ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಧ್ವನಿ ಅರಿಯಿರಿ!

Last Updated 26 ಆಗಸ್ಟ್ 2018, 19:39 IST
ಅಕ್ಷರ ಗಾತ್ರ

ಇವನ ನಾಲಿಗೆ ಸರಿಯಾಗಿ ಹೊರಳುತ್ತಿಲ್ಲ. ದನ ಕಾಯೋಕೆ ಕಳಿಸು ಎಂದು ನಮ್ಮ ಮೇಷ್ಟ್ರು ಅಪ್ಪನನ್ನು ಶಾಲೆಗೆ ಕರೆಸಿ ಹೇಳಿದ್ದರು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್ ನೆನಪಿಸಿಕೊಂಡಿದ್ದಾರೆ (ಪ್ರ.ವಾ., ಆ. 26).

ಹಳ್ಳಿಗಾಡಿನ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಈಗಲೂ ಸಾವಿರಾರು ಮಂದಿ ಶಿಕ್ಷಕರು ಇಂಥ ಮಾತುಗಳನ್ನು ಹೇಳುತ್ತಲೇ ಇದ್ದಾರೆ.

ಒಮ್ಮೆ ಮಂಡ್ಯದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆಯುತ್ತಿದ್ದ ವಿಚಾರಸಂಕಿರಣದಲ್ಲಿ ಬಿ.ಇಡಿ. ಕಾಲೇಜಿನಲ್ಲಿ ಹತ್ತಾರುವರ್ಷಗಳಿಂದ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕರೊಬ್ಬರು, ‘ನಮ್ಮ ಕಾಲೇಜಿಗೆ ಹೊಂದಿಕೊಂಡಂತಿರುವ ಪ್ರೌಢಶಾಲೆಗೆ ಬರುವ ಹುಡುಗಿಯೊಬ್ಬಳನ್ನು ನಿಮ್ಮ ತಂದೆಯ ಹೆಸರು ಏನೆಂದು ಕೇಳಿದಾಗ ‘ಸಂಕ್ರಪ್ಪ’ ಎಂದಳು. ಅವಳಿಗೆ ‘ಶಂಕರಪ್ಪ’ ಎಂದು ಉಚ್ಚರಿಸಲು ಸಹ ಬರುವುದಿಲ್ಲ’ ಎಂದು
ಹಂಗಿಸಿದ್ದರು. ಆಗ ಸಭೆಯಲ್ಲಿದ್ದವರಲ್ಲಿ ಹೆಚ್ಚಿನವರು ಗೊಳ್ ಎಂದು ನಕ್ಕರು.

ಶಿಕ್ಷಣ ತಜ್ಞರೆಂದು ಖ್ಯಾತಿ ಪಡೆದಿದ್ದ ಅವರು, ಹಳ್ಳಿಯಿಂದ ನಗರದ ಶಾಲೆಗೆ ಬರುತ್ತಿದ್ದ ಆ ಹುಡುಗಿಯು ‘ಶ’ ಕಾರಕ್ಕೆ ಬದಲಾಗಿ ‘ಸ’ ಕಾರವನ್ನು ಉಚ್ಚರಿಸಲು ಕಾರಣವೇನೆಂಬುದನ್ನು ಭಾಷಾವಿಜ್ಞಾನದ ನೆಲೆಯಲ್ಲಿ ವಿಶ್ಲೇಷಣೆ ಮಾಡಲು ಪ್ರಯತ್ನಿಸಿದ್ದರೆ ಉತ್ತರ ದೊರಕುತ್ತಿತ್ತು.

ಮಂಡ್ಯದ ಸುತ್ತಮುತ್ತಣ ಹಳ್ಳಿಗಳಲ್ಲಿ ಬಳಕೆಯಾಗುವ ಕನ್ನಡದ ಒಳನುಡಿಯಲ್ಲಿ ‘ಶ’ಕಾರದ ಉಚ್ಚಾರವಿಲ್ಲ. ದಿನನಿತ್ಯದ ಆಡುಮಾತಿನಲ್ಲಿ ಇಲ್ಲದ ಶಕಾರವನ್ನು ಆ ಹುಡುಗಿಗೆ ಉಚ್ಚರಿಸಲಾಗುತ್ತಿಲ್ಲ. ಪಾಠ ಮಾಡುವ ಕನ್ನಡ
ಅಧ್ಯಾಪಕರು ಇದನ್ನು ಅರಿತು, ‘ಸ’ಕಾರ ಮತ್ತು ‘ಶ’ಕಾರಗಳ ವ್ಯತ್ಯಾಸವನ್ನು ತಿಳಿಸಿದ್ದರೆ ಕೆಲವೇ ದಿನಗಳಲ್ಲಿ ಸರಿಯಾಗಿ ಬಳಸುವುದನ್ನು ಆಕೆ ಕಲಿತುಕೊಳ್ಳುತ್ತಿದ್ದಳು.

ಕರ್ನಾಟಕದ ಉದ್ದಗಲದಲ್ಲಿ ಬಳಕೆಯಾಗುತ್ತಿರುವ ಕನ್ನಡದಲ್ಲಿ ಹತ್ತಾರು ಬಗೆಯ ಪ್ರಾದೇಶಿಕ ಒಳನುಡಿಗಳು ಮತ್ತು ನೂರಾರು ಬಗೆಯ ಸಾಮಾಜಿಕ ಒಳನುಡಿಗಳಿವೆ. ಉತ್ತರ ಕರ್ನಾಟಕದ ಗಡಿಭಾಗದ ಒಳನುಡಿಗಳಲ್ಲಿ ಮರಾಠಿ ಭಾಷೆಯ ಪ್ರಭಾವದಿಂದ ಮಹಾಪ್ರಾಣಗಳು ಹೆಚ್ಚಿರುವುದು ಕಂಡು ಬಂದರೆ, ಒಳನಾಡಿನ ಜಿಲ್ಲೆಗಳಲ್ಲಿ ಮಹಾಪ್ರಾಣಗಳ ಬಳಕೆಯಿಲ್ಲ. ಇದೇ ರೀತಿ ‘ಹಕಾರ, ವಿಸರ್ಗ, ಷಕಾರ’ಗಳ ಉಚ್ಚಾರದಲ್ಲಿಯೂ ಬಹಳ ವ್ಯತ್ಯಾಸಗಳಿವೆ. ಕನ್ನಡ ಅಧ್ಯಾಪಕರು ಮಕ್ಕಳಿಗೆ ಕನ್ನಡವನ್ನು ಕಲಿಸುವಾಗ, ಅವರ ಮನೆಯ ಕನ್ನಡದಲ್ಲಿ ಬಳಕೆಯಾಗುವ ಮಾತಿನ ಧ್ವನಿಗಳನ್ನು ಮನದಟ್ಟು ಮಾಡಿಕೊಂಡು, ಆಡು ಕನ್ನಡ ಮತ್ತು ಪಠ್ಯ ಕನ್ನಡದ ರಚನೆಯಲ್ಲಿ ಕಂಡು ಬರುವ ವ್ಯತ್ಯಾಸವನ್ನು ಅರಿತು ಪಾಠ ಮಾಡಬೇಕು. ಆಗ ‘ನಿನ್ನ ನಾಲಿಗೆ ಸರಿಯಾಗಿ ಹೊರಳುತ್ತಿಲ್ಲ’ ಎಂದು ಹಂಗಿಸುವ ಸಂದರ್ಭ ಬರುವುದಿಲ್ಲ.

ಸಿ.ಪಿ. ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT