ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಜಾತಿ ಆಧಾರಿತ ಮುಖ್ಯಮಂತ್ರಿ ಚರ್ಚೆ ತರವೇ?

ಅಕ್ಷರ ಗಾತ್ರ

ಜಾತಿ ಆಧಾರಿತ ಮುಖ್ಯಮಂತ್ರಿ ಚರ್ಚೆ ತರವೇ?

ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಜಾತ್ಯತೀತ, ಸಮಾನತೆಯನ್ನು ಒಪ್ಪಿಕೊಂಡಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿಕೊಳ್ಳುತ್ತೇವೆ. ಆದರೆ ಇದು ಸುಳ್ಳು ಎನ್ನುವುದು ಆಗಾಗ ರುಜುವಾತು ಆಗುತ್ತಿರುತ್ತದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಜಾತಿ ಹೆಸರನ್ನು ಮುನ್ನೆಲೆಗೆ ತಂದು ಪಕ್ಷಗಳು ಆರೋಪ, ಪ್ರತ್ಯಾರೋಪ ಮಾಡುತ್ತಲೇ ಇರುತ್ತವೆ. ಅದರಲ್ಲೂ ರಾಜ್ಯದ ಅಧಿಕಾರಕ್ಕೇರಲು ಹೊರಟಿರುವ ಪಕ್ಷಗಳ ನಾಯಕರು ಈಗ ಈ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಕುರುಬ, ದಲಿತ ಜಾತಿಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಎದುರಾಳಿ ಪಕ್ಷಕ್ಕೆ ಆಗಾಗ ಸವಾಲು ಎಸೆಯುತ್ತಾ ಕಿಡಿ ಹೊತ್ತಿಸುತ್ತಿರುತ್ತಾರೆ. ಮುಖ್ಯಮಂತ್ರಿಯಾದವರು ತಮ್ಮ ತಮ್ಮ ಜಾತಿಗಷ್ಟೇ ಸೀಮಿತವಾಗಿ ಇರುತ್ತಾರೆಯೇ? ರಾಜ್ಯದಲ್ಲಿ ಬೇರೆ ಜಾತಿಗಳು ಇಲ್ಲವೇ?

-ಸಣ್ಣಮಾರಪ್ಪ, ಚಂಗಾವರ, ಶಿರಾ

ಸಾಮಾನ್ಯ ಜ್ಞಾನದ ಕೊರತೆಯಾದರೆ...

ಯಂಕಪ್ಪ ದೇವೀಂದ್ರಪ್ಪ ರಾಮಸಮುದ್ರ ಎಂಬುವರು, ಯಾದಗಿರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ತಾವು ಗ್ರಾಮಸ್ಥರಿಂದ ಸಂಗ್ರಹಿಸಿದ್ದ ₹ 1 ಮುಖಬೆಲೆಯ 10 ಸಾವಿರ ರೂಪಾಯಿ ಮೊತ್ತದ ನಾಣ್ಯಗಳನ್ನು ಚುನಾವಣಾಧಿಕಾರಿಗೆ ಠೇವಣಿಯಾಗಿ ನೀಡಿರುವುದು ಚಿತ್ರಸಹಿತ ವರದಿಯಾಗಿದೆ (ಪ್ರ.ವಾ., ಏ. 19). ಚುನಾವಣಾಧಿಕಾರಿ ಚಿಲ್ಲರೆ ರೂಪದಲ್ಲಿ ಬಂದ ಈ ಠೇವಣಿ ಹಣವನ್ನು ಮೇಜಿನ ಮೇಲೆ ಹಾಕಿಕೊಂಡು ಎಣಿಸುತ್ತಿರುವುದನ್ನು ನೋಡಿದರೆ ಅಧಿಕಾರಿಯ ಬಗ್ಗೆ ಮರುಕ ಉಂಟಾಗುತ್ತದೆ. ಅಭ್ಯರ್ಥಿ ಸಾರ್ವಜನಿಕರಿಂದ ಒಂದೊಂದು ರೂಪಾಯಿಯ ನಾಣ್ಯಗಳನ್ನು ಸಂಗ್ರಹಿಸಿದ್ದರೂ ಅವುಗಳನ್ನು
ಚುನಾವಣಾಧಿಕಾರಿಗೆ ಹಾಗೆಯೇ ಕೊಡಬೇಕಾಗಿರಲಿಲ್ಲ. ಅವುಗಳನ್ನು 100 ರೂಪಾಯಿಗೋ 500 ರೂಪಾಯಿಗೋ ಬದಲಾಯಿಸಿ ಕೊಡಬೇಕಾಗಿತ್ತು.

ನಮ್ಮ ಆದರ್ಶದ ಪ್ರದರ್ಶನ ಇತರರಿಗೆ ಸಂಕಟ ಉಂಟು ಮಾಡಬಾರದು. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಹಾಗೂ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ಅಭ್ಯರ್ಥಿಗೆ, ಚುನಾವಣಾಧಿಕಾರಿ ನಾಣ್ಯಗಳನ್ನು ಎಣಿಸಿ ತೆಗೆದುಕೊಳ್ಳುವ ಮತ್ತು ಅವುಗಳನ್ನು ಬ್ಯಾಂಕಿಗೆ ಜಮಾ ಮಾಡಿದಾಗ, ಬ್ಯಾಂಕಿನ ನಗದು ಗುಮಾಸ್ತ ಎಣಿಕೆ ಮಾಡಿ ತೆಗೆದುಕೊಳ್ಳುವ ಕಷ್ಟದ ಅರಿವು ಇರಬೇಕಿತ್ತು.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ನಾಮಪತ್ರ ಪ್ರತಿ: ನಿಯಮ ಬದಲಾವಣೆ ಸೂಕ್ತ

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯ ಕುರಿತಂತೆ ಚುನಾವಣೆ ಅಧಿಕಾರಿಗಳಿಗೆ ಒಂದಕ್ಕಿಂತ ಹೆಚ್ಚು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸುವ ಪರಿಪಾಟ ಇತ್ತೀಚೆಗೆ ಹೆಚ್ಚಾಗುತ್ತಿದೆ. ಉಕ್ರೇನ್ ಯುದ್ಧ ಮತ್ತು ಇತರ ಕಾರಣಗಳಿಂದ ಕಾಗದದ ಬೆಲೆ ಮುಗಿಲೆತ್ತರಕ್ಕೆ ಜಿಗಿದಿದೆ. ಕಾಗದರಹಿತ ಕಚೇರಿ ಮಾಡುವ ಇರಾದೆ ಸರ್ಕಾರಕ್ಕೆ ಇರುವಾಗ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನವೇ ಪರಾಮರ್ಶಿಸಿ ಒಂದೇ ಪ್ರತಿಯಲ್ಲಿ ಅರ್ಜಿ ಸಲ್ಲಿಸುವ ವಿಧಾನದಿಂದ ಚುನಾವಣೆ ಅಧಿಕಾರಿಗಳಿಗೂ ತಮಗಿರುವ ಕಡಿಮೆ ಸಮಯದಲ್ಲಿ ಅರ್ಜಿಗಳಲ್ಲಿರುವ ನ್ಯೂನತೆಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ಅಭ್ಯರ್ಥಿಗಳಿಗೆ ಸಮಯ, ಖರ್ಚುವೆಚ್ಚ ಕೂಡ ಕಡಿಮೆ
ಆಗುತ್ತದೆ.

ಒಂದೇ ಪ್ರತಿ ಸಲ್ಲಿಸುವ ಪರಿಪಾಟದಿಂದ ಅರ್ಜಿ ಕುರಿತು ಅಭ್ಯರ್ಥಿಗಳಿಗೆ ದೃಢತೆ ಬರುತ್ತದೆ. ಈ ವಿಷಯವಾಗಿ ಚುನಾವಣಾ ಆಯೋಗ ಪರಿಶೀಲನೆ ನಡೆಸಿ, ನಿಯಮ ಬದಲಾವಣೆ ಮಾಡುವುದು ಸೂಕ್ತ.

-ಎ.ಎಸ್.ಮಕಾನದಾರ, ಗದಗ

ಇದು ನಮ್ಮ ಪ್ರಜಾಪ್ರಭುತ್ವ ಪದ್ಧತಿ!

ಹಣ, ಮದ್ಯ, ಸೀರೆ, ಕುಕ್ಕರ್ ನೀಡಿ ಮತ ಪಡೆಯುತ್ತಾರೆಂದು ಆಡಿಕೊಳ್ಳುತ್ತಾರೆ. ಇದರಿಂದ ಎಷ್ಟು ಮಹಾ ಮತ ಬಂದೀತು, ಅಷ್ಟರಲ್ಲೇ ಇಡೀ ಕ್ಷೇತ್ರವನ್ನು ಗೆಲ್ಲುವುದು ಸಾಧ್ಯವೇ ಎಂದೆಲ್ಲಾ ನಾನೂ ಮೊದಮೊದಲು ಉಡಾಫೆ ಮಾಡುತ್ತಿದ್ದೆ. ಗಮನವಿಟ್ಟು ಆಲೋಚಿಸಿದ ಮೇಲೆ ಮನವರಿಕೆಯಾಯಿತು, ನಮ್ಮ ಪ್ರಸಕ್ತ ಚುನಾವಣಾ ವ್ಯವಸ್ಥೆಯಲ್ಲಿ ಇದು ಖಂಡಿತಾ ಸಾಧ್ಯ ಎಂದು! ಪಬ್ಲಿಕ್ ಪರೀಕ್ಷೆಯಲ್ಲಾದರೋ ಪಾಸಾಗಲು ಇಂತಿಷ್ಟು ಕನಿಷ್ಠ ಅಂಕ ಗಳಿಸಬೇಕೆಂಬ ನಿಯಮವಿರುತ್ತದೆ. ಚುನಾವಣೆಯಲ್ಲಿ ಅಂಥದ್ದೇನೂ ಇರುವುದಿಲ್ಲ. ಹೀಗಾಗಿ ಚುನಾವಣೆಯಲ್ಲಿ ಗೆಲ್ಲಲು, ಚೇಲಾಗಳು, ಮದ್ಯಕ್ಕೆ ಮತ ಮಾರಿಕೊಳ್ಳುವವರು, ಆಮಿಷಗಳಿಗೆ ಬಲಿಯಾಗುವವರು, ಸುಳ್ಳುಕೋರರು, ಸೋಂಬೇರಿಗಳು, ಜೂಜುಕೋರರ ಮತಗಳೇ ಬೇಕುಬೇಕಾದಷ್ಟಾಗುತ್ತವೆ. ಅದಕ್ಕಾಗಿಯೇ ಪೈಪೋಟಿ ನಡೆಯುವುದು ಮತ್ತು ಘನತೆವೆತ್ತ ಸಂಸದ, ಶಾಸಕ ಮಹೋದಯರು ಅವರುಗಳನ್ನು ಮಾತ್ರವೇ ಹೆಚ್ಚಾಗಿ
ಪ್ರತಿನಿಧಿಸುವುದು!

ಸಮಾಜದಲ್ಲಿ ಈ ಮಹತ್ವಪೂರ್ಣರ ಸಂಖ್ಯೆ ಗಣನೀಯ. ಅವರೇ ಗೆಲುವು ತಂದುಕೊಡುವವರು. ಗೆದ್ದವರು ರಚಿಸುವ ಘನ ಸರ್ಕಾರಗಳೆಲ್ಲಾ ಈ ಜನರ ಸಂಖ್ಯಾಮಟ್ಟವನ್ನು ಆದಷ್ಟೂ ಹಾಗೇ ಉಳಿಸಿಕೊಂಡು ಹೋಗುವ ಕೆಲಸವನ್ನಷ್ಟೇ ಮಾಡುವುದು ಯಥಾ ಸಹಜವೇ ಆಗಿರುತ್ತದೆ! ಉಳಿದಂತೆ ನಮ್ಮ ಸಮಾಜದಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಸಂಭಾವಿತರೇ ಇರುತ್ತಾರೆ ಎಂದುಕೊಳ್ಳೋಣ. ಅವರು ವೋಟು ಹಾಕಿದರೂ, ನೋಟಾ ಒತ್ತಿದರೂ, ವೋಟೇ ಹಾಕದಿದ್ದರೂ ಶಾಸಕಾಂಗದಲ್ಲಾಗಲೀ ಆಡಳಿತ ವ್ಯವಸ್ಥೆಯಲ್ಲಾಗಲೀ ಅವರ ದನಿಯಾದರೂ ಎಲ್ಲಿರುತ್ತದೆ? ಇದು, ನಾನು ಹಿಂದಿನ 50 ವರ್ಷಗಳಿಂದ ಕಂಡನುಭವಿಸಿರುವ ಪ್ರಜಾಪ್ರಭುತ್ವ
ಪದ್ಧತಿ!

-ಆರ್.ಕೆ.ದಿವಾಕರ, ಬೆಂಗಳೂರು

****

ಬೇಡ ಈ ಪಟ್ಟ

ವಿಶ್ವ ಜನಸಂಖ್ಯೆಯಲ್ಲಿ
ಭಾರತ ಅಗ್ರಪಟ್ಟ ಪಡೆದದ್ದಕ್ಕೆ
ನಗುವುದೋ ಅಳುವುದೋ
ತಿಳಿಯದಾಗಿದೆ!

ಇನ್ನುಮೇಲೆ ನಮ್ಮ ಗುರಿ

ಈ ಹಿರಿಮೆಯಿಂದ ಹಿಂದಕ್ಕೆ
ಸರಿದು ಮತ್ತೆ ಎರಡನೇ
ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದೇ
ಆಗಿರಬೇಕು... ಅಲ್ಲವೇ?

ವಿ.ವಿಜಯೇಂದ್ರ ರಾವ್
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT