ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಿನ ನಗರಿಯ ವರ್ಣೋತ್ಸವ

Last Updated 6 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಭೌಗೋಳಿಕ ವೈವಿಧ್ಯವಿರುವ ದೇಶ ಐಸ್‌ಲ್ಯಾಂಡ್‌. ಹೋದಲ್ಲೆಲ್ಲ ಹಿಮದ ಹೊಳೆ, ಒಡಲೊಳಗೆ ಅವಿತ ಅಗ್ನಿಪರ್ವತಗಳು, ಧುಮ್ಮಿಕ್ಕುವ ಜಲಧಾರೆ, ಗುಹೆ, ಬೆಟ್ಟ, ಗುಡ್ಡ, ಕ್ಷಣಾರ್ಧದಲ್ಲಿ ಬದಲಾಗುವ ವಾತಾವರಣ... ಹೀಗೆ ನಿಸರ್ಗದ ಹಲವು ಕಲಾಕೃತಿಗಳನ್ನು ಹೊಂದಿರುವ ಮಾಯಾನಗರಿಯಿದು. ಈ ಹಿಮದ್ವೀಪದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ನಾನು ಛಾಯಾಗ್ರಾಹಕ. ಹಾಗಾಗಿ ಯಾವುದೇ ಸ್ಥಳಕ್ಕೆ ಭೇಟಿ ನೀಡುವಾಗಲೂ ಅಲ್ಲಿಯ ಪರಿಸರ ಛಾಯಾಗ್ರಹಣಕ್ಕೆ ಪೂರಕವಾಗಿದೆಯೇ ಎಂಬುದನ್ನು ಅರಿತೇ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತೇನೆ. ಹಾಗಾಗಿಯೇ ಸೆಪ್ಟೆಂಬರ್‌ನಲ್ಲಿ ನಾನು ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನ್ನ ಐವರು ಸ್ನೇಹಿತರೊಂದಿಗೆ ಐಸ್‌ಲ್ಯಾಂಡ್‌ಗೆ ಹೊರಟೆ.

ಐಸ್‌ಲ್ಯಾಂಡ್‌, ಪ್ರಾಕೃತಿಕ ಸೌಂದರ್ಯ ಸಿರಿವಂತಿಕೆಯ ಜತೆಗೆ, ಲ್ಯಾಂಡ್‌ಸ್ಕೇಪ್‌ ಛಾಯಾಗ್ರಹಣಕ್ಕೂ ಹೇಳಿ ಮಾಡಿಸಿದ ತಾಣ. ಅಲ್ಲಿ ಸಿಕ್ಕ ಒಂದೊಂದು ದೃಶ್ಯವೂ ಸ್ವರ್ಗ ಸುಖವನ್ನೇ ನಮಗೆ ನೀಡಿದೆ. ಹನ್ನೊಂದು ದಿನಗಳ ಅದ್ಭುತ ಪಯಣದಲ್ಲಿ ಜಗವ ಮರೆಸುವ ನೆನಪುಗಳ ಭಂಡಾರವೇ ನಮ್ಮದಾಯಿತು.

ಸೆಪ್ಟೆಂಬರ್‌ನಿಂದ ನವೆಂಬರ್‌ ತಿಂಗಳವರೆಗೆ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ. ಈ ವೇಳೆ ಅಲ್ಲಿ ನಾರ್ದರ್ನ್‌ ಲೈಟ್ಸ್‌ (Northern Lights)ಫಲಿಸುತ್ತದೆ. ಕತ್ತಲೆಯ ಆಕಾಶದಿ ಬಣ್ಣ ಬಣ್ಣಗಳ ದೀಪೋತ್ಸವ ಮೂಡುತ್ತದೆ. ಕತ್ತಲೆಯ ಕಪ್ಪಿಗೆ ರಂಗೆರೆಚುವ ವೈಭವದ ವರ್ಣೋತ್ಸವವನ್ನು ಕಣ್ತುಂಬಿಕೊಳ್ಳಲು ಅದೃಷ್ಟ ಬೇಕು. ನಾವಂತೂ ಅದೃಷ್ಟಶಾಲಿಗಳು. ಹನ್ನೊಂದು ದಿನದಲ್ಲಿ ನಾಲ್ಕು ದಿನ ನಮಗದು ಕಾಣಿಸಿತು.

ಕಿರ್ಕೆಜುಫೆಲ್ ಪರ್ವತ, ಲೋಮಾಗ್‌ನುಪುರ ದಿಬ್ಬ, ಸೆಲ್ಫಾಸ್‌, ಅಲ್ಡೆಜಾಫಾಸ್ ಜಲಪಾತ, ಪಿಂಗ್ವೆಲ್ಲಿರ್ ರಾಷ್ಟ್ರೀಯ ಉದ್ಯಾನಗಳಿಗೆ ನಾವು ಭೇಟಿ ನೀಡಿದೆವು. ರಸ್ತೆಯುದ್ದಕ್ಕೂ ಅರ್ಧಗಂಟೆಗೊಮ್ಮೆ ಯಾವುದಾದರೂ, ನದಿ, ಜಲಪಾತ, ಹೊಳೆ ಎದುರುಗೊಳ್ಳುತ್ತಿತ್ತು. ಬಿಸಿ ನೀರಿನ ಬುಗ್ಗೆಯೂ ಕಾಣುತ್ತಿತ್ತು. ನೀರು ಬಿಸಿಯಾಗಿ ಭೂಮಿಯ ಮೇಲ್ಪದರದಿಂದ 30 ರಿಂದ 40 ಅಡಿ ಎತ್ತರಕ್ಕೆ ಸಿಡಿಯುವಂತಹ ದೃಶ್ಯಗಳಿಗೆ ಸಾಕ್ಷಿಯಾದ ನಾವುಗಳು ಅವುಗಳನ್ನು ಕ್ಯಾಮೆರಾದಲ್ಲಿಯೂ ಸೆರೆಹಿಡಿದೆವು.

ಇಲ್ಲಿಯ ವಾತಾವರಣ ಮುನ್ಸೂಚನೆಯೇ ಇಲ್ಲದೇ ಬದಲಾಗುತ್ತಿರುತ್ತದೆ. ಐದು ನಿಮಿಷ ಬಿಸಿಲಿದ್ದರೆ ತಕ್ಷಣವೇ ಚಳಿ ಪ್ರಾರಂಭವಾಗುತ್ತದೆ. ಇನ್ನೈದು ನಿಮಿಷದಲ್ಲಿ ಮಳೆ ಸುರಿಯಲಾರಂಭಿಸುತ್ತದೆ. ಕೊರೆಯುವ ಚಳಿಯಿದ್ದರೂ, ಜನರು ಶ್ರಮಜೀವಿಗಳು ಮತ್ತು ಸ್ವಾಭಿಮಾನಿಗಳು. ಹಾಗಾಗಿಯೇ ಫಿಟ್‌ ಅಂಡ್‌ ಫೈನ್‌ ಆಗಿರುತ್ತಾರೆ.

ಅಪರಾಧ, ಕಳ್ಳತನ ಪ್ರಕರಣಗಳು ಇಲ್ಲಿ ಅತಿ ಕಡಿಮೆ. ಇದಕ್ಕೊಂದು ಉದಾಹರಣೆಯೆಂದರೆ ನಮ್ಮ ತಂಡದಲ್ಲಿ ಒಬ್ಬರು ಪಾಕೆಟ್‌ ಕ್ಯಾಮೆರಾವನ್ನು ಕಾರಿನ ಬಳಿ ಬೀಳಿಸಿಕೊಂಡಿದ್ದರು. ಅದನ್ನು ಗಮನಿಸದೆ ನಾವೆಲ್ಲ ಹೋಟೆಲ್‌ಗೆ ಹೋದೆವು. ಮತ್ತೆ ವಾಪಸ್ಸು ಬಂದಾಗ ಕಾರಿನ ಬಾನೆಟ್‌ನಲ್ಲಿ ಯಾರೋ ಕ್ಯಾಮೆರಾ ಇರಿಸಿ ಹೋಗಿದ್ದರು.

ಸ್ವಚ್ಛತೆಯ ನಗರಿ

ಈ ದೇಶದ ಜನಸಂಖ್ಯೆ ಕೇವಲ 3.5 ಲಕ್ಷ. ಹಾಗಾಗಿಯೇ ರಸ್ತೆಗಳಲ್ಲಿ ಜನದಟ್ಟಣೆ ಕಾಣುವುದು ಅಪರೂಪ. ಶಾಪಿಂಗ್ ಮಾಲ್‌, ಪ್ರಮುಖ ರಸ್ತೆಗಳಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣಿಸುತ್ತಾರೆ. ಈ ದೇಶದ ರಾಜಧಾನಿ ರೆಕ್ಯಾವಿಕ್‌ ಹೊರತುಪಡಿಸಿ ಬೇರೆ ಯಾವುದೇ ಮಹಾನಗರಗಳಿಲ್ಲ. ಶೇ 70 ರಷ್ಟು ಜನರು ರಾಜಧಾನಿಯಲ್ಲಿಯೇ ವಾಸಿಸುತ್ತಿದ್ದಾರೆ. ಉಳಿದ ಶೇ 30 ರಷ್ಟು ಜನರು ದೇಶದ ವಿವಿಧ ಪ್ರದೇಶಗಳಲ್ಲಿದ್ದಾರೆ.

ನನಗಿಷ್ಟವಾದ ಐಸ್‌ಲ್ಯಾಂಡ್‌ ಜನರ ಗುಣವೆಂದರೆ ಸ್ವಚ್ಛತೆ. ಎಲ್ಲಿಯೂ ಕಸ ಕಾಣುವುದಿಲ್ಲ. ಮನೆಯನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ. ಹೋಂಸ್ಟೇಗೆ ಪ್ರವಾಸಿಗರು ಹೋದಾಗ ಯಾವ ಸ್ಥಿತಿಯಲ್ಲಿ ಇರುತ್ತದೋ ಅಲ್ಲಿಂದ ಬರುವಾಗಲೂ ಅದೇ ಸ್ಥಿತಿಯಲ್ಲಿ ಇರಬೇಕು ಎಂಬುದು ಅಲ್ಲಿಯ ನಿಯಮ. ಹಾಗಾಗಿ ಪ್ರತಿದಿನ ನಾವೇ ಸ್ವಚ್ಛಗೊಳಿಸುತ್ತಿದ್ದೆವು. ಟ್ರಾಫಿಕ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ವ್ಯವಸಾಯ. ಕುರಿ, ಕುದುರೆ ಸಾಕಾಣಿಕೆ ಇಲ್ಲಿಯ ಜನರ ಮುಖ್ಯ ಉದ್ಯೋಗ. ಬೇಸಿಗೆಯಲ್ಲಿ ಉಣ್ಣೆ ಉತ್ಪಾದನೆಯೇ ಇವರ ಜೀವನಾಧಾರ. ಪ್ರವಾಸೋದ್ಯಮ ಈ ದೇಶದ ಪ್ರಮುಖ ಆದಾಯ ಮೂಲ.

ಆಹಾರದ ಆಯ್ಕೆ

ಶೀತ ವಾತಾವರಣ ಇರುವುದರಿಂದ ಅಲ್ಲಿನ ಬಹುತೇಕರು ಮಾಂಸಹಾರಿಗಳು. ಆದರೆ ಸಸ್ಯಹಾರಿಗಳಿಗೂ ಹಲವು ಆಯ್ಕೆಗಳಿವೆ. ಆಲೂಗೆಡ್ಡೆ, ಚೀಸ್‌ ಹೆಚ್ಚಾಗಿ ಬಳಸುತ್ತಾರೆ. ಮೊದಲೇ ಹೇಳಿದ್ದಂತೆ ಹೋಟೆಲ್‌ ಕಡಿಮೆ. ಹಾಗಾಗಿ ನಾವು ಇಲ್ಲಿಂದ ಹೋಗುವಾಗಲೇ ಬಿಸಿಬೇಳೆಬಾತ್, ಕಾಕ್ರಾ, ನ್ಯೂಡಲ್ಸ್‌ ತೆಗೆದುಕೊಂಡು ಹೋಗಿದ್ದೆವು. ಈ ದೇಶಕ್ಕೆ ತೆರಳುವಾಗ ಜೇಬು ತುಂಬ ದುಡ್ಡು ಇರಿಸಿಕೊಳ್ಳುವುದು ಮರೆಯುವಂತಿಲ್ಲ. ಯಾಕೆಂದರೆ, ಒಂದು ಸಾಮಾನ್ಯ ಊಟಕ್ಕೆ ಕನಿಷ್ಠ ₹1,500ದಿಂದ 2 ಸಾವಿರ ಇರುತ್ತದೆ. ನೀರಿನ ಬಾಟಲೊಂದಕ್ಕೆ ₹ 150 ಕೊಡಬೇಕು.

ಒಟ್ಟಾರೆ, ಮೊಗೆದಷ್ಟು ಮುಗಿಯದ ಈ ಕನಸಿನ ನಗರಿಗೆ ಭೇಟಿ ನೀಡಬೇಕೆಂಬುದು ನನ್ನ ನಾಲ್ಕು ವರ್ಷಗಳ ಕನಸು. ಈಗ ಅದು ನನಸಾಯಿತು.

ಕ್ಯಾಮೆರಾ ಆರ್ಕಷಣೆ

ಕಾಲೇಜು ದಿನಗಳಲ್ಲಿ ಕ್ಯಾಮೆರಾ ಸಾಂಗತ್ಯ ಹಲವು ಸಾಧ್ಯತೆಗಳ ಲೋಕವನ್ನೇ ತೆರೆದಿಟ್ಟಿತು. ವೈಲ್ಡ್‌ಲೈಫ್‌ ಫೋಟೊಗ್ರಫಿಯಲ್ಲಿ ಆಸಕ್ತನಾಗಿದ್ದ ನನಗೆ ಕಾಂಕ್ರಿಟ್‌ ಕಾಡು ತೊರೆದು, ನಿಸರ್ಗದ ಕಾಡಿನತ್ತ ಪ್ರೀತಿ ಬೆಳೆಯಿತು. ಕ್ಯಾಮೆರಾವನ್ನು ಹೆಗಲೇರಿಸಿಕೊಂಡು ಆಫ್ರಿಕಾ ದೇಶಗಳ ಕಾಡುಮೇಡು ಅಲೆದಾಡಿದ್ದೇನೆ. ನಂತರದ ದಿನಗಳಲ್ಲಿ ಫೋಟೊಗ್ರಫಿಯ ಹಲವು ಮಜಲುಗಳೆಡೆಗೆ ಆಕರ್ಷಣೆ ಬೆಳೆಯಿತು. ಫ್ಯಾಷನ್ ಫೋಟೊಗ್ರಫಿಯಲ್ಲಿ ಕೆಲಸ ಮಾಡುತ್ತಲೇ ಲ್ಯಾಂಡ್‌ಸ್ಕೇಪ್‌ ಛಾಯಾಗ್ರಹಣದ ಮೋಹ ಬೆಳೆಯಿತು. 2015ರಲ್ಲಿ ಸ್ವಾಲ್ಬರ್ಡ್‌ನಲ್ಲಿ ಮೊದಲ ಬಾರಿಗೆ ಲ್ಯಾಂಡ್‌ಸ್ಕೇಪ್‌ ಛಾಯಾಗ್ರಹಣ ಮಾಡಿದೆ. ಅಂದಿನಿಂದ ಸತತವಾಗಿ ಈ ಪಯಣ ಮುಂದುವರಿದಿದೆ.

ನಾರ್ದರ್ನ್‌ ಲೈಟ್ಸ್‌ ಬೆರಗು

ನಾರ್ದರ್ನ್‌ ಲೈಟ್ಸ್‌ಗೆ ವೈಜ್ಞಾನಿಕವಾಗಿ ‘ಅರೋರ ಬೋರಿಯಾಲಿಸ್‌’ ಎನ್ನುತ್ತಾರೆ. ಸ್ಥಳೀಯವಾಗಿ ಇದನ್ನು ಲೇಡಿ ಇನ್‌ ಗ್ರೀನ್‌ ಎಂದು ಕರೆಯುತ್ತಾರೆ. ಪರಿಸರದಲ್ಲಿ ಬೆಳಕಿನ ನೃತ್ಯ ಅನಾವರಣಗೊಳ್ಳುತ್ತದೆ. ಸೂರ್ಯನಿಂದ ಹೊರಹೊಮ್ಮುವ ವಿದ್ಯುದೀಕರಣದ ಕಣಗಳು ವಾತಾವರಣವನ್ನು ಪ್ರವೇಶಿಸಿದಾಗ ನಡೆಯುವ ಬೆಳಕಿನ ಪ್ರತಿಫಲವೇ ಈ ಸೊಬಗು.

ಹೋಗುವುದು ಹೇಗೆ?

ಭಾರತದ ಯಾವುದೇ ನಗರದಿಂದ ಯೂರೋಪ್‌ ರಾಷ್ಟ್ರಗಳಿಗೆ ವಿಮಾನ ಸೌಲಭ್ಯವಿದೆ. ಯೂರೋಪ್‌ ಒಕ್ಕೂಟದ ಯಾವುದೇ ದೇಶದ ರಾಜಧಾನಿಯ ಮೂಲಕ ಐಸ್‌ಲ್ಯಾಂಡ್‌ ತಲುಪಬಹುದು.

ದೆಹಲಿಯಿಂದ ರೆಕ್ಯಾವಿಕ್‌(Reykjavik) ತಲುಪಲು 15–16 ಗಂಟೆ ಬೇಕು. ಅಲ್ಲಿಂದ ಐಸ್‌ಲ್ಯಾಂಡ್‌ಗೆ ಹೋಗಲು ಮೂರೂವರೆ ಗಂಟೆ ತಗಲುತ್ತದೆ.

ಛಾಯಾಗ್ರಹಣದ ಸವಾಲು

ಐಸ್‌ಲ್ಯಾಂಡ್‌, ಛಾಯಾಗ್ರಹಕರ ಸಾಮರ್ಥ್ಯಕ್ಕೆ ಸವಾಲೊಡ್ಡುವ ನಗರ. ಇಲ್ಲಿಯ ಚಳಿಯಲ್ಲಿ ಫೋಟೊ ತೆಗೆಯುವುದೇ ದೊಡ್ಡ ಸಾಹಸ. ಸೂರ್ಯೋದಯವಾದರೂ ಆಕಾಶ ಗಾಢನೀಲಿಯಾಗಿರುವುದಿಲ್ಲ. ಬಹುತೇಕ ದೃಶ್ಯವನ್ನು ಕತ್ತಲಲ್ಲಿಯೇ ಸೆರೆಹಿಡಿಯಬೇಕು. ಹಾಗಾಗಿ ಶಟರ್‌ ಸ್ಪೀಡ್‌ ಮತ್ತು ಲಾಂಗ್‌ ಎಕ್ಸ್‌ಪೋಷರ್‌ ಇರಬೇಕು. ಇದನ್ನು ಕೈಯಿಂದ ಮಾಡಲು ಸಾಧ್ಯವಿಲ್ಲ. ಟ್ರೈಪಾಡ್‌ ಬಳಸಲೇಬೇಕು. ಅದು ಭಾರದ ಟ್ರೈಪಾಡ್‌ ಆಗಿರಬೇಕು. ಜತೆಗೆ, ವೈರ್‌ ಮೂಲಕವೇ ಕ್ಯಾಮೆರಾ ಕ್ಲಿಕ್ಕಿಸುವಂತಿರಬೇಕು.

ಜಲಪಾತಕ್ಕಿಂತ ಅರ್ಧ ಕಿ.ಮೀ ದೂರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರುತ್ತದೆ. ಅಲ್ಲಿಂದ ಈ ಎಲ್ಲ ಸಾಮಗ್ರಿಗಳನ್ನು ಹಿಡಿದು ಉಬ್ಬು ತಗ್ಗುಗಳ ನಡುವೇ ನಡೆದೇ ಬರಬೇಕು. ಪ್ರತಿಕ್ಷಣಕ್ಕೂ ಹವಾಮಾನ ಬದಲಾಗುತ್ತಿರುತ್ತದೆ. ಜತೆಗೆ, ನಾರ್ದರ್ನ್‌ ಲೈಟ್‌ ಕಾಣುವುದು ರಾತ್ರಿ. ನಾವು, ರಾತ್ರಿ 10.30 ರಿಂದ 2.30ರವರೆಗೆ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದೆವು. ಆ ವೇಳೆಯಲ್ಲಿ ತಾಪಮಾನ 2 ಡಿಗ್ರಿಯಿಂದ 3 ಡಿಗ್ರಿ ಇರುತ್ತಿತ್ತು. ಅಲ್ಲದೇ ಜೋರಾಗಿ ಗಾಳಿ ಬೀಸುತ್ತಿರುತ್ತದೆ. ಆದರೆ, ಇವುಗಳನ್ನೆಲ್ಲ ಮೀರಿ ಮನಸ್ಸಿಗೊಪ್ಪುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾದಾಗ ಮನಸಿನಲ್ಲಿ ಆಹ್ಲಾದಕರ ಭಾವ ಮೂಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT