ಗುರುವಾರ , ಏಪ್ರಿಲ್ 15, 2021
27 °C
2020ಕ್ಕೆ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಭಾರತ; ಪ್ರಾಂಶುಪಾಲ ಡಾ.ಹಿರಣ್ಣಯ್ಯ ಅಭಿಮತ

‘ಬಾಂಬ್‌ ಸ್ಫೋಟಕ್ಕಿಂತ ಕೆಟ್ಟದ್ದು ಜನಸಂಖ್ಯಾ ಸ್ಫೋಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಾಂಬ್‌ ಸ್ಫೋಟಕ್ಕಿಂತ ಕೆಟ್ಟದ್ದಾಗಿದೆ ದೇಶದಲ್ಲಿನ ಜನಸಂಖ್ಯಾ ಸ್ಫೋಟ. ಕಡಿಮೆ ಮಾಡಲು ಸಾಧ್ಯವೇ ಇಲ್ಲ. ಹತೋಟಿಗೆ ತರದಿದ್ದರೆ; ಸಾಕಷ್ಟು ದುಷ್ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ’ ಎಂದು ಡಿ.ಬನುಮಯ್ಯ ಕಾಲೇಜಿನ ಪ್ರಾಂಶುಪಾಲ ಡಾ.ಹಿರಣ್ಣಯ್ಯ ಕಳವಳ ವ್ಯಕ್ತಪಡಿಸಿದರು.

ನಗರದ ಪುರಭವನದಲ್ಲಿ ಗುರುವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ದೇಶದ ಪ್ರಸ್ತುತ ಜನಸಂಖ್ಯಾ ಬೆಳವಣಿಗೆಯ ದರವನ್ನು ಗಮನಿಸಿದರೆ 2020ಕ್ಕೆ ಚೀನಾವನ್ನು ಹಿಂದಿಕ್ಕಿ, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ’ ಎಂದರು.

‘ಜನಸಂಖ್ಯಾ ಆಸ್ಫೋಟದ ದುಷ್ಪರಿಣಾಮವಾಗಿ ಭವಿಷ್ಯದಲ್ಲಿ ಯುವ ಸಮೂಹಕ್ಕೆ ನಿರುದ್ಯೋಗ ಕಾಡಲಿದೆ. ಯಾವ ಪ್ರಧಾನಮಂತ್ರಿ, ಮುಖ್ಯಮಂತ್ರಿಯಿಂದಲೂ ಎಲ್ಲರಿಗೂ ಉದ್ಯೋಗ ಒದಗಿಸುವುದು ಸಾಧ್ಯವಾಗುವುದಿಲ್ಲ. ತಲಾದಾಯ ತಿರುಕನ ಕನಸಿನಂತಾಗಲಿದೆ. ಭೂಮಿಯ ಫಲವತ್ತತೆ ಕುಸಿಯಲಿದೆ. ವಿಟಮಿನ್‌ ಇಲ್ಲದ ಆಹಾರ ಲಭ್ಯವಾಗಲಿದೆ. ಬುದ್ಧಿವಂತರಿಗೆ ಮಾತ್ರ ಭವಿಷ್ಯ ಎಂಬಂತಹ ಸನ್ನಿವೇಶ ನಿರ್ಮಾಣಗೊಳ್ಳಲಿದೆ’ ಎಂಬ ಆತಂಕ ವ್ಯಕ್ತಪಡಿಸಿದರು.

‘ಜನಸಂಖ್ಯೆಯಲ್ಲಿನ ಹೆಚ್ಚಳ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಸಮಸ್ಯೆಯಾಗಿ ಕಾಡಲಿದೆ. ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯೂ ಇದಕ್ಕೆ ಪೂರಕವಾಗಿದೆ. ಜನನ ಪ್ರಮಾಣ ದರ ಏರುಗತಿಯಲ್ಲಿದ್ದು, ಮರಣ ಪ್ರಮಾಣ ದರ ವರ್ಷದಿಂದ ವರ್ಷಕ್ಕೆ ತಗ್ಗುತ್ತಿದೆ. ಮಗುವಿನ ಜನನ ಆಯ್ಕೆಯಾಗದೆ, ಆಕಸ್ಮಿಕವಾಗುತ್ತಿದೆ. ಜಗತ್ತಿನ ಅತ್ಯಂತ ಹೆಚ್ಚು ಭೂ ಪ್ರದೇಶ ಹೊಂದಿರುವ ರಾಷ್ಟ್ರಗಳಲ್ಲಿ 7ನೇ ಸ್ಥಾನದಲ್ಲಿರುವ ಭಾರತದ ಜನಸಂಖ್ಯಾ ಬೆಳವಣಿಗೆ ದರ ಏರುಗತಿಯಲ್ಲಿದ್ದು, ಅಪಾಯಕಾರಿ ಹಂತ ತಲುಪುತ್ತಿದೆ’ ಎಂದರು.

‘ಪ್ರಸ್ತುತ ಜನಸಂಖ್ಯೆ ಮಿತಿ ಮೀರಿ ಬೆಳೆದಿದೆ. ಕಡ್ಡಾಯ, ಸಾಮೂಹಿಕ, ಶೀಘ್ರ ಮದುವೆಗಳು ಇದಕ್ಕೆ ಕಾರಣವಾಗಿವೆ. ಕುಟುಂಬಕ್ಕೊಂದು ಮಗು ಕಡ್ಡಾಯವಾಗಬೇಕಿದೆ. ಜನಸಂಖ್ಯಾ ಬೆಳವಣಿಗೆ ಬಗ್ಗೆ ಶತಮಾನಗಳ ಹಿಂದೆಯೇ ತನ್ನ ‘ಎಸ್ಸೇ ಆನ್‌ ಪಾಪ್ಯುಲೇಶನ್‌’ ನಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿದ ಥಾಮಸ್‌ ರಾಬರ್ಟ್‌ ಮಾಲ್ತಸ್‌ನ ಅಂಶಗಳು ಇಂದಿಗೂ ಹೋಲಿಕೆಯಾಗುತ್ತಿವೆ. ಆಹಾರದ ವೃದ್ಧಿ ದರ ಆಮೆ ನಡಿಗೆಯ ಬೆಳವಣಿಗೆಯಾಗಿದ್ದರೆ, ಜನಸಂಖ್ಯೆಯ ದರ ಅಂಕ ಗಣಿತದ ಮಾದರಿಯಲ್ಲಿ ಏರಿಕೆಯಾಗುತ್ತಿದೆ’ ಎಂದು ತಿಳಿಸಿದರು.

‘ಜನಸಂಖ್ಯಾ ಬೆಳವಣಿಗೆ ನಿಯಂತ್ರಣ ಎಂಬುದು ಒಂದು ದಿನಕ್ಕೆ ಸೀಮಿತವಾಗಬಾರದು. ವರ್ಷವಿಡಿ ಜಾಗೃತಿ ನಡೆಯಬೇಕು. ಜನಸಂಖ್ಯಾ ಸ್ಫೋಟ ನಿಯಂತ್ರಿಸದಿದ್ದರೆ, ತುಂಬಾ ಕಷ್ಟವಾಗಲಿದೆ. ದೇಶದ ಉನ್ನತಿಗೆ ಅಡ್ಡಿಯಾಗಲಿದೆ. ಗಂಡಿಲ್ಲ ಎಂದು ಹೆಣ್ಣು, ಹೆಣ್ಣಿಲ್ಲ ಎಂದು ಗಂಡು ಮಗುವಿನ ಸಂತಾನದ ಸ್ವಾರ್ಥಕ್ಕಾಗಿ ದೇಶ ಕೊಲ್ಲುವುದು ಇನ್ನಾದರೂ ನಿಲ್ಲಬೇಕಿದೆ. ಸರ್ಕಾರವೂ ಕಠಿಣ ಕ್ರಮ ಜರುಗಿಸಲು ಮುಂದಾಗಬೇಕು. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಪಡೆಯುವವರಿಗೆ ಯಾವೊಂದು ಸೌಲಭ್ಯ ಒದಗಿಸಬಾರದು’ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಜಯಂತ್ ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಮ್ಮದ್‌ ಸಿರಾಜ್ ಅಹಮದ್‌ ಪ್ರಾಸ್ತಾವಿಕವಾಗಿ ಮಾತನಾಡಿ ‘ಜನಸಂಖ್ಯೆ ಹೆಚ್ಚಳದಿಂದ ಹೆಚ್ಚೆಚ್ಚು ಸ್ಲಂ ನಿರ್ಮಾಣಗೊಳ್ಳುತ್ತಿವೆ. ಕುಡಿಯುವ ನೀರಿಗೂ ಸಮಸ್ಯೆ ತಲೆದೋರಿದೆ. ಈಗಾಗಲೇ ಬೆಂಗಳೂರು ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಭವಿಷ್ಯದಲ್ಲಿ ಮೈಸೂರು ಸಹ ಇದೇ ವಿಷ ವರ್ತುಲದಲ್ಲಿ ಸಿಲುಕಿಕೊಳ್ಳಲಿದೆ. ಅರಣ್ಯ ನಾಶಕ್ಕೂ ಜನಸಂಖ್ಯೆ ಹೆಚ್ಚಳ ರಹದಾರಿಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣ ಹಾಗೂ ಆರೋಗ್ಯಾಧಿಕಾರಿ ಡಾ.ಆರ್‌.ವೆಂಕಟೇಶ್‌, ವಿವಿಧ ವಿಭಾಗದ ಅಧಿಕಾರಿಗಳಾದ ಡಾ.ಎಲ್‌.ರವಿ, ಡಾ.ಚಿದಂಬರ, ಡಾ.ಮಂಜುಪ್ರಸಾದ್‌, ಡಾ.ಸೋಮೇಗೌಡ, ಡಾ.ಮಹದೇವಪ್ರಸಾದ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗಿಡ ಕೊಡುವ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಜನಸಂಖ್ಯಾ ನಿಯಂತ್ರಣಕ್ಕೆ ಶ್ರಮಿಸಿದ ಸಿಬ್ಬಂದಿಯನ್ನು ಇದೇ ಸಂದರ್ಭ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.