ಗುರುವಾರ , ಆಗಸ್ಟ್ 18, 2022
25 °C

ಮಹಿಳೆಯರು ಧೈರ್ಯ ಕಳೆದುಕೊಳ್ಳಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೌಟುಂಬಿಕ ಕಲಹದಿಂದ ಪತಿಯು ಕುಡಿದ ಅಮಲಿನಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆಮಾಡಿರುವುದು ಮೈಸೂರು ತಾಲ್ಲೂಕು ಚೆಟ್ಟನಹಳ್ಳಿ ಗ್ರಾಮದಿಂದ ವರದಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ, ಪತಿಯ ಅಕ್ರಮ ಸಂಬಂಧದಿಂದ ಮನನೊಂದ ಮಹಿಳೆಯೊಬ್ಬರು, ತಮ್ಮಿಬ್ಬರು ಮಕ್ಕಳೊಂದಿಗೆನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಟಿ.ನರಸೀಪುರ ತಾಲ್ಲೂಕಿನ ರಾಮೇಗೌಡನಪುರದಲ್ಲಿ ನಡೆದಿದೆ. ವಿಷಮ ದಾಂಪತ್ಯಕ್ಕೆ ಸಂಬಂಧಿಸಿದ ಇಂತಹ ನೂರಾರು ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇಇರುತ್ತವೆ. ಮೊದಲು ನಗರಗಳಲ್ಲಿ ಹೆಚ್ಚಿಗೆ ಕಂಡುಬರುತ್ತಿದ್ದ ಇಂತಹ ಪ್ರಕರಣಗಳು ಈಗ ಸಣ್ಣ ಪುಟ್ಟ ಹಳ್ಳಿಗಳಲ್ಲೂ ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಇಂದು ಮಹಿಳೆ ನಾನಾ ಪಾತ್ರಗಳನ್ನು ವಹಿಸಬೇಕಾಗಿದೆ.

ಆಕೆ ಪುರುಷರ ಸಮ ಸಮಕ್ಕೆ ದುಡಿಯುತ್ತಿರುವುದರಿಂದ, ಅನೇಕ ಗಂಭೀರ ಸಮಸ್ಯೆಗಳನ್ನುಎದುರಿಸಬೇಕಾಗುತ್ತದೆ. ಕೆಲಸಕ್ಕೆ ಹೋಗುವ ತಮ್ಮ ಹೆಂಡತಿ ಮೇಲೆ ಕೆಲವು ಗಂಡಸರು ಅನುಮಾನ ಪಡುವುದುಂಟು. ಇನ್ನು ಅಕ್ರಮ ಸಂಬಂಧದಂತಹ ವಿಚಾರಗಳು ಸಹ ದಂಪತಿಗಳ ನಡುವೆ ಕಲಹಕ್ಕೆಕಾರಣವಾಗಬಹುದು.

ಹೆಂಡತಿ ಬಗ್ಗೆ ಕೆಲವು ಗಂಡಸರು ನಿರ್ದಯೆಯಿಂದ ವರ್ತಿಸುವುದು ನಡೆಯುತ್ತಿದೆ. ಇಂತಹ ಕ್ಲಿಷ್ಟಸಂದರ್ಭಗಳಲ್ಲಿ ಮಹಿಳೆಯರು ಧೈರ್ಯಗುಂದದೆ, ಹತ್ತಿರದ ಪೊಲೀಸ್‌ ಠಾಣೆ ಅಥವಾ ಮಹಿಳಾ ಸಹಾಯವಾಣಿಯನ್ನುಸಂಪರ್ಕಿಸಿ ದೂರು ದಾಖಲಿಸಬೇಕು. ಇಂದು ಹೆಣ್ಣು ಮಕ್ಕಳಿಗಾಗಿಯೇ ವರದಕ್ಷಿಣೆ ನಿಷೇಧ ಕಾಯ್ದೆ, ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಹಲವಾರು ಕಾಯ್ದೆಗಳಿವೆ. ಇದರ ಜೊತೆಗೆ ಮಹಿಳೆಯರಿಗಾಗಿಯೇವಿಶೇಷ ಪೊಲೀಸ್‌ ಠಾಣೆಗಳಿವೆ. ಪ್ರತಿಯೊಂದು ರಾಜ್ಯದಲ್ಲೂ ಮಹಿಳಾ ಆಯೋಗಗಳಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರಗಳಿವೆ. ಉಚಿತ ಕಾನೂನು ನೆರವಿನ ಸೌಲಭ್ಯವಿದೆ. ಹಾಗೆಯೇ ಶೋಷಿತ ಮಹಿಳೆಯರಿಗೆ ಅನೇಕ ಸ್ವಯಂಸೇವಾ ಸಂಸ್ಥೆಗಳು ನೆರವು ಕಲ್ಪಿಸುತ್ತಿವೆ. ಮಹಿಳೆಯರು ಸಂಕಷ್ಟದ ಪರಿಸ್ಥಿತಿಯಲ್ಲಿಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಮುಂದಾಗದೆ, ಶೋಷಣೆ ಮಾಡುವವರ ವಿರುದ್ಧ ಕಾನೂನಿನ ಮೊರೆಹೋಗುವುದು ಒಳ್ಳೆಯದು.

-ಕೆ.ವಿ.ವಾಸು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.