ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರೇಜಿನಿಂದ ಶುರುವಾಗಿ... ಜಗದಗಲ ಬೆಳೆದು...

Last Updated 13 ಜುಲೈ 2019, 19:30 IST
ಅಕ್ಷರ ಗಾತ್ರ

ಕಾರ್ಪೊರೇಟ್ ಜಗತ್ತಿನ ದೈತ್ಯ ಜೆಫ್ ಪ್ರೆಸ್ಟನ್ ಬೆಜಾಸ್ ಅವರು ತಮ್ಮ ವೃತ್ತಿ ಆರಂಭಿಸಿದ್ದು ಅಮೆರಿಕದ ವಾಲ್‌ ಸ್ಟ್ರೀಟ್‌ ಮೂಲಕ. ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಕಡೆ ಕೆಲಸ ಮಾಡಿದ ನಂತರ, ತಾವೊಂದು ಆನ್‌ಲೈನ್‌ ಪುಸ್ತಕ ಅಂಗಡಿ ತೆರೆಯಬೇಕು ಎಂದು ಬೆಜಾಸ್ ಬಯಸಿದರು. ಮನೆಯ ಗ್ಯಾರೇಜ್‌, ಅವರ ಕನಸಿನ ಮೊದಲ ಮೆಟ್ಟಿಲಾಯಿತು.

ತಾವು ಆರಂಭಿಸಿದ ಕಂಪನಿಯು ಮಾರುಕಟ್ಟೆಯಲ್ಲಿ ಯಶಸ್ಸು ಕಾಣದಿರಬಹುದು, ಅದು ದಿವಾಳಿ ಆಗಬಹುದು ಎನ್ನುವ ಎಚ್ಚರಿಕೆಯನ್ನು ಬೆಜಾಸ್ ಅವರು ಹೂಡಿಕೆದಾರರಿಗೆ ನೀಡಿದ್ದರು ಕೂಡ. ಆದರೆ, ಮುಂದಿನ ದಿನಗಳಲ್ಲಿ ಅವರು ತಮ್ಮ ಕಂಪನಿಯನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದರು. ಅಂದಹಾಗೆ, ಅವರು ಸ್ಥಾಪಿಸಿದ ಕಂಪನಿಯ ಹೆಸರು ‘ಅಮೆಜಾನ್‌’! ಇದು ವಿಶ್ವದ ಅತಿದೊಡ್ಡ ಆನ್‌ಲೈನ್‌ ವ್ಯಾಪಾರ ಮಳಿಗೆ.

ಬೆಜಾಸ್ ಅವರು ಜನಿಸಿದ್ದು 1964ರ ಜನವರಿ 12ರಂದು, ನ್ಯೂ ಮೆಕ್ಸಿಕೋದಲ್ಲಿ. ನಂತರ ಅವರ ಕುಟುಂಬ ಹ್ಯೂಸ್ಟನ್‌ಗೆ ವಲಸೆ ಹೋಯಿತು. ಅಲ್ಲಿ ಬೆಜಾಸ್ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿದರು. ಅವರು ಪ್ರಿನ್‌ಸ್ಟನ್‌ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಅಮೆಜಾನ್‌ ಆರಂಭಿಸುವ ಮೊದಲು ವಾಲ್‌ ಸ್ಟ್ರೀಟ್‌ನಲ್ಲಿ ಎಂಟು ವರ್ಷ ಕೆಲಸ ಮಾಡಿದ್ದರು.

ಆನ್‌ಲೈನ್‌ ‍ಪುಸ್ತಕದ ಅಂಗಡಿಯಾಗಿ ಆರಂಭವಾದ ಅಮೆಜಾನ್‌, ತನ್ನ ಕಾರ್ಯವ್ಯಾಪ್ತಿಯನ್ನು ಬೇಗ ಬೇಗ ವಿಸ್ತರಿಸಿಕೊಂಡಿತು. ಗ್ರಾಹಕರಿಗೆ ಹೊಸ ಹೊಸ ಸೇವೆಗಳನ್ನು, ವಸ್ತುಗಳನ್ನು ತಲುಪಿಸಲು ಶುರುಮಾಡಿತು. ಬೆಜಾಸ್‌ 2013ರಲ್ಲಿ, ಪ್ರತಿಷ್ಠಿತ ‘ವಾಷಿಂಗ್ಟನ್ ಪೋಸ್ಟ್‌’ ಪತ್ರಿಕೆಯನ್ನು ಖರೀದಿಸಿದರು. ಪತ್ರಿಕೆಯಲ್ಲಿ ಗಣನೀಯ ಬದಲಾವಣೆಗಳನ್ನು ತಂದ ಅವರು, ಅದರ ಡಿಜಿಟಲ್‌ ಅವತಾರಕ್ಕೆ ಹೊಸ ರೂಪ ನೀಡಿದರು.

ಪ್ರತಿಷ್ಠಿತ ಟೈಮ್‌ ಪತ್ರಿಕೆಯು 1999ರಲ್ಲಿ ಬೆಜಾಸ್ ಅವರನ್ನು ‘ವರ್ಷದ ವ್ಯಕ್ತಿ’ ಎಂದು ಕರೆಯಿತು. ಅದಾದ ನಂತರ ಅವರ ‍ಪಾಲಿಗೆ ಹಲವು ಗೌರವಗಳು, ‍ಪ್ರಶಸ್ತಿಗಳು ಬಂದವು. ಅಮೆಜಾನ್‌ ಕಿಂಡಲ್‌ಗಾಗಿ 2012ರಲ್ಲಿ ನಾವೀನ್ಯತಾ ಪ್ರಶಸ್ತಿ ಕೂಡ ಲಭಿಸಿತು. 2018ರ ಜುಲೈನಲ್ಲಿ ಫೋರ್ಬ್ಸ್‌ ಪತ್ರಿಕೆಯು ಇವರನ್ನು ‘ಅತ್ಯಂತ ಶ್ರೀಮಂತ ವ್ಯಕ್ತಿ’ ಎಂದು ಕರೆಯಿತು. ಆಗ ಅವರಲ್ಲಿ ₹ 10 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತದ ಆಸ್ತಿ ಇತ್ತು!

ವಾಣಿಜ್ಯ ವಹಿವಾಟುಗಳಲ್ಲಿ ಪಾಪ–ಪುಣ್ಯ ಗಮನಿಸದ ಈ ವ್ಯಾಪಾರಿಯನ್ನು ಕೆಲವು ಮಾಧ್ಯಮಗಳು ‘ವಿಶ್ವದ ಅತ್ಯಂತ ಕೆಟ್ಟ ಬಾಸ್‌’ ಎಂದೂ ಕರೆದಿದ್ದವು.

ಮಕ್ಕಳ ವಿಶೇಷ...

ಸಂಪತಿ

ಇವನು ಜಟಾಯುವಿನ ಹಿರಿಯ ಅಣ್ಣ. ಒಮ್ಮೆ ಜಟಾಯು ಮತ್ತು ಸಂಪತಿ ಸೂರ್ಯ ಕಡೆಗೆ ಹಾರಿಹೋಗುತ್ತಿದ್ದರು. ಆಗ, ಜಟಾಯುವಿಗೆ ರಕ್ಷಣೆ ನೀಡುವ ಉದ್ದೇಶದಿಂದ ಸಂಪತಿ ತನ್ನ ರೆಕ್ಕೆಗಳನ್ನು ಅಗಲವಾಗಿ ಚಾಚಿದ. ಸೂರ್ಯನ ಬಿಸಿಗೆ ಸಂಪತಿಯ ರೆಕ್ಕೆಗಳು ಸುಟ್ಟುಹೋದವು.

ಸಂಪತಿ ಸಮುದ್ರದ ದಂಡೆಯ ಮೇಲೆ ಬಿದ್ದ. ಸೀತೆಯನ್ನು ಅರಸುತ್ತಾ ಹನುಮಂತ ತನ್ನ ವಾನರ ಸೈನ್ಯದೊಡನೆ ಬಂದಾಗ ಸಂಪತಿ ಅವರನ್ನು ಲಂಕೆಯ ಕಡೆ ಕಳುಹಿಸಿದ.

ಎಲ್‌ಇಡಿ ಬಲ್ಬ್‌

ಆಸ್ಟ್ರೇಲಿಯಾ ದೇಶವು 2009ರಲ್ಲಿ ಸಾಂಪ್ರದಾಯಿಕ ವಿದ್ಯುತ್‌ ಬಲ್ಬ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿತು. ಬ್ರೆಜಿಲ್, ಅರ್ಜೆಂಟೀನಾ, ರಷ್ಯಾ ಮತ್ತು ಅಮೆರಿಕ ಕೂಡ ಅದೇ ದಾರಿಯಲ್ಲಿ ಇವೆ. ಭಾರತದಲ್ಲಿ ಕೂಡ ಸಾಂಪ್ರದಾಯಿಕ ವಿದ್ಯುತ್ ಬಲ್ಬ್‌ ಬಳಕೆಗೆ ಟಾಟಾ ಹೇಳುವ ಅಭಿಯಾನವೊಂದು ನಡೆದಿದೆ. ಇಂತಹ ಬಲ್ಬ್‌ಗಳು ಶೀಘ್ರದಲ್ಲೇ ಇತಿಹಾಸ ಪುಟ ಸೇರಬಹುದು. ಈ ಬಲ್ಬ್‌ಗಳ ಬದಲಿಗೆ ಎಲ್‌ಇಡಿ ಬಲ್ಬ್‌ಗಳ ಬಳಕೆ ಹೆಚ್ಚು ಜನಪ್ರಿಯ ಆಗುತ್ತಿದೆ.

ಹಡಗು ಯಾತ್ರಿಗಳ ಅಚ್ಚುಮೆಚ್ಚು

ಸಮುದ್ರ ಯಾನಿಗಳಿಗೆ ವಿಶ್ವದಲ್ಲಿ ಅಚ್ಚುಮೆಚ್ಚಿನ ಸ್ಥಳ ಕೆರಿಬಿಯನ್ ದ್ವೀಪ. ಅಮೆರಿಕದ ಫ್ಲೊರಿಡಾ ದೇಶದ ಎಲ್ಲ ಬಂದರುಗಳು ವಿಶ್ವದಲ್ಲಿ ಅತ್ಯಂತ ಚಟುವಟಿಕೆಯಿಂದ ಕೂಡಿದವು ಎಂಬ ಹೆಗ್ಗಳಿಕೆ ಹೊಂದಿವೆ. ಮಿಯಾಮಿ ಬಂದರಿನ ಮೂಲಕ 2018ರಲ್ಲಿ ಒಟ್ಟು 55 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಯಾನ ಕೈಗೊಂಡಿದ್ದರು. ಹಾಗಾಗಿ ಈ ಬಂದರು ಈಗ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನರನ್ನು ಆಕರ್ಷಿಸುವ ಬಂದರು ಎಂಬ ಖ್ಯಾತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT