ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ

ಅಕ್ಷರ ಗಾತ್ರ

ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ

ಯಾರಿಗಾದರೂ ಅನ್ಯಾಯವಾದಾಗ ಬಂಡಾಯವೇಳುವುದು ಸಹಜ ಧರ್ಮ. ಅದರಲ್ಲೂ ವಿಶೇಷವಾಗಿ ತಾವು ನಂಬಿ, ಪಾಲಿಸಿಕೊಂಡು ಬಂದಿರುವ ತತ್ವಗಳಿಗೆ ಮಾನ್ಯತೆ ದೊರೆಯದಿದ್ದಾಗ, ಆಕ್ರೋಶ ಹೊರಹಾಕುವುದು ಸಾಮಾನ್ಯ. ರಾಜಕಾರಣಿಗಳಂತೂ ತಮ್ಮ ಅಧಿಕಾರಕ್ಕೆ ಸಂಚಕಾರ ತರುವವರ ವಿರುದ್ಧ ಹರಿಹಾಯಲು ಕಾತುರರಾಗಿರುತ್ತಾರೆ. ಈ ದಿಸೆಯಲ್ಲಿ ಜಗದೀಶ ಶೆಟ್ಟರ್ ಅವರು ಬಂಡಾಯ ಎದ್ದಿರುವುದು ಅವರ ನಂಬಿಕೆಗೆ ಅನುಗುಣವಾಗಿರಬಹುದು.

ಆದರೆ, ಅವರು ಹಾಗೂ ಅವರಂತಹ ರಾಜಕಾರಣಿಗಳ ಬಗ್ಗೆ ನನ್ನ ತಕರಾರು ಏನೆಂದರೆ, ಮಾತೃ ಪಕ್ಷಕ್ಕೆ ರಾಜೀನಾಮೆ ನೀಡಿ, ತಮ್ಮ ನಿಲುವಿಗೆ ವಿರುದ್ಧವಾದ ಮತ್ತೊಂದು ಪಕ್ಷಕ್ಕೆ ಸೇರುವುದು ಇಲ್ಲವೇ ಅದರೊಂದಿಗೆ ಗುರುತಿಸಿಕೊಳ್ಳುವುದು ಎಷ್ಟು ಸರಿ? ಶೆಟ್ಟರ್ ಅವರು ಕಾಂಗ್ರೆಸ್ ಸೇರಬಹುದು ಎಂಬ ಮಾತು ಕೇಳಿಬಂದಿದೆ. ಈ ಸುದ್ದಿ ನಿಜವೇ ಆಗಿದ್ದರೆ ಇಲ್ಲೊಂದು ಪ್ರಶ್ನೆ ಏಳುತ್ತದೆ. ಸುಮಾರು ನಲವತ್ತು ವರ್ಷಗಳಿಂದ ವಿರೋಧಿಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಇದ್ದಕ್ಕಿದ್ದಂತೆ ಒಲವು ತೋರುವುದೆಂದರೆ, ಅದು ಅವರ ನಂಬಿಕೆಗೆ ಅನುಗುಣವಾಗಿರುತ್ತದೆಯೇ? ಬದ್ಧತೆಯ ತತ್‌ಕ್ಷಣದ ಈ ಬದಲಾವಣೆ ಯಾವ ರೀತಿಯಲ್ಲಿ ಸಮರ್ಥನೀಯ? ಇದೇನೇ ಇವರ ಸಿದ್ಧಾಂತ ನಿಷ್ಠೆ ಮತ್ತು ಪ್ರಾಮಾಣಿಕತೆ? ತಮ್ಮ ಆತ್ಮಸಾಕ್ಷಿಯನ್ನು ತಾವೇ ಪ್ರಶ್ನಿಸಿಕೊಳ್ಳಲಿ.

ಪ್ರೊ.ಎಂ.ಎಸ್.ರಘುನಾಥ್, ಬೆಂಗಳೂರು

ಮಿತಿ ಹೇರುವ ಅಗತ್ಯ ಇದೆ

ಬಿಜೆಪಿಯು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಹಿರಿಯ ತಲೆಗಳನ್ನು ಬದಿಗೆ ಸರಿಸಿ ಬೇರೆಯವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುತ್ತಿದೆ ಎಂದು ಹೇಳಲಾಗಿದೆ. ಶಾಸಕರು ಮತ್ತು ಸಂಸದರಾಗಲು ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿಲ್ಲ ಮತ್ತು ಅವಧಿಗೆ ಸಂಬಂಧಿಸಿದಂತೆ ಗರಿಷ್ಠ ಆಯ್ಕೆಯ ಮಿತಿಯನ್ನೂ ನಿಗದಿಪಡಿಸಿಲ್ಲ. ಹೀಗಾಗಿ ಬಹಳಷ್ಟು ಶಾಸಕರು ಮತ್ತು ಸಂಸದರು ಇದರ ಲಾಭ ಪಡೆಯುತ್ತಿದ್ದಾರೆ. ಪದೇ ಪದೇ ಅವರೇ ಸ್ಪರ್ಧಿಸುತ್ತಿದ್ದಾರೆ. ಅವರ ನಂತರ ಅವರ ಕುಟುಂಬದ ಇತರ ಸದಸ್ಯರು ಆರಿಸಿ ಬರುವಂಥ ಸ್ಥಿತಿ ಇದೆ. ಇದರಿಂದಾಗಿ ವಂಶಾಡಳಿತ, ಕೌಟುಂಬಿಕ ರಾಜಕಾರಣಕ್ಕೆ ಅವಕಾಶವಾಗಿದೆ. ಕೆಲವು ಕಡೆ ಅದು ರಾಜಕೀಯ ಪಾಳೆಗಾರಿಕೆ ಮಟ್ಟಕ್ಕೆ ಇಳಿದಿದೆ. ಅದರಿಂದಾಗಿ ಪಟ್ಟಭದ್ರ ಹಿತಾಸಕ್ತಿಗಳು ಬೆಳೆದು ಪ್ರಜಾಪ್ರಭುತ್ವದ ನೈಜ ಆಶಯಗಳು ನೇಪಥ್ಯಕ್ಕೆ ಸರಿಯುತ್ತಿವೆ.

ಹೀಗಾಗಿ ಯುವಕರಿಗೆ, ಹೊಸಬರಿಗೆ, ಸಜ್ಜನರಿಗೆ ಅವಕಾಶ ಸಿಗದೇ, ಶಾಸಕರು ಮತ್ತು ಸಂಸದರ ಆಯ್ಕೆಯಲ್ಲಿ ಸಾರ್ವಜನಿಕ ಸೇವೆಗಿಂತ ಇತರೆ ಹಿತಾಸಕ್ತಿಗಳು ಮುಂಚೂಣಿಗೆ ಬರುತ್ತಿವೆ. ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಸಂವಿಧಾನದಲ್ಲಿ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿ, ಶಾಸಕಾಂಗದ ಜನಪ್ರತಿನಿಧಿಗಳಿಗೆ ಗರಿಷ್ಠ ವಯೋಮಿತಿ, ಅವಧಿಯ ಆಯ್ಕೆ ಮಿತಿಯನ್ನು ನಿಗದಿಪಡಿಸದೆ ಇರುವುದು, ಪ್ರಜಾಪ್ರಭುತ್ವ ಬಲಗೊಳ್ಳುವ ದಿಶೆಯಲ್ಲಿ ಮುಖ್ಯ ತೊಡಕಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಆದ್ದರಿಂದ ಸಂವಿಧಾನ ತಿದ್ದುಪಡಿ ಮೂಲಕ ಶಾಸಕರು ಮತ್ತು ಸಂಸದರ ಹುದ್ದೆಗೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸುವುದಲ್ಲದೆ, ಚುನಾಯಿತ ಅವಧಿಗೆ ಸಹ ಮಿತಿ ಹೇರುವ ಅವಶ್ಯಕತೆ ಇದೆ. ಕೆಲವು ದೇಶಗಳಲ್ಲಿ ಈ ಕ್ರಮ ಜಾರಿಯಲ್ಲಿದೆ. ಆದರೆ ನಮ್ಮಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?


ವೆಂಕಟೇಶ ಮಾಚಕನೂರ, ಧಾರವಾಡ

ಇನ್ನೂ ಎಂಥೆಂಥ ಆಟ ನೋಡಬೇಕಿದೆಯೋ?

ಹಾಲಿ ಶಾಸಕರು, ಮಾಜಿ ಶಾಸಕರು ತಮಗೆ ಚುನಾವಣೆಗೆ ಸ್ಪರ್ಧಿಸಲು ನಿರ್ದಿಷ್ಟ ಪಕ್ಷದಿಂದ ಟಿಕೆಟ್ ಸಿಗದಿದ್ದಕ್ಕೆ ಗಳಗಳ ಅಳುವುದನ್ನು ನೋಡಿದರೆ ನಗು ಬರುತ್ತದೆ. ಶಾಲಾ ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದಾಗ ಅತ್ತಂತೆ ಅಳುವುದನ್ನು ಕಂಡಾಗ, ಜನಸಮುದಾಯದ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಾಗಿದ್ದ ನಾಯಕರು ಇವರೇನಾ ಅಂತ ವಿಷಾದವಾಗುತ್ತದೆ.

‘ಪಕ್ಷವೇ ನನಗೆ ಸರ್ವಸ್ವ, ಅದೇ ನನಗೆ ತಾಯಿ ಇದ್ದಂತೆ’ ಎಂದೆಲ್ಲಾ ಹೇಳುತ್ತಿದ್ದವರು, ಟಿಕೆಟ್‌ ಸಿಗಲಿಲ್ಲ ಎಂದಾಕ್ಷಣ ಸ್ವಾರ್ಥಕ್ಕಾಗಿ ‘ಮಲತಾಯಿ’ ಮಡಿಲು ಸೇರುತ್ತಿದ್ದಾರೆ. ನಮ್ಮ ಈ ಪ್ರಜಾಪ್ರಭುತ್ವದಲ್ಲಿ ಇನ್ನೂ ಎಂಥೆಂಥ ಆಟಗಳನ್ನು ನೋಡಬೇಕಾಗಿದೆಯೋ? ಪಕ್ಷಾಂತರ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಅದಕ್ಕೆ ಲಗಾಮು ಹಾಕುವುದು ಅಗತ್ಯ. ಚುನಾವಣಾ ಆಯೋಗವು ಈ ದಿಸೆಯಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ.

ವಿ.ವಿಜಯೇಂದ್ರ ರಾವ್, ಬೆಂಗಳೂರು

ಎಲ್ಲೆಡೆ ಕಾಂಚಾಣದ ಗಾಳಿ ಬೀಸಿದಾಗ...

ರಾಜ್ಯ ವಿಧಾನಸಭಾ ಚುನಾವಣೆಯ ರೀತಿನೀತಿ ಗಮನಿಸಿದರೆ ಕಾಂಚಾಣದ ಕುಣಿತ ಎಲ್ಲೆಡೆಯೂ ಜೋರು ಪಡೆದಿರುವಂತೆ ಭಾಸವಾಗುತ್ತದೆ. ಕೊರೊನಾ ತೀವ್ರವಾಗಿ ಬಾಧಿಸಿದ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಬೆನ್ನು ತಿರುಗಿಸಿದ ಸ್ಪರ್ಧಾ ಆಕಾಂಕ್ಷಿಗಳು ಈಗ ಎಲ್ಲೆಡೆ ಹಾದಿಬೀದಿಯಲ್ಲಿ ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಗೆದ್ದು ಬಂದರೆ ಸಹಾಯಹಸ್ತ ಚಾಚುವ ವಾಗ್ದಾನ ಮಾಡುತ್ತಿದ್ದಾರೆ. ಎಲ್ಲೆಲ್ಲೂ ಹಣದ ಹೊಳೆ ಹರಿಯುತ್ತಿದೆ. ಇದನ್ನು ನೋಡಿದರೆ ಜನರ ಮನಃಸ್ಥಿತಿಯ ಬಗ್ಗೆ ಬೇಸರವೆನಿಸುತ್ತದೆ.

ಚುನಾವಣೆಯಲ್ಲಿ ಹಣಬಲದಿಂದ ಗೆದ್ದು ಬಂದ ಅಭ್ಯರ್ಥಿ, ಆ ಬಳಿಕ ಜನರ ಕಷ್ಟಗಳಿಗೆ ಮಿಡಿಯುವರೇ? ಮತದಾರರ ಬಗ್ಗೆ ಜನಪ್ರತಿನಿಧಿಗೆ ಇರಬೇಕಾದ ಗೌರವ ಉಳಿಯಲು ಸಾಧ್ಯವೇ? ಜನತಂತ್ರವನ್ನು ಬಲಪಡಿಸುವ ಉದ್ದೇಶ ಇದ್ದರೆ ಮೊದಲು ಮತದ ಮೌಲ್ಯ ಅರಿಯಬೇಕು. ಆಮಿಷಗಳಿಗೆ ಒಳಗಾಗುವುದನ್ನು ಬಿಡಬೇಕು.

ಎಂ.ಎಸ್. ಉಷಾ ಪ್ರಕಾಶ್, ಮೈಸೂರು

ಕನ್ನಡದಲ್ಲೂ ಪರೀಕ್ಷೆ: ಸ್ವಾಗತಾರ್ಹ ನಡೆ

ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ವಿವಿಧ ಹುದ್ದೆಗಳ ಭರ್ತಿಗಾಗಿ ನಡೆಸುವ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ ಮಾತ್ರವಲ್ಲದೆ ಕನ್ನಡ, ಕೊಂಕಣಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮತ್ತು ನಮ್ಮ ರಾಜ್ಯದ ವಿರೋಧ ಪಕ್ಷಗಳ ಮುಖಂಡರು ಧ್ವನಿ ಎತ್ತಿದ್ದರ ಫಲ ಇದು. ವಿರೋಧ ಪಕ್ಷಗಳ ಮುಖಂಡರ ಆಗ್ರಹಕ್ಕೆ ಸ್ಪಂದಿಸಿದ ಕೇಂದ್ರ ಗೃಹ ಸಚಿವಾಲಯದ ನಡೆ ಮೆಚ್ಚುಗೆಗೆ ಅರ್ಹ.

ಈ ಕೆಲಸ ಎಂದೋ ಆಗಬೇಕಿತ್ತು. ತಡವಾಗಿಯಾದರೂ ಈಗ ಜಾರಿಗೆ ಬರಲಿದೆ ಎಂಬುದು ಸಂತಸದ ಸಂಗತಿ. ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿಗೆ ವಿಶೇಷ ಮಹತ್ವ ನೀಡುವ ಅಗತ್ಯ ಇಲ್ಲ. ಎಲ್ಲ ರಾಜ್ಯ ಭಾಷೆಗಳಿಗೂ ಸಮಾನ ಅವಕಾಶ ಇರಬೇಕಾದುದು ಅಗತ್ಯ.

ಎ.ಎಂ.ಶ್ರೀನಿವಾಸ್‌, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT