ಗ್ರಾಮೀಣ ಸಾರಿಗೆ ಸಂಚಾರಕ್ಕೆ ‘ನಿಶ್ಶಕ್ತಿ’

‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಬಸ್ಗಳ ಸಂಚಾರ ಬಹುತೇಕ ನಿಂತುಹೋಗಿದೆ. ಇದಕ್ಕೆ ಹಲವು ಉದಾಹರಣೆ ನೀಡಬಹುದು. ಹೊಳಲ್ಕೆರೆಯಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ.

ಇದರಿಂದ ಹೊಳಲ್ಕೆರೆ, ಚಿತ್ರಹಳ್ಳಿ, ಹೊರಕೇದೇವಪುರ, ಉಪ್ಪರಿಗೇನ ಹಳ್ಳಿ, ಹಿರಿಯೂರು ಮಾರ್ಗವಾಗಿ ಬೆಂಗಳೂರಿಗೆ ಬರುವ 75ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಅನುಕೂಲವಾಗಿದೆ. ಆದರೆ, ಈ ಹಳ್ಳಿಗಳಿಗೆ ತಲಪಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ.

ರಾಜ್ಯದ ಬಹುತೇಕ ಗ್ರಾಮಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಪ್ರತಿದಿನ ಹಳ್ಳಿಗರು ಸರಕು ಸಾಗಣೆ ಆಟೊವನ್ನು ಅವಲಂಬಿಸುವಂತೆ ಆಗಿದೆ. ಗ್ರಾಮೀಣ ಸಾರಿಗೆ ಸಂಪರ್ಕ ಬಲಗೊಂಡರಷ್ಟೇ ಗ್ರಾಮಾಭಿವೃದ್ಧಿ ಸಾಧ್ಯ. ಸರ್ಕಾರಕ್ಕೆ ಈ ಸತ್ಯ ಮನದಟ್ಟಾಗಲಿ.

– ಮಂಜುನಾಥ ಜಿ.ಎಂ., ಹೊಳಲ್ಕೆರೆ

ಘನತೆಯ ಬದುಕು ಮತ್ತು ಅಲ್ಪ ಗೌರವಧನ

ಚಿಣ್ಣರ ಭವಿಷ್ಯವನ್ನು ರೂಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪಾತ್ರ ಹಿರಿದು. ಗಣತಿ, ಮತದಾರರ ನೋಂದಣಿಯಲ್ಲೂ ಅವರ ಕಾರ್ಯ ಶ್ಲಾಘನೀಯ. ಆದರೆ, ಅತ್ಯಲ್ಪ ಗೌರವಧನ ನಂಬಿಕೊಂಡೇ ಅವರು ಬದುಕು ಸವೆಸುತ್ತಿದ್ದಾರೆ. ಗ್ರ್ಯಾಚುಟಿ ಸೇರಿದಂತೆ ಯಾವುದೇ ಸೌಲಭ್ಯ ಅವರಿಗೆ ದೊರೆಯುತ್ತಿಲ್ಲ.

ಮನೆ ನಿರ್ಮಾಣದ ಕೆಲಸ ಮಾಡುವ ಮಹಿಳೆಯರಿಗೆ ದಿನ ವೊಂದಕ್ಕೆ ₹800 ಕೂಲಿ ಸಿಗುತ್ತದೆ. ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಪ್ಲಂಬರ್, ಹೌಸ್ ಕೀಪರ್ಗಳಿಗೆ ಒಂದು ಸಾವಿರ ರೂಪಾಯಿವರೆಗೂ ಕೂಲಿ ನೀಡಲಾಗುತ್ತದೆ. ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ದುಡಿಯುವ ಕಾರ್ಯಕರ್ತೆಯರು ಅತ್ಯಲ್ಪ ಗೌರವಧನ ದಿಂದ ಘನತೆಯ ಬದುಕು ನಡೆಸಲು ಸಾಧ್ಯವೆ?

– ಬಿ.ಎಚ್.ಎಸ್. ಮೂರ್ತಿ, ಬೆಂಗಳೂರು

ರೈಲುಗಳಲ್ಲಿ ಹೆಚ್ಚುತ್ತಿರುವ ‘ಕಾಗದ ತ್ಯಾಜ್ಯ’

ಭಾರತೀಯ ರೈಲ್ವೆಯು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಕಾಗದರಹಿತ ರೈಲು ಟಿಕೆಟ್ ಹಾಗೂ ಇತರೆ ಕ್ರಮಗಳ ಮೂಲಕ ರೈಲಿನಲ್ಲಿ ಕಾಗದದ ಬಳಕೆಯನ್ನು ಕಡಿಮೆ ಮಾಡಿದೆ. ಪ್ರಯಾಣಿಕಸ್ನೇಹಿ ಕ್ರಮಗಳ ಮೂಲಕ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ.

ದೂರ ಪ್ರಯಾಣದ ವಾತಾನುಕೂಲಿತ ರೈಲು ಬೋಗಿಗಳಲ್ಲಿ ಒದಗಿಸಲಾಗುವ ಶುಚಿಯಾದ ಬೆಡ್ಶೀಟ್ಗಳನ್ನು ದಪ್ಪನೆಯ ಕಾಗದದ ಕವರ್ಗಳಲ್ಲಿ ಹಾಕಿ ಕೊಡಲಾಗುತ್ತದೆ. ಇದರಿಂದ ಅಪಾರ ಪ್ರಮಾಣದ ಕಾಗದದ ಕವರ್ಗಳ ತ್ಯಾಜ್ಯ ರೈಲುಗಳಲ್ಲಿ ದಿನವೂ ಉತ್ಪತ್ತಿಯಾಗಿ, ಪ್ರಯಾಣಿಕರಿಗೆ ಕಾಲ ಕಸವಾಗಿ, ಬೋಗಿಗಳಲ್ಲಿ ಕಿರಿಕಿರಿ ಅನಿಸುವಷ್ಟು ಸಂಗ್ರಹವಾಗುತ್ತದೆ. ಅದರ ಸೂಕ್ತ ನಿರ್ವಹಣೆ ಇರುವುದಿಲ್ಲ. ಈ ಕುರಿತಂತೆ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ.

– ವೆಂಕಟೇಶ ಮಾಚಕನೂರ, ಧಾರವಾಡ

ಕಾಲಕ್ಕೆ ತಕ್ಕಂತೆ ಧರ್ಮ ಸುಧಾರಣೆಯಾಗಲಿ

ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಮೇಲ್ನೋಟಕ್ಕೆ ಸಂಪ್ರದಾಯವೆಂದು ಕಂಡರೂ, ಅದರ ಆಳದಲ್ಲಿ ಪುರುಷ ಪ್ರಧಾನ ಮನಃಸ್ಥಿತಿಯ ಬೇರುಗಳಿವೆ. ಮಹಿಳೆಯರ ನೈಸರ್ಗಿಕ ಜೈವಿಕ ಪ್ರಕ್ರಿಯೆ (ಋತುಚಕ್ರ) ‘ಅಶುದ್ಧ’ ಎಂದು ಬಿಂಬಿಸುವುದು ಅಥವಾ ಪುರುಷನ ಬ್ರಹ್ಮಚರ್ಯಕ್ಕೆ ಮಹಿಳೆಯೇ ಅಡ್ಡಿ ಎಂಬಂತೆ ಚಿತ್ರಿಸುವುದು ಸ್ತ್ರೀವಿರೋಧಿ ಧೋರಣೆ.

ಭಕ್ತಿಯ ಹಾದಿಯಲ್ಲಿ ಲಿಂಗದ ಆಧಾರದ ಮೇಲೆ ತಡೆಗೋಡೆ ನಿರ್ಮಿಸುವುದು ಸಂವಿಧಾನದ 14ನೇ ವಿಧಿಯ ನೇರ ಉಲ್ಲಂಘನೆ. ಇದು ಮಹಿಳಾ ಹಕ್ಕಿನ ವಂಚನೆಯೂ ಹೌದು. ದೇವಸ್ಥಾನಗಳು ಸಾರ್ವಜನಿಕ ಸಂಸ್ಥೆಗಳಾಗಿದ್ದು, ಅಲ್ಲಿ ಪುರುಷರಿಗೆ ಇರುವ ಸವಲತ್ತು ಮಹಿಳೆಯರಿಗೆ ಇಲ್ಲದಿರುವುದು ಲಿಂಗ ತಾರತಮ್ಯದ ಪರಮಾವಧಿಯಾಗಿದೆ. ಕಾಲಕ್ಕೆ ತಕ್ಕಂತೆ ಧರ್ಮವೂ ಸುಧಾರಣೆ ಆಗಬೇಕಲ್ಲವೆ?

– ಸಂಧ್ಯಾ ಎಚ್.ಎಸ್., ಹಂಪಿ

ಮನೆ ಮಾಲೀಕರ ನೆಮ್ಮದಿ ಕಸಿದ ಷರತ್ತು

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಒಳಗಿರುವ ನಿವೇಶನಗಳಲ್ಲಿನ ಮನೆಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದ ರಿಂದ ವಿನಾಯಿತಿ ನೀಡಲಾಗಿದೆ. ಆದರೂ, ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸದಿರುವುದು ದುರದೃಷ್ಟಕರ.

ಸರ್ಕಾರ ಈ ಕುರಿತಂತೆ ತೀರ್ಮಾನ ಕೈಗೊಳ್ಳದೆ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ಸೂರು ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕನಸು. ಜೀವಿತಾವಧಿಯಲ್ಲಿ ದುಡಿದ ಹಣವನ್ನು ಮನೆ ನಿರ್ಮಾಣಕ್ಕೆ ಬಳಸುತ್ತಾರೆ. ಗ್ರಾಮೀಣ ಭಾಗದಲ್ಲಿ ಸರ್ಕಾರ ನಿಗದಿಪಡಿಸಿರುವ ಮಿತಿಯೊಳಗೆ ನಿರ್ಮಿಸಿರುವ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಅವೈಜ್ಞಾನಿಕ ಷರತ್ತುಗಳು ಮುಳುವಾಗಿವೆ. ಸರ್ಕಾರ ಕೂಡಲೇ ಈ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿ ಪ್ರಕಟಿಸಬೇಕಿದೆ.

– ಕಬೀರ್ ನಾಯ್ಕ್, ಹರಪನಹಳ್ಳಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಸ್ ಸೌಲಭ್ಯ ಹೆಚ್ಚಿಸಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಮಾನಸಿಕ ಒತ್ತಡವಿಲ್ಲದೆ, ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರ ತಲಪುವುದು ಮುಖ್ಯ.

ಶಾಲೆಯ ವಾಹನ ಅಥವಾ ಸ್ವಂತ ವಾಹನ ಸೌಲಭ್ಯವಿರುವ ವಿದ್ಯಾರ್ಥಿಗಳು ಸುಲಭವಾಗಿ ತಲಪಬಹುದು. ಆದರೆ ಬಡ, ಮಧ್ಯಮವರ್ಗದ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಬಸ್ಗಳನ್ನೇ ನೆಚ್ಚಿಕೊಂಡಿದ್ದಾರೆ. ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಇದರಿಂದಾಗಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಅಥವಾ ಸೀಟು ಸಿಗದೆ ತೊಂದರೆಯಾಗುವುದು ಸಹಜ. ಹಾಗಾಗಿ, ಪರೀಕ್ಷಾ ದಿನ ಗಳಂದು ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವುದು ಉತ್ತಮ.

– ಬಿ. ಗಣೇಶ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.