ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರ ರಕ್ಷಣೆಗೆ ನಿಂತಿರುವ ‘ಮೈತ್ರಿ’ ಸರ್ಕಾರ: ಸ್ಮೃತಿ ಇರಾನಿ ವಾಗ್ದಾಳಿ

Last Updated 31 ಮಾರ್ಚ್ 2019, 13:47 IST
ಅಕ್ಷರ ಗಾತ್ರ

ಮಡಿಕೇರಿ: ‘ಕರ್ನಾಟಕ ರಾಜ್ಯದಲ್ಲಿ ಭ್ರಷ್ಟ ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ ನಡೆದರೆ ಅವರ ರಕ್ಷಣೆಗೆ ಮೈತ್ರಿ ಸರ್ಕಾರದ ಮುಖಂಡರು ಒಂದಾಗಿ ಧರಣಿ ನಡೆಸುತ್ತಾರೆ. ಲೂಟಿಕೋರರ ರಕ್ಷಣೆಗೋಸ್ಕರ ಒಂದಾಗುತ್ತಾರೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.

ಗೋಣಿಕೊಪ್ಪಲು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ರಿಮೋಟ್‌ ಕಂಟ್ರೋಲ್ ಸರ್ಕಾರವಿದೆ’ ಎಂದು ವ್ಯಂಗ್ಯವಾಡಿದರು.

‘ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದವರು, ಇಂದು ಚುನಾವಣೆಗೋಸ್ಕರ ಅಯೋಧ್ಯೆಯಲ್ಲಿ ಸುತ್ತಾಡುತ್ತಿದ್ದಾರೆ. ಅಭಿವೃದ್ಧಿ ಮರೆತು ವಿದೇಶದಲ್ಲಿಯೇ ಮೋಜುಮಸ್ತಿ ಮಾಡುತ್ತ ಕಾಲಹರಣ ಮಾಡುತ್ತಿದ್ದವರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯಬಿದ್ದು ಗಂಗೆಯ ದರ್ಶನ ಪಡೆಯುತ್ತಿದ್ದಾರೆ. ಅವರಿಗೆಲ್ಲ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡರ ವಿರುದ್ಧ ಸ್ಮೃತಿ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ನಾಯಕರು ಸೇನಾ ಮುಖ್ಯಸ್ಥರನ್ನೇ ಗೂಂಡಾ ಎಂದು ಕರೆಯುತ್ತಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸೈನಿಕರನ್ನೇ ನಿಂದಿಸುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರವು ಭಯೋತ್ಪಾದಕರ ಬಗ್ಗೆ ಮೃದುಧೋರಣೆ ಅನುಸರಿಸಿತ್ತು. ಭಯೋತ್ಪಾದಕ ವಿರುದ್ಧ ಕ್ರಮ ಕೈಗೊಳ್ಳಲು ಒಂದು ಆದೇಶವನ್ನೂ ಹೊರಡಿಸಿರಲಿಲ್ಲ. ಮನಮೋಹನ್‌ ಸಿಂಗ್‌ ಮೌನಕ್ಕೆ ಶರಣಾಗಿದ್ದರು. ಈಗಿನ ಪ್ರಧಾನಿ ಭಯೋತ್ಪಾದಕರಿಗೆ ಬೆಂಬಲ ನೀಡಿದರೆ ನಿಮ್ಮ ಮನೆಗೇ ನುಗ್ಗಿ ಹೊಡೆಯುತ್ತೇವೆಂಬ ಎಚ್ಚರಿಕೆ ಕೊಟ್ಟಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ: ‘ಜಿಎಸ್‌ಟಿ ಕುರಿತು ಲೇವಡಿ ಮಾಡುತ್ತಿರುವ ರಾಹುಲ್‌ ಗಾಂಧಿ ಅನ್ನಕ್ಕೂ ಸಾರಾಯಿಗೂ ಒಂದೇ ಮಾದರಿಯ ತೆರಿಗೆ ವಿಧಿಸುವ ಅವೈಜ್ಞಾನಿಕ ಲೆಕ್ಕಾಚಾರವುಳ್ಳ ವ್ಯಕ್ತಿ. ಕಾಂಗ್ರೆಸ್‌ಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ. ದೇಶದ ಜನರು ಅವರ ಮುಂದೆಯೇ ಕೈಯೊಡ್ಡಿ ನಿಲ್ಲಬೇಕು ಅನ್ನುವುದೇ ಆ ಪಕ್ಷದ ನಾಯಕರ ಬಯಕೆ. ನರೇಂದ್ರ ಮೋದಿ ಅವರು ಐದು ವರ್ಷಗಳಲ್ಲಿ ದೇಶದ ಆರ್ಥಕ ಸ್ಥಿತಿಯನ್ನೇ ಬದಲಾವಣೆ ಮಾಡಿದ್ದಾರೆ. ಆದರೆ, ಹಲವು ದಶಕಗಳಿಂದ ಆಡಳಿತ ನಡೆಸಿದ್ದ ಗಾಂಧಿ ಕುಟುಂಬಕ್ಕೆ ಏಕೆ ಸಾಧ್ಯವಾಗಿರಲಿಲ್ಲ’ ಎಂದು ಪ್ರಶ್ನಿಸಿದರು.

‘ಐದು ವರ್ಷಗಳ ಹಿಂದೆ ಸಾಮಾನ್ಯ ಪ್ರಜೆಗಳು ಬ್ಯಾಂಕ್‌ಗೆ ಹೋಗಲು ಸಾಧ್ಯವಿರಲಿಲ್ಲ. ಜನ್‌ಧನ್‌ ಯೋಜನೆಯ ಮೂಲಕ ಸಾಮಾನ್ಯರಿಗೂ ಬ್ಯಾಂಕ್‌ ಖಾತೆ ತೆರೆಸುವ ಕ್ರಾಂತಿ ಮಾಡಿದ್ದೇವೆ. ದೇಶದ ಜನರು ಮತ್ತೊಮ್ಮೆ ಕೆಲಸಗಾರನನ್ನು ಬೆಂಬಲಿಸಲು ನಿರ್ಧಾರ ಮಾಡಿದ್ದಾರೆ’ ಎಂದು ಹೇಳಿದರು.

ಮೈಸೂರು–ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮಾತನಾಡಿ, ‘ಈ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಅವರು ಗೋಮುಖವ್ಯಾಘ್ರ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT