ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸರ್ಕಾರ ತನ್ನದೇ ಜಮೀನು ಖರೀದಿಸಬೇಕಾದೀತು!

ಅಕ್ಷರ ಗಾತ್ರ

ಸರ್ಕಾರ ತನ್ನದೇ ಜಮೀನು ಖರೀದಿಸಬೇಕಾದೀತು!

ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಸೇರಿದ ಐದು ಎಕರೆ ಜಾಗವನ್ನು ಖಾಸಗಿಯವರಿಗೆ ಪರಭಾರೆಯಾಗಲು ಸಹಕರಿಸಿದ್ದ ಭೂಮಾಪನಾ ಇಲಾಖೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ವರದಿಯಾಗಿದೆ (ಪ್ರ.ವಾ., ಫೆ. 22). ಕಂದಾಯ ಇಲಾಖೆಯ ಕಾರ್ಯದರ್ಶಿ, ‘... ಸದ್ಯ ಹೆಚ್ಚಿನ ಮಾಹಿತಿ ಇಲ್ಲ. ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಇದು, ಅಚ್ಚರಿ ಮೂಡಿಸುವ ಸಂಗತಿ. ರಾಮನಗರ ಜಿಲ್ಲೆಯಲ್ಲಿನ ಸರ್ಕಾರಿ ಜಮೀನಿನ ಕಬಳಿಕೆ ಕುರಿತ ಮತ್ತೊಂದು ಪ್ರಕರಣದಲ್ಲಿ, ಒತ್ತುವರಿಯಾಗಿದ್ದ 14.4 ಎಕರೆ ಜಮೀನು 8.30 ಎಕರೆಗೆ ಇಳಿದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲದಿರುವುದರ ಕುರಿತು ಹೈಕೋರ್ಟ್ ಇತ್ತೀಚೆಗೆ ತಾನೇ ಅಸಮಾಧಾನ ವ್ಯಕ್ತಪಡಿಸಿದೆ.

ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಧಿಕಾರಿಗಳು ಕಾನೂನು ರೀತಿ ನಡೆದುಕೊಳ್ಳದೆ, ‘ಮೇಲಿನವರ’ ಒತ್ತಡಕ್ಕೆ ಅಥವಾ ಅವರ ಮರ್ಜಿಗೊಳಗಾಗಿ ತಪ್ಪಿತಸ್ಥರ ರಕ್ಷಣೆಗೆ ಶ್ರಮಿಸುತ್ತಿರುವಂತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ತನ್ನ ಅನೇಕ ಯೋಜನೆಗಳಿಗೆ, ತನಗೆ ಸೇರಿದ ಜಮೀನನ್ನೇ ಮುಂದಿನ ದಿನಗಳಲ್ಲಿ ಸರ್ಕಾರವು ಖಾಸಗಿಯವರಿಂದ ಖರೀದಿಸಬೇಕಾಗಬಹುದು!

-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

****

ಕೈ ಸೇರದ ನೇಮಕಾತಿ ಆದೇಶ

ಎಸ್‌ಡಿಎ ಹುದ್ದೆಗಳಿಗೆ ಸಂಬಂಧಿಸಿದ ಕಡತವನ್ನು ಮೂರು ವರ್ಷಗಳಿಂದ ತನ್ನ ಬಳಿಯೇ ಉಳಿಸಿಕೊಂಡಿದ್ದ ಲೋಕಸೇವಾ ಆಯೋಗವು ಈ ವರ್ಷದ ಜನವರಿಯಲ್ಲಿ ಅಂತಿಮಪಟ್ಟಿ ಬಿಡುಗಡೆ ಮಾಡಿತು. ಸಂಬಂಧಿಸಿದ ಇಲಾಖೆಗಳಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡಿ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಂಡಿತು. ಆದರೆ ವಿವಿಧ ಇಲಾಖೆಗಳು ಈ ಸಂಬಂಧ ತಮಗೆ ಹಂಚಿಕೆಯಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಇಪ್ಪತ್ತು ದಿನಗಳು ಕಳೆದರೂ ಸಿಂಧುತ್ವ ತಯಾರಿ ನಡೆಸುವ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಿದರೂ ಪ್ರತಿಕ್ರಿಯೆ ನೀಡದಿರುವುದು ಆಯೋಗಕ್ಕೆ ಕರ್ತವ್ಯದಲ್ಲಿನ ಇಚ್ಛಾಶಕ್ತಿ ಕೊರತೆಯನ್ನು ತೋರಿಸುತ್ತದೆ.

ಎರಡು ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ನೇಮಕಾತಿ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಇಲಾಖೆಗಳು, ವಯೋಮಿತಿ ಅಂಚಿನಲ್ಲಿರುವ ಅಭ್ಯರ್ಥಿಗಳ ಸೇವಾ ಅವಧಿಯನ್ನು ಮೊಟಕುಗೊಳಿಸುವಲ್ಲಿ ನೇರವಾಗಿ ಪಾತ್ರ ವಹಿಸುತ್ತಿರುವುದು ದುರದೃಷ್ಟಕರ. ಒಂದು ಕಡೆ ಪರೀಕ್ಷೆ ನಡೆಸುವ ಪ್ರಾಧಿಕಾರದಿಂದ ವ್ಯಾಪಕ ವಿಳಂಬ, ಮತ್ತೊಂದು ಕಡೆ ಇಲಾಖೆಗಳಿಂದ ಮತ್ತಷ್ಟು ವಿಳಂಬ. ಅಂತಿಮಪಟ್ಟಿ ಸಿದ್ಧಗೊಂಡ ನಂತರವೂ ನಿಗದಿತ ದಿನಾಂಕದೊಳಗೆ ನೇಮಕಾತಿ ಆದೇಶ ನೀಡದೆ ತಮಗೆ ಇಷ್ಟಬಂದಾಗ ಆದೇಶ ನೀಡುವ ಇಲಾಖೆಗಳ ಸರ್ವಧಿಕಾರಿ ನಡೆಗೆ ಕೊನೆ ಎಂಬುದಿಲ್ಲವೇ? ಇದೇ ಅವಧಿಯಲ್ಲಿ ಪರೀಕ್ಷೆ ನಡೆಸಿದ ಪೊಲೀಸ್ ಇಲಾಖೆಗೆ ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷಗಳ ಸಂಬಳ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ಎಸ್‌ಡಿಎ ನೇಮಕಾತಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇದಕ್ಕೆಲ್ಲಾ ಹೊಣೆ ಯಾರು?

-ಸುಜ್ಜಲೂರು ವಿಜಿ, ಟಿ.ನರಸೀಪುರ

****

ಕಂಡ ಕಂಡಲ್ಲಿ ಭಿತ್ತಿಪತ್ರ: ಯಾರು ಕೊಟ್ಟರು ಅನುಮತಿ?

ಬೆಂಗಳೂರಿನಲ್ಲಿ ಫ್ಲೆಕ್ಸ್ ತೆರವಿಗೆ ಸಂಬಂಧಿಸಿದಂತೆ ಕೊನೆಗೂ ಎಚ್ಚೆತ್ತ ಬಿಬಿಎಂಪಿ ಆಯುಕ್ತರು, ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಿರುವುದು ಸಂತಸದ ವಿಷಯ. ಆದರೆ ಕೆಲವು ಪ್ರಕರಣಗಳಲ್ಲಿ ಫ್ಲೆಕ್ಸ್ ಯಾರು ಹಾಕಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ, ಹೀಗಾಗಿ ಪ್ರಕರಣ ದಾಖಲಿಸಲಾಗುತ್ತಿಲ್ಲ ಎಂಬ ಆಯುಕ್ತರ ಮಾತು ವಿಚಿತ್ರವಾಗಿ ಕಾಣುತ್ತಿದೆ. ರಾಜಕಾರಣಿಗಳಿಗೆ ಹೆದರಿ ಕ್ರಮ ಕೈಗೊಳ್ಳಲು ಸಾಧ್ಯವಾಗದ ಇವರ ಅಸಹಾಯಕ ಸ್ಥಿತಿ ಕಂಡು ಮರುಕವಾಗುತ್ತಿದೆ. ಬೆಂಗಳೂರು ನಗರದಲ್ಲಿ ರಾಜಕೀಯ ಪಕ್ಷಗಳಿಂದ ಫ್ಲೆಕ್ಸ್‌ ಭರಾಟೆ ಒಂದೆಡೆಯಾದರೆ, ಇತ್ತೀಚೆಗೆ ಪೇಯಿಂಗ್ ಗೆಸ್ಟ್, ಇಂಟರ್ನೆಟ್‌ ಸೇವೆ ಒದಗಿಸುವಂತಹ ಕಂಪನಿಗಳ ಪ್ರತಿನಿಧಿಗಳು ಪ್ರತೀ ರಸ್ತೆಯಲ್ಲಿ ಗೋಡೆ, ವಿದ್ಯುತ್ ಕಂಬ, ಮನೆಯ ಕಾಂಪೌಂಡ್ ಹಾಗೂ ಗೇಟುಗಳನ್ನೂ ಬಿಡದೆ, ಮಾಲೀಕರ ಅನುಮತಿಯನ್ನೂ ಪಡೆಯದೆ ಜಾಹೀರಾತು, ಭಿತ್ತಿಪತ್ರಗಳನ್ನು ಅಂಟಿಸುತ್ತಿದ್ದಾರೆ. ಇದು ಜಂಟಿ ವಲಯ ಆಯುಕ್ತರಿಗೆ ಕಂಡಿಲ್ಲವೇ?

ನಗರದ ಅಂದ ಕೆಡಿಸುತ್ತಿರುವ ವಿಚಾರದಲ್ಲಿ ನ್ಯಾಯಾಲಯವು ಸ್ವತಃ ಆಯುಕ್ತರನ್ನೇ ಕಟಕಟೆಗೆ ಕರೆಸಿ
ಛೀಮಾರಿ ಹಾಕಿದೆ. ಪಾಲಿಕೆ ಅಧಿಕಾರಿಗಳು ಸಂಸ್ಥೆಗಳ ಮೇಲೆ ಸಾರ್ವಜನಿಕ ಸ್ಥಳ ಕುರೂಪಗೊಳಿಸಿದ ಪ್ರಕರಣ ದಾಖಲಿಸಿ, ಇದಕ್ಕೆ ಅವಕಾಶ ನೀಡುತ್ತಿರುವ ಕ್ಷೇತ್ರಾಧಿಕಾರಿಗಳ ಮೇಲೂ ಕ್ರಮ ಕೈಗೊಂಡು, ನಗರದ ಸೌಂದರ್ಯವನ್ನು ಕಾಪಾಡಲಿ.

-ಚಿ.ಉಮಾ ಶಂಕರ್, ಬೆಂಗಳೂರು

****

ರಾಸಾಯನಿಕ ಬಳಕೆ: ಇರಲಿ ಜನಜಾಗೃತಿ

ಬೆಳೆಗಳಿಗೆ ಕೀಟನಾಶಕಗಳನ್ನು ಬಳಸುವ ಕೃಷಿಕರು, ಕೃಷಿ ಕಾರ್ಮಿಕರು ಹಾಗೂ ಇಂಥ ಆಹಾರವನ್ನು ಸೇವಿಸುವ ಗ್ರಾಹಕರನ್ನು ಕೀಟನಾಶಕಗಳಿಂದ ರಕ್ಷಿಸಬೇಕಾಗಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಕಳವಳದ ವರದಿಯು (ಪ್ರ.ವಾ., ಫೆ. 23) ಜನಜಾಗೃತಿಗೆ ನಾಂದಿಯಾಗಬೇಕು. ನಮ್ಮ ನಿತ್ಯದ ಬದುಕಿನಲ್ಲಿ ರಾಸಾಯನಿಕಗಳ ಬಳಕೆಯಿಲ್ಲದ ಜೀವನ ಊಹಿಸಲು ಅಸಾಧ್ಯವಾದರೂ ಇದರಿಂದ ಪಾರಾಗುವ ಮಾರ್ಗವಿದೆ. ರಾಸಾಯನಿಕಗಳ ಮಿತಬಳಕೆ, ಮರುಬಳಕೆ ಹಾಗೂ ವೈಜ್ಞಾನಿಕ ವಿಲೇವಾರಿಯಂಥ ವಿಧಾನಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮತ್ತು ಜಾಗೃತಿ ಮೂಡಿಸಿದರೆ ರಾಸಾಯನಿಕಗಳ ಬಳಕೆಯಿಂದಾಗುವ ಪ್ರಯೋಜನ ಹಾಗೂ ಅವುಗಳ ನಿರ್ವಹಣೆ ಕೂಡ ಸುಲಭವಾಗುತ್ತದೆ.

ಕೃಷಿ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯ ಜೊತೆಗೆ ಪ್ಲಾಸ್ಟಿಕ್ ಸುಡುವುದನ್ನು ಕಾಣುತ್ತೇವೆ. ಪ್ಲಾಸ್ಟಿಕ್ ಸುಡುವಾಗ ಉತ್ಪಾದನೆಯಾಗುವ ಅಪಾಯಕಾರಿ ರಾಸಾಯನಿಕಗಳು ಪರಿಸರವನ್ನು ಸೇರಿ ವಾತಾವರಣ ಹದಗೆಡುತ್ತದೆ. ಇದರಿಂದ ಅನೇಕ ಕಾಯಿಲೆಗಳು, ಅವಕ್ಕೆ ತಕ್ಕಂತೆ ಆಸ್ಪತ್ರೆಗಳ ಸಂಖ್ಯೆ ಕೂಡ ಹೆಚ್ಚುತ್ತದೆ ಅಲ್ಲವೇ? ಆದ್ದರಿಂದ ರಾಸಾಯನಿಕಗಳ ಬಳಕೆ, ಸಂಗ್ರಹ, ವಿಲೇವಾರಿಯ ಬಗ್ಗೆ ಮೊದಲು ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಅರಿವು ಮೂಡಿಸುವಂತಾಗಲು ಸರ್ಕಾರ ಮುಂದಾಗಬೇಕಾಗಿದೆ.

-ಡಾ. ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT