ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 14 ಜನವರಿ 2024, 18:29 IST
Last Updated 14 ಜನವರಿ 2024, 18:29 IST
ಅಕ್ಷರ ಗಾತ್ರ

‘ನಾನು ಕೃಷಿಕ’ ಎನ್ನುವ ಹೆಮ್ಮೆ ಇರಲಿ

‘ಕೃಷಿಕ ಎನ್ನಲು ಹೆಮ್ಮೆಪಡಿ’ ಎಂದು, ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಕೃಷಿಕರೊಬ್ಬರಿಗೆ ಹೈಕೋರ್ಟ್ ಹೇಳಿರುವುದು ನಿಜಕ್ಕೂ ರೈತರನ್ನು ಚಿಂತನೆಗೆ ಹಚ್ಚಬೇಕಾಗಿದೆ. ‘ರೈತ ಈ ದೇಶದ ಬೆನ್ನೆಲುಬು’, ‘ನಮ್ಮದು ಕೃಷಿಪ್ರಧಾನ ರಾಷ್ಟ್ರ’ ಎಂಬಂತಹ ಘೋಷಣೆಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ‘ನಾವು ರೈತರು’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳಲು ನಮಗೇಕೆ ಮುಜುಗರವಾಗುತ್ತಿದೆ ಎಂಬುದು ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಇದಕ್ಕೆ ನಮ್ಮ ಇಂದಿನ ವ್ಯವಸ್ಥೆ ಒಂದು ಕಾರಣವಾದರೆ, ಮತ್ತೊಂದು ಕಾರಣ ‘ನಾವು ರೈತರು’ ಎಂದು ಹೇಳಿಕೊಳ್ಳುವವರು ಅರೆಕಾಲಿಕ ಉದ್ಯೋಗಿಗಳಾಗಿರುವುದು. ಒಂದು ವೃತ್ತಿಯನ್ನು ಅವಲಂಬಿಸಿದ ಮೇಲೆ ಅದರಲ್ಲಿ ನಾವು ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ಆಗ ಮಾತ್ರ ನಾವು ಆ ಉದ್ಯೋಗದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ.

ಒಬ್ಬ ಸರ್ಕಾರಿ ನೌಕರನಿಂದ ಕನಿಷ್ಠ ಎಂಟು ಗಂಟೆಗಳ ಕೆಲಸವನ್ನು ನಿರೀಕ್ಷಿಸುತ್ತೇವೆ. ಆದರೆ ರೈತರಾದ ನಾವು ನಮ್ಮ ಕೆಲಸವನ್ನು ಪ್ರೀತಿಯಿಂದ ಒಪ್ಪಿ ಅಪ್ಪಿಕೊಂಡಿದ್ದೇವೆಯೇ? ನಮ್ಮಲ್ಲಿ ಕೆಲವರು ಬೆಳಿಗ್ಗೆ ಎದ್ದು ಕೆಲಸದವರಿಗೆ ಕೆಲಸ ಹೇಳಿ ಪೇಟೆ ಕಡೆಗೆ ಸುಮ್ಮನೆ ಹರಟೆ ಹೊಡೆಯಲೋ ರಾಜಕಾರಣ ಮಾಡಲೋ ಹೊರಟರೆಂದರೆ, ಮೋಜು ಮಸ್ತಿಯನ್ನೆಲ್ಲಾ ಮುಗಿಸಿ ಮನೆ ಸೇರುವುದು ನಡುರಾತ್ರಿಯೇ! ಬೆಳೆಗಳಿಗೆ ಕಾಡುಪ್ರಾಣಿಗಳ ಹಾವಳಿ, ರೋಗಬಾಧೆ, ಹವಾಮಾನ ವೈಪರೀತ್ಯದಂತಹವು ಕೃಷಿಯ ಬಗ್ಗೆ ನಮಗಿರುವ ಅಸಡ್ಡೆಗೆ ನಾವು ಕೊಡುವ ಸಬೂಬುಗಳು. ಕಾಡಿನಲ್ಲಿ ಆಹಾರ ಸಿಗದೆ ಪ್ರಾಣಿಗಳು ನಾಡಿಗೆ ಬರುತ್ತಿವೆ. ಒಂದೇ ಬಾರಿಗೆ ಹಲವು ಪಟ್ಟು ಹೆಚ್ಚು ಫಸಲನ್ನು ತೆಗೆಯಬೇಕೆಂಬ ದುರಾಸೆಯಿಂದ ವಿಷಕಾರಿ ರಾಸಾಯನಿಕಗಳನ್ನು ಉಪಯೋಗಿಸಿದ್ದರಿಂದ ನಮ್ಮ ಬೆಳೆಗಳು ರೋಗಗಳಿಗೆ ತುತ್ತಾದವು. ಹವಾಮಾನ ವೈಪರೀತ್ಯವೂ ನಮ್ಮ ತಪ್ಪಿನಿಂದಾಗಿಯೇ ಸಂಭವಿಸುತ್ತಿದೆ. ಒಂದು ಬೆಳೆಗೆ ಹೆಚ್ಚು ಬೆಲೆ ಸಿಕ್ಕಿದಾಗ ಎಲ್ಲರೂ ಅದರ ಹಿಂದೆಯೇ ಹೋಗುತ್ತೇವೆ. ಇವೆಲ್ಲವೂ ರೈತನ ಹಿನ್ನಡೆಗೆ ಕಾರಣವಾಗುತ್ತವೆ. ಕೃಷಿಯನ್ನೇ ದೂಷಿಸುವುದು ಬಿಟ್ಟು ಇಂತಹ ಸಂಗತಿಗಳ ಬಗ್ಗೆ ಗಮನಹರಿಸಿದಾಗ ‘ನಾನು ರೈತ’ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದೇನೊ!

–ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ಮುರುಕು ಮನೋಭಾವ ಯಾವುದು?

‘ಹಿಂದೂ ಸಮಾಜವನ್ನು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ‘ಮುರುಕು’ ರಾಮಯ್ಯ ಅಂಥವರು ಒಡೆ
ಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂರಿರುವ ಸಂಸದ ಅನಂತ ಕುಮಾರ ಹೆಗಡೆ
(ಪ್ರ.ವಾ., ಜ. 14), ‘ಅಲ್ಪಸಂಖ್ಯಾತರ ಮತಗಳಿಗಾಗಿ ಗತಿಗೆಟ್ಟ ಮಾನಸಿಕತೆಗೆ ನಮ್ಮ ವಿರೋಧವಿದೆ’ ಎಂದಿದ್ದಾರೆ. ಅಲ್ಪ
ಸಂಖ್ಯಾತರ ಬಗ್ಗೆ ಇಷ್ಟೊಂದು ದ್ವೇಷ, ಉದಾಸೀನ ಇರುವುದು ಮುರುಕು ಮನೋಭಾವ ಅಲ್ಲವೆ? ಇಂತಹ ಮನಸ್ಸು ಒಬ್ಬ ಸಂಸದರಿಗೆ ಇರುವುದು ಸರಿಯೇ? ಚುನಾಯಿತ ಮುಖ್ಯಮಂತ್ರಿಯನ್ನು ‘ಮುರುಕು’ ಎಂದು ಕರೆಯುವಷ್ಟು ಇವರ ಘನತೆ ಮುರುಕಾಗಿದೆಯೇ?

–ತಾ.ಸಿ.ತಿಮ್ಮಯ್ಯ, ಬೆಂಗಳೂರು

‘ಯೋಜನೆ’ಯ ಅನುಸಾರ ನಡೆಯುತ್ತಿದೆಯೇ?

‘ಅಯೋಧ್ಯೆಯು ಜಗತ್ತಿನ ಅತ್ಯಂತ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಲಿದೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿರುವುದನ್ನು ತಿಳಿದು ವಾರಾಣಸಿಯ ನೆನಪಾಯಿತು. ಕಾಶಿಗೆ ಹೋಗುವುದೆಂದರೆ ಪ್ರಿಯ ಚಟುವಟಿಕೆಯಾದ ಒಬ್ಬ ಪರಿಚಯಸ್ಥರು ತಮ್ಮ ಇತ್ತೀಚಿನ ಭೇಟಿಯ ನಂತರ ಉದ್ಗರಿಸಿ ದ್ದರು, ‘ಈಗ ಏನೂ ಸಾಮಾನ್ಯರಿಗೆ ಎಟಕುವಂತಿಲ್ಲ, ಎಲ್ಲಿ ಹೋದರೂ ಹಣ ಕೇಳುತ್ತಾರೆ’. ದೆಹಲಿಯ ‘ಪುರಾನಾ ಕಿಲಾ’ ಪ್ರದೇಶವನ್ನು ಆಧುನೀಕರಣಗೊಳಿಸಿದರೆ ಏನಾಗುತ್ತದೆ? ಹಿಂದಿಯ ‘ಬಾಜಾರ್’ ಚಿತ್ರವು ನಂಬಿಕೆಯ
ವಾಣಿಜ್ಯೀಕರಣವನ್ನು ಪರಿಶೀಲಿಸಿದೆ. ‘ಪಿಬರೇ ರಾಮರಸಂ’ನಂತೆ ‘ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ’ ಕೂಡ ಬಹಳಷ್ಟು ಜನಪ್ರಿಯ ಹಾಡು. ಅಯೋಧ್ಯೆಯಲ್ಲಿ ಆದುದನ್ನು ಮಥುರೆಯಲ್ಲಿ ಪ್ರಯತ್ನಿಸಲಾಗುವುದೇ? ಜ್ಞಾನವಾಪಿ ತನಿಖಾ ವರದಿಯಲ್ಲಿ ಏನಿರಬಹುದು?

ಪ್ರಾಣಪ್ರತಿಷ್ಠೆ ಎಂದರೆ ವಿಗ್ರಹದಲ್ಲಿ ದೇವತ್ವವನ್ನು ಆವಾಹಿಸುವುದು. ಪ್ರಾಣದ ಒಂದು ಅರ್ಥ ಚೈತನ್ಯ ವಸ್ತು. ಅದನ್ನು ಬ್ರ್ಯಾಂಡ್ ಆಗಿ ಪರಿವರ್ತಿಸುತ್ತಿರುವವರು ವಾಲ್ಮೀಕಿ ರಾಮಾಯಣದ ಮೂಲ ಕ್ರೌಂಚವಧೆಯಿಂದ ಉತ್ಪನ್ನವಾದ ಕರುಣೆ– ಒಂದು ಸಾರ್ವತ್ರಿಕ ಮಾನವೀಯ ಮೌಲ್ಯ– ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಧರ್ಮಭೀರು ಎಂಬ ಪದ ಇದೆ, ಅದು ವೀರ ರೂಪ ತಾಳಿದರೆ? ಪಾಯಸಕ್ಕೆ ಬೆಲ್ಲ ಉತ್ತಮ ಎಂದು ಕೆಲವರೆನ್ನುತ್ತಾರೆ, ಸಕ್ಕರೆಯೇ ಬೇಕು ಎಂದು ಹೆಚ್ಚು ಹಾಕಿದರೆ ಮಧುಮೇಹಿಗಳು ಗಮನಾರ್ಹ ಸಂಖ್ಯೆಯಲ್ಲಿರುವ ಭಾರತೀಯರಿಗೆ ಕಷ್ಟ ಆಗಬಹುದು. ಹಿಂದೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ಇದ್ದವರು ಈಗ ಮಂದಿರದ ಟ್ರಸ್ಟ್‌ನ ಪ್ರಮುಖರು ಆಗಿರುವುದರಿಂದ ಇದೆಲ್ಲ ಒಂದು ‘ಯೋಜನೆ’ಯ ಅನುಸಾರ ನಡೆಯುತ್ತಿದೆ ಎಂಬುದು ವೃಥಾ ಆರೋಪ ಎನ್ನಲಾಗದು.

–ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪಡಿತರ ಕೊಡಿ, ಇಲ್ಲವೇ ಷರತ್ತು ಹಿಂಪಡೆಯಿರಿ

ಪಡಿತರ ಕಾರ್ಡ್‌ಗಳನ್ನು ಸಕ್ರಿಯವಾಗಿ ಇಟ್ಟುಕೊಳ್ಳಲು ಎಪಿಎಲ್‌ ಕಾರ್ಡ್‌ದಾರರು ಕನಿಷ್ಠ ಮೂರು ತಿಂಗಳಿಗೊಮ್ಮೆ ಹಾಗೂ ಬಿಪಿಎಲ್‌ ಕಾರ್ಡ್‌ದಾರರು ಪ್ರತಿ ತಿಂಗಳು ಪಡಿತರ ಪಡೆಯಬೇಕು. ಆದರೆ ರಾಜ್ಯದ ಬಹಳಷ್ಟು ಊರುಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಅಗತ್ಯ ಪಡಿತರ ದಾಸ್ತಾನು ಇಲ್ಲದ ಕಾರಣ ಕೆಲವು ಕಾರ್ಡ್‌ದಾರರು ಪಡಿತರ ಮತ್ತು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ಆಹಾರ ಇಲಾಖೆಯ ಅಧಿಕಾರಿಗಳು ಒಡನೆಯೇ ಕಾರ್ಯಪ್ರವೃತ್ತರಾಗಿ ಎಲ್ಲ ಕಾರ್ಡ್‌ದಾರರಿಗೂ ಪ್ರತಿ ತಿಂಗಳು ಪಡಿತರ ದೊರೆಯುವಂತೆ ನೋಡಿಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಕಾರ್ಡ್‌ಗಳನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಲು ವಿಧಿಸಲಾಗಿರುವ ಷರತ್ತುಗಳನ್ನು ಹಿಂಪಡೆಯಬೇಕಾಗಿದೆ.

 –ಜಿ.ನಾಗೇಂದ್ರ ಕಾವೂರು, ಸಂಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT