ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವ್ಯಾಕ್ಸಿನ್ ಟೂರ್

Last Updated 21 ಮೇ 2021, 19:31 IST
ಅಕ್ಷರ ಗಾತ್ರ

ಕಾಫಿ ಬಂದ ಮೇಲೆ ಏಳೋಣವೆಂದು ಇನ್ನೂ ಹಾಸಿಗೆಯಲ್ಲೇ ಹೊರಳಾಡುತ್ತಿದ್ದೆ. ಗೆಳೆಯ ಸೀನನಿಂದ ಫೋನ್ ಬಂತು. ಇತ್ತೀಚೆಗಂತೂ ಯಾರದೇ ಫೋನ್ ಬರಲಿ, ಸುದ್ದಿ ಏನಿರುತ್ತೋ ಅಂತ ನಡುಕದಿಂದಲೇ ತೆಗೆದುಕೊಳ್ಳುವುದು ಅಭ್ಯಾಸವಾಗಿದೆ.

‘ಏನಪ್ಪಾ, ಎಲ್ಲಾ ಆರೋಗ್ಯ ತಾನೆ?’ ಎಂದೆ. ‘ಎಲ್ರೂ ಫಸ್ಟ್‌ ಕ್ಲಾಸ್ ಕಣೋ. ಅಂದಹಾಗೆ ನಿನ್ನ ಪಾಸ್‍ಪೋರ್ಟ್ ರೆನ್ಯೂ ಮಾಡಿಸಿಕೊಂಡ್ಯಾ’ ಎಂಬ ಪ್ರಶ್ನೆ ಅವನಿಂದ ಬಂತು.

‘ಬೆಳಗ್ಗೆ ಫೋನ್ ಮಾಡಿ ಇಂಥ ಪ್ರಶ್ನೆನಾ ಕೇಳೋದು? ವ್ಯಾಕ್ಸಿನ್ ಚುಚ್ಚಿಸಿಕೊಳ್ಳೋಕೆ ಸ್ಲಾಟ್ ಸಿಗ್ತಾ ಇಲ್ಲ ಅಂತ ನಾನಿಲ್ಲಿ ಒದ್ದಾಡ್ತಿದ್ದೀನಿ’ ಎಂದು ರೇಗಿದೆ.

‘ನನ್ನ ಪ್ರಶ್ನೆಗೆ ಮೊದಲು ಉತ್ತರ ಹೇಳು. ಪಾಸ್‍ಪೋರ್ಟ್ ಇದ್ರೆ ಲಗೇಜ್ ರೆಡಿ ಮಾಡ್ಕೊ. 24 ದಿನ ರಷ್ಯಾ ಟೂರ್ ಮಾಡ್ಕೊಂಡು ಬರೋಣ. ಜತೆಗೆ ಎರಡು ಡೋಸ್ ಸ್ಪುಟ್ನಿಕ್ ವ್ಯಾಕ್ಸಿನ್ ಕೂಡಾ ಫ್ರೀಯಾಗಿ ಚುಚ್ಚಿಸ್ಕೋಬಹುದು’ ಎಂದೊಡನೆ ಸೀನನ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು. ಫೋನ್ ಕುಕ್ಕಿದೆ.

‘ಯಾರದು ಫೋನ್?’ ಅಂತ ಕಾಫಿ ಕಪ್‍ನೊಂದಿಗೆ ಮಡದಿ ಬಂದಳು.

‘ತಲೇಹರಟೆ ಸೀನಂದು. ವ್ಯಾಕ್ಸಿನ್‍ಗೋಸ್ಕರ ಲಸಿಕಾ ಕೇಂದ್ರಗಳಿಗೆ ನಾನು ದಿನಾ ಟೂರ್‌ ಮಾಡ್ತಿದೀನಿ. ಇವನು ವ್ಯಾಕ್ಸಿನ್‍ಗೋಸ್ಕರ ರಷ್ಯಾ ಟೂರ್ ಮಾಡ್ಕೊಂಡು ಬರೋಣ ಅಂತಿದಾನೆ. ಸೀರಿಯಸ್‍ನೆಸ್ ಇಲ್ಲ’ ಎನ್ನುತ್ತಾ ಕಾಫಿ ಕಪ್ ತಗೊಂಡೆ.

‘ಮದುವೆ ಆದಾಗಿನಿಂದ್ಲೂ ಒಂದು ಫಾರಿನ್ ಟೂರಿಗೆ ಕರ್ಕೊಂಡು ಹೋಗಿ ಅಂತ ನಾನೂ ಕೇಳ್ತಾನೇ ಇದ್ದೀನಿ. ನಮ್ಮ ಮದುವೆಯ ಮೊದಲನೇ ಆ್ಯನಿವರ್ಸರಿ ಫಾರಿನ್ನಲ್ಲಿ ಅಂದ್ರಿ. ಆಮೇಲೆ ಹತ್ತನೇ ಆ್ಯನಿವರ್ಸರಿ ಬೇರೆ ದೇಶದಲ್ಲೇ ಅಂದ್ರಿ. ನಿಮ್ಮನ್ನು ನಂಬ್ಕೊಂಡ್ರೆ ಐವತ್ತನೆಯ ಆ್ಯನಿವರ್ಸರಿಗೂ ನನ್ನಾಸೆ ನೆರವೇರೋಲ್ಲ’ ಎಂದು ಗೊಣಗಿದಳು.

‘ಇಬ್ಬರ ಪಾಸ್‍ಪೋರ್ಟ್ ಡೀಟೇಲ್ಸ್ ಮೆಸೇಜ್ ಮಾಡಿದೀನಿ, ನಮಗೂ ನಿಮ್ಜೊತೆ ಟೂರಿಗೆ ಟಿಕೆಟ್ ಬುಕ್ ಮಾಡ್ಬಿಡು’ ಎಂದು ಸೀನನಿಗೆ ಫೋನ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT