ಶನಿವಾರ, ಆಗಸ್ಟ್ 20, 2022
22 °C

ಸಾರ್ವಜನಿಕ ಹಿತಾಸಕ್ತ ‘ಪ್ರಶಾಂತ್‌ ಭೂಷಣ್’

ಹಮೀದ್‌ ಕೆ. Updated:

ಅಕ್ಷರ ಗಾತ್ರ : | |

Prajavani

1971ರ ಲೋಕಸಭಾ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರದಲ್ಲಿ ಗೆದ್ದಿದ್ದ ಇಂದಿರಾ ಗಾಂಧಿ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ರಾಜ್‌ನಾರಾಯಣ್‌ ಸಲ್ಲಿಸಿದ್ದ ದೂರಿನ ವಿಚಾರಣೆ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ನಡೆಯುತ್ತಿತ್ತು. ನ್ಯಾಯಾಲಯದ ಸಭಾಂಗಣದಲ್ಲಿ ಕುಳಿತಿದ್ದ ಯುವಕನೊಬ್ಬ ವಾದ–ಪ್ರತಿವಾದವನ್ನು ಎವೆಯಿಕ್ಕದೆ ನೋಡುತ್ತಿದ್ದ, ಲಕ್ಷ್ಯ ಕೊಟ್ಟು ಆಲಿಸುತ್ತಿದ್ದ. ಆ ಯುವಕನ ಹೆಸರು ಪ್ರಶಾಂತ್‌ ಭೂಷಣ್‌. ರಾಜ್‌ನಾರಾಯಣ್‌ ಪರ ವಾದ ಮಂಡಿಸಿದ್ದವರು ಪ್ರಶಾಂತ್‌ ಅವರ ಅಪ್ಪ ಶಾಂತಿಭೂಷಣ್‌. 

ನ್ಯಾಯಾಲಯದ ಶಕ್ತಿ ಮತ್ತು ವ್ಯಾಪ್ತಿ ಪ್ರಶಾಂತ್‌ ಭೂಷಣ್‌ ಅವರಲ್ಲಿ ಬೆರಗು ಮೂಡಿಸಲು ಆ ಪ್ರಕರಣವೇ ಕಾರಣ ಆಗಿರಬಹುದು. ಎಂಜಿನಿಯರಿಂಗ್‌ ಕಲಿಯಲು ಮದ್ರಾಸ್‌ ಐಐಟಿ ಸೇರಿದ್ದ ಅವರು ಅದನ್ನು ಬಿಟ್ಟು, ತತ್ವಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯಕ್ಕೆ ಹೋಗಿದ್ದವರು ಅದನ್ನೂ ಬಿಟ್ಟು ವಕೀಲಿ ವೃತ್ತಿಗೆ ಬಂದದ್ದರ ಹಿಂದೆ ಆ ಬೆರಗೇ ಕಾರಣವಾಗಿರಬಹುದು. ಇಂದಿರಾ–ರಾಜ್‌ನಾರಾಯಣ್‌ ಪ್ರಕರಣದ ಬಗ್ಗೆ ಪ್ರಶಾಂತ್‌ ಅವರು ‘ದಿ ಕೇಸ್‌ ದಟ್‌ ಶೂಕ್‌ ಇಂಡಿಯಾ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. 

ಬಹುಶಃ, ನ್ಯಾಯಾಂಗವು ಪ್ರಾಮಾಣಿಕ, ಪಾರದರ್ಶಕ, ಉತ್ತರದಾಯಿ ಆಗಿರಲೇಬೇಕು ಎಂಬುದು ಅವರ ಮನಸ್ಸಲ್ಲಿ ಅಚ್ಚೊತ್ತಿ ಹೋದದ್ದರ ಹಿಂದೆಯೂ ಆ ಪ್ರಕರಣವೇ ಇರಬಹುದು. ಇಂದಿಗೂ, ನ್ಯಾಯಾಂಗದ ಬಗ್ಗೆ ಅವರಿಗೆ ಅಪರಿಮಿತ ವಿಶ್ವಾಸ ಎಂಬುದಕ್ಕೆ ಅವರು ನಡೆಸುತ್ತಿರುವ ಚಟುವಟಿಕೆಗಳೇ ಪುರಾವೆ. ನ್ಯಾಯಾಂಗದ ವಿಶ್ವಾಸಾರ್ಹತೆಗಾಗಿ ಅವರ ಹೋರಾಟ 1998ರಲ್ಲಿ ಆರಂಭವಾಗಿದೆ. ಶಾಂತಿಭೂಷಣ್‌ ಮತ್ತು ಇತರ ವಕೀಲರ ಜತೆ ಸೇರಿ ಕಮಿಟಿ ಆನ್‌ ಜುಡಿಷಿಯಲ್‌ ಅಕೌಂಟೆಬಿಲಿಟಿ ಎಂಬ ಸಂಸ್ಥೆಯನ್ನು ಪ್ರಶಾಂತ್‌ ಕಟ್ಟಿದ್ದಾರೆ.

ನ್ಯಾಯಮೂರ್ತಿ ಎಂ.ಎಂ. ಪುಂಛಿ ವಿರುದ್ಧ ದೋಷಾರೋಪಕ್ಕೆ ಈ ಸಂಸ್ಥೆಯು ಆರೋಪಪಟ್ಟಿ ಸಿದ್ಧಪಡಿಸಿ, ರಾಜ್ಯಸಭೆಯ 25 ಸದಸ್ಯರ ಸಹಿಯನ್ನೂ ಪಡೆದುಕೊಂಡಿತ್ತು. ಆದರೆ, ಪುಂಛಿ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಆಗುವುದರೊಂದಿಗೆ ಪ್ರಕರಣವು ಮರೆಗೆ ಸರಿಯಿತು. ಆದರೆ, ನ್ಯಾಯಾಂಗ ವಿಶ್ವಾಸಾರ್ಹವಾಗಿರಬೇಕು ಎಂಬ ಹೋರಾಟಕ್ಕೆ ಪ್ರಶಾಂತ್‌ ಅವರ ಕೆಚ್ಚು ಇನ್ನಷ್ಟು ಹೆಚ್ಚಿತು. ನ್ಯಾಯಮೂರ್ತಿ ಪಿ.ಡಿ.ದಿನಕರನ್‌ ವಿರುದ್ಧ ದೋಷಾರೋಪ ಸಲ್ಲಿಕೆಯ ಹಿಂದೆಯೂ ಇದ್ದವರು ಪ್ರಶಾಂತ್‌. ಬಳಿಕ, ದಿನಕರನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಅದು 1983. ಡೂನ್‌ ಕಣಿವೆಯಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿತ್ತು. ಖ್ಯಾತ ಪರಿಸರ ಹೋರಾಟಗಾರ್ತಿ ವಂದನಾ ಶಿವ ಅವರು ಈ ಪ್ರಕರಣ ಹಿಡಿದುಕೊಂಡು ಪ್ರಶಾಂತ್‌ ಬಳಿ ಬಂದರು. ಸಾರ್ವಜನಿಕ ಹಿತಾಸಕ್ತಿಯ ಪರವಾದ ಹೋರಾಟಕ್ಕೆ ಅದೇ ನಾಂದಿಯಾಯಿತು. ಬಡವರು, ಶೋಷಣೆಗೆ ಸಿಲುಕಿದವರು, ಪರಿಸರಪರವಾದ ಕಾನೂನು ಹೋರಾಟಗಳಲ್ಲಿ ಉಚಿತವಾಗಿ ವಾದ ಮಂಡಿಸಲು ‍ಪ್ರಶಾಂತ್‌ ಸದಾ ಸಿದ್ಧ. 

ವ್ಯವಸ್ಥೆಯನ್ನು ಸರಿಪಡಿಸಲು ನ್ಯಾಯಾಂಗಕ್ಕಿಂತ ದೊಡ್ಡ ಅಸ್ತ್ರ ಯಾವುದೂ ಇಲ್ಲ ಎಂಬುದೇ ಅವರ ಖಚಿತ ನಂಬಿಕೆ. ಈ ಹೋರಾಟದಲ್ಲಿ ಅವರಿಗೆ ಜತೆಯಾದದ್ದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಪಿಐಎಲ್‌) ಅವಕಾಶ. 1986ರಲ್ಲಿ ನ್ಯಾಯಮೂರ್ತಿ ಪಿ.ಎನ್‌. ಭಗವತಿ ತೆರೆದಿಟ್ಟ ಪಿಐಎಲ್‌ ಅವಕಾಶವನ್ನು ಪ್ರಶಾಂತ್‌ ಅವರ ರೀತಿಯಲ್ಲಿ ಬಳಸಿಕೊಂಡವರು ಬೇರೊಬ್ಬರಿಲ್ಲ. ಈವರೆಗೆ ಅವರು ಸಲ್ಲಿಸಿದ ಪಿಐಎಲ್‌ಗಳು 500ಕ್ಕೂ ಹೆಚ್ಚು ಎಂಬುದೇ ಈ ವ್ಯಕ್ತಿಯ ಬದ್ಧತೆಗೆ ಪ್ರಮಾಣಪತ್ರ. 

ಸದಾ ಜನಪರವಾಗಿ ಕೆಲಸ ಮಾಡುತ್ತಾ, ದೇಶವಿಡೀ ಗುರುತಿಸುವ ವ್ಯಕ್ತಿತ್ವ ಹೊಂದಿರುವ ಅವರು ರಾಜಕೀಯದ ಪಡಸಾಲೆಯ ಹೊರಗೇ ನಿಂತವರು. ಆಮ್‌ ಆದ್ಮಿ ಪಕ್ಷದ (ಎಎಪಿ) ಸ್ಥಾಪಕರಲ್ಲಿ ಒಬ್ಬರು ಎಂಬುದನ್ನು ಗಣನೆಗೆ ತೆಗೆದುಕೊಂಡರೂ ಈ ಮಾತು ಸತ್ಯ. 2015ರಲ್ಲಿ ಎಎಪಿಯಿಂದ ಪ್ರಶಾಂತ್‌ ಅವರನ್ನು ಹೊರದಬ್ಬಲಾಯಿತು. ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ಅವರು ಸಹಿಸುವುದಿಲ್ಲ ಎಂಬುದಕ್ಕೆ ಇದನ್ನೂ ಒಂದು ನಿದರ್ಶನವಾಗಿ ಗಮನಿಸಬಹುದು. 

ನ್ಯಾಯಾಂಗ ನಿಂದನೆ ಪ್ರಕರಣವು ಪ್ರಶಾಂತ್‌ ಅವರನ್ನು ಸುದ್ದಿಯ ಕೇಂದ್ರಕ್ಕೆ ತಂದು ನಿಲ್ಲಿಸಿತ್ತು. ಮೂರು ತಿಂಗಳು ಸಜೆ, ಮೂರು ವರ್ಷ ವಕೀಲಿಕೆ ನಿಷೇಧ ಅಥವಾ ಒಂದು ರೂಪಾಯಿ ದಂಡದ ಶಿಕ್ಷೆಯ ಪೈಕಿ ಒಂದು ರೂಪಾಯಿಯನ್ನು ಪ್ರಶಾಂತ್‌ ಆಯ್ದುಕೊಂಡದ್ದರ ಬಗ್ಗೆ ಬರುತ್ತಿರುವ ವಿಮರ್ಶೆಗಳು ಬಹುವಿಧ.  

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಇನ್ನೊಂದು ಸ್ತರಕ್ಕೆ ಹೋಗಿಬಿಡಬಹುದು ಎಂಬ ನಿರೀಕ್ಷೆಯನ್ನು ಕುತುಬ್‌ಮಿನಾರ್‌ಗಿಂತ ಎತ್ತರಕ್ಕೆ ಪ್ರಶಾಂತ್‌ ಏರಿಸಿದ್ದರು ಎಂಬುದು ಸತ್ಯ. ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಎಂಬ ಅಸ್ತ್ರವನ್ನು ನ್ಯಾಯಾಂಗವು ಎಷ್ಟು ದೂರದವರೆಗೆ ಜಳಪಿಸಬಹುದು ಮತ್ತು ಜನರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಎಲ್ಲಿ ಮೊಟಕುಗೊಳ್ಳುತ್ತದೆ ಎಂಬ ಬಹುದೊಡ್ಡ ಚರ್ಚೆಯನ್ನು ಒಂದೇ ಒಂದು ರೂಪಾಯಿ ನುಂಗಿಬಿಟ್ಟಿತು ಎಂಬುದೂ ನಿಜ. ಈ ಸ್ಥಿತಿ ಸೃಷ್ಟಿಯಾಗಲು ಕಾರಣ ಪ್ರಶಾಂತ್‌ ಮಾತ್ರ ಅಲ್ಲ; ವಿಮರ್ಶಾತೀತ ಎಂದು ಭಾವಿಸಿದ ನ್ಯಾಯಾಂಗದ ಪಾಲೇ ಅದರಲ್ಲಿ ಹೆಚ್ಚು. ಪ್ರಶ್ನೆ ಮರೆತ ಭಾರತಕ್ಕೆ ಪ್ರಶ್ನಿಸುವಿಕೆಯ ಹಕ್ಕನ್ನು ಕೊಡಿಸಿದ ಅಗ್ಗಳಿಕೆಯು ಪ್ರಶಾಂತ್‌ಗೆ ದಕ್ಕದಂತೆ ನ್ಯಾಯಾಂಗವು ನೋಡಿಕೊಂಡಿದೆ. ನಿರ್ಭೀತ ಪ್ರಶ್ನಿಸುವಿಕೆಯ ಹಕ್ಕಿಗಾಗಿ ಭಾರತದ ಬಹುಕೋಟಿ ಜನರು ಎದುರು ನೋಡುತ್ತಿದ್ದಾರೆ ಎಂಬುದು ಬಯಲಿಗೆ ಬರಲು ತಾವೇ ಕಾರಣ ಎಂದು ಪ್ರಶಾಂತ್‌ ಹೆಮ್ಮೆ ಪಟ್ಟುಕೊಳ್ಳುವುದಕ್ಕೆ ಅಡ್ಡಿ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು