ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಸಂವಾದ ಅನುವಾದಗೊಳ್ಳಲಿ

‘ಪರೀಕ್ಷಾ ಪೇ ಚರ್ಚಾ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ, ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ
ಗಳನ್ನು ಎದುರಿಸಲು ಸಾಧ್ಯವಾಗುವಂತೆ ಪ್ರಧಾನಿ ಸೂಕ್ತ ಮಾರ್ಗದರ್ಶನ ನೀಡುತ್ತಾ ಧೈರ್ಯ ತುಂಬುತ್ತಿರುವುದು ಸ್ವಾಗತಾರ್ಹ. ಇದೇ 29ರಂದು ನಡೆದ ಈ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದಿಂದ ಆನ್‌ಲೈನ್‌ ಮೂಲಕ ಉತ್ತಮ ಪ್ರಶ್ನೆಗಳನ್ನು ಸಲ್ಲಿಸಿದ ಕಾರಣಕ್ಕಾಗಿ 8, 9 ಮತ್ತು 10ನೇ ತರಗತಿಯಿಂದ ತಲಾ ಒಬ್ಬೊಬ್ಬ ವಿದ್ಯಾರ್ಥಿ ಭಾಗವಹಿಸಲು ಅವಕಾಶ ಪಡೆದದ್ದು ಹೆಮ್ಮೆಯ ವಿಷಯವೇ ಸರಿ. ಆದರೆ ಈ ಕಾರ್ಯಕ್ರಮದಲ್ಲಿ ನಡೆಯುವ ಸಂವಾದ ಹಿಂದಿಯಲ್ಲಿಯೇ ಇರುವುದರಿಂದ ಹಿಂದಿಯೇತರ ಭಾಷೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಅದು ಬಹುತೇಕ ಅರ್ಥವಾಗದೇ ಉಳಿಯುತ್ತದೆ. ಆದ್ದರಿಂದ ಆಯೋಜಕರು ಅಥವಾ ಶಿಕ್ಷಣ ಇಲಾಖೆ ಈ ಕಾರ್ಯಕ್ರಮವನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸಿ ಮರುಪ್ರಸಾರ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ.

-ಅನಂತರಾಜು ಡಿ.ಎಲ್., ಕೊಟಗಾರಲಹಳ್ಳಿ, ಮಧುಗಿರಿ

**

ಬಿ.ಇಡಿ. ಕೋರ್ಸ್‌: ಕಾಲಹರಣ ಸಲ್ಲ

ಮುಂದಿನ ಶೈಕ್ಷಣಿಕ ಸಾಲಿನಿಂದ ನಾಲ್ಕು ವರ್ಷಗಳ ಬಿ.ಇಡಿ. ಕೋರ್ಸ್‌ ಅಳವಡಿಸಿಕೊಳ್ಳಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಜ. 30). ಈ ಮೊದಲು ರಾಜ್ಯದಲ್ಲಿ 10 ತಿಂಗಳ ಬಿ.ಇಡಿ. ಕೋರ್ಸ್‌ ಇತ್ತು. ಅಂದು ಕಲಿತ ಪ್ರಶಿಕ್ಷಣಾರ್ಥಿಗಳು ಕಡಿಮೆ ಅವಧಿಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಹೊರಬರುತ್ತಿದ್ದರು. ನಂತರ ಅನಗತ್ಯವಾಗಿ ಏಕಾಏಕಿ ಬಿ.ಇಡಿ‌. ಕೋರ್ಸನ್ನು ಎರಡು ವರ್ಷಗಳಿಗೆ ಏರಿಸಲಾಯಿತು. ವಾಸ್ತವವಾಗಿ, ರಾಜ್ಯದಲ್ಲಿರುವ ಶೇಕಡ 75– 80ರಷ್ಟು ಬಿ.ಇಡಿ. ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಸೀಟು ಪಡೆದವರು ಉಳಿದ ಪ್ರಶಿಕ್ಷಣಾರ್ಥಿಗಳಂತೆ ನಿತ್ಯ ಕಾಲೇಜಿಗೆ ಬಾರದೆ ನೇರವಾಗಿ ಪರೀಕ್ಷೆಗಳನ್ನು ಎದುರಿಸಿ ಬಿ.ಇಡಿ‌. ಮುಗಿಸಿದ್ದಾರೆ. ಇದರ ಬಗ್ಗೆ ಸರ್ಕಾರವಾಗಲೀ ಸಂಬಂಧಪಟ್ಟ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ.

ಇಂದು ಬಯೊಮೆಟ್ರಿಕ್ ಅಳವಡಿಸಿ ಪ್ರಶಿಕ್ಷಣಾರ್ಥಿಗಳ ಹಾಜರಾತಿ ಪಡೆದುಕೊಳ್ಳುತ್ತಿದ್ದರೂ, ಅದರಲ್ಲೂ ಬಹಳಷ್ಟು ಗೋಲ್‌ಮಾಲ್ ನಡೆಯುತ್ತಿದೆ. ಹೀಗಿರುವಾಗ, ನಾಲ್ಕು ವರ್ಷದ ಅವಧಿ ಮಾಡಿದರೆ ಸುಮ್ಮನೆ ಕಾಲಹರಣವೇ ವಿನಾ, ಗುಣಾತ್ಮಕತೆಗೆ ಹೆಚ್ಚು ಒತ್ತು ನೀಡಿದಂತೆ ಆಗುವುದಿಲ್ಲ. ಪ್ರಸ್ತುತ ಶಾಲೆಯಲ್ಲಿರುವ ಸವಾಲುಗಳನ್ನು ಎದುರಿಸಲು ಪ್ರಶಿಕ್ಷಣಾರ್ಥಿಗಳನ್ನು ಸಜ್ಜುಗೊಳಿಸುವ ಪಠ್ಯಕ್ರಮವನ್ನು ಬಿ.ಇಡಿ. ಕಲಿಕೆಯಲ್ಲಿ ಅಳವಡಿಸಲಿ.‌

-ಸುರೇಂದ್ರ ಪೈ, ಹೊಸದುರ್ಗ

**

ವಿವಾದದ ಕಿಡಿ ಶಮನಗೊಳ್ಳಲಿ

ಮಂಡ್ಯದ ಕೆರಗೋಡು ವಿವಾದವನ್ನು ರಾಜಕಾರಣಿಗಳು ಅನವಶ್ಯಕವಾಗಿ ರಾಜಕೀಯ ವಿಚಾರಕ್ಕೆ ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿರುವುದು ದುರದೃಷ್ಟಕರ. ಜಿಲ್ಲಾಡಳಿತ ತಪ್ಪು ಕ್ರಮ ತೆಗೆದುಕೊಂಡಿದ್ದರೆ ಸಂಬಂಧಿಸಿದವರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿದ್ದಾಗಲೂ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಮಂಡ್ಯದ ರೈತರು ನೂರಾರು ದಿನ ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಭಟಿಸಿದರು. ಈಗ ಧ್ವಜದ ವಿಚಾರಕ್ಕೆ ಪ್ರತಿಭಟಿಸುತ್ತಿರುವ ರಾಜಕಾರಣಿಗಳು ಹಾಗೂ ಯುವಪಡೆಗಳಿಗೆ ಸೇರಿದವರು ಆಗ ಎಲ್ಲಿ ಹೋಗಿದ್ದರು? ಮಂಡ್ಯದ ಪ್ರಗತಿಪರರು ಹಾಗೂ ಈ ಹಿಂದೆ ಉರಿಗೌಡ, ನಂಜೇಗೌಡರ ವಿಚಾರ ಭುಗಿಲೆದ್ದಾಗ ಮಧ್ಯಪ್ರವೇಶಿಸಿ ತಿಳಿ ಹೇಳಿದ ನಿರ್ಮಲಾನಂದನಾಥ ಸ್ವಾಮೀಜಿ ಈ ವಿವಾದದ ಕಿಡಿಯನ್ನು ಶಮನಗೊಳಿಸಲು ಪ್ರಯತ್ನಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಇದು ಜನಸಾಮಾನ್ಯರ ಬದುಕಿಗೆ ಮತ್ತಷ್ಟು ತೊಂದರೆ ಕೊಡುವ ಸಾಧ್ಯತೆ ಇದೆ.

-ಪುಟ್ಟದಾಸು, ಮಂಡ್ಯ

**

ರಾಜ್ಯಸಭೆಯಲ್ಲಿ ಮೊಳಗಲಿ ಕನ್ನಡಿಗರ ಧ್ವನಿ

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಾಲ್ವರು ಸದಸ್ಯರು ನಿವೃತ್ತಿಯಾಗುತ್ತಿರುವುದರಿಂದ ಆ ಸ್ಥಾನಗಳಿಗೆ ಫೆ. 27ರಂದು ಚುನಾವಣೆ ನಡೆಯಲಿದೆ. ಕರ್ನಾಟಕದಿಂದ ಈವರೆಗೆ ವೆಂಕಯ್ಯ ನಾಯ್ಡು, ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವಾರು ಪರಭಾಷಿಕರು ಮತ್ತು ಪರರಾಜ್ಯದವರು ಆಯ್ಕೆಯಾಗಿದ್ದಾರೆ. ಅಂತಹವರಿಂದ ಕರ್ನಾಟಕಕ್ಕೆ ನಿರೀಕ್ಷಿಸಿದಷ್ಟು ಅನುಕೂಲ ಆಗಲಿಲ್ಲ. ಜೊತೆಗೆ ಅವರು ಕನ್ನಡ ನಾಡಿನ ಪರವಾಗಿ ನಿಂತಿದ್ದೂ ಕಡಿಮೆಯೇ ಎನ್ನಬಹುದು.

ಇದೀಗ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಇಲ್ಲಿಂದ ಕಣಕ್ಕೆ ಇಳಿಯುವ  ಊಹಾಪೋಹಗಳು ದಟ್ಟವಾಗಿ ಎದ್ದಿವೆ. ಹಾಗಾಗಿ, ಪ್ರಮುಖ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು, ಈಗ ನಡೆಯಲಿರುವ ನಾಲ್ಕು ಸ್ಥಾನಗಳಿಗೆ ಅಪ್ಪಟ ಕನ್ನಡಿಗರು ಮತ್ತು ಕನ್ನಡಪರ ಚಿಂತಕರನ್ನು ಆಯ್ಕೆ ಮಾಡಬೇಕು. ಆಗ ರಾಜ್ಯಸಭೆಯಲ್ಲಿ ಕನ್ನಡಿಗರ ಧ್ವನಿ ಕೇಳುತ್ತದೆ. ಈ ಮೂಲಕ ದಕ್ಷಿಣದ ನೋವಿನ ಕೂಗು ಕೇಂದ್ರಕ್ಕೂ ಕೇಳಿಸುತ್ತದೆ. 

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

**

ಸಾಮೂಹಿಕ ವಸತಿ ವ್ಯವಸ್ಥೆ ಕಲ್ಪಿಸಿ

ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಅಧಿಸೂಚನೆ ಹೊರಬಿದ್ದ ತಕ್ಷಣ, ದೇಶದ ಲಕ್ಷಾಂತರ ನಿರುದ್ಯೋಗಿಗಳು ಕಷ್ಟಪಟ್ಟು ಹಣ ಹೊಂದಿಸಿಕೊಂಡು ಅರ್ಜಿ ಹಾಕಿ, ನಿಗದಿತ ಹಣ ತುಂಬುತ್ತಾರೆ. ಸತತ ಪರಿಶ್ರಮ ವಹಿಸಿ ಸಿದ್ಧರಾಗಿ ಪರೀಕ್ಷೆ ಬರೆಯಲು ತಮ್ಮದಲ್ಲದ ನಗರಗಳಿಗೆ ಹೋದರೆ, ಅಲ್ಲಿ ವಸತಿ, ಆಹಾರದ ವ್ಯವಸ್ಥೆಯಿಲ್ಲದೆ ಪರದಾಡುವುದನ್ನು ನಾವೆಲ್ಲರೂ ಮಾಧ್ಯಮಗಳ ಮೂಲಕ ಕಾಣುತ್ತಿದ್ದೇವೆ. ಪರೀಕ್ಷಾರ್ಥಿ
ಗಳೆಲ್ಲರಿಗೂ ಸರ್ಕಾರಿ ನೌಕರಿ ಕೊಡಲಾಗದಿದ್ದರೂ, ಅವರು ಅರ್ಜಿಯೊಂದಿಗೆ ಸಲ್ಲಿಸಿದ ಹಣದಲ್ಲಿ ಪರೀಕ್ಷೆಯ ದಿನವಾದರೂ ಕಲ್ಯಾಣ ಮಂಟಪದಲ್ಲೋ ಸರ್ಕಾರಿ ಗೋದಾಮಿನಲ್ಲೋ ಸಾಮೂಹಿಕವಾಗಿ ಒಂದು ರಾತ್ರಿಯ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಆಯಾ ಇಲಾಖೆ ಮಾಡಲು ಮುಂದಾಗಬೇಕು.  

-ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ, ಸಿರಗುಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT