ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 19 ಫೆಬ್ರುವರಿ 2024, 19:06 IST
Last Updated 19 ಫೆಬ್ರುವರಿ 2024, 19:06 IST
ಅಕ್ಷರ ಗಾತ್ರ

ಭಿನ್ನತೆ ನಡುವೆ ಏಕತೆ!

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳುತ್ತಾರೆ– ಆಗ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ 40% ಕಮಿಷನ್, ಈಗ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇರುವಾಗಲೂ ಅದೇ 40% ಕಮಿಷನ್. ಇದರ ತನಿಖೆಗೆಂದೇ ಒಂದು ಕಮಿಷನ್ ನೇಮಿಸಿದರೂ ಪರಿಣಾಮ ಮಾತ್ರ ಹಲ್ಲು ಕಿತ್ತ ಹಾವಿನಂತೆ ಶೂನ್ಯ. ಬಿಜೆಪಿ- ಕಾಂಗ್ರೆಸ್‌ ನಡುವೆ ಬಹುತೇಕ ವಿಚಾರಗಳಲ್ಲಿ ಭಿನ್ನತೆ, ಆದರೂ... ಭ್ರಷ್ಟಾಚಾರ, ಪಕ್ಷಾಂತರದಲ್ಲಿ ಮಾತ್ರ ಏಕತೆ!

⇒ಕೆ.ಬಸವನಗೌಡ, ಹಗರಿಬೊಮ್ಮನಹಳ್ಳಿ

ಎಲ್ಲವೂ ಬರೀ ಅಧಿಕಾರಕ್ಕಾಗಿ...

‘ಕಾಂಗ್ರೆಸ್‌ನ ನಂಬಿದ್ದಕ್ಕೆ ನಮ್ಮ ಕುತ್ತಿಗೆ ಕೊಯ್ದರಲ್ಲ, ಚಾಕು ಹಾಕಿಸಿಕೊಳ್ಳಲು ಅವರ ಜೊತೆ ಇರಬೇಕಿತ್ತಾ?’ ಎಂದು ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದ್ದಾರೆ. ಇದೇ ಕುಮಾರಸ್ವಾಮಿ ಕೆಲವು ವರ್ಷಗಳ ಹಿಂದೆ 20– 20 ಮ್ಯಾಚ್ ಫಿಕ್ಸ್ ಮಾಡಿ, ತಮ್ಮ ಬ್ಯಾಟಿಂಗ್ ನಂತರ ಬಿಜೆಪಿಯ ಯಡಿಯೂರಪ್ಪ ಅವರಿಗೆ ಬ್ಯಾಟ್ ಮಾಡಲು ಅವಕಾಶವನ್ನೇ ನೀಡದೆ (ಅಧಿಕಾರ ಹಸ್ತಾಂತರಿಸದೆ) ‘ಕತ್ತು ಕೊಯ್ದು’ ವಚನಭ್ರಷ್ಟ ಎನಿಸಿಕೊಂಡಿದ್ದನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ. ಆಗ ಯಡಿಯೂರಪ್ಪನವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಬಹುದಲ್ಲ.

ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ, ಎಲ್ಲವೂ ಬರೀ ಅಧಿಕಾರಕ್ಕಾಗಿ ಎಂಬುದು ಜನಸಾಮಾನ್ಯರಿಗೂ ಅರ್ಥವಾಗಿದೆ. ರಾಜಕಾರಣಿಗಳ ಪರಸ್ಪರ ಹೊಗಳಿಕೆ ಹಾಗೂ ತೆಗಳಿಕೆಗಳಿಗೆ ಜನ ತಲೆ ಕೆಡಿಸಿ
ಕೊಳ್ಳುವುದನ್ನು ಬಿಟ್ಟಿದ್ದಾರೆ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಹತ್ತು ವರ್ಷಗಳ ಸಾಧನೆ ಸ್ಪಷ್ಟಪಡಿಸಲಿ

ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ಗುರಿಯನ್ನು ಸಾಧಿಸಲು ಬಿಜೆಪಿಯು ಭಾರಿ ಬಹುಮತದಿಂದ ಅಧಿಕಾರಕ್ಕೆ ಮರಳುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿರುವುದು ವರದಿಯಾಗಿದೆ (ಪ್ರ.ವಾ., ಫೆ. 19). ಆದರೆ ಹಿಂದಿನ 10 ವರ್ಷಗಳಲ್ಲಿ ಏನೇನು ಅಭಿವೃದ್ಧಿ ಮಾಡಲಾಗಿದೆ ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನೇ ಅವರು ನೀಡಿಲ್ಲ. ಮೂರನೇ ಬಾರಿಗೆ ಅಧಿಕಾರ ಕೇಳುತ್ತಿರುವುದು ಅಧಿಕಾರವನ್ನು ಅನುಭವಿಸಲು ಅಲ್ಲ, ದೇಶಕ್ಕಾಗಿ ದುಡಿಯಲು ಎಂದಿರುವ ಮೋದಿ ಅವರು, ಕೋಟ್ಯಂತರ ಜನರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿರುವುದಾಗಿ, 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮುಕ್ತ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಹಸಿವಿನ ಸೂಚ್ಯಂಕಕ್ಕೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರತಿವರ್ಷ ಭಾರತದ ಸ್ಥಾನ ಕುಸಿಯುತ್ತಲೇ ಇದೆ.

ಅಯೋಧ್ಯೆಯಲ್ಲಿನ ರಾಮ ಮಂದಿರವನ್ನು 1,000 ವರ್ಷಗಳ ರಾಮರಾಜ್ಯದ ಆರಂಭವೆಂದು ಕರೆಯಲಾಗಿದೆ. ಹಾಗಾದರೆ ಹಿಂದಿನ 10 ವರ್ಷಗಳಲ್ಲಿ ಇದ್ದದ್ದು ಯಾವ ರಾಜ್ಯ ಎಂಬ ಬಗ್ಗೆ ಮತದಾರರಲ್ಲಿ ಗೊಂದಲ ಮೂಡುತ್ತದೆ. ಇಂತಹ ಅಸ್ಪಷ್ಟ ಮಾಹಿತಿ ನೀಡುವ ಬದಲಾಗಿ, ಈ ಹತ್ತು ವರ್ಷಗಳಲ್ಲಿ ರೈತರು, ಕೂಲಿ ಕಾರ್ಮಿಕರಿಗೆ ಏನೇನು ನಿರ್ದಿಷ್ಟ ಸೌಲಭ್ಯ ಒದಗಿಸಲಾಗಿದೆ ಹಾಗೂ ಉದ್ಯೋಗ, ಶಿಕ್ಷಣ, ಆರೋಗ್ಯ ಸುಧಾರಣೆಯಲ್ಲಿ ಏನೇನು ನಿರ್ದಿಷ್ಟ ಸಾಧನೆ ಮಾಡಲಾಗಿದೆ ಎಂಬ ಬಗ್ಗೆ ಮತದಾರರಿಗೆ ಸ್ಪಷ್ಟ ಮಾಹಿತಿ ನೀಡಲಿ.

⇒ತಾ.ಸಿ.ತಿಮ್ಮಯ್ಯ, ಬೆಂಗಳೂರು

₹ 10ರ ನಾಣ್ಯ: ಕರ್ನಾಟಕದಲ್ಲಷ್ಟೇ ಸಮಸ್ಯೆ ಏಕೆ?

ಭಾರತೀಯ ರಿಸರ್ವ್‌ ಬ್ಯಾಂಕ್‌ ಇದುವರೆಗೆ 14 ನಮೂನೆಯ ₹ 10 ಮುಖಬೆಲೆಯ ನಾಣ್ಯಗಳನ್ನು ಮುದ್ರಿಸಿ ಸಾರ್ವಜನಿಕ ಚಲಾವಣೆಗೆ ಬಿಡುಗಡೆ ಮಾಡಿದೆ. ಯಾವುದೇ ನಮೂನೆಯ ನಾಣ್ಯವನ್ನು ಅಮಾನ್ಯ ಮಾಡಿಲ್ಲ. ಆದರೂ ರಾಜಕೀಯ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ₹ 10ರ ನಾಣ್ಯಗಳು ಬ್ಯಾನ್‌ ಆಗಿವೆಯೆಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದ ಪರಿಣಾಮವಾಗಿ, ಸಾರ್ವಜನಿಕರು ಈ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ಹಲವು ವರ್ಷಗಳಿಂದಲೂ ಮುಂದುವರಿದಿದೆ. ಈ ನಾಣ್ಯಗಳನ್ನು ವಹಿವಾಟಿನಲ್ಲಿ ಬಳಸಬೇಕೆಂದು, ಸ್ವೀಕರಿಸದಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಬಹುದೆಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹಲವು ಬಾರಿ ತಿಳಿಸಿದೆ. ಆದರೂ ಜನರ ಮನಃಸ್ಥಿತಿ ಬದಲಾಗಿಲ್ಲ. ಗ್ರಾಹಕರು ಈ ನಾಣ್ಯಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡುವುದು ಬ್ಯಾಂಕ್‌ಗಳಿಗೆ ಹೊರೆಯಾಗಿ ಪರಿಣಮಿಸಿದೆ. ಇತ್ತೀಚೆಗೆ ನಾನು ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಕೇರಳ ಪ್ರವಾಸ ಮಾಡಿದಾಗ, ₹ 10ರ ನಾಣ್ಯಗಳ ಚಲಾವಣೆಯಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಈ ವಿಷಯದಲ್ಲಿ ಜನ ಹಿಂದೇಟು ಹಾಕುತ್ತಿದ್ದಾರೆ.

ಹತ್ತು ರೂಪಾಯಿಯ ನಾಣ್ಯಗಳನ್ನು ಸ್ವೀಕರಿಸದಿದ್ದರೆ ಅಂಥವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವುದಾಗಿ ಏಳು ವರ್ಷಗಳ ಹಿಂದೆ ಉತ್ತರಪ್ರದೇಶ ಸರ್ಕಾರ ಎಚ್ಚರಿಕೆ ನೀಡಿದ್ದರಿಂದ ಅಲ್ಲಿ ಈ ನಾಣ್ಯಗಳ ಚಲಾವಣೆ ಅಬಾಧಿತವಾಗಿದೆ. ₹ 10ರ ನಾಣ್ಯಗಳನ್ನು ಸಿಬ್ಬಂದಿಯು ಪ್ರಯಾಣಿಕರಿಂದ ಸ್ವೀಕರಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜನವರಿ ತಿಂಗಳಲ್ಲಿ ಸುತ್ತೋಲೆಯನ್ನು ಸಹ ಹೊರಡಿಸಿದೆ. ಆದರೂ ಬಸ್‌ಗಳಲ್ಲಿ ಈ ನಾಣ್ಯಗಳು ಚಲಾವಣೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಚಲಾವಣೆಯಿಂದ ಹಿಂಪಡೆಯದ ನಮ್ಮ ದೇಶದ ಎಲ್ಲ ಮುಖಬೆಲೆಯ ನಾಣ್ಯ, ನೋಟುಗಳಿಗೆ ಎಲ್ಲ ರಾಜ್ಯಗಳೂ ಸಮಾನ ಮನ್ನಣೆ ನೀಡಬೇಕು. ಆದರೆ, ಕರ್ನಾಟಕದಲ್ಲಿ ಮಾತ್ರ ₹ 10ರ ನಾಣ್ಯಗಳ ಚಲಾವಣೆಯು ಅನಧಿಕೃತವಾಗಿ ಸ್ಥಗಿತಗೊಂಡಿರುವುದು ದುರದೃಷ್ಟಕರ. ಈ ನಾಣ್ಯಗಳನ್ನು ಚಲಾವಣೆಯಲ್ಲಿ ಇರಿಸುವ ದಿಸೆಯಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

⇒ಜಿ.ನಾಗೇಂದ್ರ ಕಾವೂರು, ಸಂಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT