ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಒಕ್ಕೊರಲಿನಲ್ಲಿ ವಿರೋಧಿಸದಿದ್ದರೆ...

Last Updated 9 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ಸಬಿತಾ ಬನ್ನಾಡಿ ಅವರ ಲೇಖನ (ಪ್ರ.ವಾ., ನ. 4) ಈ ದಿನಗಳಲ್ಲಿ ನನ್ನೊಳಗನ್ನು ಇನ್ನಿಲ್ಲದಂತೆ ಕಾಡಿದ ಅತ್ಯಂತ ಪ್ರಭಾವಶಾಲಿ ಬರಹ. ಆದರೂ ನನಗನ್ನಿಸುವಂತೆ ಸ್ವಚ್ಛ ಮನಸ್ಸುಳ್ಳ ನಾಗರಿಕರ ಎದೆ ಸುಡುವಂತಹ ಮತ್ತು ವಿಚಾರಶೀಲತೆಗೆ ಎಡೆ ಮಾಡಿದಂತಹ ಇಂತಹ ಲೇಖನ ಕೂಡ ನಮ್ಮ ಸಮಾಜದಲ್ಲಿ ಅರಣ್ಯರೋದನವಾಗುವ ಸಂಭವವೇ ಜಾಸ್ತಿ. ಇದಕ್ಕೆ ಕಾರಣ, ತುಂಬಾ ಹಿಂದಿನ ಕಾಲದಿಂದಲೇ ಹೆಣ್ಣನ್ನು ಅಂಕೆಯಲ್ಲಿಡಲು ಉಪವಾಸ ಕೆಡಹುವುದರಿಂದ ಹಿಡಿದು ಹೊಡೆತ, ಬಡಿತದಂತಹವೆಲ್ಲ ಸರ್ವೇ ಸಾಮಾನ್ಯವಾಗಿದ್ದವು. ಇಂತಹುದಕ್ಕೆಲ್ಲಾ ನಮ್ಮ ಸಮಾಜ ತೀವ್ರವಾಗಿ ಸ್ಪಂದಿಸಿದ್ದೇ ಇಲ್ಲ.

ಇಂದಿನ ಮಹಿಳೆಯು ಪುರುಷನಿಗೆ ಸರಿಸಮಾನಳಾಗಿ ಎಲ್ಲ ರಂಗಗಳಲ್ಲಿಯೂ ಸಾಧಕಳಾಗಿರುವುದು ಹಲವು ಗಂಡಸರಿಗೆ ನುಂಗಲಾರದ ತುತ್ತಾಗಿದೆ. ಬಹುಶಃ ಈ ಎಲ್ಲಾ ಕಾರಣಗಳೂ ಸೇರಿದಂತೆ ಹೆಣ್ಣನ್ನು ಮಣಿಸಿ ಅವಳ ಸ್ಥೈರ್ಯವನ್ನು ಪುಡಿಗಟ್ಟಲು ಪ್ರಬಲ ಅಸ್ತ್ರವಾಗಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಲಿದೆ. ನಾಗರಿಕ ಸಮಾಜವು ತಲೆತಗ್ಗಿಸುವಂತಹ ರೀತಿಯಲ್ಲಿ ಇದು ನಡೆಯುತ್ತಿದ್ದರೂ ಈಗಲೂ ಬಹುತೇಕರಿಗೆ ಅದೊಂದು ಸಂಗತಿಯೇ ಅಲ್ಲ. ಕೆಲವು ವಿಶೇಷ ಪ್ರಕರಣಗಳಲ್ಲಿ ಒಂದಷ್ಟು ಪ್ರತಿಭಟನೆ, ಧಿಕ್ಕಾರಗಳೊಂದಿಗೆ ಮೆರವಣಿಗೆ, ಪತ್ರಿಕಾ ಹೇಳಿಕೆಗಳು, ಇವೆಲ್ಲದರ ಜೊತೆಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಎಡತಾಕುವ ರಾಜಕಾರಣಿಗಳು. ಅಂತೂ ಕೊನೆಗೆ ನ್ಯಾಯ ಸಲ್ಲಿಸುವುದಾಗಿ ವರಿಷ್ಠರ ಭರವಸೆ, ಸಾಂತ್ವನ, ಪ‍ರಿಹಾರದೊಂದಿಗೆ ಇಡೀ ಪ್ರಹಸನಕ್ಕೆ ತೆರೆ. ಇಂತಹ ಸ್ಥಿತಿಯಲ್ಲಿ ನಮ್ಮ ಬದುಕು ಕೂಡ ಸುರಕ್ಷಿತವಲ್ಲ. ಹೀಗಾಗಿ, ‘ಜನ ಈಗಲೇ ಎಚ್ಚರಗೊಂಡು ಎಲ್ಲ ಅನಾಚಾರಗಳನ್ನೂ ಒಕ್ಕೊರಲಿನಲ್ಲಿ ವಿರೋಧಿಸದಿದ್ದರೆ ಮುಂದೊಂದು ದಿನ ಹೇಳಲು ಏನೂ ಉಳಿದಿರುವುದಿಲ್ಲ’ ಎಂಬ ಲೇಖನದಲ್ಲಿನ ಮಾತನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

–ಗಂಗಾ ಪಾದೇಕಲ್‌, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT