ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಶಿಕ್ಷೆ ಜಾರಿಯಾಗಬೇಕಾದುದು ವ್ಯಕ್ತಿಗಳಿಂದಲ್ಲ

ಅಕ್ಷರ ಗಾತ್ರ

ಶಿಕ್ಷೆ ಜಾರಿಯಾಗಬೇಕಾದುದು ವ್ಯಕ್ತಿಗಳಿಂದಲ್ಲ

ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ಗಳ ಕುರಿತಾದ ಸಂಪಾದಕೀಯ (ಪ್ರ.ವಾ., ಏ. 18) ಅತ್ಯಂತ ಸಮಯೋಚಿತವಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಹೇಳಿಕೊಳ್ಳುವ ನಾವು ಇಂತಹ
ವಿದ್ಯಮಾನಗಳಿಗೆ ಅವಕಾಶ ಕೊಡಬಾರದು. ಯಾವುದೇ ಆರೋಪಿಯನ್ನು ಘನತೆಯಿಂದ ನಡೆಸಿಕೊಳ್ಳಬೇಕಾದ ಅಗತ್ಯದ ಕುರಿತು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶಿಕ್ಷೆ ಎಂಬುದು ಈ ನೆಲದ ಕಾನೂನಿನ ಅಡಿಯಲ್ಲಿ ಸಾಬೀತಾದ ನಂತರವೇ ಜಾರಿಯಾಗಬೇಕೆ ವಿನಾ ಕೆಲವು ವ್ಯಕ್ತಿ ಅಥವಾ ಸರ್ಕಾರದಿಂದ ಅಲ್ಲ.

ಜೀವನ ಎಂಬುದು ಅತಿ ಅಮೂಲ್ಯವಾದುದು, ಅದು ಯಾವುದೇ ಸಮುದಾಯಕ್ಕೆ ಹೊರತಾದುದಲ್ಲ ಎಂಬುದನ್ನು ಯಾರೂ ಮರೆಯಬಾರದು. ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಮತ್ತು ಇಂಡಿಯಾ ಜಸ್ಟಿಸ್ ವರದಿಯಲ್ಲಿ, ಉತ್ತರಪ್ರದೇಶ ಅತ್ಯಂತ (18) ಕೆಳಸ್ಥಾನದಲ್ಲಿ ಇರುವುದು ಆ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಪೂರಕವಾಗಿಯೇ ಇದೆ. ಇಂತಹ ಪ್ರಕರಣಗಳು ಕೊನೆಯಿಲ್ಲದಂತೆ ನಡೆದರೆ ಜನರು ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಅದಕ್ಕೆ ಆಸ್ಪದ ಕೊಡಬಾರದು. ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಅಂತಹವರನ್ನು ಹತ್ಯೆ ಮಾಡಿದವರಿಗೇ ಕ್ಷಮಾಪಣೆ ನೀಡಿದ ನಾಡು ನಮ್ಮದು. ಈ ವಿಷಯವು ಬರೀ ಆಯೋಗ ರಚಿಸಲಾಗಿದೆ, ಸಮಿತಿ ರಚಿಸಲಾಗಿದೆ, ಎಸ್ಐಟಿ ತಂಡ ನೇಮಿಸಲಾಗಿದೆ ಎಂಬಷ್ಟಕ್ಕೇ ಸೀಮಿತವಾಗದೆ, ಆದಷ್ಟು ಬೇಗ ಸತ್ಯ ಹೊರಬರಲಿ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತಾಗಲಿ.

ಆನಂದ ಕುಂಬಾರ, ಚಿಕ್ಕಸಿಂದಗಿ, ವಿಜಯಪುರ

ಗಡಿ ರಕ್ಷಣೆ: ಇರಲಿ ಮತ್ತಷ್ಟು ಎಚ್ಚರ

ಪುಲ್ವಾಮಾದಲ್ಲಿ ಪಾಕಿಸ್ತಾನದ ಉಗ್ರರ ದಾಳಿಯನ್ನು ಕೇಂದ್ರ ಸರ್ಕಾರ ಸರಿಯಾಗಿ ಹಿಮ್ಮೆಟ್ಟಿಸಲಿಲ್ಲ ಎಂದು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ (ಪ್ರ.ವಾ., ಏ‌. 16). ಆದರೆ, ಗೃಹ ಸಚಿವ ಅಮಿತ್ ಶಾ, ದೇಶದ ಗಡಿ ಸುಭದ್ರವಾಗಿದೆ, ಆ ವಿಷಯದಲ್ಲಿ ರಾಜಿ ಇಲ್ಲ ಎಂದು ಹೇಳಿದ (ಪ್ರ.ವಾ., ಏ. 11) ನಂತರವೂ ‘ದೇಶದ ಉತ್ತರ ಮತ್ತು ಪಶ್ಚಿಮ ಗಡಿಗಳು ಸುರಕ್ಷಿತವಾಗಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್‌ ಭಾಗವತ್ (ಪ್ರ‌.ವಾ., ಏ. 15).

ವಾಜಪೇಯಿ ನೇತೃತ್ವದ ಸರ್ಕಾರ ಇದ್ದಾಗ, ಭಾರತದ ಸೇನೆ ಎಚ್ಚರ ತಪ್ಪಿದ ಪರಿಸ್ಥಿತಿಯಲ್ಲೇ ಪಾಕಿಸ್ತಾನವು ಕಾರ್ಗಿಲ್‌ ಅನ್ನು ಆಕ್ರಮಿಸಿತು. ಇದು ಎಚ್ಚರಿಕೆ ಗಂಟೆಯಲ್ಲವೇ? ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಶತಾಯಗತಾಯ ನಿರ್ನಾಮ ಮಾಡಲು ಪಣ ತೊಟ್ಟಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ, ತಮ್ಮ ಇದೇ‌ ಛಲವನ್ನು ಮಲಿಕ್ ಹಾಗೂ ಭಾಗವತ್ ಅವರ ಹೇಳಿಕೆಗಳ ಹಿನ್ನೆಲೆಯಲ್ಲಿ, ದೇಶದ ಗಡಿ ಸಂರಕ್ಷಣೆಯ ವಿಷಯದಲ್ಲಿಯೂ ತೋರುವುದು ಒಳ್ಳೆಯದಲ್ಲವೇ? ಕೆ.ಎನ್.ಭಗವಾನ್, ಬೆಂಗಳೂರು

ಕುರುಕ್ಷೇತ್ರದ ಹೋಲಿಕೆ ಎಷ್ಟು ಸಮಂಜಸ?

ವಿಧಾನಸಭೆ ಚುನಾವಣೆ ಕಣವನ್ನು ಮಹಾಭಾರತದಲ್ಲಿ ಬರುವ ಕುರುಕ್ಷೇತ್ರ ಯುದ್ಧಕ್ಕೆ ಕೆಲವು ಟಿ.ವಿ. ಚಾನೆಲ್‌ಗಳಲ್ಲಿ ಹೋಲಿಸುತ್ತಿರುವುದು ಕಂಡುಬರುತ್ತದೆ. ಕುರುಕ್ಷೇತ್ರದ ಕದನವು ಧರ್ಮ, ಅಧರ್ಮಗಳ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದು. ಕಥೆಯಲ್ಲಿ ವಿವರಿಸುವಂತೆ, ರಣವೀಳ್ಯ ಪಡೆದು ಬಾಣಗಳಿಗೆ ಎದೆಯೊಡ್ಡಿ ನಿಂತ ಪಾಂಡವ, ಕೌರವರ ಪಂಗಡಗಳ ಮಧ್ಯೆ ನಡೆದ ಯುದ್ಧದ ಸನ್ನಿವೇಶ ರಣರೋಚಕವೂ ಹೌದು. ಅದರಲ್ಲಿ ಯುದ್ಧಕ್ಕೆ ಒಂದು ಬದ್ಧತೆ ಇದೆ. ಕುಂತಿಪುತ್ರ ಕರ್ಣನು ರಣರಂಗದಲ್ಲಿಯೇ ಪ್ರಾಣ ಬಿಟ್ಟನೆ ವಿನಾ ಕೌರವೇಂದ್ರನ ಸ್ನೇಹಕ್ಕೆ ದ್ರೋಹ ಬಗೆಯಲಿಲ್ಲ. ಪಾಂಡವ, ಕೌರವರ ಯುದ್ಧದಲ್ಲಿ ಪ್ರಾಣಭೀತಿಯಿಂದ ಯಾರೂ ಓಡಿ ಹೋಗಲಿಲ್ಲ. ವಿರೋಧಿ ಪಾಳಯಕ್ಕೂ ಜಿಗಿಯಲಿಲ್ಲ. ಅಷ್ಟೇ ಏಕೆ ಸೋಲು ಗೆಲುವು ಯಾರಿಗೇ ಆದರೂ ರಣಹೇಡಿಗಳು ಎರಡೂ ಪಂಗಡಗಳಲ್ಲಿ ಕಾಣುವುದಿಲ್ಲ. ಯುದ್ಧಭೂಮಿಯಲ್ಲಿ ಹೊಂದಾಣಿಕೆಯ ಮಾತೇ ಇರಲಿಲ್ಲ.

ಇಷ್ಟೊಂದು ಪೌರಾಣಿಕ ಮಹತ್ವ ಹೊಂದಿರುವ ಕುರುಕ್ಷೇತ್ರ ಯುದ್ಧವನ್ನು ಈಗಿನ ಚುನಾವಣೆ ಕಣಕ್ಕೆ ಹೋಲಿಸು ತ್ತಿರುವುದು ವಿಪರ್ಯಾಸ ಎನಿಸುತ್ತದೆ. ಯಾವ ಸೈದ್ಧಾಂತಿಕ ಹಿನ್ನೆಲೆಯೂ ಇಲ್ಲದೆ ಮರ್ಕಟನಿಗಿಂತಲೂ ಒಂದಷ್ಟು ಹೆಚ್ಚೇ ಅತ್ತಿಂದಿತ್ತ ಜಿಗಿದಾಡುವುದು, ಟಿಕೆಟ್‌ ಸಿಗದಿದ್ದಕ್ಕೆ ಚೀರಾಟ, ರಂಪಾಟ, ಕಣ್ಣೀರಿಡುವುದು, ನಿನ್ನೆಮೊನ್ನೆ ವಾಚಾಮಗೋಚರವಾಗಿ ನಿಂದಿಸಿದವರ ಹೆಗಲ ಮೇಲೇ ಕೈಹಾಕುವುದು, ಸ್ವಾರ್ಥಸಾಧನೆಗಾಗಿ ಅವಕಾಶವಾದಿ ರಾಜಕಾರಣವೇ ಕಣ್ಣಿಗೆ ರಾಚುತ್ತಿರುವುದನ್ನು ಕುರುಕ್ಷೇತ್ರದಂಥ ಯುದ್ಧಕ್ಕೆ ಹೋಲಿಸುವುದು ಸರಿಯಲ್ಲ. ಕುರುಕ್ಷೇತ್ರ ಕಥನ, ಕದನ ಎಂದರೆ ಈಗಿನ ರಾಜಕಾರಣದಂತೆಯೇ ಇದ್ದಿರಬಹುದು ಎಂದೇ ಭವಿಷ್ಯದ ಪೀಳಿಗೆ
ಭಾವಿಸಬಹುದಲ್ಲವೇ? ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗಾ

ಇದಲ್ಲವೇ ಉತ್ತಮ ಆಡಳಿತದ ಲಕ್ಷಣ?

ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿ ಕಚೇರಿಗೆ ಮೊನ್ನೆ ನನ್ನ ಹಿತೈಷಿಗಳಾದ ಹಿರಿಯರೊಬ್ಬರ ಖಾಲಿ ನಿವೇಶನದ ವಾರ್ಷಿಕ ಕಂದಾಯ ಕಟ್ಟಲು ಹೋಗಿದ್ದೆ. ಆ ಭಾಗದ ಸಾರ್ವಜನಿಕರು ತಮ್ಮತಮ್ಮ ಕೆಲಸಕ್ಕಾಗಿ ಅಧಿಕ ಸಂಖ್ಯೆಯಲ್ಲಿಯೇ ಬಂದಿದ್ದರು. ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂದವರನ್ನು ಸೌಜನ್ಯದಿಂದ ಮಾತನಾಡಿಸುತ್ತಾ ಅರ್ಜಿ ಅಹವಾಲು ಸ್ವೀಕರಿಸುತ್ತಾ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿಕೊಡುತ್ತಿದ್ದರು.

ಈ ನಡುವೆ, ಮನೆ ಕರ ಕಟ್ಟಲು ಬಂದವರೊಬ್ಬರ ಕಂದಾಯದ ಬಿಲ್ ಇಷ್ಟು, ಇದರೊಂದಿಗೆ ನೀರಿನ ಬಾಬ್ತು ಸೇರಿದೆ ಎಂದು ಅಧಿಕಾರಿ ತಿಳಿಸಿದರು. ಮನೆ ಮಾಲೀಕರು ‘ಸರ್, ನಮಗೆ ಪಂಚಾಯಿತಿ ವತಿಯಿಂದ ನೀರು ಬರದೆ ಎಷ್ಟೋ ತಿಂಗಳುಗಳಾಗುತ್ತಾ ಬಂತು. ನೀರಿನ ತೆರಿಗೆ ಹೇಗೆ ಕಟ್ಟಲಿ’ ಎಂದು ಅಳಲು ತೋಡಿಕೊಂಡರು. ತಕ್ಷಣವೇ ಆ ಭಾಗಕ್ಕೆ ನೀರು ಬಿಡುವ ವ್ಯಕ್ತಿಯನ್ನು ಫೋನ್ ಮೂಲಕ ಸಂಪರ್ಕಿಸಿ, ಅವರ ಮನೆಗೆ ನೀರು ಬಿಡುವ ಕೆಲಸವಾಗಬೇಕೆಂದು ತಾಕೀತು ಮಾಡಿದರು. ‘ನೀರಿನ ಮೇಲಿನ ಕಂದಾಯವನ್ನು ನಾವು ವಸೂಲಿ ಮಾಡುತ್ತೇವೆ. ಹೀಗಿರುವಾಗ ನೀರು ಸರಿಯಾಗಿ ಹೋಗದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು. ನೀರು ಬರುವಂತೆ ಮಾಡಲಾಗುವುದೆಂಬ ಭರವಸೆ ನೀಡಿದಾಗ ಆ ಗ್ರಾಹಕರಲ್ಲಿ ಒಂದು ರೀತಿಯ ಧನ್ಯತಾಭಾವ ಬಂದಂತಿತ್ತು. ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಅನೇಕ ಕಡೆ ಇಂತಹ ವಾತಾವರಣ ಸಿಗುವುದು ವಿರಳ. ಹಳ್ಳಿಯಿಂದ ದಿಲ್ಲಿಯತನಕ ಕಚೇರಿಗಳಲ್ಲಿ ಈ ಬಗೆಯ ಜನಸ್ನೇಹಿ ನೌಕರರು ಇದ್ದರೆ ಅದು ಉತ್ತಮ ಆಡಳಿತದ ಲಕ್ಷಣ ಅಲ್ಲವೇ? ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT