ಭಾನುವಾರ, ಜನವರಿ 19, 2020
27 °C

ಜೈಸಲ್ಮೇರಿನ‘ಚಿನ್ನ’ದ ಕೋಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಸ್ಸಂಜೆಯ ಸೂರ್ಯನ ಬೆಳಕಿನಲ್ಲಿ ಇಡೀ ಜೈಸಲ್ಮೇರ್ ನಗರ ಬಂಗಾರದ ಹೊಳಪಿನಲ್ಲಿ ಮೀಯುತ್ತದೆ. ಈ ನಗರದ ಅನ್ವರ್ಥನಾಮ ಗೋಲ್ಡನ್‍ ಸಿಟಿ. ನಗರದ ಎಲ್ಲೆಡೆ ಕಟ್ಟಡಗಳದ್ದು ಹೊಳೆಯುವ ಮರಳಿನ ಬಣ್ಣ. ಫೈವ್‍ ಸ್ಟಾರ್ ಹೋಟೆಲ್‍ಗಳೂ ಅರಮನೆಗಳಂತೆಯೇ ಬಂಗಾರದ ಬಣ್ಣದಲ್ಲಿ ಮೈದಳೆದು ನಿಂತಿವೆ. ರಾಜಸ್ತಾನದ ಥಾರ್ ಮರುಭೂಮಿಯ ನಡುವಣ ಈ ನಗರ ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೆಯ ಕೇಂದ್ರ.

ನಗರ ಅಷ್ಟೇನೂ ದೊಡ್ಡದಲ್ಲ. ಬೇಸಿಗೆಯಲ್ಲಿ ಅಸಾಧ್ಯ ಬಿಸಿಲು, ಚಳಿಗಾಲದಲ್ಲಿ ಮೈಕೊರೆಯುವ ಚಳಿ. ಡಿಸೆಂಬರ್ ಮೊದಲ ವಾರದಲ್ಲಿ ಹೋಗಿ ಇಳಿದಾಗ ಹಿತಕರ ಹವೆಯೇ. ಇಡೀ ನಗರದ ಕೇಂದ್ರ ಬಿಂದು ಜೈಸಲ್ಮೇರ್ ಕೋಟೆ. ಕೋಟೆಯೆಂದರೆ ಬರೀ ಕೋಟೆಯಲ್ಲ; ಇದೊಂದು ಪುಟ್ಟ ನಗರವೇ. 250 ಅಡಿ ಎತ್ತರದ ತ್ರಿಕೂಟ ಬೆಟ್ಟದ ಮೇಲಿದೆ ಈ ವಿಶಾಲ ಕೋಟೆ. ನಾಲ್ಕೂ ದಿಕ್ಕುಗಳಿಂದ ಕೋಟೆಯನ್ನು ಪ್ರವೇಶಿಸಲು ಬೃಹತ್‍ ದ್ವಾರಗಳಿವೆ. ಮೂರು ಸುತ್ತುಗಳ ಈ ಕೋಟೆಯ ಗೋಡೆಗಳನ್ನೇ ಬಳಸಿಕೊಂಡು ಮನೆಗಳು ಮೇಲೆದ್ದಿವೆ. ಒಳಗೆ ಗಲ್ಲಿಗಳಲ್ಲಿ ಅಂಗಡಿ, ಮನೆ, ಹೋಟೆಲ್‍, ದೇವಾಲಯಗಳೂ ಯಥೇಚ್ಛವಾಗಿವೆ. ಸುಮಾರು 2500 ಕ್ಕೂ ಹೆಚ್ಚು ಕುಟುಂಬಗಳು ಈ ಕೋಟೆಯೊಳಗಿನ ಪೇಟೆಯಲ್ಲಿವೆ! ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ‘ಜೀವಂತ ಕೋಟೆ’ ಯೆಂದರೆ ಇದೊಂದೇ ಎನ್ನಲಾಗುತ್ತಿದೆ.

ನಮ್ಮ ಟ್ಯಾಕ್ಸಿ ಡ್ರೈವರ್ ಗುಲಾಬ್ ಸಿಂಗ್‍ ಪ್ರಕಾರ, ಜೈಸಲ್ಮೇರ್‌ ಅತ್ಯಧಿಕ ಪ್ರವಾಸಿಗರನ್ನು ಸೆಳೆಯುವ ಕೋಟೆ. ‘ಕೋಟೆಯ ಒಳಗೆ ಕಡಿಮೆ ಬಾಡಿಗೆಗೆ ಮನೆಗಳು, ಖೋಲಿಗಳು ಸಿಗುತ್ತವೆ. ಬಹುತೇಕ ವಿದೇಶಿ ಪ್ರವಾಸಿಗರು ಇಲ್ಲೇ ಉಳಿದುಕೊಳ್ಳುತ್ತಾರೆ’ ಎಂದರು ಗುಲಾಬ್ ಸಿಂಗ್‍. ಕೋಟೆ ಹತ್ತಿ ನೋಡಿದರೆ ಎಂಟೂ ದಿಕ್ಕುಗಳಲ್ಲಿ ಹರಡಿರುವ ಜೈಸಲ್ಮೇರ್ ನಗರದ ವಿಹಂಗಮ ನೋಟ ಮನಸೆಳೆಯುತ್ತದೆ. ಇಡೀ ನಗರ ಚಿನ್ನದ ಲೇಪದಲ್ಲಿ ಅದ್ದಿದಂತೆ ಕಾಣುತ್ತದೆ. ಜೈಪುರ ಹೇಗೆ ಪಿಂಕ್‍ ಸಿಟಿಯೋ ಹಾಗೆಯೇ ಇದು ಗೋಲ್ಡನ್ ಸಿಟಿ.

1156ರಲ್ಲಿ ಭಾಟಿ ರಜಪೂತ ದೊರೆ ಕೃಷ್ಣಾ ಜೈಸಾಲ್‍ ಈ ಕೋಟೆಯನ್ನು ಕಟ್ಟಿಸಿದ ಎನ್ನುತ್ತಿದೆ ಇತಿಹಾಸ. ಆ ಬಳಿಕ ಜೈಸಲ್ಮೇರ್‌ ಅನ್ನು ಆಳಿದ ರಜಪೂತ ಮತ್ತು ಮುಸ್ಲಿಂ ದೊರೆಗಳು ಕಾಲಕಾಲಕ್ಕೆ ಕೋಟೆಯನ್ನು ವಿಸ್ತರಿಸಿದ್ದಾರೆ. ಮರಳುಮಣ್ಣಿನಿಂದ ಮತ್ತು ಬೃಹತ್‍ ಕಲ್ಲುಗಳಿಂದ ಕಟ್ಟಿದ ಕೋಟೆ, 800 ವರ್ಷಗಳ ಬಳಿಕವೂ ಹಳೆಯ ಸೌಂದರ್ಯವನ್ನು ಹೊತ್ತುಕೊಂಡು ನಿಂತಿದ್ದು, ಈಗಾಗಲೇ ‘ವಿಶ್ವ ಪರಂಪರೆಯ ಕೇಂದ್ರ’ಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಸುಮಾರು 30 ಅಡಿ ಎತ್ತರದ ಕೋಟೆ ಗೋಡೆಯ ಕೆಲವು ಭಾಗಗಳು ಶಿಥಿಲವಾಗಿದ್ದು, ಅಲ್ಲಲ್ಲಿ ಕುಸಿದಿರುವುದೂ ಕಾಣಿಸುತ್ತದೆ. ಕೋಟೆಯ ಒಳಗಿನ ದಶೇರಾ ಚೌಕ್‍ ಜನಜಂಗುಳಿಯ ಕೇಂದ್ರ.

ಇದನ್ನೂ ಓದಿ: ‘ತೇಗ’ ದರ್ಶನ: ಕೇರಳದಲ್ಲೊಂದು ಮರಗಳ ಉದ್ಯಾನ

ಜಗತ್ತಿನ ಅತಿದೊಡ್ಡ ಕೋಟೆಗಳಲ್ಲಿ ಒಂದು ಎಂದು ಹೆಸರಾಗಿರುವ ಈ ಕೋಟೆಗೆ ಸೋನಾರ್ ಕಿಲಾ, ಗೋಲ್ಡನ್ ಫೋರ್ಟ್ ಎನ್ನುವ ಹೆಸರೂ ಇದೆ. ತ್ರಿಕೂಟ ಬೆಟ್ಟದ ಮೇಲೆ ಇರುವುದರಿಂದ ತ್ರಿಕೂಟ್ ಘರ್ ಎಂದೂ ಕರೆಯುತ್ತಾರೆ. ಮುಸ್ಲಿಂ ರಜಪೂತ ಶೈಲಿಯ ಶಿಲ್ಪವಿನ್ಯಾಸ ಗಮನ ಸೆಳೆಯುತ್ತದೆ. ಒಳಗೆ ಒಂದು ಪುರಾತನ ಹವೇಲಿಯೂ ಇದೆ. ‘ಕೋಟೆಯ ಒಳಗಿದ್ದ ರಾಣಿ ಕಿ ಪ್ಯಾಲೇಸ್‍ ಕುಸಿದು ಬಹಳ ಕಾಲವಾಯಿತು. ಹೆರಿಟೇಜ್‍ ಫಂಡ್‍ನವರು ಈಗಲೂ ಕೋಟೆ ಶಿಥಿಲವಾಗದಂತೆ ನೋಡಿಕೊಂಡಿದ್ದಾರೆ’ ಎನ್ನುವುದು ಗುಲಾಬ್‍ ಸಿಂಗ್ ವಿವರಣೆ.

ಜೈಸಲ್ಮೇರ್ ನಗರದಲ್ಲಿ ಇನ್ನೂ ಹಲವು ಪ್ರವಾಸಿ ಆಕರ್ಷಣೆಗಳಿವೆ. ಪಟ್ವೋಂ ಕಿ ಪ್ಯಾಲೇಸ್‍, ಮಹಾರಾಜ ಪ್ಯಾಲೇಸ್‍, ವ್ಯಾಸ್‍ ಛತ್ರಿ, ನಾಥ್‍ಮಲ್‍ಜಿ ಕಿ ಹವೇಲಿ ಮತ್ತು ಕುಲ್ದಾರಾ ಹಳ್ಳಿ ನೋಡಬಹುದಾದ ತಾಣಗಳು. ಥಾರ್ ಮರುಭೂಮಿಯಲ್ಲಿ ಒಂಟೆ ಸವಾರಿ ಮತ್ತು ಜೀಪ್‍ ಸಫಾರಿ ಪ್ರವಾಸಿಗರು ಹೆಚ್ಚು ಇಷ್ಟಪಡುವ ಸಾಹಸಗಳು. ಜೈಸಲ್ಮೇರ್‌ನಿಂದ ಸುಮಾರು 110 ಕಿ.ಮೀ. ದೂರದ ಲೋಂಗೊವಾಲ್‍ ಪಾಕಿಸ್ತಾನದ ಗಡಿಯ ಹಳ್ಳಿ. ಅಲ್ಲೊಂದು ವಾರ್ ಮ್ಯೂಸಿಯಂ ಇದೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿದ ಧೀರ ಭಾರತೀಯ ಸೈನಿಕರ ವಿಜಯಗಾಥೆಯನ್ನು ಹೇಳುವ ಸೌಂಡ್‍ ಅಂಡ್‍ ಮ್ಯೂಸಿಕ್‍ ಪ್ರದರ್ಶನವೂ ಇದೆ. ಪಾಕಿಸ್ತಾನದ ಸೇನೆಯಿಂದ ವಶಪಡಿಸಿಕೊಳ್ಳಲಾದ ಮೂರು ಯುದ್ಧ ಟ್ಯಾಂಕರ್‌ಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. 1971ರ ಯುದ್ಧದ ಸಂಪೂರ್ಣ ಕಥೆಯನ್ನು ಹೇಳುವ, ವಿಜಯದ ರೂವಾರಿಗಳು ಮತ್ತು ಶಹೀದ್‍ ಸೈನಿಕರನ್ನು ಪರಿಚಯಿಸುವ ಶ್ಲಾಘನೀಯ ಮ್ಯೂಸಿಯಂ ಇದು.

ಹೋಗುವುದು ಹೇಗೆ?

ಬೆಂಗಳೂರಿನಿಂದ ಜೈಸಲ್ಮೇರ್‌ಗೆ  ಜೋಧ್‍ಪುರ ಎಕ್ಸ್‌ಪ್ರೆಸ್‍ ಸಹಿತ ಸಾಕಷ್ಟು ರೈಲುಗಳಿವೆ. ಮುಂಬೈಯಿಂದ ವಿಮಾನ ಮೂಲಕ ಒಂದೂವರೆ ಗಂಟೆಯ ಪ್ರಯಾಣ. ಜೈಸಲ್ಮೇರ್‌ಗೆ ಪ್ರತ್ಯೇಕ ವಿಮಾನ ನಿಲ್ದಾಣ ಇಲ್ಲ. ರಕ್ಷಣಾ ಇಲಾಖೆಯ ಚಿಕ್ಕ ಏರ್ ಪೋರ್ಟ್‌ನಲ್ಲಿ ಪ್ರಯಾಣಿಕ ವಿಮಾನಗಳೂ ಇಳಿಯುತ್ತವೆ. ಈ ವಿಮಾನ ನಿಲ್ದಾಣದಲ್ಲಿ ಅರ್ಧ ಗಂಟೆ ನಿಂತರೆ, ಪಕ್ಕದಲ್ಲೇ ಕಾಣಿಸುವ ಏರ್‌ಸ್ಟ್ರಿಪ್‌ನಿಂದ ಏನಿಲ್ಲವೆಂದರೂ ಏಳೆಂಟು ಮಿಗ್‍, ಫೈಟರ್ ಜೆಟ್‍ ವಿಮಾನಗಳು ಏರಿಳಿಯುವುದನ್ನು ನೋಡುವುದೇ ಒಂದು ರೋಚಕ ಅನುಭವ. ಡಿಫೆನ್ಸ್ ಪ್ರದೇಶವಾದ್ದರಿಂದ ಈ ವಿಮಾನ ನಿಲ್ದಾಣದಲ್ಲಿ ಫೋಟೊ ತೆಗೆಯುವುದು ನಿಷಿದ್ಧ. ರಸ್ತೆ ಮೂಲಕ ಪಯಣಿಸುವುದಾದರೆ ಬೆಂಗಳೂರಿನಿಂದ 2000 ಕಿ.ಮೀ ದೂರವಿದೆ.

ಪ್ರತಿಕ್ರಿಯಿಸಿ (+)