ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ ಉಪ ಚುನಾವಣೆ: ಪ್ರಚಾರದ ವೇಳೆ ಡಿ.ಕೆ‌ ಶಿವಕುಮಾರ್ ಕಣ್ಣೀರು

ರಾಹುಲ್‌ ಮದುವೆ, ಸಿದ್ದರಾಮಯ್ಯ ಸಿಎಂ ನನಸಾಗದ ಕನಸು: ಈಶ್ವರಪ್ಪ
Last Updated 9 ಮೇ 2019, 18:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯು ಪ್ರಚಾರದ ಕಾವು ತೀವ್ರಗೊಳ್ಳುತ್ತಿದೆ. ಮೈತ್ರಿ ಪಕ್ಷಗಳ ಮತ್ತು ಬಿಜೆಪಿ ನಾಯಕರು ಬಿರು ಬಿಸಿಲು ಲೆಕ್ಕಿಸದೆ, ಪ್ರತಿಷ್ಠೆಯನ್ನು ಪಣಕ್ಕಿಟ್ಟು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಸಚಿವ ಡಿ.ಕೆ. ಶಿವಕುಮಾರ್ ಇಂಗಳಹಳ್ಳಿ, ಬೆಟದೂರ, ಕಮಡೊಳ್ಳಿ, ಛಬ್ಬಿ ಮತ್ತು ಅದರಗುಂಚಿಯಲ್ಲಿ ದಿನವಿಡೀ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಶಾಸಕರಾದ ಈಶ್ವರಪ್ಪ ಮತ್ತು ಬಸವರಾಜ ಬೊಮ್ಮಾಯಿ ರಟ್ಟಿಗೆರೆ, ಗೌಡಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತ ಯಾಚಿಸಿದರು.

ಶಿವಳ್ಳಿ ನೆನೆದು ಕಣ್ಣೀರು: ಇಂಗಳಗಿಯಲ್ಲಿ ರೋಡ್ ಶೋ ನಡೆಸಿ ಮಾತನಾಡುವಾಗ ದಿವಂಗತ ಸಿ.ಎಸ್. ಸಿವಳ್ಳಿ ಅವರನ್ನು ನೆನೆದು ಕಣ್ಣೀರಿಟ್ಟ ಡಿ.ಕೆ. ಶಿವಕುಮಾರ್, ‘ಚುನಾವಣೆಗಾಗಿ ನಾನು ಕಣ್ಣೀರು ಹಾಕಿಲ್ಲ. ಶಿವಳ್ಳಿ ತುಂಬಾ ಹತ್ತಿರದ ಗೆಳೆಯ. ಆತನ ನೆನಪಿನಿಂದ ದುಃಖ ಉಮ್ಮಳಿಸಿ ಬಂತು. ಆತನ ಸೇವೆಯನ್ನು ಪರಿಗಣಿಸಿ ಅವರ ಪತ್ನಿ ಕುಸುಮಾವತಿ ಅವರಿಗೆ ಟಿಕೆಟ್ ಕೊಟ್ಟು, ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರನ್ನು ಗೆಲ್ಲಿಸುವ ಹೊಣೆ ನಿಮ್ಮದು’ ಎಂದು ಮನವಿ ಮಾಡಿದರು.

‘ಶಿವಳ್ಳಿ ಸಾವಿಗೆ ಸರ್ಕಾರದ ಕಿರುಕುಳ ಕಾರಣ ಎಂದು ಶ್ರೀರಾಮುಲು ಅಣ್ಣ ಹೇಳಿದ್ದಾರೆ. ತನ್ನ ಕ್ಷೇತ್ರದ ಅಧಿಕಾರಿಗಳು ಸೇರಿದಂತೆ, ಯಾವ ಸಮುದಾಯದ ಜನರನ್ನು ನೋಯಿಸದ ಶಿವಳ್ಳಿ ಏನೆಂದು ಇಲ್ಲಿನ ಜನರಿಗೆ ಗೊತ್ತು’ ಎಂದು ತಿರುಗೇಟು ನೀಡಿದರು.

ರಾಹುಲ್‌ಗೆ ಮದುವೆ, ಸಿದ್ದರಾಮಯ್ಯ ಸಿಎಂ ನನಸಾಗದ ಕನಸು: ‘ಕಾಂಗ್ರೆಸ್‌ನೊಳಗೆ ಕೊತ ಕೊತ ಕುದಿಯುತ್ತಿರುವ ಒಳ ಬೇಗುದಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸ್ಫೋಟಗೊಳ್ಳಲಿದೆ. ಇದು ನಮಗೆ ವರವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ’ ಎಂದು ರಟ್ಟಿಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ, ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಸುತ್ತಿದ್ದಾರೆ. ಅತ್ತ ರಾಹುಲ್ ಗಾಂಧಿ ಮದುವೆಯಾಗುವುದು, ಇತ್ತ ಸಿದ್ದರಾಮಯ್ಯ ಸಿ.ಎಂ ಆಗುವುದು ಎಂದಿಗೂ ನನಸಾಗದ ಕನಸು’ ಎಂದು ಕಿಚಾಯಿಸಿದರು.

ಕಾಂಗ್ರೆಸ್ ತೊರೆಯುವುದಿಲ್ಲ: ಕುಮಠಳ್ಳಿ
ಕುಂದುಗೋಳ ಉಪ ಚುನಾವಣೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ದಿನವಿಡೀ ಕಾಣಿಸಿಕೊಳ್ಳುವ ಮೂಲಕ, ಅತೃಪ್ತರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಗಮನ ಸೆಳೆದರು.

‘ಕಾಂಗ್ರೆಸ್ ತೊರೆಯುತ್ತೇನೆ ಎಂಬುದು ಮಾಧ್ಯಮಗಳ ಸೃಷ್ಟಿ. ಶಾಸಕ ರಮೇಶ ಜಾರಕಿಹೊಳಿ ಅವರ ಜತೆ ಇರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರಷ್ಟೇ ಅಲ್ಲ, ಸತೀಶಣ್ಣನೊಂದಿಗೂ ಸಂಪರ್ಕದಲ್ಲಿದ್ದೇನೆ. ಮೈತ್ರಿ ಸರ್ಕಾರ ಇನ್ನು ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲಿದೆ. ನಾವೆಲ್ಲರೂ ಸರ್ಕಾರದ ಬೆಂಬಲಕ್ಕಿದ್ದೇವೆ’ ಎಂದು ಕಮಡೊಳ್ಳಿಯಲ್ಲಿ ನಡೆದ ಪ್ರಚಾರದ ವೇಳೆ ಸುದ್ದಿಗಾರರಿಗೆ ಕುಮಠಳ್ಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT