ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಖದೀಮರಿಗೆ ‘ವರ’ಪ್ರಸಾದ

Published : 22 ಸೆಪ್ಟೆಂಬರ್ 2024, 20:21 IST
Last Updated : 22 ಸೆಪ್ಟೆಂಬರ್ 2024, 20:21 IST
ಫಾಲೋ ಮಾಡಿ
Comments

ಖದೀಮರಿಗೆ ‘ವರ’ಪ್ರಸಾದ

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ
ನಂದಿನಿ ತುಪ್ಪವನ್ನು ಮಾತ್ರ ಬಳಸಿ ಪ್ರಸಾದಗಳ ಗುಣಮಟ್ಟ ವನ್ನು ಕಾಯ್ದು ಕೊಳ್ಳುವಂತೆ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ. ರಾಜ್ಯದ ಪ್ರಮುಖ ದೇವಸ್ಥಾನವೊಂದಕ್ಕೆ ಇತ್ತೀಚೆಗೆ ಹೋಗಿದ್ದಾಗ, ಪ್ರಸಾದವೆಂದು ಅಲ್ಲಿನ ಕೌಂಟರ್‌ನಲ್ಲಿ ಲಾಡು ಖರೀದಿಸಿ ತಂದಿದ್ದೆ. ಆದರೆ ಮನೆಗೆ ಬಂದು ಅದನ್ನು ನೋಡಿದಾಗ, ಲಾಡು ಬದಲಿಗೆ ಅದು ಬರೀ ಕಡ್ಲೆಹಿಟ್ಟಿನ ಉಂಡೆಯಂತೆ ಇತ್ತು. ತಯಾರಿಸಿ ಎಷ್ಟು ದಿನಗಳಾಗಿದ್ದವೋ? ಗುಂಡುಕಲ್ಲಿನಂತೆ ಇದ್ದ ಅದನ್ನು ಚಾಕು ಬಳಸಿ ಕತ್ತರಿಸಬೇಕಾದದ್ದು ಲಾಡುವಿನ ಗುಣಮಟ್ಟಕ್ಕೆ ಸಾಕ್ಷಿಯಂತಿತ್ತು. ₹25ರ ಲಾಡು ಪೊಟ್ಟಣದ ಮೇಲೆ ಲಾಡುವಿನ ದರವಾಗಲಿ, ತಯಾರಿಸಿದ ದಿನಾಂಕವಾಗಲಿ ಇರಲಿಲ್ಲ. ಇನ್ನು ಅದು ಎಷ್ಟು ದಿನಗಳವರೆಗೆ ಸೇವಿಸಲು ಯೋಗ್ಯ ಎನ್ನುವ ಮಾಹಿತಿ ಕೂಡ ಇರಲಿಲ್ಲ. ಆಹಾರ ಮಾನದಂಡಗಳಿಗೆ ಅನುಗುಣವಾಗಿ ಇಂತಹ ಮಾಹಿತಿ
ಗಳನ್ನೆಲ್ಲ ನೀಡಬೇಕಾದುದು ಕಡ್ಡಾಯ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಇವೆಲ್ಲ ಗೊತ್ತೇ ಇಲ್ಲ ಎನಿಸುತ್ತದೆ! ಇನ್ನು ಲಾಡು ಸರಬರಾಜು ಮಾಡಿ ಮಾರಾಟ ಮಾಡಲು ಕರೆಯುವ ಟೆಂಡರ್ ಪ್ರಕ್ರಿಯೆಯಲ್ಲಿನ ಅವ್ಯವಹಾರವು ಕಳಪೆ ಗುಣಮಟ್ಟಕ್ಕೆ ಕಾರಣ. ನಮ್ಮ ದೈವಭಕ್ತರು ಅದು ಹೇಗಿದ್ದರೂ ‘ದೇವರ ಪ್ರಸಾದ’ ಎಂದು ಭಾವಿಸಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಪಡೆದಿರುವುದರಿಂದ, ಯಾರೂ ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಅದು ಇಂತಹ ಖದೀಮರಿಗೆ ‘ವರಪ್ರಸಾದ’ ಆಗಿದೆ.

–ಬಿ.ಎಂ.ಭ್ರಮರಾಂಭ, ಮೈಸೂರು

ಕೈದಿಗಳ ‘ನಿಯಂತ್ರಣ’ದಲ್ಲಿ ಜೈಲು ಆಡಳಿತ

ಕೊಲೆ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಕಲ್ಪಿಸಿದ್ದ ಆರೋಪಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಿರುವಾಗಲೇ, ಜೈಲಿನೊಳಗೆ ಮೊಬೈಲ್ ಫೋನ್‌ಗಳ ಅಂಗಡಿಯನ್ನೇ ತೆರೆದಿದ್ದ ವಿಚಾರಣಾಧೀನ ಕೈದಿಯೊಬ್ಬನನ್ನು ಈ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದರೆಂದು ವರದಿಯಾಗಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಶಶಿಕಲಾ ನಟರಾಜನ್ ಅವರಿಗೆ, ಹಣ ಪಡೆದು ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದ ಬಗ್ಗೆ ಕೆಲವು ವರ್ಷಗಳ ಹಿಂದೆ ಕಾರಾಗೃಹ ಇಲಾಖೆಯ ಅಂದಿನ ಡಿಐಜಿಯೇ ದನಿ ಎತ್ತಿದ್ದರು. ಈ ಹಳೆಯ ಹಗರಣಗಳ ವಿರುದ್ಧ ಆಗಲೇ ಕಟ್ಟುನಿಟ್ಟಿನ ಕ್ರಮ ಜರುಗಿಸಿ
ದ್ದಿದ್ದರೆ ಇಂತಹವು ಮರುಕಳಿಸುತ್ತಿರಲಿಲ್ಲ. ಇತರೆಡೆಯ ಜೈಲುಗಳಲ್ಲಿಯೂ ಇಂತಹುದೇ ‘ವ್ಯವಸ್ಥೆ’ ಇರಬಹುದು. ಇದನ್ನೆಲ್ಲಾ ಗಮನಿಸಿದರೆ, ಕೆಲ ಜೈಲು ಸಿಬ್ಬಂದಿಯ ನೆರವಿನಿಂದ ಕಾರಾಗೃಹ ಇಲಾಖೆಯ ಆಡಳಿತವನ್ನು ಜೈಲುವಾಸಿಗಳೇ ‘ಸುವ್ಯವಸ್ಥಿತವಾಗಿ’ ನಡೆಸುತ್ತಿರುವಂತಿದೆ! 

–ಸ್ವಾತಿ ಪಿ. ಗೌಡ, ಬೆಂಗಳೂರು

ಒಂದು ರಾಷ್ಟ್ರ... ನಡೆಯಲಿ ಚರ್ಚೆ

‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಚಿಂತನೆಯಲ್ಲಿ ಒಂದು ಎಂಬುದನ್ನು ಏಕಶಿಲೆ ಆಗಿ ಪರಿಗಣಿಸ
ಲಾಗಿದೆಯೇ ವಿನಾ ಏಕತೆ ಎಂದಲ್ಲ. ಇದರ ಜತೆಗೆ ರಾಜಕಾರಣ ಎಂದರೆ ಮುಖ್ಯವಾಗಿ ಚುನಾವಣೆ ಗೆಲ್ಲುವುದು ಎಂಬ ನಂಬಿಕೆಯೂ ಸೇರಿಕೊಂಡಿದೆ. ಮತದಾನ ಪ್ರಕ್ರಿಯೆ ಈ ಯಂತ್ರಕ್ಕೆ ಸೂಕ್ತವಾಗಿರಬೇಕು ಎಂಬ ಆಶಯವೂ ಇಲ್ಲಿದೆ. ನಮ್ಮ‌ ಪ್ರಜಾಪ್ರಭುತ್ವ ವ್ಯವಸ್ಥೆಯು ಯು.ಕೆ. (ಪ್ರಧಾನಿ + ರಾಜ, ರಾಣಿ) ಹಾಗೂ ಅಮೆರಿಕದಲ್ಲಿ (ಅಧ್ಯಕ್ಷೀಯ) ಇರುವುದಕ್ಕಿಂತ ಭಿನ್ನ. ಸ್ಥಳೀಯ ಅಂದರೆ ಪಂಚಾಯಿತಿ, ಮುನಿಸಿಪಾಲಿಟಿ, ನಗರಸಭೆ, ಮಹಾನಗರಪಾಲಿಕೆ
ಚುನಾವಣೆಗಳನ್ನು ರಾಜ್ಯ, ರಾಷ್ಟ್ರ ಮಟ್ಟದ ಚುನಾವಣೆಗಳ ಜತೆ ಹೊಂದಿಸುವ ವಿಚಾರವೇ ಅತಾರ್ಕಿಕ.

ಈಗ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆಯನ್ನು ಸಂಸತ್ತಿನಲ್ಲಿ ಮಂಡಿಸಿದರೂ ಅನುಷ್ಠಾನಕ್ಕೆ ಬೇಕಾಗುವ ಸಾಂವಿಧಾನಿಕ ತಿದ್ದುಪಡಿಗಳನ್ನು ರೂಪಿಸಿ ಅನುಮೋದನೆ ಪಡೆಯುವುದು ಸುಲಭವಲ್ಲ. ಅದು ಸಾಧ್ಯವಾದರೂ ವಿಧಾನಸಭೆಗಳು ಇದನ್ನು ಅನುಮೋದಿಸುವ ಕೆಲಸಕ್ಕೆ ಸಮಯ ಹಿಡಿಯುತ್ತದೆ. ಈ ನಡುವೆ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆದಿರುತ್ತದೆ. ಆಗ ಆ ವಿಧಾನಸಭೆಗಳ ಐದು ವರ್ಷಗಳ ಅವಧಿ ಏನಾಗಬೇಕು? ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ದೀರ್ಘಕಾಲದಿಂದ ನಡೆದೇ ಇಲ್ಲ. ನ್ಯಾಯಾಲಯ ಅಂತಿಮ ಗಡುವು ಕೊಟ್ಟಲ್ಲಿ ನಡೆಸಬೇಕಾಗುತ್ತದೆ. ಇದಕ್ಕಾಗಿ ಬೇರೆ ಚುನಾವಣೆಗಳ ವೇಳಾಪಟ್ಟಿಗಾಗಿ ಕಾಯಬೇಕೆ? ಒಟ್ಟಿನಲ್ಲಿ ಇದು ಗೋಜಲುಗಳ ಸರಮಾಲೆಯನ್ನೇ ಸೃಷ್ಟಿಸಬಹುದು. ಚುನಾವಣಾ ಆಯೋಗ ಈ ವಿಷಯದಲ್ಲಿ ತನ್ನ ನಿಲುವನ್ನು ವ್ಯಕ್ತಪಡಿಸಬೇಕು. ಮಾತುಕತೆಗಾಗಿ ಎಲ್ಲ ರಾಜಕೀಯ ಪಕ್ಷಗಳನ್ನು ಆಹ್ವಾನಿಸಬೇಕು. ಇದು ಒಂದು ರಾಜಕೀಯ ಪಕ್ಷ, ಒಂದು ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರ ಅಲ್ಲ.

–ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಲೋಕಾಯುಕ್ತದ ಮಾಹಿತಿ ಸರ್ಕಾರಕ್ಕೆ ತಿಳಿಯದೇ?

‘ಎಚ್.ಡಿ.ಕುಮಾರಸ್ವಾಮಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜಿ.ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆ ಮತ್ತು ವಿಚಾರಣೆಗೆ ಅನುಮತಿ ಕೋರಿ ಲೋಕಾಯುಕ್ತವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ ಎಂಬ ಗೋಪ್ಯ ಮಾಹಿತಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿದ್ದಾದರೂ ಹೇಗೆ?’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವುದಾಗಿ ವರದಿಯಾಗಿದೆ. ಅಯ್ಯೋ ಪಾಪ, ನಮ್ಮ ರಾಜ್ಯಪಾಲರು ಅದೆಷ್ಟು ಅಮಾಯಕರು! ಯಾರೋ ಕಿಡಿಗೇಡಿಗಳು, ದೇಶದ್ರೋಹಿಗಳು, ಭಯೋತ್ಪಾದಕರು, ನಾಡದ್ರೋಹಿಗಳು, ಸಮಾಜಘಾತುಕರು ಅಷ್ಟೇ ಅಲ್ಲದೆ ರಾಜಕೀಯ ವಿರೋಧಿಗಳು ಇಡುವ ಪ್ರತಿ ಹೆಜ್ಜೆಯೂ ಸರ್ಕಾರದ ಗಮನಕ್ಕೆ ಬರುತ್ತದೆ. ಅಂತಹದ್ದರಲ್ಲಿ ಲೋಕಾಯುಕ್ತದ ಮಾಹಿತಿಗಳು ಸರ್ಕಾರಕ್ಕೆ ಗೊತ್ತಾಗುವುದಿಲ್ಲವೇ? ಅಷ್ಟಕ್ಕೂ ಈ ವಿಚಾರ ಸರ್ಕಾರಕ್ಕೆ ಅಥವಾ ಸಾರ್ವಜನಿಕರಿಗೆ ಗೊತ್ತಾದರೆ ಏನೂ ವ್ಯತ್ಯಾಸ ಆಗುವುದಿಲ್ಲ. ಪ್ರಕರಣದಲ್ಲಿ ಹುರುಳಿದೆ ಎಂದು ಕಂಡುಬಂದರೆ ತಮ್ಮ ವಿವೇಚನೆಯ ಅನುಸಾರ ಅನುಮತಿ ನೀಡಬೇಕು ಅಥವಾ ಹುರುಳಿಲ್ಲ ಎನಿಸಿದರೆ ಅನುಮತಿ ನಿರಾಕರಿಸಬೇಕು. ಅದನ್ನು ಬಿಟ್ಟು ಈ ಪ್ರಶ್ನೆ ಏಕೋ?

–ಪತ್ತಂಗಿ ಎಸ್. ಮುರಳಿ, ಬೆಂಗಳೂರು


ಅದೇ ಚಾಳಿ?!

ಮೊನ್ನೆ, ಇದ್ದಕ್ಕಿದ್ದಂತೆ
ಪರಸ್ಪರ ಕಾದಾಡಿದವಂತೆ
ಅರಮನೆಯ ಅಂಗಳದಲ್ಲಿ
ದಸರಾ ಆನೆಗಳಾದ
ಧನಂಜಯ, ಕಂಜನ್,
ಪ್ರಾಣಿಪ್ರಿಯರಲ್ಲಿ ಸುಳಿದಿದೆ ಪ್ರಶ್ನೆ,
ಅರೆ, ಸೌಮ್ಯವಾಗಿ ತಾಲೀಮು
ನಡೆಸುತ್ತಿದ್ದ ಇವಕ್ಕೂ ಬಂತೇ
ಬಿಳಿಯಾನೆಗಳ ಚಾಳಿ?!

 -ಮ.ಗು.ಬಸವಣ್ಣ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT