ಆಧುನಿಕ ಚಕ್ರವರ್ತಿಗಳ ಹಿಮ್ಮುಖ ಚಲನೆ

ಹಿಂದಿನ ಕಾಲದಲ್ಲಿ ಅಲೆಗ್ಸಾಂಡರ್ನಂತಹ ಚಕ್ರವರ್ತಿಗಳು ಬೇರೆ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗುತ್ತಿದ್ದರು. ರಣರಂಗದಲ್ಲಿ ಯುದ್ಧ ಮಾಡಿ ರಾಜನನ್ನು ಸೆರೆ ಹಿಡಿದು, ಆತನ ರಾಜ್ಯವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಆಧುನಿಕ ಚಕ್ರವರ್ತಿಗಳು ಸೈನ್ಯ ಕಳುಹಿಸಿ ರಾಜನನ್ನು ಅಪಹರಿಸಿ, ಆ ರಾಜ್ಯಕ್ಕೆ ತಾನೇ ಚಕ್ರಾಧಿಪತಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ವೆನೆಜುವೆಲಾ ಅಧ್ಯಕ್ಷರನ್ನು ಸೆರೆ ಹಿಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿ ಇದಕ್ಕೆ ನಿದರ್ಶನ. ಕಾಲಚಕ್ರ ಹಿಮ್ಮುಖವಾಗಿ ತಿರುಗುತ್ತಿದೆಯೆ?

-ಟಿ.ವಿ.ಬಿ. ರಾಜನ್, ಬೆಂಗಳೂರು

ನದಿ ಜೋಡಣೆ: ಜೀವಜಾಲಕ್ಕೆ ಸಂಚಕಾರ

ಬೇಡ್ತಿ–ವರದಾ ನದಿಗಳ ಜೋಡಣೆ ಬೆಂಬಲಿಸಿ ಹಾವೇರಿಯಲ್ಲಿ ಸಮಾವೇಶ ಮಾಡುವುದಾಗಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕುಡಿಯುವ ನೀರು ಮತ್ತು ನೀರಾವರಿಗೆಂದು ಬರಪೀಡಿತ ಬಯಲುಸೀಮೆಗೆ ನೀರು ಬೇಕು ಎಂಬುದು ಅವರ ವಾದ. ನೈಸರ್ಗಿಕವಾಗಿ ಹರಿಯುತ್ತ ಅಸಂಖ್ಯಾತ ಜೀವಿಗಳನ್ನು ಪೋಷಿಸಿಕೊಂಡು ಬರುತ್ತಿರುವ ನದಿಯನ್ನು ತಿರುಗಿಸುವ ಬದಲಿಗೆ, ಬಿದ್ದ ಮಳೆಯನ್ನೇ ಹಿಡಿದಿಡುವಂಥ ಯೋಜನೆಗಳನ್ನು ಬೆಂಬಲಿಸಬಾರದೆ? ಬಯಲುಸೀಮೆಯಲ್ಲಿ ಬೆಳೆಯುವ ಬೆಳೆಗಳು ನಮ್ಮೆಲ್ಲರ ಆಹಾರವಾಗಿವೆ. ಅಲ್ಲಿ ನೀರಾವರಿ ಮಾಡಿ ಕಬ್ಬು, ಅಡಿಕೆಯಂತಹ ಏಕಬೆಳೆಯನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ? ಈಗಾಗಲೇ, ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚಿದೆ. ಕಾಡು, ನಿಸರ್ಗ ನಾಶ ಮಾಡಿ ವಾಣಿಜ್ಯ ಬೆಳೆ ಬೆಳೆಯುವ ನಾವು ಮುಂದೆ ಹೊಟ್ಟೆಗೇನು ತಿನ್ನೋಣ?

-ಶಾರದಾ ಗೋಪಾಲ, ಧಾರವಾಡ

ಸ್ಥಳೀಯ ಸಂಸ್ಥೆ ಚುನಾವಣೆಗೆ ತಡ ಬೇಡ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಕಳೆದ ಐದು ವರ್ಷಗಳಿಂದಲೂ ಸರ್ಕಾರಗಳು ಚುನಾವಣೆ ಮುಂದೂಡುತ್ತಾ ಬಂದಿವೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವು ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಪೆಟ್ಟು ನೀಡಲಿದೆ. ಸರಿಯಾದ ಸಮಯಕ್ಕೆ ಲೋಕಸಭೆ, ವಿಧಾನಸಭಾ ಚುನಾವಣೆ ನಡೆಸಬೇಕೆಂದು ಬಯಸುವ ರಾಜಕೀಯ ಪಕ್ಷಗಳು, ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಅನಾದರ ತಳೆಯುವುದು ಸರಿಯಲ್ಲ.

-ಪುಟ್ಟಯ್ಯ ಹಂದನಕೆರೆ, ತುಮಕೂರು

ಕಂದಾಯ ಇಲಾಖೆಯ ಬಕಾಸುರರ ಕಥೆ

ಗ್ರಾಮಲೆಕ್ಕಿಗರ ತಪ್ಪಿನಿಂದಾಗಿ ಸವದತ್ತಿ ತಾಲ್ಲೂಕಿನ ರೈತ ಈರಪ್ಪ ಈಗ ಕಂದಾಯ ಇಲಾಖೆಯ ಕಂಬ ಸುತ್ತುತ್ತಿರುವ ಕುರಿತು ವರದಿಯಾಗಿದೆ. ಇದು ಕಂದಾಯ ಇಲಾಖೆಯ ಅಧಿಕಾರಿಗಳು ದುಡ್ಡಿನ ಆಸೆಗೆ ಸೃಷ್ಟಿಸಿರುವ ರೌರವ ನರಕದ ಸೂಜಿಮೊನೆ ಅಷ್ಟೆ. ವಾಸ್ತವ ಇದಕ್ಕಿಂತ ಭೀಕರ. ಈ ಇಲಾಖೆಯಲ್ಲಿ ಜನರಿಗೆ ಆಗಬೇಕಿರುವ ಎಷ್ಟೋ ಕೆಲಸಗಳನ್ನು ಅರ್ಧದಿನದಲ್ಲಿ ಮಾಡಿಕೊಡಬಹುದು. ಆದರೆ, ಅಲ್ಲಿರುವ ‘ಬಕಾಸುರರು’ ಇದಕ್ಕೆ ಆಸ್ಪದ ಕೊಡುವುದಿಲ್ಲ. ಬೇಕೆಂದೇ ಹೆಸರು, ಇನಿಷಿಯಲ್ಸ್, ಚಕ್ಕುಬಂದಿ, ವಿಸ್ತೀರ್ಣ, ಜಮೀನಿನ ನಮೂನೆ ಇತ್ಯಾದಿಯನ್ನು ತಪ್ಪಾಗಿ ನಮೂದಿಸಿ, ಬದುಕಿನ ನೆಮ್ಮದಿಯನ್ನೇ ನಾಶ ಮಾಡುತ್ತಿದ್ದಾರೆ. ಈರಪ್ಪನ ಕತೆಯನ್ನೇ ನೋಡಿ– ತಪ್ಪು ಮಾಡಿದ್ದು ಊರಿನ ಗ್ರಾಮಲೆಕ್ಕಿಗ, ಅದು ಸರಿಯಾಗಬೇಕಾದರೆ ಬೆಂಗಳೂರಿನಲ್ಲೇ ಆಗಬೇಕು! ಇದಕ್ಕಿಂತ ಕ್ರೂರ ವ್ಯಂಗ್ಯ ಇನ್ನೊಂದಿಲ್ಲವೇನೋ?

- ಬಿ.ಎಸ್. ಜಯಪ್ರಕಾಶ ನಾರಾಯಣ, ಅಗ್ರಹಾರ ಬೆಳಗುಲಿ

ನೈತಿಕ ಹೊಣೆ ಮರೆತ ಜನಪ್ರತಿನಿಧಿಗಳು

ರಾಜಕೀಯ ಪಕ್ಷಗಳ ಮುಖಂಡರ ವರ್ತನೆಯು ಜನಸಾಮಾನ್ಯರಲ್ಲಿ ಬೇಸರ ಹುಟ್ಟಿಸಿದೆ. ಬಳ್ಳಾರಿ ಮತ್ತು ಬೀದರ್ ಜಿಲ್ಲೆಯಲ್ಲಿ ಇತ್ತೀಚೆಗೆ ಜನಪ್ರತಿನಿಧಿಗಳು ನಡೆದುಕೊಂಡ ರೀತಿಯೇ ಇದಕ್ಕೆ ಉದಾಹರಣೆ. ಶಾಸಕರು ಮಾದರಿ ವ್ಯಕ್ತಿತ್ವ ಹೊಂದಿರಬೇಕು ಎಂಬುದು ಮತದಾರರ ಬಯಕೆ. ಆದರೆ, ಅವರ ವೈಯಕ್ತಿಕ ಪ್ರತಿಷ್ಠೆಗೆ ತಳಮಟ್ಟದ ಕಾರ್ಯಕರ್ತರು ಜೀವ ಕಳೆದುಕೊಳ್ಳುವಂತಾಗಿದೆ. ಇಂತಹ ನಡವಳಿಕೆಯಿಂದ ಸಮಾಜಕ್ಕೆ ನೀಡುವ ಸಂದೇಶವಾದರೂ ಏನು?

ಜಿಲ್ಲೆಗಳ ಅಭಿವೃದ್ಧಿ ಅಥವಾ ದೀನ ದಲಿತರ ಕಲ್ಯಾಣಕ್ಕೆ ಜನಪ್ರತಿನಿಧಿಗಳು ಹೋರಾಟ ನಡೆಸಿದ್ದು ವಿರಳ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರ ಮಾತು, ಕೆಲಸ ಇತರರ ಭಾವನೆಗಳಿಗೆ ಧಕ್ಕೆ, ಮುಜುಗರ ತರಬಾರದು. ಹೊಣೆಗಾರಿಕೆ ಅರಿತು ಕೆಲಸ ನಿರ್ವಹಿಸಬೇಕಿದೆ.

-ಕಿರಣ ಮ. ಹೂಗಾರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.