ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬದುಕು ಹಸನಾಗಿಸುವ ಯೋಜನೆಗಳಿರಲಿ

Last Updated 6 ಜನವರಿ 2021, 15:48 IST
ಅಕ್ಷರ ಗಾತ್ರ

ದೇಶದಲ್ಲಿ ಒಡೆದು ಹಾಕಲಾಗಿರುವ 35 ಸಾವಿರ ದೇವಾಲಯಗಳ ಮರುನಿರ್ಮಾಣಕ್ಕೆ ಕಾನೂನು ರೂಪಿಸುವಂತೆ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸಲಹೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರು ಜನತೆಗೆ ಅಧ್ಯಾತ್ಮವನ್ನು ಬೋಧಿಸಲು ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದಾಗ, ‘ಭಾರತದ ಪತನಕ್ಕೆ ಕಾರಣ ಧರ್ಮವಲ್ಲ, ಬದಲಾಗಿ ಅದರ ಸ್ವಕೀಯತೆಯ ಜೀವವೂ ಉಸಿರೂ ಆದ ಅಪ್ಪಟ ಧರ್ಮ ಮರೆಯಾಗುತ್ತಿರುವುದು’ ಎಂಬುದನ್ನು ಕಂಡುಕೊಂಡರು. ದಾರಿದ್ರ್ಯಪೀಡಿತ ಜನಸಮುದಾಯಕ್ಕಾಗಿ ಅವರ ಹೃದಯ ನೊಂದಿತು. ತಮ್ಮ ಗುರು ಪರಮಹಂಸರು ಹೇಳಿದ್ದ ‘ಖಾಲಿ ಹೊಟ್ಟೆಯವರಿಗೆ ಧರ್ಮದಿಂದ ಉಪಯೋಗವಿಲ್ಲ’ ಎಂಬ ಮಾತನ್ನು ತಮ್ಮೊಂದಿಗಿದ್ದ ಸನ್ಯಾಸಿಗಳಿಗೆ ಅವರು ನೆನಪಿಸಿದ್ದರು. ಅಲ್ಲದೆ ‘ಭಗವಂತನನ್ನು ಅರಸಲು ನೀವು ಎಲ್ಲಿಗೆ ಹೋಗಬೇಕು? ದರಿದ್ರರು, ದುಃಖಿಗಳು, ದುರ್ಬಲರು ದೇವರಲ್ಲವೇ? ಅವರನ್ನೇಕೆ ಮೊದಲು ಪೂಜಿಸುವುದಿಲ್ಲ? ಗಂಗೆಯ ದಡದಲ್ಲಿ ಬಾವಿ ತೋಡುವುದೇಕೆ? ಜನರೇ ನಿಮ್ಮ ದೇವರಾಗಲಿ. ಅವರಿಗಾಗಿ ಕೆಲಸ ಮಾಡಿ’ ಎಂದು ಹೇಳಿದ್ದರು. ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ, ಹಿಂದೂ ಧರ್ಮಗ್ರಂಥಗಳಿಂದ ಆಯ್ದ ದೃಷ್ಟಾಂತಗಳ ಮೂಲಕ ವಿಶ್ವ ಸಾರ್ವತ್ರಿಕತೆಯ ಮನೋಧರ್ಮವನ್ನು ಪ್ರತಿಪಾದಿಸಿದ್ದರು.

ಬಸವಣ್ಣನವರು ಸ್ಥಾವರಕ್ಕೆ (ಗುಡಿ-ಗುಂಡಾರಗಳು) ಅಳಿವಿರುವುದನ್ನು ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ, ಸ್ಥಾವರ ಕಟ್ಟಡಗಳ ಬದಲಿಗೆ ಬಡವರು, ನಿರ್ಗತಿಕರಿಗೆ ಆಹಾರ, ಆಸರೆ ಒದಗಿಸಿ ಅವರ ಬದುಕು ಹಸನಾಗುವಂತಹ ಯೋಜನೆಗಳನ್ನು ರೂ‍ಪಿಸಲು ಸಮಾಜಮುಖಿ ಚಿಂತಕರು ಸರ್ಕಾರವನ್ನು ಕೋರಬೇಕು.

-ಬಸವರಾಜ ಹುಡೇದಗಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT