ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 15 ಏಪ್ರಿಲ್ 2024, 19:12 IST
Last Updated 15 ಏಪ್ರಿಲ್ 2024, 19:12 IST
ಅಕ್ಷರ ಗಾತ್ರ

ಮತದಾನ: ಪರ್ಯಾಯ ಮಾರ್ಗ ಕಲ್ಪಿಸುವುದಿಲ್ಲವೇಕೆ?

ನಗರ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವುದು ನಾವೆಲ್ಲಾ
ಗಮನಿಸುತ್ತಿರುವ ಸಂಗತಿ. ವಿದ್ಯಾವಂತ ಮತದಾರರು ವೋಟು ಹಾಕಲು ಬರುವುದಿಲ್ಲ ಎಂಬುದನ್ನು ಅಸ್ತ್ರವಾಗಿಸಿಕೊಳ್ಳುವ ಅನೇಕರು, ಅಂತಹವರನ್ನು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಟೀಕಿಸುವುದು, ಗೇಲಿ ಮಾಡುವುದನ್ನು ನೋಡುತ್ತಿರುತ್ತೇವೆ. ಸಾಮಾನ್ಯವಾಗಿ ಹೆಚ್ಚಿನವರಿಗೆ ವೋಟು ಹಾಕಬೇಕೆನ್ನುವ ಜವಾಬ್ದಾರಿ ಇದ್ದೇ ಇರುತ್ತದೆ. ಆದರೆ ಮತದಾನದ ನಿಖರ ದಿನ ಗೊತ್ತಾಗುವುದು ವೇಳಾಪಟ್ಟಿ ಪ್ರಕಟವಾದ ಮೇಲೆಯೇ. ಪ್ರವಾಸಕ್ಕೆ ಅಥವಾ ತಮ್ಮೂರಿಗೆ ಹೋಗಲು ಕೆಲ ತಿಂಗಳ ಹಿಂದೆಯೇ ಅವರು ಟಿಕೆಟ್‌ ಮುಂಗಡ ಬುಕಿಂಗ್‌ ಮಾಡಿದ್ದರೆ ಅದನ್ನು ರದ್ದುಪಡಿಸಿ ನಷ್ಟ ಮಾಡಿಕೊಳ್ಳಲು ಸಾಧ್ಯವೇ? ಕೆಲವರ ವೋಟು ಬೇರೆ ಊರಲ್ಲಿ ಇದ್ದರೆ ಅದಕ್ಕಾಗಿ ಪ್ರಯಾಣದ ಖರ್ಚು ಭರಿಸುವಷ್ಟು ಶಕ್ತಿ ಎಲ್ಲರಿಗೂ ಇರುತ್ತದೆಯೇ? ಮನೆಗಳಲ್ಲಿ ಯಾವುದೋ ಸಮಾರಂಭ ಅದೇ ದಿನದಂದು ಬೇರೆ ಊರಲ್ಲಿ ಮುಂಚಿತವಾಗಿಯೇ ನಿರ್ಧಾರವಾಗಿದ್ದರೆ ಸಂಬಂಧಿಕರಲ್ಲಿ ಅನೇಕರ ವೋಟು ತಪ್ಪುತ್ತದೆ. ಇವಲ್ಲದೆ ವೈಯಕ್ತಿಕವಾಗಿ ಸಾವಿರಾರು ಕಾರಣಗಳು ಇದ್ದೇ ಇರುತ್ತವೆ.

ಮತದಾನದ ಒಂದು ದಿನ ರಜೆ ಕೊಟ್ಟಾಕ್ಷಣ ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ, ಜನರೆಲ್ಲಾ ಓಡೋಡಿ ಮತಗಟ್ಟೆಗೆ ಬರುತ್ತಾರೆ ಎಂದು ಸರ್ಕಾರ ಭಾವಿಸುವುದು ಹಾಸ್ಯಾಸ್ಪದವೇ ಸರಿ. ಇದನ್ನು ತಪ್ಪಿಸಲು ಸರ್ಕಾರವು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ಮನಸ್ಸು ಮಾಡುವುದಿಲ್ಲವೇಕೆ? ಈಗಿರುವ ಅಂಚೆ ಮತದಾನವು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವವರಿಗೆ ಮಾತ್ರ. ಮನೆಗೆ ಬರುವ ಮತಯಂತ್ರ ವ್ಯವಸ್ಥೆ 85 ವರ್ಷ ಮೀರಿದವರು, ಅಂಗವಿಕಲರಿಗೆ ಅಷ್ಟೇ. ಇತರ ಮತದಾರರಿಗೂ ಆನ್‌ಲೈನ್‌ ಅಥವಾ ಅಂಚೆಯ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸುವುದು ಒಳಿತಲ್ಲವೇ? ಇದರಲ್ಲಿ ಮೋಸ ನಡೆಯಬಹುದು ಎಂದು ಕೊಂಕು ತೆಗೆಯುವ ಬದಲು, ಮೋಸ ತಪ್ಪಿಸಲು ಏನು ಮಾಡಬಹುದು ಎಂದು ಯೋಚಿಸಬೇಕು. ಆನ್‌ಲೈನ್‌ನಲ್ಲಿ ಏನೆಲ್ಲಾ ಮಾಡಲು ಸಾಧ್ಯವಾಗಿರುವ ಈ ಯುಗದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡುವುದು ಅಷ್ಟೊಂದು ಕಷ್ಟವೇ? 

⇒ವೇದಾ ಆಠವಳೆ, ಬೆಂಗಳೂರು

ರೈಲು ಪ್ರಯಾಣ, ಶ್ರೀಸಾಮಾನ್ಯ ಹೈರಾಣ

ಅನಿವಾರ್ಯ ಕೆಲಸದ ನಿಮಿತ್ತ ಇತ್ತೀಚೆಗೆ ತಡರಾತ್ರಿಯಲ್ಲಿ ನಮ್ಮೂರು ಮುರ್ಡೇಶ್ವರದಿಂದ ಉಡುಪಿಗೆ ಪ್ರಯಾಣ ಬೆಳೆಸಬೇಕಾಯಿತು. ನೇತ್ರಾವತಿ ಎಕ್ಸ್‌ಪ್ರೆಸ್‌ಗೆ ಸಾಮಾನ್ಯ ಬೋಗಿಯ ಟಿಕೆಟ್ ಪಡೆದು ರೈಲನ್ನು ಹತ್ತಿದಾಗ, ಅಲ್ಲಿನ ಪರಿಸ್ಥಿತಿ ನೋಡಿ ಒಂದು ಕ್ಷಣ ಗಾಬರಿಯಾಯಿತು. ಅಲ್ಲಿದ್ದ ಎಲ್ಲ ಆಸನಗಳೂ ಸಂಪೂರ್ಣ ಭರ್ತಿಯಾಗಿದ್ದವಲ್ಲದೆ ಓಡಾಡುವ ಜಾಗದಲ್ಲಿಯೇ ಹಲವರು ಮಲಗಿದ್ದರು. ಇನ್ನು ಕೆಲವರು ಕುಳಿತಿದ್ದರು. ಉಸಿರುಗಟ್ಟಿಸುವ ಪರಿಸ್ಥಿತಿ ಇದ್ದರೂ ಅನ್ಯ ದಾರಿ ಇಲ್ಲದೆ ನಿಂತುಕೊಂಡೇ ಪ್ರಯಾಣಿಸಬೇಕಾಯಿತು.

ಅಂದೇ ವಾಪಸ್‌ ಬರಬೇಕಾಗಿದ್ದರಿಂದ ಮಧ್ಯಾಹ್ನ ಉಡುಪಿಯಿಂದ 3.50ರ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಹತ್ತಿದೆ. ನನ್ನ ದುರದೃಷ್ಟಕ್ಕೆ ಮತ್ತದೇ ಪರಿಸ್ಥಿತಿ ಎದುರಾಯಿತು. ನಿಂತುಕೊಳ್ಳಲೂ ಸರಿಯಾದ ಜಾಗವಿರದೆ ಪರದಾಡಿಕೊಂಡು ಪ್ರಯಾಣ ಮುಗಿಸಬೇಕಾಯಿತು. ನಾವು ಯುವಕರು ಹೇಗೋ ಪ್ರಯಾಣಿಸಿದೆವು. ಆದರೆ, ನಮ್ಮ ಪಕ್ಕದಲ್ಲಿಯೇ ಕೆಲವು ಹಿರಿಯ ನಾಗರಿಕರು ಕೈಯಲ್ಲಿ ಭಾರದ ಬ್ಯಾಗ್‌ಗಳನ್ನು ಹಿಡಿದುಕೊಂಡು ಗಂಟೆಗಟ್ಟಲೆ ನಿಂತುಕೊಂಡೇ ಇದ್ದದ್ದು, ಅದನ್ನು ನಾವು ಅಸಹಾಯಕರಾಗಿ ನೋಡಬೇಕಾಗಿ ಬಂದದ್ದು ವಿಪರ್ಯಾಸವೇ ಸರಿ. ರೈಲ್ವೆ ಅಧಿಕಾರಿಗಳು ಇನ್ನಾದರೂ ಇದನ್ನು ಬರೀ ಸಮಸ್ಯೆಯಾಗಿ ನೋಡದೆ ಸವಾಲಾಗಿ ಸ್ವೀಕರಿಸಿ ಪರಿಹಾರ ಕಂಡುಹಿಡಿಯಲಿ.

⇒ಯೋಗೇಶ್ ಆನಂದ ಹರಿಕಂತ್ರ, ಮುರ್ಡೇಶ್ವರ

ಅವರು ಮಹಿಳೆಯರನ್ನು ಅವಮಾನಿಸುವವರಲ್ಲ..!

ಗ್ಯಾರಂಟಿ ಯೋಜನೆಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವುದಾಗಿ ವರದಿಯಾಗಿದೆ. ಆದರೆ ಕುಮಾರಸ್ವಾಮಿ ಎಂದಿಗೂ ಮಹಿಳೆಯರನ್ನು ಅವಮಾನಿಸುವವರಲ್ಲ. ತೆನೆ ಹೊತ್ತ ಮಹಿಳೆಯನ್ನೇ ತಮ್ಮ ಪಕ್ಷದ ಗುರುತಾಗಿ ಹೊಂದಿದ್ದಾರೆ. ತೆನೆಯು ಆಕೆಗೆ ಭಾರವಾಗುತ್ತದೆ ಎಂದು ಮನಗಂಡು ಈಚೆಗಷ್ಟೇ ಆಕೆಯ ತಲೆಯ ಮೇಲಿನಿಂದ ತೆನೆಯನ್ನು ಇಳಿಸಿ, ಕೈಗೆ ಹಗುರವಾದ ಕಮಲದ ಹೂವನ್ನು ಕೊಟ್ಟಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಅವರು ಹೇಳಿದ್ದರ ಅರ್ಥ, ಆ ಯೋಜನೆಗಳ ಫಲಾನುಭವಿಗಳಾಗುವ ಸಲುವಾಗಿ ಹೆಣ್ಣುಮಕ್ಕಳು ತಮ್ಮ ಆಧಾರ್ ಕಾರ್ಡುಗಳನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿಸಲು ಪಟ್ಟಣದ ಬ್ಯಾಂಕುಗಳಿಗೆ ತೆರಳುವಾಗ, ಬ್ಯಾಂಕಿನ ದಾರಿ ಗೊತ್ತಾಗದೆ ಬೇರೆ ದಾರಿಗೆ ಹೋಗಿ ಪರದಾಡುತ್ತಿದ್ದಾರೆ ಎಂದು ಇರಬೇಕು, ಅಷ್ಟೆ!

⇒ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ಮಳೆನೀರು ಸಂಗ್ರಹಕ್ಕೆ ಇರಲಿ ಆದ್ಯತೆ

ಉತ್ತಮವಾಗಿ ಮಳೆ ಬಿದ್ದ ವರ್ಷ ರಾಜ್ಯದ ಕೆರೆಗಳಲ್ಲಿ ನೀರನ್ನು ಸಂಗ್ರಹಿಸದಿರುವುದು, ಬಿದ್ದಲ್ಲೇ ಹಿಂಗಿಸದಿರುವುದು ಇಂದಿನ ಜಲಕ್ಷಾಮಕ್ಕೆ ಪ್ರಮುಖ ಕಾರಣ. ಹೊಲ ಮತ್ತು ಕಾಡುಗಳಲ್ಲಿ ನೀರು ಸಂಗ್ರಹಿಸಲು ಬದುಗಳನ್ನು
ನಿರ್ಮಿಸದಿರುವುದು, ನಗರ ಪ್ರದೇಶಗಳ ನೆಲವನ್ನು ಕಾಂಕ್ರಿಟ್ ಮತ್ತು ಡಾಂಬರ್‌ನಿಂದ ಪೂರ್ಣವಾಗಿ ಮುಚ್ಚುವುದು ಕೂಡ ಅಂತರ್ಜಲ ಪಾತಾಳ ಸೇರಲು ಕಾರಣವಾಗಿವೆ. ಹಾಗಾಗಿ, ಬಿದ್ದ ಮಳೆನೀರು ರಭಸವಾಗಿ ಹಳ್ಳ ಕೊಳ್ಳಗಳ ಮೂಲಕ ಹರಿದು ಸಾಗರ ಸೇರುತ್ತಿದೆ.

ರಾಜ್ಯದಲ್ಲಿ ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಇದ್ದರೂ ನೀರಾವರಿಗೆ ಆದ್ಯತೆ ನೀಡದೇಹೋದರೆ ಮುಂದಿನ ದಿನಗಳಲ್ಲಿ ಈ ಬಾರಿಯಂತೆ ಪದೇಪದೇ ಬರದ ದವಡೆಗೆ ಸಿಲುಕುವುದು ಸಾಮಾನ್ಯ ಸಂಗತಿಯಾಗುತ್ತದೆ. ನೀರು ಸಂಗ್ರಹ ಮತ್ತು ಕೆರೆಗೆ ನೀರು ತುಂಬಿಸುವ ಕೆಲಸವನ್ನು ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿವೆ. ನಮ್ಮ ರಾಜ್ಯ ಸರ್ಕಾರ ಕೂಡ ಈ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಬೇಕು. ಅತ್ಯಂತ ಶಿಸ್ತಿನಿಂದ ಆದ್ಯತೆಯ ಕೆಲಸವಾಗಿ ಪರಿಗಣಿಸಬೇಕು.

⇒ಎಂ.ಜಿ.ರಂಗಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT