂದಪುರಿ ಸ್ವಾಮಿಗಳು ಆ ಕೆಲಸವನ್ನು ಮಾಡಿದರೆ ಒಳ್ಳೆಯದು.
-ವೆಂಕಟೇಶ್ ಮೂರ್ತಿ ಗಂಜೂರು, ಚಿಂತಾಮಣಿ
**
ಜೆಡಿಎಸ್ ಮಾತ್ರ ಜಾತ್ಯತೀತವಾಗಿ ಉಳಿಯಬೇಕೆ?
ಜೆಡಿಎಸ್ ಪಕ್ಷವು ರೈತರ ಸಂಕಷ್ಟ, ನಿರುದ್ಯೋಗದಂತಹ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಟ ಮಾಡಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬಹುದಿತ್ತು ಎಂಬ ಹುರಕಡ್ಲಿ ಶಿವಕುಮಾರ್ ಅವರ ಸಲಹೆಯನ್ನು (ವಾ.ವಾ., ಸೆ. 13) ಈಗಿನ ವ್ಯವಸ್ಥೆಯಲ್ಲಿ ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭವಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಉಳಿದ ಪಕ್ಷಗಳಿಗಿಂತ ಭಿನ್ನವಾದ ಜನಪರವಾದ ವಿಷಯಗಳನ್ನೇ ಅಳವಡಿಸಿತ್ತು. ಆದರೆ ಸ್ಥಾನ ಗಳಿಕೆಯಲ್ಲಿ ಕೆಟ್ಟ ಕುಸಿತ ಕಂಡಿದೆ. ಅದಕ್ಕೆ ಏನೇನೋ ಕಾರಣಗಳಿರಬಹುದು. ಹಣದ ಕೊರತೆಯೂ ಅದರಲ್ಲಿ ಒಂದಾಗಿರಬಹುದು.
ಒಂದು ಕಾಲದಲ್ಲಿ ಬಿಜೆಪಿ ಜೊತೆಗಿದ್ದ ತೃಣಮೂಲ ಕಾಂಗ್ರೆಸ್, ಡಿಎಂಕೆ, ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಪಕ್ಷಗಳು ಮತ್ತು ಕಟ್ಟಾ ಹಿಂದುತ್ವವಾದವನ್ನೇ ಮೈಗೂಡಿಸಿಕೊಂಡಿರುವ ಶಿವಸೇನಾ (ಠಾಕ್ರೆ ಬಣ) ಇಂದು ಕಾಂಗ್ರೆಸ್ ಜೊತೆಗಿವೆ. ಆಯಾ ಪಕ್ಷಗಳು ಆಯಾ ಕಾಲಘಟ್ಟದಲ್ಲಿ ಉಳಿವಿಗಾಗಿ ತೆಗೆದುಕೊಂಡಿರುವ ತೀರ್ಮಾನಗಳೇ ಇದಕ್ಕೆ ಕಾರಣ ಆಗಿರಬಹುದು. ಹೀಗಿರುವಾಗ, ಜೆಡಿಎಸ್ ಮಾತ್ರ ಜಾತ್ಯತೀತ ಪಕ್ಷವಾಗಿ ಉಳಿಯಬೇಕೆಂಬ ನಿಲುವೇಕೆ? ಅಷ್ಟಕ್ಕೂ ಜಾತ್ಯತೀತ ಪದದ ಅರ್ಥವನ್ನೇ ಎಲ್ಲಾ ಪಕ್ಷಗಳು ಮರೆತಿರುವಾಗ ಜೆಡಿಎಸ್ ಮಾತ್ರ ಆ ದಾರಿಯಲ್ಲೇ ಸಾಗಬೇಕೆಂದುಕೊಳ್ಳುವುದು ಸರಿಯಲ್ಲ. ಅಧಿಕಾರವಿಲ್ಲದೇ ಬಹಳ ವರ್ಷಗಳ ಕಾಲ ಯಾವುದೇ ಪಕ್ಷವು ತನ್ನ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭವಲ್ಲ.
-ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ
**
ನೆರವಿಗೆ ಮನವಿ
ಗಡಿ ಜಿಲ್ಲೆ ಚಾಮರಾಜನಗರದವನಾದ ನಾನು ಎರಡೂ ಕಿಡ್ನಿಗಳನ್ನು ಕಳೆದುಕೊಂಡಿದ್ದೇನೆ. ಇತ್ತೀಚೆಗೆ ಪರೀಕ್ಷೆ ನಡೆಸಿದಾಗ ಇದು ಗೊತ್ತಾಗಿದೆ. ಸದ್ಯ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. 32 ವರ್ಷದ ನನಗೆ ಕಿಡ್ನಿ ದಾನ ಮಾಡಲು ನನ್ನ ತಾಯಿ ರತ್ನಮ್ಮ ಮುಂದೆ ಬಂದಿದ್ದಾರೆ. ಇದಕ್ಕೆ ₹ 4 ಲಕ್ಷದಿಂದ ₹ 5 ಲಕ್ಷ ವೆಚ್ಚ
ಆಗಬಹುದು ಎಂದು ಮೈಸೂರಿನ ವೈದ್ಯರು ತಿಳಿಸಿದ್ದಾರೆ. ನಾವು ಬಡವರು. ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸುವ ಶಕ್ತಿ ಇಲ್ಲ. ಹೀಗಾಗಿ ದಾನಿಗಳು ಅಗತ್ಯ ನೆರವು ನೀಡಿ ನನಗೆ ಬದುಕು ನೀಡಬೇಕು ಎಂದು ಕೋರುತ್ತೇನೆ. ಬ್ಯಾಂಕ್ ವಿವರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚಾಮರಾಜನಗರ, ಖಾತೆ ಸಂಖ್ಯೆ: 64158900233. ಐಎಫ್‌ಎಸ್‌ಸಿ: SBIN0040062. ಮೊಬೈಲ್ ಸಂಖ್ಯೆ: 8095689535
-ಅನೂಪ್, ಚಾಮರಾಜನಗರ
**
ಮೇಧಾವಿ...
ಧುಮ್ಮಿಕ್ಕುತ್ತಿದ್ದ ಜೋಗ
ಜಲಪಾತ ನೋಡಿದಾಗ,
‘ಅಬ್ಬಾ! ಎಷ್ಟೊಂದು
ಶಕ್ತಿ ಪೋಲಾಗುತ್ತಿದೆ’
ಎಂದ ಅಭಿಯಂತರ,
ನಾಡು ಸ್ಮರಿಸುತಿಹುದು ಇಂದು...
ಶಿಸ್ತು, ಪ್ರಾಮಾಣಿಕತೆ, ಬದ್ಧತೆ,
ದಕ್ಷತೆಗೆ ಮತ್ತೊಂದು
ಹೆಸರಾಗಿದ್ದ ಸರ್ ಎಂವಿಯವರ!
-ಮ.ಗು.ಬಸವಣ್ಣ, ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.