ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಪಡೆಗಳ ವಿರುದ್ಧ ಮಮತಾ ಕಿಡಿ

ನಾಲ್ಕನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದ ವಿವಿಧೆಡೆ ಗಲಭೆ
Last Updated 29 ಏಪ್ರಿಲ್ 2019, 18:39 IST
ಅಕ್ಷರ ಗಾತ್ರ

ಕೋಲ್ಕತ್ತ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಆರು ಎಫ್‌ಐಆರ್‌ ದಾಖಲಿಸಲಾಗಿದೆ ಮತ್ತು 147 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಡಿಜಿಪಿ ಸಿದ್ಧನಾಥ್‌ ಗುಪ್ತ ತಿಳಿಸಿದ್ದಾರೆ.

ಬಹುತೇಕ ಎಲ್ಲ ಕಡೆಗಳಲ್ಲೂ ಬಿಜೆಪಿ– ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕೆಲವೆಡೆ ಮಹಿಳೆಯರೂ ಘರ್ಷಣೆಯಲ್ಲಿ ತೊಡಗಿದ್ದರು ಎಂದು ಅವರು ಹೇಳಿದ್ದಾರೆ.

ಬಿರ್‌ಭೂಮ್‌ ಜಿಲ್ಲೆಯ ಮತಗಟ್ಟೆಯಲ್ಲಿ ಸಂಘರ್ಷಕ್ಕೆ ಇಳಿದಿದ್ದ ಜನರನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಭದ್ರತಾ ಪಡೆಗಳ ವಿರುದ್ಧ ಕಿಡಿ ಕಾರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯು ಭದ್ರತಾ ಪಡೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಜವಾಬ್ದಾರಿ. ಕೇಂದ್ರದ ಭದ್ರತಾ ಪಡೆಗಳು ಮತಗಟ್ಟೆಯ ಹೊರಗೆ ಇರಬೇಕೇ ವಿನಾ ಒಳಗೆಪ್ರವೇಶಿಸುವಂತಿಲ್ಲ. ನಮಗೂ ಕಾನೂನು ಗೊತ್ತಿದೆ, ಗುಂಡುಹಾರಿಸುವ ಅಥವಾ ಲಾಠಿ ಚಾರ್ಜ್‌ ಮಾಡುವ ಅಧಿಕಾರ ಭದ್ರತಾ ಪಡೆಗೆ ಇಲ್ಲ. ಆದರೆ ಇಲ್ಲಿ ಯೋಧರು ಮತಗಟ್ಟೆಯೊಳಗೆ ಹೋಗಿ ಬಿಜೆಪಿಗೆ ಮತನೀಡುವಂತೆ ಮತದಾರರನ್ನು ಒತ್ತಾಯಿಸುತ್ತಿದ್ದರು’ ಎಂದು ಆರೋಪಿಸಿದ್ದಾರೆ.

ಎಂಟು ಕ್ಷೇತ್ರಗಳ ವ್ಯಾಪ್ತಿಯ ಹಲವೆಡೆ ಸಣ್ಣಪುಟ್ಟ ಗಲಭೆಗಳು ನಡೆದಿವೆ. ಎಲ್ಲ ಕಡೆಗಳಲ್ಲೂ ಟಿಎಂಸಿ– ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟಗಳು ನಡೆದಿವೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಪೊಲೀಸರ ವಶಕ್ಕೆ ನಾಯಿ: ತನ್ನ ಸಾಕು ನಾಯಿಯ ಮೈಮೇಲೆ ಬಿಜೆಪಿ ಪರ ಸ್ಟಿಕರ್‌ಗಳನ್ನು ಅಂಟಿಸಿ ಪಟ್ಟಣದಲ್ಲಿ ಅದರ ಜೊತೆ ಓಡಾಡುತ್ತಿದ್ದ ಏಕನಾಥ್‌ ಚೌಧರಿ (65) ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ನಂದುರ್‌ಬಾರ್‌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಏಕನಾಥ್‌ ಅವರ ನಾಯಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ನಾಯಿಯ ಶರೀರದ ಮೇಲೆ ಬಿಜೆಪಿಯ ಚಿಹ್ನೆ ಹಾಗೂ ‘ಮೋದಿ ಲಾವೋ ದೇಶ್‌ ಬಚಾವೋ’ (ಮೋದಿ ಗೆಲ್ಲಿಸಿ, ದೇಶವನ್ನು ಉಳಿಸಿ)ಎಂಬ ಸಂದೇಶವನ್ನು ಬರೆಯಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಅಧಿಕಾರಿಗಳ ಸಾವು: ಮಧ್ಯಪ್ರದೇಶದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಮತದಾನ ಮಾಡಿ ಗೊಂದಲಗಳಿಗೆ ತೆರೆ ಎಳೆದ ದೀಪಿಕಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಸೋಮವಾರ ಮತ ಚಲಾಯಿಸಿದರು. ಪತಿ ರಣವೀರ್ ಸಿಂಗ್ ಕೂಡಾ ಮತ ಹಾಕಿದರು. ಕೊಪನ್‌ಹೇಗನ್‌ನಲ್ಲಿ ಜನಿಸಿರುವ ದೀಪಿಕಾ, ಡೆನ್ಮಾರ್ಕ್ ದೇಶದ ಪೌರತ್ವ ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು. ಮತದಾನ ಮಾಡಿದ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಅವರು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

‘ನಾನು ಯಾರು, ಎಲ್ಲಿಯವಳು ಎಂಬ ಪ್ರಶ್ನೆ ನನಗೆ ಈವರೆಗೂ ಇರಲಿಲ್ಲ. ಯಾರೆಲ್ಲಾ ನನ್ನ ಬಗ್ಗೆ ಗೊಂದಲ ಇಟ್ಟುಕೊಂಡಿದ್ದೀರೋ, ಅವರೆಲ್ಲಾ ಗೊಂದಲದಿಂದ ಹೊರಬನ್ನಿ. ಜೈ ಹಿಂದ್’ ಎಂದು ದೀಪಿಕಾ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ನಾಲ್ಕನೇ ಹಂತದ ಮತದಾನದಲ್ಲಿ ಬಾಲಿವುಡ್ ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಮತದಾನ ಮಾಡಿದರು. ಅಮಿತಾಭ್ ಬಚ್ಚನ್ ಕುಟುಂಬ, ಶಾರುಕ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ಅಜಯ್ ದೇವ್‌ಗನ್, ಕಂಗನಾ, ಸಂಜಯ್ ದತ್ ಮೊದಲಾದವರು ಹಕ್ಕು ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT