ಪಾರ್ಕಿಂಗ್‌ ಸಂಕೀರ್ಣಕ್ಕೆ ಬಂಡೆಗಲ್ಲೇ ಅಡ್ಡಿ

7
ಸ್ವಾತಂತ್ರ್ಯ ಉದ್ಯಾನದ ಬಳಿ ನಿರ್ಮಾಣ * ಗಡುವು ಮುಗಿದರೂ ಪೂರ್ಣಗೊಳ್ಳದ ಕಾಮಗಾರಿ

ಪಾರ್ಕಿಂಗ್‌ ಸಂಕೀರ್ಣಕ್ಕೆ ಬಂಡೆಗಲ್ಲೇ ಅಡ್ಡಿ

Published:
Updated:
Deccan Herald

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ನಿರ್ಮಾಣವಾಗುತ್ತಿರುವ ಬೃಹತ್‌ ಪಾರ್ಕಿಂಗ್‌ ಸಂಕೀರ್ಣದ ಕಾಮಗಾರಿಗೆ ಬಂಡೆಗಲ್ಲೇ ಅಡ್ಡಿಯಾಗಿದೆ. 

ಪಾರ್ಕಿಂಗ್‌ ಸಂಕೀರ್ಣದ ಅರ್ಧಭಾಗ ಪೂರ್ಣಗೊಂಡಿದೆ. ಇನ್ನು ಅರ್ಧಭಾಗದ ಕಾಮಗಾರಿ ಭರದಿಂದ ಸಾಗಿದೆ. ಈ ಪ್ರದೇಶದಲ್ಲಿ 10 ಘನಮೀಟರ್‌ಗಿಂತಲೂ ಹೆಚ್ಚು ವಿಸ್ತಾರದ ಬಂಡೆಯೊಂದು ಕಂಡುಬಂದಿದ್ದು ಅದರ ತೆರವು ಕಾರ್ಯ ನಡೆಯುತ್ತಿದೆ. 

ಐದು ಪಾಳಿಗಳಲ್ಲಿ ಕೆಲಸ ನಡೆಯುತ್ತಿದೆ. ಪ್ರತಿದಿನ ಬಂಡೆ ಒಡೆದು ಗರಿಷ್ಠ 5ರಿಂದ 6 ಮೆಟ್ರಿಕ್‌ ಟನ್‌ಗಳಷ್ಟು ಕಲ್ಲುಗಳನ್ನು ಹೊರಗೆ ಸಾಗಿಸಬಹುದು. ಏಕೆಂದರೆ ಇಲ್ಲಿ ಏಕಾಏಕಿ ಸ್ಫೋಟಕ ಬಳಸಿ ಬಂಡೆ ಒಡೆಯುವಂತಿಲ್ಲ. ಹಾಗೆ ಮಾಡಿದರೆ ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯಾಗಲಿದೆ. ನಿರ್ಮಾಣಗೊಂಡ ಭಾಗಕ್ಕೂ ತೊಂದರೆಯಾಗಬಹುದು. ಅದಕ್ಕಾಗಿ ಯಂತ್ರದ ಮೂಲಕ ಕೊರೆದು, ಲಘು ರಾಸಾಯನಿಕ ಬಳಸಿ ಬಂಡೆಯನ್ನು ಸೀಳಲಾಗುತ್ತದೆ ಎಂದು ಕಾಮಗಾರಿ ಗುತ್ತಿಗೆ ಕಂಪನಿಯ ಮೇಲ್ವಿಚಾರಕ ವಿವೇಕ್ ವಿವರಿಸಿದರು.

ಬಂಡೆಯ ತಳಭಾಗದಲ್ಲಿ ನೀರು ಜಿನುಗಿದೆ. ರಾಸಾಯನಿಕಕ್ಕೆ ನೀರು ತಾಗಿದರೆ ಅದೂ ನಿಷ್ಕ್ರಿಯಗೊಳ್ಳುತ್ತದೆ. ಹೀಗಾಗಿ ಎಷ್ಟೇ ಕಾರ್ಮಿಕರಿದ್ದರೂ ಕೆಲಸ ವೇಗವಾಗಿ ಸಾಗುತ್ತಿಲ್ಲ ಎಂದು ಅವರು ಹೇಳಿದರು. 

ಏನೇನಾಗಿದೆ?: ಮೂರು ಅಂತಸ್ತಿನ ವಿಶಾಲವಾದ ಪಾರ್ಕಿಂಗ್‌ ಪ್ರದೇಶ ನಿರ್ಮಾಣವಾಗಲಿದ್ದು, ಒಟ್ಟು 960 ವಾಹನ
ಗಳ ನಿಲುಗಡೆ ಸಾಮರ್ಥ್ಯವಿದೆ. ಸ್ವಾತಂತ್ರ್ಯ ಉದ್ಯಾನದ ಬಳಿಯ ಮುಖ್ಯರಸ್ತೆಗೆ ಅಭಿಮುಖವಾಗಿ ನಿರ್ಮಾಣವಾಗುತ್ತಿದೆ. ಮೂರೂ ಅಂತಸ್ತುಗಳು ನೆಲದೊಳಗೆ ಇರಲಿವೆ. ನೆಲಮಟ್ಟದಲ್ಲಿ ಈ ಕಟ್ಟಡ ಮೈದಾನದಂತೆ ಗೋಚರಿಸಲಿದೆ. ಇದು ಚಳವಳಿ, ಪ್ರತಿಭಟನೆ, ಸಮಾವೇಶಗಳಿಗೆ ಮೀಸಲಾಗಿದೆ.

ಮೂರು ಅಂತಸ್ತುಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಬೇಕಾದ ಪಥ, ಸೂಚನಾ ಫಲಕ, ಬೆಳಕಿನ ವ್ಯವಸ್ಥೆ ಇದೆ. ಮಹಿಳೆಯರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ಮೀಸಲಿದೆ. ವಾಹನ ನಿಲ್ಲಿಸಿ ಕಟ್ಟಡದಿಂದ ಹೊರಬರಲು ಮೆಟ್ಟಿಲು ಹಾಗೂ ಲಿಫ್ಟ್‌ ವ್ಯವಸ್ಥೆ ಇದೆ. ವಾಹನ ಸವಾರರು ಎಲ್ಲಿಯೂ ಗೊಂದಲಕ್ಕೆ ಒಳಗಾಗದಂತೆ ಸಂಚರಿಸುವಂತೆ ವಿನ್ಯಾಸ ರೂಪಿಸಲಾಗಿದೆ ಎಂದು ಗುತ್ತಿಗೆ ಕಂಪನಿಯ ಮೂಲಗಳು ಹೇಳಿವೆ.

ಬಂಡೆಗಳನ್ನು ಒಡೆದ ಮೇಲೆ ಒಸರುವ ನೀರು ಹರಿದುಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ. ತಳಮಹಡಿಯತ್ತ ನೀರು ಬರದಂತೆ ವ್ಯವಸ್ಥೆ ಮಾಡಬೇಕಿದೆ ಎಂದು ವಿವೇಕ್‌ ಹೇಳಿದರು.

ಯೋಜನೆಯ ಹಿನ್ನೆಲೆ: ಬಿಬಿಎಂಪಿ 2015ರ ಜೂನ್‌ 24ರಂದು ಕಾರ್ಯಾದೇಶ ನೀಡಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಮುಗಿಸಲು ಎರಡು ವರ್ಷ ಗಡುವು ನೀಡಲಾಗಿದೆ. ಅರ್ಧ ಕಟ್ಟಡ ಪೂರ್ಣಗೊಳಿಸಿದ ಕಂಪನಿ ಮುಂದಿನ ಭಾಗದ ನಿರ್ಮಾಣಕ್ಕೆ ಬಂಡೆ ಒಡೆಯುವಲ್ಲಿ ನಿರತವಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 2

  Sad
 • 1

  Frustrated
 • 3

  Angry

Comments:

0 comments

Write the first review for this !